ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಗಿಯಿತೆ ಪಿಯುಸಿ? ಮುಂದಿದೆ ಅವಕಾಶಗಳ ರಾಶಿ!

Last Updated 20 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಯಾವುದೇ ವಿದ್ಯಾರ್ಥಿಯ ಜೀವನದಲ್ಲಿ ಹತ್ತನೇ ತರಗತಿ ಹಾಗೂ ಪದವಿಪೂರ್ವ ಶಿಕ್ಷಣ ಪ್ರಮುಖ ಘಟ್ಟಗಳು. ಈ ಹಂತಗಳಲ್ಲಿ ಸರಿಯಾದ ನಿರ್ಧಾರ ಕೈಗೊಳ್ಳುವುದು ವಿದ್ಯಾರ್ಥಿ ದೆಸೆಯಲ್ಲಿನ ಮಹತ್ವದ ಸಂಗತಿಯಾಗಿದೆ. ಆ ಕಾರಣದಿಂದಲೇ ಈ ಎರಡು ಹಂತಗಳನ್ನು ವಿದ್ಯಾರ್ಥಿ ಜೀವನದ ತಿರುವುಗಳೆಂದು ಭಾವಿಸಲಾಗುತ್ತದೆ.

ತಮ್ಮ ಭವಿಷ್ಯದ ಜೀವನವನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಪದವಿಪೂರ್ವ ತರಗತಿಯಲ್ಲಿ ಯಾವ ವಿಷಯಗಳ ಸಂಯೋಜನೆಯನ್ನು ಆಯ್ಕೆ ಮಾಡಿಕೊಂಡರೆ ಉತ್ತಮ ಎಂಬ ನಿರ್ಧಾರವನ್ನು ಹತ್ತನೇ ತರಗತಿಯಲ್ಲಿಯೇ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ವಿದ್ಯಾರ್ಥಿಗಳಿಗೆ ಎದುರಾಗುತ್ತದೆ. ಅದೇ ರೀತಿ, ಪದವಿಪೂರ್ವ ಶಿಕ್ಷಣದ ನಂತರ ತಮ್ಮ ಗುರಿ ಸಾಧನೆಯ ನಿಟ್ಟಿನಲ್ಲಿ ಇರುವ ಹಲವಾರು ಅವಕಾಶಗಳನ್ನು ತಿಳಿದುಕೊಂಡು ಅದಕ್ಕೆ ಪೂರಕವಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದ ಅನಿವಾರ್ಯತೆಯೂ ಉಂಟಾಗುತ್ತದೆ. ಈ ಎರಡೂ ಹಂತಗಳಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ಕೆಳಗಿನ ಕೆಲವು ಅಂಶಗಳ ಕಡೆಗೆ ಗಮನ ಹರಿಸುವುದು ಅತ್ಯವಶ್ಯ.

ಆಸಕ್ತಿ ಮತ್ತು ಗುರಿ: ತಮ್ಮ ಆಸಕ್ತಿಗಳಿಗೆ ಅನುಗುಣವಾಗಿ ವಿದ್ಯಾರ್ಥಿಗಳು ಕೆಲವು ವೃತ್ತಿಗಳ ಪಟ್ಟಿಯೊಂದನ್ನು ಮಾಡಿಕೊಳ್ಳುವುದು ಅಗತ್ಯ. ಇದರಲ್ಲಿ ಯಾವ ವೃತ್ತಿಯ ಬಗ್ಗೆ ಆಸಕ್ತಿ ಇರುವುದೋ ಆ ನಿಟ್ಟಿನಲ್ಲಿಯೇ ಮುಂದುವರೆಯುವುದು ಒಳ್ಳೆಯದು. ನಿಖರ ಗುರಿ ಇದ್ದಾಗ ಸಾಧನೆಯ ದಾರಿಯಲ್ಲಿ ಗೊಂದಲಗಳು ಉಂಟಾಗುವುದಿಲ್ಲ.

ಕನಸಿನ ವೃತ್ತಿಯನ್ನು ನಿರ್ಧರಿಸಿದ ನಂತರ, ಆ ವೃತ್ತಿಗೆ ಸೇರಬೇಕಾದಲ್ಲಿ ಅದಕ್ಕೆ ಪೂರಕವಾದ ಕೆಲವು ಗುರಿಗಳನ್ನು ಹಾಕಿಕೊಳ್ಳಬೇಕು. ಆ ಗುರಿಗಳ ಸಾಧನೆಗೆ ಬೇಕಾದ ಪೂರ್ವಸಿದ್ಧತೆಯನ್ನು ಈಗಿನಿಂದಲೇ ಪ್ರಾರಂಭಿಸಬೇಕು

ಕೌಶಲಗಳು-ಮೌಲ್ಯಗಳು: ಪ್ರತಿಯೊಂದು ವೃತ್ತಿಗೂ ತನ್ನದೇ ಆದ ಕೆಲವು ಕೌಶಲಗಳಿವೆ. ಅವುಗಳ ಬಗ್ಗೆ ಮಾಹಿತಿ ಪಡೆದು ಆ ಕೌಶಲಗಳನ್ನು ವಿದ್ಯಾರ್ಥಿ ದೆಸೆಯಿಂದಲೇ ಬೆಳೆಸಿಕೊಳ್ಳುವ ಪ್ರಯತ್ನ ಮಾಡಬೇಕು. ಅಂತೆಯೇ ಎಲ್ಲ ವೃತ್ತಿಗಳಿಗೂ ನಿರ್ದಿಷ್ಟವಾದ ವೃತ್ತಿ ಧರ್ಮ ಹಾಗೂ ಮೌಲ್ಯಗಳಿರುತ್ತವೆ. ಆ ಮೌಲ್ಯಗಳನ್ನು ಪಾಲಿಸುವ ಮನೋಭಾವವನ್ನು ಬೆಳೆಸಿಕೊಳ್ಳುವುದು ಅತ್ಯವಶ್ಯ.

ಮೇಲಿನ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳುವುದು ಒಳ್ಳೆಯದು. ಸ್ನೇಹಿತರ ಅಥವಾ ಸಂಬಂಧಿಗಳ ಒತ್ತಡ-ಒತ್ತಾಯಗಳಿಗೆ ಮಣಿಯದೆ ತಮ್ಮ ಪೋಷಕರೊಡನೆ ಚರ್ಚಿಸಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕು.

ಹತ್ತನೇ ತರಗತಿ ಹಾಗೂ ಪದವಿಪೂರ್ವ ತರಗತಿಯ ಪರೀಕ್ಷೆಗಳು ಈಗಷ್ಟೇ ಮುಗಿದಿವೆ. ವಿದ್ಯಾರ್ಥಿಗಳು ಮತ್ತು ಪೋಷಕರು ಈಗ ಫಲಿತಾಂಶವನ್ನು ಎದುರು ನೋಡುತ್ತಿದ್ದಾರೆ. ‘10ನೇ ತರಗತಿ ನಂತರ ಮುಂದೇನು?’, ‘ಪದವಿಪೂರ್ವ ಶಿಕ್ಷಣದ ನಂತರ ಮುಂದೇನು?’ ಎಂಬ ಪ್ರಶ್ನೆ ಬಹುತೇಕ ವಿದ್ಯಾರ್ಥಿಗಳಲ್ಲೂ ಅವರ ಪೋಷಕರಲ್ಲೂ ಮೂಡಿರುವುದು ಸಹಜ. ಸದ್ಯಕ್ಕೆ ಪದವಿಪೂರ್ವ ವಿದ್ಯಾರ್ಥಿಗಳಿಗೆ ಇರುವ ಅಧ್ಯಯನ ಮತ್ತು ವೃತ್ತಿ ಅವಕಾಶಗಳ ಬಗ್ಗೆ ಗಮನಹರಿಸೋಣ.

ಪದವಿಪೂರ್ವ ಹಂತದ ವಿದ್ಯಾರ್ಥಿಗಳ ಮುಂದೆ ಮುಂದಿನ ಅಧ್ಯಯನಕ್ಕೆ ಮೂರು ಬಗೆಯ ಆಯ್ಕೆಗಳಿವೆ. ಅವುಗಳೆಂದರೆ: 1. ವೃತ್ತಿಪರ ಕೋರ್ಸ್‌ಗಳಿಗೆ ಸೇರುವುದು, 2. ನಿರ್ದಿಷ್ಟ ವಿಷಯದಲ್ಲಿ ಪದವಿ ಕೋರ್ಸ್‌ಗೆ ಸೇರಿ ಅಧ್ಯಯನ ಮುಂದುವರೆಸುವುದು, 3. ಯಾವುದಾದರೂ ವೃತ್ತಿ ಶಿಕ್ಷಣಕ್ಕೆ ಪ್ರವೇಶ ಪಡೆಯುವುದು.

ವಿಜ್ಞಾನ ವಿಭಾಗದಲ್ಲಿರುವ ಅವಕಾಶಗಳು: ವಿಜ್ಞಾನದ ಸಂಯೋಜನೆಗಳನ್ನು ತೆಗೆದುಕೊಂಡಿರುವ ವಿದ್ಯಾರ್ಥಿಗಳು ಪದವಿಪೂರ್ವ ಶಿಕ್ಷಣದ ನಂತರ ಜೆ.ಇ.ಇ, ಸಿ.ಇ.ಟಿ. ಮುಂತಾದ ಪ್ರವೇಶ ಪರೀಕ್ಷೆಗಳನ್ನು ಬರೆದು, ಅದರಲ್ಲಿ ತಾವು ಪಡೆಯುವ ರ‍್ಯಾಂಕ್‌ನ ಆಧಾರದ ಮೇಲೆ ವಿವಿಧ ಎಂಜಿನಿಯರಿಂಗ್ ಕೋರ್ಸ್‌ಗಳಿಗೆ ಸೇರುವುದು ಸರ್ವೇ ಸಾಮಾನ್ಯ. ಅದೇರೀತಿ, ಜೀವಶಾಸ್ತ್ರವನ್ನು ಒಂದು ವಿಷಯವಾಗಿ ತಮ್ಮ ಸಂಯೋಜನೆಯಲ್ಲಿ ಆಯ್ಕೆ ಮಾಡಿಕೊಂಡಿರುವ ವಿದ್ಯಾರ್ಥಿಗಳು ಎನ್.ಇ.ಇ.ಟಿ. (ನೀಟ್)  ಪ್ರವೇಶ ಪರೀಕ್ಷೆ ಬರೆದು, ಅದರ ರ‍್ಯಾಂಕಿಂಗ್‌ನ ಆಧಾರದ ಮೇಲೆ ವೈದ್ಯಕೀಯ ಕೋರ್ಸ್‌ಗಳಿಗೆ ಸೇರುವುದೂ ಸರ್ವೇ ಸಾಮಾನ್ಯ.

ವಿಜ್ಞಾನದ ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್ ಅಥವಾ ಮೆಡಿಕಲ್‌ಗೆ ಸೇರುವುದೇ ಜೀವನದ ಪರಮ ಗುರಿಯಾಗಬೇಕಿಲ್ಲ. ಅದರ ಆಚೆಯೂ ಹಲವಾರು ಆಸಕ್ತಿದಾಯಕ ಅವಕಾಶಗಳಿವೆ. ಶುದ್ಧ ವಿಜ್ಞಾನದ ವಿಷಯಗಳಲ್ಲಿ ಪದವಿ ಗಳಿಸಿ, ಆಸಕ್ತಿ ಇರುವ ಯಾವುದಾದರೊಂದು ವಿಷಯದಲ್ಲಿ ಸ್ನಾತಕೋತ್ತರ ಪದವಿಯ ಅಧ್ಯಯನ ಮುಂದುವರೆಸಬಹುದು. ಅದರ ನಂತರವೂ ಆ ವಿಷಯದಲ್ಲಿ ಸಂಶೋಧನೆ ನಡೆಸಿ, ಡಾಕ್ಟರೇಟ್ ಪದವಿಯನ್ನೂ ಪಡೆಯಬಹುದು. ಅದಕ್ಕೆ ವಿಪುಲವಾದ ಅವಕಾಶಗಳಿವೆ.

ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳೂ ಈಗ ಜಿಲ್ಲಾ ಕೇಂದ್ರಗಳಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರಗಳನ್ನು ತೆರೆದಿವೆ. ಅಲ್ಲದೆ, ತಮ್ಮ ವ್ಯಾಪ್ತಿಯಲ್ಲಿ ಬರುವ ಖಾಸಗೀ ಕಾಲೇಜುಗಳಲ್ಲಿಯೂ ಸ್ನಾತಕೋತ್ತರ ಅಧ್ಯಯನ ಕೇಂದ್ರಗಳನ್ನು ತೆರೆಯಲು ಅನುಮತಿ ನೀಡುತ್ತಿವೆ. ಇಂದು ಶುದ್ಧ ವಿಜ್ಞಾನದಲ್ಲಿ ಸಂಶೋಧನೆ ಕೈಗೊಳ್ಳುತ್ತಿರುವವರ ಸಂಖ್ಯೆ ಬಹಳ ಕ್ಷೀಣಿಸಿದೆ. ಶುದ್ಧ ವಿಜ್ಞಾನದ ಜೊತೆಗೆ, ಆನ್ವಯಿಕ ವಿಜ್ಞಾನದ ಹಲವು ಕ್ಷೇತ್ರಗಳಲ್ಲಿ ಸಂಶೋಧನೆಗೆ ಅವಕಾಶಗಳು ಮುಕ್ತವಾಗಿವೆ.

ವೈಜ್ಞಾನಿಕ ಸಂಶೋಧನೆ ನಡೆಸುತ್ತಿರುವ ಹಲವಾರು ಖ್ಯಾತನಾಮ ಸಂಸ್ಥೆಗಳು ನಮ್ಮ ರಾಜ್ಯದಲ್ಲಿವೆ. ಬೆಂಗಳೂರಿನಲ್ಲಿರುವ ‘ಟಾಟಾ ವಿಜ್ಞಾನ ಮಂದಿರ’ (ಟಾಟಾ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್) ಅಂತರರಾಷ್ಟ್ರೀಯ ಖ್ಯಾತಿ ಪಡೆದಿದೆ. ಮೈಸೂರಿನ ಮಹಾರಾಜರಾದ ಕೃಷ್ಣರಾಜ ಒಡೆಯರ್ ಅವರ ನೆರವಿನಿಂದ, 1909ರಲ್ಲಿ ಜೆಮ್‍ಶೆಟ್‍ಜಿ ಟಾಟಾ ಅವರು ಪ್ರಾರಂಭಿಸಿದ ಈ ಸಂಸ್ಥೆಯಲ್ಲಿ ಇಂದು ವಿಜ್ಞಾನದ ಹಲವು ಶಾಖೆಗಳಿಗೆ ಸಂಬಂಧಿಸಿದ ಉತ್ಕೃಷ್ಟ ಸಂಶೋಧನೆ ನಡೆಯುತ್ತಿದೆ. ಇದರ ಜೊತೆಗೆ, ಬೆಂಗಳೂರಿನವರೇ ಆದ ಅಂತರರಾಷ್ಟ್ರೀಯ ಖ್ಯಾತಿಯ ಡಾ. ಸಿ. ಎನ್. ಆರ್. ರಾವ್ ಅವರು ಸ್ಥಾಪಿಸಿರುವ ‘ಜವಾಹರಲಾಲ್ ನೆಹರೂ ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್’ನಲ್ಲಿಯೂ ವೈಜ್ಞಾನಿಕ ಸಂಶೋಧನೆಗೆ ಅವಕಾಶಗಳಿವೆ. ಮೈಸೂರಿನಲ್ಲಿರುವ ಸಿ.ಎಫ್.ಟಿ.ಆರ್.ಐ. ಆಹಾರ ತಂತ್ರಜ್ಞಾನ ಕ್ಷೇತ್ರದಲ್ಲಿ ನಡೆಸಿರುವ ತನ್ನ ಸಂಶೋಧನೆಗಳಿಂದ ಅಂತರರಾಷ್ಟ್ರೀಯ ಖ್ಯಾತಿ ಗಳಿಸಿದೆ.

ಕೆಮಿಕಲ್ ಟೆಕ್ನಾಲಜಿ, ಸೆರಾಮಿಕ್ ಟೆಕ್ನಾಲಜಿ, ಟೆಕ್ಸ್‌ಟೈಲ್ ಟೆಕ್ನಾಲಜಿ ಮುಂತದ ಹಲವಾರು ಅಸಾಂಪ್ರದಾಯಿಕ ವಿಷಯಗಳಲ್ಲಿಯೂ ವಿಜ್ಞಾನದ ವಿದ್ಯಾರ್ಥಿಗಳು ಬಿ.ಟೆಕ್ ಪದವಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಇಲ್ಲವೇ, ಬಯೋಫಿಸಿಕ್ಸ್, ಆಸ್ಟ್ರೋಫಿಸಿಕ್ಸ್, ನ್ಯೂಕ್ಲಿಯರ್ ಫಿಸಿಕ್ಸ್ ಮುಂತಾದ ವಿಶಿಷ್ಟ ವಿಷಯಗಳನ್ನು ಅಧ್ಯಯನಕ್ಕೆ ಆಯ್ಕೆ ಮಾಡಿಕೊಳ್ಳಬಹುದು. ಬಯೋಟೆಕ್ನಾಲಜಿ, ಜೆನೆಟಿಕ್ಸ್, ಮೈಕ್ರೋಬಯಾಲಜಿ ಮುಂತಾದ ಕ್ಷೇತ್ರಗಳಲ್ಲಿಯೂ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆಯಲು ಸಾಕಷ್ಟು ಅವಕಾಶಗಳಿವೆ.

ವೈದ್ಯಕೀಯ ಶಿಕ್ಷಣಕ್ಕೆ ಪೂರಕವಾದ ಹಲವು ಬಗೆಯ ಪ್ಯಾರಾ ವೈದ್ಯಕೀಯ ಕೋರ್ಸ್‌ಗಳೂ ಇಂದು ಲಭ್ಯವಿವೆ. ಎಕ್ಸ್‌ರೇ ಟೆಕ್ನೀಷಿಯನ್, ಫಿಸಿಯೋಥೆರಪಿ, ಆಕ್ಯುಪೇಷನಲ್ ಥೆರಪಿ, ನರ್ಸಿಂಗ್, ಕ್ಲಿನಿಕಲ್ ಟೆಕ್ನಾಲಜಿ ಮುಂತಾದ ಹಲವಾರು ಕೋರ್ಸ್‌ಗಳನ್ನು ಸರ್ಕಾರಿ ಹಾಗು ಖಾಸಗಿ ಮೆಡಿಕಲ್ ಕಾಲೇಜುಗಳು ಪ್ರಾರಂಭಿಸಿವೆ. ಪಿ.ಯು. ನಂತರ ಇಂಥ ವಿಷಯಗಳಲ್ಲಿ ಡಿಪ್ಲೊಮ ಅಧ್ಯಯನ ಮಾಡಿ ಉದ್ಯೋಗ ಗಳಿಸಬಹುದು.

ವಾಣಿಜ್ಯ ವಿಭಾಗದಲ್ಲಿರುವ ಅವಕಾಶಗಳು: ಪದವಿಪೂರ್ವ ಹಂತದಲ್ಲಿ ವಾಣಿಜ್ಯ ವಿಷಯಗಳಲ್ಲಿ ಯಾವುದೇ ಸಂಯೋಜನೆಯಲ್ಲಿ ಅಧ್ಯಯನ ಮಾಡಿರುವ ವಿದ್ಯಾರ್ಥಿಗಳು ಸಾಮಾನ್ಯವಾಗಿ ಬಿ.ಕಾಂ. ಪದವಿಗೆ ಸೇರಿಕೊಳ್ಳುತ್ತಾರೆ. ಇಲ್ಲವೇ ಬಿ.ಬಿ.ಎಮ್. ಪದವಿಗೆ ಸೇರಿಕೊಳ್ಳುತ್ತಾರೆ. ಬಹುತೇಕ ಬಿ.ಕಾಂ. ವಿದ್ಯಾರ್ಥಿಗಳು ಪದವಿ ಅಧ್ಯಯನದ ಜೊತೆಗೆ ಮುಂದೆ ಚಾರ್ಟರ್ಡ್ ಅಕೌಂಟೆಂಟ್ ಆಗಿ ಉದ್ಯೋಗ ಅಥವಾ ಸ್ವಯಂ ವೃತ್ತಿ ಹಿಡಿಯುವ ದೃಷ್ಟಿಯಿಂದ ಸಿ.ಎ. ಪರೀಕ್ಷೆ ತೆಗೆದುಕೊಳ್ಳಲು ಬಯಸುತ್ತಾರೆ. ಬಿ.ಕಾಂ. ಪದವಿಯ ಜೊತೆಗೇ ಈ ಅಧ್ಯಯನವನ್ನು ನಡೆಸಲು ಸಾಧ್ಯವಿದೆ.

ಬಿ.ಕಾಂ. ಪದವಿಯ ನಂತರ ಕಂಪನಿಗಳಲ್ಲಿ ಉದ್ಯೋಗಕ್ಕೆ ನೇರ ನೇಮಕಾತಿಯ ಅವಕಾಶಗಳು ಇಂದು ಹೆಚ್ಚಿವೆ. ಪದವಿ ಮುಗಿಯುತ್ತಿದ್ದಂತೆ ನೇರವಾಗಿ ಉದ್ಯೋಗಕ್ಕೆ ಸೇರಬಹುದು. ಇಲ್ಲವೇ ಎಂ.ಕಾಂ. ಸ್ನಾತಕೋತ್ತರ ಪದವಿ ಕೋರ್ಸ್‌ಗೆ ಸೇರಿಕೊಳ್ಳಬಹುದು.

ಬಿ.ಕಾಂ. ಪದವಿಯಲ್ಲಿಯೇ ಫೈನಾನ್ಸ್, ಮ್ಯಾನೇಜ್‌ಮೆಂಟ್, ಟ್ಯಾಕ್ಸೇಷನ್, ಬ್ಯಾಂಕಿಂಗ್, ಟೂರಿಸಂ ಮುಂತಾದ ಇಂದಿನ ಅವಶ್ಯಕತೆಯ ಕ್ಷೇತ್ರಗಳಲ್ಲಿ ವಿಶೇಷ ಜ್ಞಾನ ನೀಡುವ ಕೋರ್ಸ್‌ಗಳನ್ನು ಕೆಲವು ವಿದ್ಯಾಸಂಸ್ಥೆಗಳು ನಡೆಸುತ್ತಿವೆ. ಅಂಥ ಉಪಯುಕ್ತ ಕೋರ್ಸ್‌ಗಳಿಗೆ ಸೇರಿ ಉದ್ಯೋಗದ ಅವಕಾಶಗಳನ್ನು ಹೆಚ್ಚಿಸಿಕೊಳ್ಳಬಹುದು. ಬಿ.ಕಾಂ. ಅಥವಾ ಬಿ.ಬಿ.ಎಂ. ನಂತರ ಎಂ.ಬಿ.ಎ. ಪದವಿಗೆ ಅಧ್ಯಯನ ಮಾಡುವುದು ಸಹ ವಾಣಿಜ್ಯ ವಿದ್ಯಾರ್ಥಿಗಳಿಗೆ ಇರುವ ಇನ್ನೊಂದು ಆಯ್ಕೆ.

ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗಿರುವಷ್ಟು ಬಗೆಯ ಆಯ್ಕೆಗಳು ವಾಣಿಜ್ಯ ವಿದ್ಯಾರ್ಥಿಗಳಿಗೆ ಇಲ್ಲವಾದರೂ ಉದ್ಯೋಗ ಹಾಗೂ ಸ್ವಾವಲಂಬನೆಯ ದೃಷ್ಟಿಯಿಂದ ವಾಣಿಜ್ಯ ವಿದ್ಯಾರ್ಥಿಗಳು ಹೆಚ್ಚು ಅನುಕೂಲಕರ ಪರಿಸ್ಥಿತಿಯಲ್ಲಿದ್ದಾರೆ.

ಕಲಾ ವಿಭಾಗದಲ್ಲಿರುವ ಅವಕಾಶಗಳು: ಕಾರಣಾಂತರಗಳಿಂದ ಕಲಾ ವಿಭಾಗಕ್ಕೆ ಸಂಬಂಧಿಸಿದ ಸಂಯೋಜನೆಗಳನ್ನು ಆಯ್ಕೆ ಮಾಡಿಕೊಂಡಿರುವ ವಿದ್ಯಾರ್ಥಿಗಳಲ್ಲಿ ತಮಗೆ ಉದ್ಯೋಗಾವಕಾಶಗಳು ಕಡಿಮೆ ಎಂಬ ನಂಬಿಕೆಯಿದೆ. ಆದರೆ, ಇಲ್ಲಿಯೂ ಸಹ ಅಧ್ಯಯನ ಮುಂದುವರೆಸುವ ಅಥವಾ ವೃತ್ತಿ ಹಿಡಿಯುವ ಹಲವಾರು ಅವಕಾಶಗಳಿವೆ. ಬಿ.ಎ. ಪದವಿಯಲ್ಲಿ ಇಂದು ಹಲವು ಬಗೆಯ ಸಂಯೋಜನೆಗಳು ಲಭ್ಯವಿವೆ. ಸೈಕಾಲಜಿ, ಕ್ರಿಮಿನಾಲಜಿ, ಸೋಷಿಯಲ್ ವರ್ಕ್, ಮುಂತಾದ ಕ್ಷೇತ್ರಗಳ ಜೊತೆಗೆ ಇಂದು ಪತ್ರಿಕೋದ್ಯಮ ಕೂಡ ಒಂದು ಜನಪ್ರಿಯ ಆಯ್ಕೆಯ ಕ್ಷೇತ್ರವಾಗಿದೆ.

ಉಳಿದ ವಿಭಾಗಗಳಲ್ಲಿರುವಂತೆ, ಕಲಾ ವಿಭಾಗದ ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಒಂದು ವಿಷಯದಲ್ಲಿ ಸ್ನಾತಕೋತ್ತರ ಪದವಿಯ ಅಧ್ಯಯನನ್ನು ಮುಂದುವರೆಸಬಹುದು. ನಂತರ ಅದೇ ಕ್ಷೇತ್ರದಲ್ಲಿ ಸಂಶೋಧನೆಯನ್ನೂ ಕೈಗೊಳ್ಳಬಹುದು.

ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಿ

ವಿಜ್ಞಾನ ಮತ್ತು ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಪದವಿಯ ನಂತರ ಇರುವ ಇನ್ನೊಂದು ಆಯ್ಕೆ ಎಂದರೆ ಶಿಕ್ಷಕ ತರಬೇತಿ ಕಾಲೇಜುಗಳಲ್ಲಿ ಬಿ.ಎಡ್. ಪದವಿ ಅಧ್ಯಯನ ಮಾಡಿ ಶಿಕ್ಷಕ ವೃತ್ತಿಗೆ ಸೇರಿಕೊಳ್ಳುವುದು. ಶಿಕ್ಷಕ ವೃತ್ತಿಗೆ ಪೂರಕವಾದ ಮನೋಭಾವವನ್ನು ಹೊಂದಿರುವುದು ಇದಕ್ಕೆ ಅತ್ಯವಶ್ಯ. ಇಲ್ಲಿಯೂ ಸಹ ಬಿ.ಎಡ್. ಪದವಿಯ ನಂತರ ಎಂ.ಎಡ್. ಸ್ನಾತಕೋತ್ತರ ಪದವಿ ಪಡೆದು ನಂತರ ಸಂಶೋಧನೆ ಕೈಗೊಳ್ಳಬಹುದು.

ನಾಗರಿಕ ಸೇವೆಗಳ ಪರೀಕ್ಷೆ: ರಾಷ್ಟ್ರಮಟ್ಟದಲ್ಲಿ ಪ್ರತಿ ವರ್ಷ ಐ.ಎ.ಎಸ್., ಐ.ಪಿ.ಎಸ್. ಮುಂತಾದ ನಾಗರಿಕ ಸೇವೆಗಳಿಗೆ ಆಯ್ಕೆ ಮಾಡಿಕೊಳ್ಳಲು ‘ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್’ (ಯು.ಪಿ.ಎಸ್.ಸಿ.) ವತಿಯಿಂದ ಪ್ರವೇಶ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಇದಕ್ಕೆ ಕನಿಷ್ಠ ಅರ್ಹತೆ ಪದವಿ ಪಡೆದಿರಬೇಕು. ಪದವಿ ಅಧ್ಯಯನದ ಕೊನೆಯ ವರ್ಷದಿಂದಲೇ ಇದಕ್ಕೆ ಪೂರಕವಾದ ಸಿದ್ಧತೆಯನ್ನು ನೀವು ಮಾಡಿಕೊಳ್ಳಬಹುದು.

ಪದವಿಪೂರ್ವ ಶಿಕ್ಷಣ ಅತ್ಯವಶ್ಯವೇ?: ಒಂದು ವೇಳೆ ಯಾವುದೇ ಕಾರಣಕ್ಕೆ ಪದವಿಪೂರ್ವ ಶಿಕ್ಷಣವನ್ನು ಮುಂದುವರೆಸಲು ಸಾಧ್ಯವಾಗದೇ ಹೋಗುವವರು ಧೃತಿಗೆಡುವ ಅವಶ್ಯಕತೆ ಇಲ್ಲ. ಹತ್ತನೇ ತರಗತಿಯ ಕನಿಷ್ಠ ಅರ್ಹತೆ ಹೊಂದಿರುವ ಹಲವಾರು ಡಿಪ್ಲೊಮ ತರಗತಿಗಳು ವಿವಿಧ ವಿಷಯಗಳಲ್ಲಿ ಲಭ್ಯವಿವೆ. ನಿಮ್ಮ ಆಸಕ್ತಿಯ ವಿಷಯವನ್ನು ಆಯ್ಕೆ ಮಾಡಿಕೊಂಡು ಅಧ್ಯಯನ ಮುಂದುವರೆಸಬಹುದು. ಡಿಪ್ಲೊಮ ನಂತರ ಉದ್ಯೋಗಕ್ಕೆ ಸೇರಬಹುದಾದ ಹಲವಾರು ಅವಕಾಶಗಳು ಮುಕ್ತವಾಗಿವೆ.

ವಿಜ್ಞಾನ, ವಾಣಿಜ್ಯ ಅಥವಾ ಕಲಾ ವಿಭಾಗಗಳಲ್ಲಿ ಯಾವುದು ಉತ್ತಮ ಎಂಬ ಪ್ರಶ್ನೆಯೇ ಏಳುವುದಿಲ್ಲ. ನಿಮ್ಮ ಆಸಕ್ತಿ ಹಾಗು ಸಾಮರ್ಥ್ಯಗಳೇ ನಿಜವಾದ ಅಳತೆಗೋಲು. ವಿವಿಧ ಅವಕಾಶಗಳ ಬಗ್ಗೆ ಮಾಹಿತಿ ಸಂಗ್ರಹಿಸಿ. ಪೋಷಕರ ಹಾಗೂ ಶಿಕ್ಷಕರ ನೆರವು ಪಡೆದುಕೊಂಡು ಸೂಕ್ತ ನಿರ್ಧಾರಕ್ಕೆ ಬನ್ನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT