ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೋಮು ಶಕ್ತಿಗಳಿಗೆ ರಾಜ್ಯ ಮಾರಬೇಡಿ’: ಪ್ರಕಾಶ್‌ ರೈ

Last Updated 20 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: 'ಕೋಮುವಾದಿ ಸಿದ್ಧಾಂತ ಅನುಸರಿಸುವ ಬಿಜೆಪಿ ಈ ದೇಶಕ್ಕೆ ಅಪಾಯಕಾರಿ. ರಾಜ್ಯವನ್ನು ಕೋಮುವಾದಿ ಶಕ್ತಿಗಳಿಗೆ ಮಾರಬೇಡಿ' ಎಂದು ಚಿತ್ರನಟ ಪ್ರಕಾಶ್ ರೈ ಮನವಿ ಮಾಡಿದರು.

ಪ್ರೆಸ್‌ಕ್ಲಬ್‌ ವತಿಯಿಂದ ಇಲ್ಲಿ ಶುಕ್ರವಾರ ಏರ್ಪಡಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ‘ವಾಜಪೇಯಿ ಅವರಂತಹ ನೇತಾರರ ಬಗ್ಗೆ ನಾನು ಮಾತನಾಡುವುದಿಲ್ಲ. ಬೆಳಗಾವಿ ಶಾಸಕ ಸಂಜಯ ಪಾಟೀಲ ಮುಸ್ಲಿಂ ವಿರುದ್ಧ ಹಿಂದೂಗಳನ್ನು ಎತ್ತಿಕಟ್ಟುವಂತಹ ಹೇಳಿಕೆ ನೀಡುತ್ತಾರೆ. ಕೇಂದ್ರ ಸಚಿವ ಅನಂತ ಕುಮಾರ್‌ ಹೆಗಡೆ ಪ್ರತಿಪಾದಿಸುವ ವಿಚಾರ ಪ್ರಜಾಸತ್ತಾತ್ಮಕವಾಗಿ ತಪ್ಪು. ನನ್ನ ರಾಜ್ಯವನ್ನು, ನನ್ನ ದೇಶವನ್ನು ಇಂತಹವರ ಕೈಯಲ್ಲಿ ಕೊಡಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು. 

‘ನಿರ್ದಿಷ್ಟ ಪಕ್ಷಕ್ಕೆ ಮತ ನೀಡಿ ಎಂದು ನಾನು ಹೇಳುವುದಿಲ್ಲ. ಪ್ರತಿ ಪ್ರಜೆಯೂ ಸ್ವಂತ ನಿರ್ಧಾರ ತಳೆಯಬೇಕು. ಯಾವ ಪಕ್ಷದವರು ಯಾವ ತರಹ ಜಾತ್ಯತೀತ ತತ್ವ ಅನುಸರಿಸುತ್ತಿದ್ದಾರೆ ಎಂಬುದನ್ನು ಜನ ನೋಡಿದ್ದಾರೆ. ಯಾರಿಗೆ ಮತ ನೀಡಬೇಕು ಎಂಬುದನ್ನು ಅವರೇ ನಿರ್ಧರಿಸಬೇಕು’ ಎಂದರು.

ಚುನಾವಣೆ ಸಂದರ್ಭದಲ್ಲಿ ನಾಯಕರು ಮಠ ಮಂದಿರಗಳಿಗೆ ಭೇಟಿ ನೀಡುವ ಕುರಿತು ಪ್ರತಿಕ್ರಿಯಿಸಿದ ಅವರು, ‘ರಾಹುಲ್ ಗಾಂಧಿ ಮಾತ್ರವಲ್ಲ ನರೇಂದ್ರ ಮೋದಿ, ಅಮಿತ್‌ ಶಾ ಮಠ ಮಂದಿರಗಳಿಗೆ ಭೇಟಿ ನೀಡಿದರೂ ನಾನು ಆ ಬಗ್ಗೆ ಮೌನ ವಹಿಸುತ್ತೇನೆ. ಕೆಲವರು ತಮ್ಮ ಧಾರ್ಮಿಕ ಸಿದ್ಧಾಂತವನ್ನು ಇನ್ನೊಬ್ಬರ ಮೇಲೆ ಹೇರುವುದಕ್ಕೆ ನನ್ನ ವಿರೋಧವಿದೆ’ ಎಂದು ಹೇಳಿದರು.

‘ಪಕ್ಷದ ನಾಯಕರು ಹಿಂದೂ–ಮುಸ್ಲಿಮರನ್ನು ಗುರಿಯಾಗಿಸಿ ರಹಸ್ಯವಾಗಿ ಮಾತನಾಡುವುದು ಹಾಗೂ ಒಂದು ಧರ್ಮವನ್ನೇ ನಾಶ ಮಾಡಿ ಎಂದು ಹೆಗಡೆ ಹೇಳುವುದು ಭಯ ಹುಟ್ಟಿಸುತ್ತದೆ. ಅಪಘಾತ ಒಂದು ಅಪಘಾತ ಅಷ್ಟೆ. ಅಪಘಾತ ಮಾಡಿದ ಲಾರಿ ಚಾಲಕ ನಿರ್ದಿಷ್ಟ ಧರ್ಮದವನು ಎಂಬ ಕಾರಣಕ್ಕೆ ರಾಜಕೀಯ ಬೆರೆಸುವುದು, ಆ ಲಾರಿ ಅವರ ಪಕ್ಷದ ಮುಖಂಡರಿಗೇ ಸೇರಿದ್ದು ಎಂಬ ಕಾರಣಕ್ಕೆ ಸುದ್ದಿಗೋಷ್ಠಿ ರದ್ದುಪಡಿಸುವುದು... ಇವೆಲ್ಲ ಆತಂಕಕಾರಿ ಬೆಳವಣಿಗೆಗಳು’ ಎಂದರು.

‘ರಾಜಕೀಯ ಪ್ರವೇಶ ಮಾಡುತ್ತೀರಾ. ಮಂಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದೀರಾ’ ಎಂಬ ಪ್ರಶ್ನೆಗೆ ‘ಇಲ್ಲ, ಸುಳ್ಳು’ ಎಂದು ಉತ್ತರಿಸಿದರು.

‘ನೈಲ್‌ ಹಂಚಿಕೊಳ್ಳಬಹುದಾದರೆ ಕಾವೇರಿಯನ್ನೇಕೆ ಸಾಧ್ಯವಿಲ್ಲ’
‘ನೈಲ್‌ ನದಿಯನ್ನು 10 ದೇಶಗಳು ಹಂಚಿಕೊಳ್ಳಲು ಸಾಧ್ಯವಾದರೆ, ಒಂದು ನದಿಯನ್ನು ಎರಡು ರಾಜ್ಯಗಳು ಹಂಚಿಕೊಳ್ಳಲು ಏಕೆ ಸಾಧ್ಯವಾಗುತ್ತಿಲ್ಲ’ ಎಂದು ಪ್ರಕಾಶ್‌ ರೈ ಪ್ರಶ್ನಿಸಿದರು.

ಕಾವೇರಿ ವಿವಾದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ‘ಇದು ಎಲ್ಲರ ಪಾಲಿಗೂ ಜೀವನದಿ. ಈ ವಿಚಾರದಲ್ಲಿ  ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಎಲ್ಲರಿಗೂ ಸತ್ಯ ಗೊತ್ತಾಗಬೇಕು. ಕೇಂದ್ರ ಸರ್ಕಾರ ಕಾವೇರಿ ನಿಯಂತ್ರಣ ಮಂಡಳಿ ರಚಿಸಿದರೆ ಕರ್ನಾಟಕದ ಮತಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ರಚಿಸದಿದ್ದರೆ ತಮಿಳುನಾಡಿನವರು ತಿರುಗಿಬೀಳುತ್ತಾರೆ. ಇಂತಹ ಸಂದರ್ಭದಲ್ಲಿ ನಾವು ತಜ್ಞರ ಮಾತು ಕೇಳಬೇಕು. ಈ ವಿವಾದದ ನಡುವೆ ಭಾಷೆ ಹೇಗೆ ಸೇರಿಕೊಂಡಿತು ಎಂದು ಅರ್ಥೈಸಿಕೊಳ್ಳಬೇಕು’ ಎಂದರು.

ಕೆಸಿಆರ್‌ ಭೇಟಿ: ಗುಟ್ಟು ಬಿಟ್ಟುಕೊಟ್ಟ ರೈ
‘ತೆಲಂಗಾಣದ ಮುಖ್ಯಮಂತ್ರಿಯಾಗಿ ಕೆ.ಚಂದ್ರಶೇಖರ ರಾವ್‌ ಒಳ್ಳೆಯ ಕೆಲಸ ಮಾಡಿದ್ದಾರೆ. ನನ್ನ ಹಾಗೂ ಅವರ ಆಲೋಚನೆಗಳ ನಡುವೆ ಹೊಂದಾಣಿಕೆ ಇದೆ. ಹಾಗಾಗಿ, ಅವರು ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರನ್ನು ಭೇಟಿಯಾದ ಸಂದರ್ಭದಲ್ಲಿ ನಾನೂ ಹೋಗಿದ್ದೆ. ಬಿಜೆಪಿ ಜತೆ ಜೆಡಿಎಸ್‌ ಕೈಜೋಡಿಸುತ್ತದೆ ಎಂಬ ವದಂತಿಯ ಬಗ್ಗೆ ಆ ಪಕ್ಷದ ನಾಯಕರಲ್ಲೇ ನೇರವಾಗಿ ಕೇಳಬೇಕಿತ್ತು. ನನ್ನ ಭೇಟಿಯ ಉದ್ದೇಶ ಇಷ್ಟೇ’ ಎಂದು ಪ್ರಕಾಶ್‌ ರೈ ತಿಳಿಸಿದರು.

ಎಲ್ಲ ರಾಜ್ಯಗಳೂ ಕೇಂದ್ರದ ಮುಂದೆ ಭಿಕ್ಷೆ ಬೇಡುವಂತಹ ವಾತಾವರಣ ಸೃಷ್ಟಿಯಾಗಿದೆ. ‌ಕೇಂದ್ರ ಸರ್ಕಾರ ರಾಜ್ಯಗಳನ್ನು ಈ ರೀತಿ ನಡೆಸಿಕೊಳ್ಳುತ್ತಿದೆ. 2019ರ ಚುನಾವಣೆಯಲ್ಲಾದರೂ ರಾಷ್ಟ್ರ ಪಕ್ಷಗಳ ಬದಲು ರಾಜ್ಯ ಪಕ್ಷಗಳು ಮುಂಚೂಣಿಗೆ ಬರಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಕಮಲ್ ಹಾಸನ್‌ ಅಥವಾ ರಜನಿಕಾಂತ್‌ ಅವರ ಪ್ರಾದೇಶಿಕ ಪಕ್ಷಗಳನ್ನು ಬೆಂಬಲಿಸುತ್ತೀರಾ ಎಂಬ ಪ್ರಶ್ನೆಗೆ, ‘ಯಾರೋ‌ ಒಬ್ಬರು ಪಕ್ಷ ಆರಂಭಿಸಿದ ಮಾತ್ರಕ್ಕೆ ಬೆಂಬಲಿಸಲಾಗದು. ಅವರ ಪ್ರಣಾಳಿಕೆಯಲ್ಲಿ ಏನಿದೆ ಎಂದು ನೋಡಿ ಯೋಚಿಸಿ ನಿರ್ಧಾರಕ್ಕೆ ಬರಬೇಕು’ ಎಂದರು.

*
ಎರಡು ಪಕ್ಷಗಳ ನಾಯಕರು ಕರ್ನಾಟಕದವರಂತೆಯೇ ಕಾಣಿಸುತ್ತಾರೆ. ಇನ್ನೊಂದು ಪಕ್ಷದ ಮುಖಂಡ ನಮ್ಮವರಂತೆ ಕಾಣಿಸುತ್ತಿಲ್ಲ. ಬೇರೆ ರಾಜ್ಯದ ಮುಖ್ಯಮಂತ್ರಿ ಬಂದಾಗ ಅವರು ಕಾಲಿಗೆರಗುತ್ತಾರೆ.
–ಪ್ರಕಾಶ್‌ ರೈ, ನಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT