ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಪಟ್ಟಿ ಪ್ರಕಟ; ಲಿಂಗಾಯತರಿಗೆ ಆದ್ಯತೆ

ಅನಿಲ್ ಬೆನಕೆ, ಅಭಯ ಪಾಟೀಲ, ಮಹಾಂತೇಶ ದೊಡ್ಡಗೌಡರ, ವಿಠ್ಠಲ ಹಲಗೇಕರಗೆ ಟಿಕೆಟ್
Last Updated 21 ಏಪ್ರಿಲ್ 2018, 5:31 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳ ಪೈಕಿ ಬಾಕಿ ಉಳಿದಿದ್ದ ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಬಿಜೆಪಿ ಶುಕ್ರವಾರ ಪಟ್ಟಿ ಬಿಡುಗಡೆ ಮಾಡಿದೆ. ಬೆಳಗಾವಿ ಉತ್ತರ– ಅನಿಲ ಬೆನಕೆ, ಬೆಳಗಾವಿ ದಕ್ಷಿಣ– ಅಭಯ ಪಾಟೀಲ, ಕಿತ್ತೂರು– ಮಹಾಂತೇಶ ದೊಡ್ಡಗೌಡರ ಹಾಗೂ ಖಾನಾಪುರ– ವಿಠ್ಠಲ ಹಲಗೇಕರ ಅವರಿಗೆ ಟಿಕೆಟ್‌ ನೀಡಿದೆ.

ಇದಕ್ಕೂ ಮೊದಲು ಬಿಡುಗಡೆ ಮಾಡಿದ್ದ ಮೊದಲ ಪಟ್ಟಿಯಲ್ಲಿ 14 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿತ್ತು. ಎರಡನೇ ಪಟ್ಟಿಯಲ್ಲಿ ಬೆಳಗಾವಿಯ ಯಾವುದೇ ಕ್ಷೇತ್ರವನ್ನು ಪ್ರಕಟಿಸಿರಲಿಲ್ಲ.

10 ಜನ ಲಿಂಗಾಯತರಿಗೆ ಟಿಕೆಟ್‌:
ಜಿಲ್ಲೆಯ 18 ಕ್ಷೇತ್ರಗಳ ಪೈಕಿ 10 ಕ್ಷೇತ್ರಗಳಲ್ಲಿ ಲಿಂಗಾಯತರಿಗೆ ಟಿಕೆಟ್‌ ನೀಡಲಾಗಿದೆ. ಇನ್ನುಳಿದಂತೆ ಜೈನ್‌, ಮರಾಠಾ, ಎಸ್‌ಸಿ ಹಾಗೂ ಎಸ್‌ಟಿ ಸಮುದಾಯದವರಿಗೆ ತಲಾ 2 ಕ್ಷೇತ್ರಗಳಲ್ಲಿ ಅವಕಾಶ ಕಲ್ಪಿಸಲಾಗಿದೆ.
ನಿಪ್ಪಾಣಿ– ಶಶಿಕಲಾ ಜೊಲ್ಲೆ, ಚಿಕ್ಕೋಡಿ ಸದಲಗಾ– ಅಣ್ಣಾಸಾಹೇಬ ಜೊಲ್ಲೆ, ಅಥಣಿ– ಲಕ್ಷ್ಮಣ ಸವದಿ, ಕಾಗವಾಡ– ಭರಮಗೌಡ ಕಾಗೆ, ಹುಕ್ಕೇರಿ– ಉಮೇಶ ಕತ್ತಿ, ಗೋಕಾಕ– ಅಶೋಕ ಪೂಜಾರಿ, ಕಿತ್ತೂರು– ಮಹಾಂತೇಶ ದೊಡ್ಡಗೌಡರ, ಬೈಲಹೊಂಗಲ– ಡಾ.ವಿಶ್ವನಾಥ ಪಾಟೀಲ, ಸವದತ್ತಿ– ಆನಂದ ಮಾಮನಿ ಹಾಗೂ ರಾಮದುರ್ಗ– ಮಹಾದೇವಪ್ಪ ಯಾದವಾಡ ಅವರು ಲಿಂಗಾಯತ ಸಮುದಾಯಕ್ಕೆ ಸೇರಿದವರು.

ಎಸ್‌ಸಿ ಮೀಸಲು ಕ್ಷೇತ್ರಗಳಾದ ಕುಡಚಿಯಿಂದ ಪಿ.ರಾಜೀವ ಹಾಗೂ ರಾಯಬಾಗದಿಂದ ದುರ್ಯೋಧನ ಐಹೊಳೆ ಕಣಕ್ಕಿಳಿದಿದ್ದಾರೆ. ಎಸ್‌ಟಿ ಮೀಸಲು ಕ್ಷೇತ್ರದಿಂದ ಮಾರುತಿ ಅಷ್ಟಗಿ ಸ್ಪರ್ಧೆಗೆ ಇಳಿದಿದ್ದಾರೆ. ಅರಬಾವಿ ಸಾಮಾನ್ಯ ಕ್ಷೇತ್ರದಿಂದ ಎಸ್‌.ಟಿ ಸಮುದಾಯಕ್ಕೆ ಸೇರಿದ ಬಾಲಚಂದ್ರ ಜಾರಕಿಹೊಳಿ ಸ್ಪರ್ಧಿಸಿದ್ದಾರೆ.

ಇಬ್ಬರಿಗೆ ‘ಕೆಜೆಪಿ’ ನಂಟು:
ಬಿ.ಎಸ್‌. ಯಡಿಯೂರಪ್ಪ ಅವರು 2013ರ ವೇಳೆ ಕೆಜೆಪಿ ಕಟ್ಟಿದ್ದಾಗ ಅವರ ಜೊತೆ ಗುರುತಿಸಿಕೊಂಡಿದ್ದ ಬೈಲಹೊಂಗಲದ ವಿಶ್ವನಾಥ ಪಾಟೀಲ ಹಾಗೂ ಕಿತ್ತೂರಿನ ಮಹಾಂತೇಶ ದೊಡ್ಡಗೌಡರ ಅವರು ಬಿಜೆಪಿ ಟಿಕೆಟ್‌ ಪಡೆಯುವಲ್ಲಿ ಸಫಲರಾಗಿದ್ದಾರೆ.

ಒಬ್ಬರು ಮಹಿಳೆಗೆ ಅವಕಾಶ:
ಜಿಲ್ಲೆಯಲ್ಲಿ ಒಬ್ಬ ಮಹಿಳೆಗೆ ಮಾತ್ರ ಅವಕಾಶ ದೊರೆತಿದೆ. ನಿಪ್ಪಾಣಿಯ ಹಾಲಿ ಶಾಸಕಿ ಶಶಿಕಲಾ ಜೊಲ್ಲೆ ಟಿಕೆಟ್‌ ಗಿಟ್ಟಿಸಿಕೊಂಡಿದ್ದಾರೆ.

ಬಂಡಾಯದ ಸುಳಿವು:
ಖಾನಾಪುರದ ಮಾಜಿ ಶಾಸಕ ಪ್ರಹ್ಲಾದ ರೆಮಾನೆ ಅವರ ಪುತ್ರ ಜ್ಯೋತಿಬಾ ರೆಮಾನೆ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಇವರನ್ನು ತಪ್ಪಿಸಿ, ವಿಠ್ಠಲ ಹಲಗೇಕರ ಅವರಿಗೆ ನೀಡಲಾಗಿದೆ. ಇದರಿಂದ ಅಸಮಾಧಾನಗೊಂಡಿರುವ ಜ್ಯೋತಿಬಾ ಅವರು ಶನಿವಾರ ತಮ್ಮ ಬೆಂಬಲಿಗರ ಸಭೆ ಕರೆದಿದ್ದಾರೆ. ಬೆಂಬಲಿಗರ ಸಲಹೆ ಪಡೆದು, ಮುಂದುವರಿಯಲು ತೀರ್ಮಾನಿಸಿದ್ದಾರೆ ಎಂದು ಹೇಳಲಾಗಿದೆ.

ಬಿಜೆಪಿ ಟಿಕೆಟ್‌ ವಂಚಿತ ಬೈಲಹೊಂಗಲದ ಜಗದೀಶ ಮೆಟಗುಡ್ಡ ಅವರು ಈಗಾಗಲೇ ಬಂಡಾಯವಾಗಿ ಕಣಕ್ಕಿಳಿದಿದ್ದಾರೆ. ಬೆಳಗಾವಿ ಉತ್ತರ ಕ್ಷೇತ್ರಕ್ಕೆ ಅನಿಲ ಬೆನಕೆ ಅವರನ್ನು ಕಣಕ್ಕಿಳಿಸಿರುವುದರ ವಿರುದ್ಧ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇವರನ್ನು ಸಮಾಧಾನ ಪಡಿಸಲು ಪಕ್ಷದ ಮುಖಂಡರು ಪ್ರಯತ್ನ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT