ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಮೂರನೇ ಪಟ್ಟಿ ಪ್ರಕಟ: ಬಾದಾಮಿ, ವರುಣಾ ರಹಸ್ಯ

ಬಿಜೆಪಿ 3ನೇ ಪಟ್ಟಿ ಬಿಡುಗಡೆ: 11 ಕ್ಷೇತ್ರಗಳ ಕುತೂಹಲ
Last Updated 20 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ನಾಮಪತ್ರ ಸಲ್ಲಿಕೆಗೆ ನಾಲ್ಕು ದಿನ ಇರುವಂತೆ 59 ಅಭ್ಯರ್ಥಿಗಳ ತನ್ನ ಮೂರನೇ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿರುವ ಬಿಜೆಪಿ, ತೀವ್ರ ಚರ್ಚೆಗೆ ಗ್ರಾಸ ಒದಗಿಸಿರುವ ಬಾದಾಮಿ, ವರುಣಾ ಕ್ಷೇತ್ರಗಳು ಸೇರಿದಂತೆ ಇನ್ನೂ 11 ಕ್ಷೇತ್ರಗಳ ಟಿಕೆಟ್‌ ಘೋಷಿಸಿಲ್ಲ.

ವಿಧಾನಸಭೆಯ ಮಾಜಿ ಸ್ಪೀಕರ್‌ ಕೆ.ಜೆ. ಬೋಪಯ್ಯ ಅವರಿಗೆ ವಿರಾಜಪೇಟೆ ಕ್ಷೇತ್ರದಿಂದ ಸ್ಪರ್ಧೆಗೆ ಅವಕಾಶ ದೊರೆತಿದ್ದು, ಕೆಜೆಪಿ, ಜೆಡಿಎಸ್‌ ಮತ್ತು ಕಾಂಗ್ರೆಸ್‌ನಿಂದ ಸೇರ್ಪಡೆ ಆಗಿರುವ ಪಕ್ಷಾಂತರಿಗಳಿಗೆ ಮಣೆ ಹಾಕಲಾಗಿದೆ.

ನಾಲ್ವರು ಹಿರಿಯ ಮುಖಂಡರ ಮಕ್ಕಳಿಗೂ ಆದ್ಯತೆ ನೀಡಿರುವುದರ ಜೊತೆಗೆ ಅನೇಕ ಹೊಸಮುಖಗಳನ್ನು ಸ್ಪರ್ಧೆಗಿಳಿಸುತ್ತಿರುವುದು ವಿಶೇಷ.

ಶುಕ್ರವಾರ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿರುವ ಛಲವಾದಿ ನಾರಾಯಣ ಸ್ವಾಮಿ ಅವರಿಗೆ ದೇವನಹಳ್ಳಿಯಲ್ಲಿ, ಎನ್‌.ವೈ. ಗೋಪಾಲಕೃಷ್ಣ ಅವರಿಗೆ ಕೂಡ್ಲಿಗಿಯಲ್ಲಿ ಟಿಕೆಟ್‌ ಘೋಷಿಸಲಾಗಿದೆ.

ಕಳೆದ ತಿಂಗಳಷ್ಟೇ ಜೆಡಿಎಸ್‌ ತೊರೆದು ಬಂದಿದ್ದ ಎಸ್‌.ಶಂಕರ್‌ ಅವರಿಗೆ ಮೈಸೂರು ಜಿಲ್ಲೆಯ ಟಿ.ನರಸೀಪುರದಿಂದ, ಕಾಂಗ್ರೆಸ್‌ ಬಿಟ್ಟು ಬಂದಿದ್ದ ಜಿ.ವಿ. ಬಲರಾಂ ಅವರಿಗೆ ಪಾವಗಡ (ಮೀಸಲು) ಕ್ಷೇತ್ರದ ಟಿಕೆಟ್‌ ನೀಡಲಾಗಿದೆ.

ವಿವಿಧ ಪ್ರಕರಣಗಳಿಂದಾಗಿ ವಿವಾದಕ್ಕೆ ಒಳಗಾಗಿದ್ದ ಮಾಜಿ ಶಾಸಕರಾದ ಎಸ್‌.ಎ ರಾಮದಾಸ್‌ ಅವರಿಗೆ ಕೃಷ್ಣರಾಜದಲ್ಲಿ, ಕೆ.ರಘುಪತಿ ಭಟ್‌ ಅವರಿಗೆ ಉಡುಪಿಯಲ್ಲಿ ಮತ್ತೆ ‘ಕಮಲ’ ಚಿಹ್ನೆಯಡಿ ಸ್ಪರ್ಧಿಸಲು ಅವಕಾಶ ದೊರೆತಿದೆ.

ಕೃಷ್ಣ ಬೆಂಬಲಿಗರ ಕಡೆಗಣನೆ: ಕಳೆದ ವರ್ಷ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದ ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರ ಬೆಂಬಲಿಗರಿಗೆ ಮೂರನೇ ಪಟ್ಟಿಯಲ್ಲೂ ನಿರಾಸೆಯಾಗಿದೆ. ಮಂಡ್ಯ ಮತ್ತು ಮದ್ದೂರು ಕ್ಷೇತ್ರಗಳಲ್ಲಿ ಬೆಂಬಲಿಗರಿಗೆ ಟಿಕೆಟ್ ಕೋರಿದ್ದ ಕೃಷ್ಣ ಅವರ ಮನವಿಯನ್ನು ಪುರಸ್ಕರಿಸಲಾಗಿಲ್ಲ.

ಇತ್ತೀಚೆಗಷ್ಟೇ ಮದ್ದೂರಿನಲ್ಲಿ ನಡೆದ ಸಮಾವೇಶದಲ್ಲಿ ಭಾಷಣ ಮಾಡಿದ್ದ ಬಿ.ಎಸ್‌. ಯಡಿಯೂರಪ್ಪ, ‘ನೀವು ಕಂಡು ಕೇಳರಿಯದ ಅಭ್ಯರ್ಥಿಯನ್ನು ಕ್ಷೇತ್ರದಿಂದ ಕಣಕ್ಕಿಳಿಸಲಾಗುವುದು’ ಎಂದು ಘೋಷಿಸಿದ್ದರಿಂದ, ‘ಎಸ್‌.ಎಂ. ಕೃಷ್ಣ ಅವರ ಪುತ್ರಿ ಶಾಂಭವಿ ಅವರಿಗೆ ಟಿಕೆಟ್ ದೊರೆಯಬಹುದು’ ಎಂಬ ನಿರೀಕ್ಷೆ ಮೂಡಿತ್ತು. ಆದರೆ, ಅಲ್ಲಿಂದ ಹೊಚ್ಚ ಹೊಸಬರಾದ ಸತೀಶ್‌ ಎಂಬುವವರಿಗೆ ಬಿಜೆಪಿ ಟಿಕೆಟ್‌ ದೊರೆತಿದೆ.

ಮಂಡ್ಯದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಸವೇಗೌಡ ಅವರಿಗೆ ಮಣೆ ಹಾಕಿದೆ.

ಕೆಜೆಪಿ ವಲಸಿಗರಿಗೆ ಆದ್ಯತೆ: 2013ರಲ್ಲಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಬೆಂಬಲಿಸಿ ಕೆಜೆಪಿ ಸೇರಿದ್ದ 10ಕ್ಕೂ ಅಧಿಕ ಮುಖಂಡರಿಗೆ ಬಿಜೆಪಿಯಲ್ಲಿ ಆದ್ಯತೆ ದೊರೆತಿದೆ. ಪಕ್ಷ ಬಿಡುಗಡೆ ಮಾಡಿದ್ದ ಎರಡನೇ ಪಟ್ಟಿಯಲ್ಲೂ 16 ಜನರಿಗೆ ಅವಕಾಶ ದೊರೆತಿತ್ತು.

ಕುಂದಗೋಳದಲ್ಲಿ ಎಸ್‌.ಐ. ಚಿಕ್ಕನಗೌಡರ್‌, ಹಾವೇರಿಯಲ್ಲಿ ನೆಹರೂ ಓಲೇಕಾರ್‌, ಚಿಂಚೋಳಿಯಲ್ಲಿ ಸುನಿಲ್‌ ವಲ್ಯಾಪುರೆ, ಹುಮನಾಬಾದ್‌ನಲ್ಲಿ ಸುಭಾಷ ಕಲ್ಲೂರ, ಹರಿಹರದಲ್ಲಿ ಬಿ.ಪಿ. ಹರೀಶ್‌, ಜಗಳೂರಿನಲ್ಲಿ ಎಸ್‌.ವಿ. ರಾಮಚಂದ್ರ ಬಿಜೆಪಿ ಟಿಕೆಟ್‌ ಪಡೆದಿರುವ ಮಾಜಿ ಶಾಸಕರಾಗಿದ್ದಾರೆ.

ಬೆಳ್ಳುಬ್ಬಿ, ಬೆಳಮಗಿಗೆ ಖೊಕ್‌: ಬಸವನ ಬಾಗೇವಾಡಿಯಲ್ಲಿ ಮಾಜಿ ಸಚಿವ ಎಸ್‌.ಕೆ. ಬೆಳ್ಳುಬ್ಬಿ ಅವರಿಗೆ ಟಿಕೆಟ್‌ ನಿರಾಕರಿಸಲಾಗಿದ್ದು, ಈ ಹಿಂದೆ ಕೆಜೆಪಿಯಿಂದ ಸ್ಪರ್ಧಿಸಿದ್ದ ಸಂಗರಾಜ ದೇಸಾಯಿ ಅವರನ್ನೇ ಪಕ್ಷ ನೆಚ್ಚಿಕೊಂಡಿದೆ.

ಕಲಬುರ್ಗಿ (ಗ್ರಾಮೀಣ) ಕ್ಷೇತ್ರದಲ್ಲಿ ಮಾಜಿ ಸಚಿವ ರೇವು ನಾಯಕ ಬೆಳಮಗಿ ಅವರ ಬದಲು ಜಿಲ್ಲಾ ಪಂಚಾಯ್ತಿ ಸದಸ್ಯ ಬಸವರಾಜ ಮತ್ತಿಮೋಡ ಅವರಿಗೆ ಟಿಕೆಟ್ ನೀಡಲಾಗಿದೆ.

2013ರಲ್ಲಿ ನಡೆದ ರಾಮಕೃಷ್ಣ ವಿರುದ್ಧ ಸೋತಿದ್ದಲ್ಲದೆ, 2014ರಲ್ಲಿ ನಡೆದಿದ್ದ ಲೋಕಸಭೆ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಪರಾಜಯ ಅನುಭವಿಸಿದ್ದ ಬೆಳಮಗಿ ಅವರನ್ನು ಪಕ್ಷ ಈ ಬಾರಿ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ಖರ್ಗೆ ಅವರ ಸೋದರ ಸಂಬಂಧಿ ವಿರುದ್ಧ ಗೆಲುವು ಸಾಧಿಸಿದ್ದ ದಲಿತ ಸಮುದಾಯದ ಎಡಗೈ ಬಣದ ಮತ್ತಿಮೋಡ ಅವರತ್ತ ಒಲವು ತೋರಲಾಗಿದೆ.

ಲೋಕಸಭೆ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಗೆಲುವು ಸಾಧಿಸಿದ್ದರಿಂದ ತೆರವಾಗಿದ್ದ ಚಿತ್ತಾಪುರ ಕ್ಷೇತ್ರದಿಂದ 2009ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಪ್ರಿಯಾಂಕ್‌ ಖರ್ಗೆ ವಿರುದ್ಧ ಜಯಿಸಿದ್ದ ಲಂಬಾಣಿ ಸಮುದಾಯದ ವಾಲ್ಮೀಕಿ ನಾಯ್ಕ ಅವರನ್ನೇ ಪಕ್ಷ ಮತ್ತೆ ನೆಚ್ಚಿಕೊಂಡಿದೆ.

ನಾಗಠಾಣ (ಮೀಸಲು) ಕ್ಷೇತ್ರದಲ್ಲಿ ಮಾಜಿ ಶಾಸಕ ವಿಠ್ಠಲ ಕಡಕದೊಂಡ ಅವರಿಗೂ ಟಿಕೆಟ್‌ ನೀಡಲಾಗಿಲ್ಲ.

ಹೊಸಬರಿಗೆ ಮಣೆ: 15ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಪಕ್ಷದಿಂದ ಸ್ಪರ್ಧೆಗೆ ಅವಕಾಶ ಪಡೆದಿರುವವರು ಹೊಸಬರಾಗಿದ್ದಾರೆ. ಕೋಮು ಗಲಭೆಗಳಿಂದಾಗಿ ಸಾಕಷ್ಟು ಸುದ್ದಿಗೊಳಗಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಉತ್ತರ (ಡಾ.ಭರತ್‌ ಶೆಟ್ಟಿ), ಮಂಗಳೂರು ದಕ್ಷಿಣ (ವೇದವ್ಯಾಸ ಕಾಮತ್‌) ಹಾಗೂ ಮಂಗಳೂರು (ಸಂತೋಷ ಕುಮಾರ್‌ ರೈ) ಕ್ಷೇತ್ರಗಳಿಂದ ಪಕ್ಷವು ಹೊಸಬರಿಗೆ ಅವಕಾಶ ಕಲ್ಪಿಸಿದೆ.

ಸಿದ್ದರಾಮಯ್ಯ ಅವರು ಸ್ಪರ್ಧಿಸಿರುವ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅವರಿಗೆ ಪ್ರತಿಸ್ಪರ್ಧಿಯಾಗಿ ಕಣಕ್ಕಿಳಿಯಲಿರುವ ಗೋಪಾಲ್‌ ರಾವ್‌ ಸಂಘ ಪರಿವಾರದವರಾಗಿದ್ದು, ಮೊದಲ ಚುನಾವಣೆ ಎದುರಿಸಲಿದ್ದಾರೆ.

ಬಿಜೆಪಿ ಮೈಸೂರು ಜಿಲ್ಲಾ ವಕ್ತಾರ ಗೋಪಾಲ್‌ ಅವರ ಪತ್ನಿ ಶ್ವೇತಾ ಕೃಷ್ಣರಾಜ ನಗರ ಕ್ಷೇತ್ರದಿಂದ ಇದೇ ಮೊದಲ ಬಾರಿ ಸ್ಪರ್ಧಿಸಲಿದ್ದಾರೆ.

ಬೆಂಗಳೂರಿನ ಪುಲಿಕೇಶಿ ನಗರದಲ್ಲಿ ಸುಶೀಲಾ ದೇವರಾಜ್‌ ಸ್ಪರ್ಧಿಸಲಿದ್ದು, ಪಕ್ಷದಿಂದ ಟಿಕೆಟ್‌ ಪಡೆದಿರುವ ಮಹಿಳೆಯರ ಸಂಖ್ಯೆ 6ಕ್ಕೇರಿದೆ.

2013ರಲ್ಲಿ ಹರಪನಹಳ್ಳಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತಿದ್ದ ಮಾಜಿ ಸಚಿವ ಗಾಲಿ ಕರುಣಾಕರ ರೆಡ್ಡಿ, ಬಾಗೇಪಲ್ಲಿಯಿಂದ ಚಿತ್ರನಟ ಸಾಯಿಕುಮಾರ್‌ ಅವರಿಗೆ ಮತ್ತೆ ಬಿಜೆಪಿ ಟಿಕೆಟ್ ದೊರೆತಿದೆ.

ಮುಖಂಡರ ಮಕ್ಕಳಿಗೆ ಅವಕಾಶ
ನವದೆಹಲಿ:
ಅರಸೀಕೆರೆಯಿಂದ ಮಾಜಿ ಸಚಿವ ವಿ.ಸೋಮಣ್ಣ ಅವರ ಪುತ್ರ ಡಾ.ಅರುಣ್‌ ಸೋಮಣ್ಣ, ನಾಗಠಾಣ (ಮೀಸಲು) ಕ್ಷೇತ್ರದಿಂದ ಗೋವಿಂದ ಕಾರಜೋಳ ಅವರ ಪುತ್ರ ಡಾ.ಗೋಪಾಲ್‌ ಕಾರಜೋಳ, ಗಾಂಧಿನಗರದಲ್ಲಿ ರಾಮಚಂದ್ರಗೌಡ ಅವರ ಪುತ್ರ ಸಪ್ತಗಿರಿ ಗೌಡ ಅವರಿಗೆ ಟಿಕೆಟ್‌ ದೊರೆತಿದೆ.

ವಾರದ ಹಿಂದೆ ಬಿಡುಗಡೆಯಾಗಿದ್ದ ಮೊದಲ ಪಟ್ಟಿಯಲ್ಲಿ ಕೆಜಿಎಫ್‌ (ಮೀಸಲು) ಕ್ಷೇತ್ರದಿಂದ ಸ್ಥಾನ ಪಡೆದಿದ್ದ ಮಾಜಿ ಶಾಸಕ ವೈ.ಸಂಪಂಗಿ ಕೈಬಿಟ್ಟು ಅವರ ಪುತ್ರಿ ಎಸ್‌.ಅಶ್ವಿನಿ ಅವರಿಗೆ ಟಿಕೆಟ್ ಹಂಚಿಕೆ ಮಾಡಲಾಗಿದೆ.

ಎರಡು ವರ್ಷಗಳ ಹಿಂದೆ ನಡೆದಿದ್ದ ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ಕಾಂಗ್ರೆಸ್‌ ಸಂಸದ ಕೆ.ಎಚ್‌. ಮುನಿಯಪ್ಪ ಅವರ ಪುತ್ರಿ ರೂಪಾ ಶಶಿಧರ ವಿರುದ್ಧ ಗೆಲುವು ಸಾಧಿಸಿದ್ದ ಅಶ್ವಿನಿ, ಇದೀಗ ವಿಧಾನಸಭೆ ಕದನ ಕಣದಲ್ಲೂ ಅವರಿಗೆ ಪ್ರತಿಸ್ಪರ್ಧಿಯಾಗಲಿದ್ದಾರೆ.

ಕೆಜಿಎಫ್‌ ಕ್ಷೇತ್ರದಲ್ಲಿ 2008ರಲ್ಲಿ ವೈ.ಸಂಪಂಗಿ, 2013ರಲ್ಲಿ ಅವರ ತಾಯಿ ರಾಮಕ್ಕ ಬಿಜೆಪಿಯಿಂದ ಗೆದ್ದಿದ್ದು, ಈಗ ಪಕ್ಷವು ಮೂರನೇ ತಲೆಮಾರಿಗೆ ಟಿಕೆಟ್ ನೀಡಿದಂತಾಗಿದೆ.

ಪಾಂಡವಪುರದ ಮಾಜಿ ಶಾಸಕ ಡಿ.ಹಲಗೇಗೌಡ ಅವರ ಪುತ್ರ ಎಚ್‌.ಮಂಜುನಾಥ ಮೇಲುಕೋಟೆ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಗಿಟ್ಟಿಸಿಕೊಂಡಿದ್ದಾರೆ.

11 ಕ್ಷೇತ್ರ ಟಿಕೆಟ್‌ ಘೋಷಣೆ ಬಾಕಿ
ನವದೆಹಲಿ:
ಬಾದಾಮಿ, ವರುಣಾ, ಭದ್ರಾವತಿ, ಶಿಡ್ಲಘಟ್ಟ, ಯಶವಂತಪುರ, ಬಿ.ಟಿ.ಎಂ. ಲೇಔಟ್‌, ರಾಮನಗರ, ಕನಕಪುರ, ಬೇಲೂರು, ಹಾಸನ ಹಾಗೂ ಸಕಲೇಶಪುರ ಕ್ಷೇತ್ರಗಳ ಟಿಕೆಟ್‌ ಘೋಷಣೆಯಾಗಿಲ್ಲ.

ಬಿ.ಎಸ್‌. ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರನ್ನು ವರುಣಾ ಕ್ಷೇತ್ರದಿಂದ ಕಣಕ್ಕಿಳಿಸಲು ಪಕ್ಷ ನಿರ್ಧರಿಸಿದ್ದು, ಬಾದಾಮಿ ಕ್ಷೇತ್ರದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಕಣಕ್ಕಿಳಿದಲ್ಲಿ ಅವರಿಗೆ ಸರಿಸಮನಾದ ಅಭ್ಯರ್ಥಿಯನ್ನೇ ಕಣಕ್ಕಿಳಿಸಬೇಕು ಎಂಬ ಉದ್ದೇಶದೊಂದಿಗೆ ಟಿಕೆಟ್‌ ಘೋಷಿಸಿಲ್ಲ.

ಯಶವಂತಪುರದಿಂದ ಸಂಸದೆ ಶೋಭಾ ಕರಂದ್ಲಾಜೆ ಅವರಿಗೇ ಟಿಕೆಟ್‌ ದೊರೆಯಲಿದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಭಾನುವಾರ ಈ ಎಲ್ಲ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಹೊರಬೀಳುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT