ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಮಾನಕರ ಪೋಸ್ಟ್‌ ಕ್ಷಮೆ ಕೇಳಿದ ಶೇಖರ್‌

Last Updated 21 ಏಪ್ರಿಲ್ 2018, 6:10 IST
ಅಕ್ಷರ ಗಾತ್ರ

ಚೆನ್ನೈ: ಮಾಧ್ಯಮ ಸಂಸ್ಥೆ ಗಳು ಮತ್ತು ಪತ್ರಕರ್ತೆಯರನ್ನು ಅವಮಾನಿಸುವ ಫೇಸ್‌ಬುಕ್‌ ಪೋಸ್ಟ್‌ವೊಂದನ್ನು ಶೇರ್‌ ಮಾಡಿದ್ದ ಬಿಜೆಪಿ ಮುಖಂಡ ಎಸ್‌.ವಿ. ಶೇಖರ್‌ ಶುಕ್ರವಾರ ಕ್ಷಮೆ ಯಾಚಿಸಿದ್ದಾರೆ.

‘ಸ್ನೇಹಿತನ ಪೋಸ್ಟ್‌ಅನ್ನು ಸರಿಯಾಗಿ ಓದದೇ ಹಾಗೆಯೇ ಶೇರ್‌ ಮಾಡಿದ್ದೆನೇ ಹೊರತು ಉದ್ದೇಶಪೂರ್ವಕವಾಗಿ ಮಾಡಿರಲಿಲ್ಲ. ಇದರಲ್ಲಿ ನಿಂದಿಸು
ವಂತಹ ವಿಷಯವಿದೆ ಎಂದು ಮತ್ತೊಬ್ಬ ಸ್ನೇಹಿತ ನನ್ನ ಗಮನಕ್ಕೆ ತಂದ ಕೂಡಲೇ ಆ ಪೋಸ್ಟ್‌ ಡಿಲೀಟ್‌ ಮಾಡಿದ್ದೇನೆ’ ಎಂದು ಅವರು ತಿಳಿಸಿದ್ದಾರೆ.

‘ನಾನು ಮಹಿಳೆ ಮತ್ತು ಪತ್ರಕರ್ತೆಯರನ್ನು ಗೌರವಿಸುವ ಕುಟುಂಬದಿಂದ ಬಂದವನು. ನಾನು ಶೇರ್‌ ಮಾಡಿದ ಪೋಸ್ಟ್‌ನಿಂದ ಯಾರಿಗಾದರೂ ನೋವಾಗಿದ್ದರೆ, ಕಳಕಳಿಯಿಂದ ಅವರೆಲ್ಲರ ಕ್ಷಮೆ ಯಾಚಿಸುತ್ತೇನೆ’ ಎಂದಿದ್ದಾರೆ.

ಮಾಧ್ಯಮ ಸಂಸ್ಥೆಗಳು ಮತ್ತು ಪತ್ರಕರ್ತೆಯರ ವಿರುದ್ಧ ಅವಮಾನಕಾರಿ ಪೋಸ್ಟ್‌ ಶೇರ್‌ ಮಾಡಿದ್ದ ಶೇಖರ್‌ ವಿರುದ್ಧ ಪತ್ರಕರ್ತೆಯರೂ ಸೇರಿದಂತೆ ವಿವಿಧ ವಲಯದವರಿಂದ ಸಾಕಷ್ಟು ಖಂಡನೆ ವ್ಯಕ್ತವಾಗಿತ್ತು.

ತಮಿಳುನಾಡು ರಾಜ್ಯಪಾಲ ಬನ್ವರಿಲಾಲ್‌ ಪುರೋಹಿತ್‌ ಅವರು ಪತ್ರಿಕಾಗೋಷ್ಠಿಯೊಂದರಲ್ಲಿ ಪತ್ರಕರ್ತೆಯ ಗಲ್ಲ ತಟ್ಟಿದ್ದರು. ಆ ಪ್ರಕರಣದ ನಂತರ, ಶೇಖರ್‌ ಅವರು ಗುರುವಾರ ಈ ಪೋಸ್ಟ್‌ ಶೇರ್‌ ಮಾಡಿದ್ದಾರೆ.

ಚೆನ್ನೈ ಪತ್ರಕರ್ತರ ಒಕ್ಕೂಟವು ಶೇಖರ್‌ ಅವರನ್ನು ಖಂಡಿಸಿದ್ದು, ಹಲವು ಪತ್ರಕರ್ತರು ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಇನ್ನೂ ಕೆಲವರು ಶೇಖರ್ ವಿರುದ್ಧ ಪೊಲೀಸ್‌ ಠಾಣೆಗಳಲ್ಲಿ ದೂರು ದಾಖಲಿಸಿದ್ದಾರೆ.

30 ಪತ್ರಕರ್ತರು ವಶಕ್ಕೆ: ಎಸ್‌.ವಿ. ಶೇಖರ್‌ ಅವರ ಮನೆ ಮುಂದೆ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಮನೆ ಮೇಲೆ ಕಲ್ಲು ತೂರಿದ್ದಕ್ಕಾಗಿ 30 ಪತ್ರಕರ್ತರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರತಿಭಟನಾ ಸ್ಥಳದಲ್ಲಿನ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಇದನ್ನು ಆಧರಿಸಿ ಇವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪೋಸ್ಟ್‌ನಲ್ಲಿ ಏನಿತ್ತು?

’ಇತ್ತೀಚಿನ ದೂರುಗಳ ಪ್ರಕಾರ, ಅವರು (ಪತ್ರಕರ್ತೆಯರು) ಪ್ರಮುಖ ವ್ಯಕ್ತಿಗಳೊಂದಿಗೆ ಮಲಗದಿದ್ದರೆ ವರದಿಗಾರ್ತಿ ಅಥವಾ ನಿರೂಪಕಿ ಆಗಲು ಸಾಧ್ಯವಿಲ್ಲ. ಅವಿದ್ಯಾವಂತ, ಅನಾಗರಿಕರು ತಮಿಳುನಾಡಿನ ಮಾಧ್ಯಮಗಳಲ್ಲಿ ಇಂತಹವರೇ ತುಂಬಿದ್ದಾರೆ. ಅದಕ್ಕೆ ಈಕೆಯೂ ಹೊರತಲ್ಲ. ವಿಶ್ವವಿದ್ಯಾಲಯಗಳಿಗಿಂತ ಮಾಧ್ಯಮ ಸಂಸ್ಥೆಗಳಲ್ಲೇ ಲೈಂಗಿಕ ದೌರ್ಜನ್ಯಗಳು ಹೆಚ್ಚು ನಡೆಯುತ್ತವೆ. ಅಂತಹವರು ಹೋಗಿ ರಾಜ್ಯಪಾಲರನ್ನು ಪ್ರಶ್ನಿಸುತ್ತಾರೆ’ ಎಂದು ಶೇಖರ್‌ ಶೇರ್‌ ಮಾಡಿದ ಪೋಸ್ಟ್‌ನಲ್ಲಿ ಇತ್ತು ಎಂದು ಎನ್‌ಡಿಟಿವಿ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT