ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವತಂತ್ರ ಧರ್ಮದ ಹೆಸರಲ್ಲಿ ಮತ ಕೇಳೆನು

ನಾವು ನಾಯಕರನ್ನು ಬೆಳೆಸಲು ತಯಾರಿದ್ದೇವೆ; ಪಕ್ಷವನ್ನು ಅಧಿಕಾರಕ್ಕೆ ತರುವ ಹುಮ್ಮಸ್ಸು ಅವರಲ್ಲೂ ಇರಬೇಕಲ್ಲವೇ?
Last Updated 20 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಜಾತ್ಯತೀತ ಜನತಾದಳದ (ಜೆಡಿಎಸ್‌) ಉತ್ತರ ಕರ್ನಾಟಕ ಭಾಗದ ಪ್ರಭಾವಿ ಮುಖಂಡ, ವಿಧಾನ‍ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಅವರು ಲಿಂಗಾಯತಕ್ಕೆ ಸ್ವತಂತ್ರ ಧರ್ಮ ಮಾನ್ಯತೆ ಪರವಾದ ಹೋರಾಟದಲ್ಲಿಯೂ ಗುರುತಿಸಿಕೊಂಡವರು. ಲಿಂಗಾಯತ ಧರ್ಮಕ್ಕೆ ಸಂಬಂಧಿಸಿದ ಹೋರಾಟದಿಂದ ಪಕ್ಷದ ಮೇಲೆ ಆಗುವ ಪರಿಣಾಮಗಳು, ಉತ್ತರ ಕರ್ನಾಟಕದಲ್ಲಿ ಪಕ್ಷದ ಬೆಳವಣಿಗೆ ಸೇರಿದಂತೆ ಹಲವು ವಿಚಾರಗಳನ್ನು ‘ಪ್ರಜಾವಾಣಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಹಂಚಿಕೊಂಡಿದ್ದಾರೆ.

* ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಮಾನ್ಯತೆ ನೀಡುವಂತೆ ಶಿಫಾರಸು ಮಾಡಿದ ಕಾಂಗ್ರೆಸ್‌ ಅನ್ನು ಈ ಚುನಾವಣೆಯಲ್ಲಿ ಬೆಂಬಲಿಸಬೇಕು ಎಂದು ಮಾತೆ ಮಹಾದೇವಿ ಹೇಳಿದ್ದಾರಲ್ಲಾ? ನಿಮ್ಮ ಸಹಮತ ಇದೆಯೇ?
ಖಂಡಿತಾ ಇಲ್ಲ. ಏಕೆಂದರೆ, ಅದು ಪಕ್ಷಾತೀತವಾಗಿ ನಡೆದ ಹೋರಾಟ. ಲಿಂಗಾಯತ ಧರ್ಮಕ್ಕೆ ಸಂಬಂಧಿಸಿದ ಹೋರಾಟದಲ್ಲಿ ಭಾಗಿಯಾಗುವ ಕುರಿತು ವರಿಷ್ಠರಾದ ಎಚ್‌.ಡಿ. ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಪಕ್ಷಕ್ಕೂ, ಈ ಹೋರಾಟಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದೆ. ದೇವೇಗೌಡರು ಒಪ್ಪಿದ್ದರು. ಕುಮಾರಸ್ವಾಮಿ ಆರಂಭದಲ್ಲಿ ಅಪಸ್ವರ ಎತ್ತಿದ್ದರಾದರೂ ಆ ಬಳಿಕ ಸುಮ್ಮನಾದರು. ಹೋರಾಟದಲ್ಲಿ ಸಕ್ರಿಯವಾಗಿ ಇದ್ದುದನ್ನು ಮುಂದಿಟ್ಟುಕೊಂಡು ಜೆಡಿಎಸ್‌ಗೆ ಮತ ಹಾಕಿ ಎಂದು ಕೇಳುವುದಿಲ್ಲ. ಆದರೆ, ಕಾಂಗ್ರೆಸ್‌ನ ಎಂ.ಬಿ. ಪಾಟೀಲ ಹಾಗೂ ವಿನಯ ಕುಲಕರ್ಣಿ ಇದನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂಬುದು ಈಗ ಗೊತ್ತಾಗಿದೆ. ಮಾತೆ ಮಹಾದೇವಿ ಅವರು ಕಾಂಗ್ರೆಸ್‌ ಬೆಂಬಲಿಸುವ ಹೇಳಿಕೆಯನ್ನು ಬಹಿರಂಗವಾಗಿ ನೀಡಬಾರದಿತ್ತು.

* ಹೋರಾಟದಿಂದ ನಿಮ್ಮ ಪಕ್ಷಕ್ಕೇನು ಲಾಭ ಬಂತು?
ನಾನಂತೂ ಚುನಾವಣೆ ಮುಗಿಯುವವರೆಗೂ ಈ ವಿಚಾರವನ್ನು ಪ್ರಸ್ತಾಪ ಮಾಡಿ ಮತ ಕೇಳುವುದಿಲ್ಲ. ಆದರೆ, ಸ್ವತಂತ್ರ ಧರ್ಮದ ಹೋರಾಟದಲ್ಲಿ ನಾನು ಸಕ್ರಿಯವಾಗಿದ್ದನ್ನು ಪರಿಗಣಿಸಿ ಮತದಾರರು ಜೆಡಿಎಸ್‌ ಅನ್ನು ಬೆಂಬಲಿಸಿದರೆ ಅದನ್ನು ಬೇಡ ಎನ್ನಲಾಗುವುದಿಲ್ಲ.

* ಎರಡನೇ ಹಂತದ ನಾಯಕರನ್ನು ನೀವು ಬೆಳೆಸಿಲ್ಲ ಎಂಬ ಆರೋಪಗಳಿವೆಯಲ್ಲ?
ಆರೋಪ ಸುಳ್ಳು. ನವಲಗುಂದ ಶಾಸಕ ಎನ್‌.ಎಚ್‌. ಕೋನರಡ್ಡಿ, ಈ ಬಾರಿ ಜಗದೀಶ ಶೆಟ್ಟರ್‌ ಅವರ ಎದುರು ಸ್ಪರ್ಧಿಸಲಿರುವ ರಾಜಣ್ಣಾ ಕೊರವಿ, ಕುಂದಗೋಳದಿಂದ ಸ್ಪರ್ಧಿಸಲಿರುವ ಎಂ.ಎಸ್‌. ಅಕ್ಕಿ, ಹುಬ್ಬಳ್ಳಿ– ಧಾರವಾಡ ಪಶ್ಚಿಮ ಕ್ಷೇತ್ರದ ಟಿಕೆಟ್‌ ನಿರೀಕ್ಷೆಯಲ್ಲಿರುವ ಅಲ್ತಾಫ್‌ ಕಿತ್ತೂರ ಇವರೆಲ್ಲ ಎರಡನೇ ಹಂತದ ನಾಯಕರೇ ಅಲ್ಲವೇ? ಕಳೆದ ಚುನಾವಣೆಯಲ್ಲಿ ಧಾರವಾಡ ಜಿಲ್ಲೆಯ ವಿವಿಧ ಕ್ಷೇತ್ರಗಳಿಂದ ಪಕ್ಷದಿಂದ ಸ್ಪರ್ಧಿಸಿದ್ದ ಇಸ್ಮಾಯಿಲ್‌ ತಮಟಗಾರ, ಅಮೃತ್‌ ದೇಸಾಯಿ ಅವರ ಗೆಲುವಿಗೆ ಪಕ್ಷ ಸಾಕಷ್ಟು ಶ್ರಮ ಹಾಕಿತ್ತು. ಪಾರ್ಟಿ ಫಂಡ್‌ ಸಹ ನೀಡಿದ್ದೆವು. ಆದರೆ, ಅವರಿಬ್ಬರೂ ಪಕ್ಷ ತ್ಯಜಿಸಿದ್ದಾರೆ. ಇಸ್ಮಾಯಿಲ್‌ ತಮಟಗಾರ ಅವರ ತಾಯಿ ಜೆಡಿಎಸ್‌ನಿಂದ ಸ್ಪರ್ಧಿಸಿ ಪಾಲಿಕೆ ಸದಸ್ಯೆಯಾಗಿದ್ದಾರೆ. ಅವರಿಂದ ಪಕ್ಷಕ್ಕೆ ಯಾವ ಲಾಭವಾಗಿದೆ? ನಾವು ನಾಯಕರನ್ನು ಬೆಳೆಸಲು ತಯಾರಿದ್ದೇವೆ. ಪಕ್ಷವನ್ನು ಅಧಿಕಾರಕ್ಕೆ ತರುವ ಹುಮ್ಮಸ್ಸು ಅವರಲ್ಲಿಯೂ ಇರಬೇಕಲ್ಲ?

* ನೀವು ವಿಧಾನ ಪರಿಷತ್‌ ಚುನಾವಣೆ ಎದುರಿಸಿದಷ್ಟೇ ಗಂಭೀರವಾಗಿ ಪಕ್ಷದ ಇತರ ಅಭ್ಯರ್ಥಿಗಳನ್ನು ಗೆಲ್ಲಿಸಲು ಪ್ರಯತ್ನಿಸುವುದಿಲ್ಲ ಎಂಬ ಆರೋಪದ ಬಗ್ಗೆ?
ಟೀಕಿಸುವವರ ಬಾಯಿ ಮುಚ್ಚಿಸುವುದಕ್ಕೆ ಆಗುವುದಿಲ್ಲ. ಉತ್ತರ ಕರ್ನಾಟಕದಲ್ಲಿ ಪಕ್ಷ ಸಂಘಟಿಸುವ ಸಂದರ್ಭದಲ್ಲಿ ಕೆಲ ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳುವ ಅಧಿಕಾರವನ್ನು ನನಗೆ ಕೊಡಬೇಕು. ದುರದೃಷ್ಟವಶಾತ್‌, ಕೆಲ ವಿಚಾರಗಳಲ್ಲಿ ಸಾಧ್ಯವಾಗಿಲ್ಲ. ಜೆಡಿಎಸ್‌ ತ್ಯಜಿಸಿ ಬಿಜೆಪಿ ಸೇರಿದ್ದ ಧಾರವಾಡದ ಗುರುರಾಜ ಹುಣಸಿಮರದ ಅವರನ್ನು ಸ್ವತಃ ಕುಮಾರಸ್ವಾಮಿ, ಅವರ ಮನೆಗೇ ಹೋಗಿ ಪಕ್ಷಕ್ಕೆ ಮರುಸೇರ್ಪಡೆ ಮಾಡಿಕೊಂಡರು. ಈ ವಿಚಾರ ನನಗೆ ಗೊತ್ತೇ ಇರಲಿಲ್ಲ!

ಸಾಧ್ಯವಾದಷ್ಟೂ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಂಡಿದ್ದೇನೆ. 2008ರ ಚುನಾವಣಾ ಫಲಿತಾಂಶ ಬರುವುದಕ್ಕೂ ಮುನ್ನ ಯಡಿಯೂರಪ್ಪ ಅವರು ನನ್ನ ಮನೆಗೆ ಬಂದು ಒಂದೂವರೆ ತಾಸು ಕಳೆದಿದ್ದರು. ನಿಮ್ಮ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ, ಬಿಜೆಪಿ ಸೇರಿದರೆ ಮಂತ್ರಿ ಮಾಡುತ್ತೇನೆ ಎಂದರು. ನಾ ಒಪ್ಪಿಕೊಳ್ಳಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಬರುವಂತೆ ಹಲವಾರು ಬಾರಿ ಕರೆದಿದ್ದಾರೆ. ಆದರೂ ಹೋಗಿಲ್ಲ. 80ರ ದಶಕದಿಂದ ಜನತಾ ಪರಿವಾರಕ್ಕೆ ನನ್ನ ನಿಷ್ಠೆ ಏನಿತ್ತೋ, ಅದು ಈಗಲೂ ಮುಂದುವರಿದಿದೆ.

* ಜೆಡಿಎಸ್‌ ಹಳೇ ಮೈಸೂರು ಭಾಗದಲ್ಲಿ ಪಕ್ಷದ ಬೆಳವಣಿಗೆಗೆ ಒತ್ತು ಕೊಟ್ಟಷ್ಟು ಉತ್ತರ ಕರ್ನಾಟಕಕ್ಕೆ ಏಕೆ ಕೊಟ್ಟಿಲ್ಲ? ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಇದು ತೊಡಕಾಗುವುದಿಲ್ಲವೇ?
ನಿಮ್ಮ ಮಾತು ಒಪ್ಪುವೆ. ಬೆಳಗಾವಿ ಹಾಗೂ ಕಲಬುರ್ಗಿ ವಿಭಾಗಗಳಲ್ಲಿ ಪಕ್ಷದ ಸಂಘಟನೆಗೆ ಕುಮಾರಸ್ವಾಮಿ ಅವರಿಗೆ ಸಲಹೆಗಳನ್ನು ನೀಡಿದ್ದೆ. ಕಚೇರಿ ನಿರ್ವಹಣಾ ವೆಚ್ಚ ನೀಡುವಂತೆ ಕೋರಿದ್ದೆ. ಅದು ಯಾವುದೂ ಜಾರಿಗೆ ಬಂದಿಲ್ಲ. ಚುನಾವಣೆಯ ಹೊತ್ತಿಗೆ ಕುಮಾರಸ್ವಾಮಿ ಹೆಚ್ಚು ಸಮಯ ಇಲ್ಲೇ ಇರಲಿದ್ದಾರೆ.

ಏಪ್ರಿಲ್‌ 28ರ ಬಳಿಕ ಹೇಗೆ ಇರುತ್ತದೆ ಎಂಬುದನ್ನು ನೋಡುತ್ತಾ ಇರಿ. ಅಲ್ಲದೆ, ಉತ್ತಮ ಚಾರಿತ್ರ್ಯ ಹೊಂದಿದ, ಹಣ ಗಳಿಕೆಯನ್ನೇ ಮುಖ್ಯವಾಗಿಸಿಕೊಳ್ಳದ ಅಭ್ಯರ್ಥಿಗಳಿಗೆ ಪಕ್ಷ ಟಿಕೆಟ್‌ ನೀಡಿದೆ. ಗದಗ ಜಿಲ್ಲೆಯ ರೋಣ ಕ್ಷೇತ್ರದಿಂದ ದೊಡ್ಡಮೇಟಿ ಮನೆತನದ ಮೂರನೇ ತಲೆಮಾರಿನ ರವೀಂದ್ರನಾಥ್‌ ಅವರಿಗೆ ಟಿಕೆಟ್‌ ನೀಡಲಾಗಿದೆ. ಅವರ ಬಳಿ ಚುನಾವಣೆ ವೆಚ್ಚಕ್ಕೆ ಹಣವೇ ಇರಲಿಲ್ಲ. ಆದರೆ, ಅದನ್ನು ಗಮನಿಸಿದ ಕಾರ್ಯಕರ್ತರು ಒಂದೇ ದಿನ ₹ 7 ಲಕ್ಷ ಕೂಡಿಸಿದ್ದಾರೆ. ಉತ್ತರ ಕರ್ನಾಟಕದ 96 ಕ್ಷೇತ್ರಗಳ ಪೈಕಿ 25 ಅಭ್ಯರ್ಥಿಗಳ ಗೆಲುವು ನಿಶ್ಚಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT