ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಿದಾದ ವೇದಗಂಗೆ ಒಡಲು

ಕೃಷ್ಣೆಯಲ್ಲಿ ನಿರ್ಬಳ್ಳಿಯದ್ದೇ ಸಮಸ್ಯೆ; ದೂಧಗಂಗೆಯ ನೀರಿನ ಪ್ರಮಾಣದಲ್ಲಿ ಕುಸಿತ
Last Updated 21 ಏಪ್ರಿಲ್ 2018, 5:41 IST
ಅಕ್ಷರ ಗಾತ್ರ

ಚಿಕ್ಕೋಡಿ: ತಾಲ್ಲೂಕಿನಲ್ಲಿ ವೇದಗಂಗೆಯ ಒಡಲು ಬರಿದಾಗಿದ್ದು, ದೂಧಗಂಗಾ ನದಿಯಲ್ಲಿ ನಿರ್ಮಿಸಿರುವ ಬಾಂದಾರುಗಳಲ್ಲಿ ಸಂಗ್ರಹಿಸಿರುವ ನೀರು ದಿನೇ ದಿನೇ ಬರಿದಾಗುತ್ತಿದೆ. ಕೃಷ್ಣೆಯಲ್ಲಿ ನೀರಿದ್ದರೂ, ಮಹಾರಾಷ್ಟ್ರದಿಂದ ಹರಿದು ಬರುತ್ತಿರುವ ನಿರ್ಬಳ್ಳಿ ನೀರನ್ನು ಕಲುಷಿತಗೊಳಿಸುತ್ತಿದೆ.

ನಿಪ್ಪಾಣಿ ಪರಿಸರದ ಯಮಗರ್ಣಿ, ರಾಮಪುರ, ಜತ್ರಾಟ, ಭೀವಶಿ, ಅಕ್ಕೋಳ, ಸಿದ್ನಾಳ, ಕುನ್ನೂರ, ಬಾರವಾಡ ಮೂಲಕ ಹರಿಯುವ ವೇದಗಂಗಾ ನದಿ ಸಂಪೂರ್ಣ ಬತ್ತಿ ಹೋಗಿದೆ. ಇದರಿಂದ ನದಿ ಈ ನದಿ ನೀರನ್ನೇ ಅವಲಂಬಿಸಿರುವ ಗ್ರಾಮಗಳಲ್ಲಿ ಜಲಕ್ಷಾಮ ತಲೆದೋರಿದೆ. ಬೆಳೆಗಳು ಬಾಡುತ್ತಿವೆ. ನದಿಯ ತಗ್ಗು ಪ್ರದೇಶಗಳಲ್ಲಿ ನಿಂತ ನೀರಿನಲ್ಲಿ ಮಹಿಳೆಯರು ಬಟ್ಟೆ ತೊಳೆಯುವುದು, ಜಾನುವಾರುಗಳಿಗೆ ನೀರು ಕುಡಿಸುವುದು, ಮಕ್ಕಳು ಜಳಕ ಮಾಡುವ ದೃಶ್ಯ ಕಂಡು ಬರುತ್ತಿದೆ.

ಮಹಾರಾಷ್ಟ್ರದ ಬಸ್ತವಡೆ, ಕೌಲಗಿ, ಚಿಕಲಿ, ಆಲೂರ, ಬಾಣಗೆ, ಮಳಗೆ ಮೊದಲಾದ ಗ್ರಾಮಗಳ ಅನುಕೂಲಕ್ಕಾಗಿ ಕಾಳಮ್ಮವಾಡಿ ಜಲಾಶಯದಿಂದ ಅಲ್ಲಿನ ಸರ್ಕಾರ ವೇದಗಂಗಾ ನದಿಗೆ ನೀರು ಹರಿಸಿದ್ದು, ರಾಜ್ಯದ ಕುರ್ಲಿ ಮತ್ತು ಮಹಾರಾಷ್ಟ್ರದ ಚಿಕಲಿ ಗ್ರಾಮಗಳ ಮಧ್ಯೆ ಇರುವ ಬಾಂದಾರದಲ್ಲಿ ನೀರು ಸಂಗ್ರಹಿಸಲಾಗಿದೆ. ಇದರಿಂದ ನದಿ ಪಕ್ಕದಲ್ಲಿರುವ ರಾಜ್ಯದ ಕುರ್ಲಿ, ಭಾಟನಾಗನೂರ ಮತ್ತು ಅಪ್ಪಾಚಿವಾಡಿ ಗ್ರಾಮಗಳಲ್ಲಿ ಸದ್ಯ ಕುಡಿಯುವ ನೀರಿನ ಸಮಸ್ಯೆ ಎದುರಾಗಿಲ್ಲ.

ಸಂಗ್ರಹಗೊಂಡಿರುವ ನೀರು:

ರಾಜ್ಯದ ಕೊಗನೊಳಿ, ಮಾಂಗೂರ, ಕಾರದಗಾ, ಬೇಡಕಿಹಾಳ, ಶಮನೇವಾಡಿ, ಸದಲಗಾ, ಮಲಿಕವಾಡ, ಯಕ್ಸಂಬಾ ಗ್ರಾಮಗಳ ಮೂಲಕ ಹರಿದು ಕಲ್ಲೋಳ ಬಳಿ ಕೃಷ್ಣಾ ನದಿ ಸೇರುವ ದೂಧಗಂಗಾ ನದಿಯಿಂದ ಪೈಪ್‌ಲೈನ್‌ ಮೂಲಕ ಕುಡಿಯುವ ನೀರು ಮತ್ತು ನೀರಾವರಿ ವ್ಯವಸ್ಥೆ ಕಲ್ಪಿಸಲಾಗಿದೆ.

‘ದೂಧ್‌ಗಂಗಾ ನದಿಗೆ ಅಡ್ಡಲಾಗಿ ಕಾರದಗಾ–ಭೋಜ್, ಮಲಿಕವಾಡ–ದತ್ತವಾಡ ಮತ್ತು ಸದಲಗಾ–ಬೋರಗಾಂವ ಗ್ರಾಮಗಳ ನಡುವೆ ನಿರ್ಮಿಸಿರುವ ಬಾಂದಾರುಗಳಲ್ಲಿ ನೀರು ಸಂಗ್ರಹಿಸಲಾಗಿದ್ದು, ಸದ್ಯಕ್ಕೆ ನೀರಿನ ಸಮಸ್ಯೆ ಇಲ್ಲ. ಆದರೆ, ದಿನದಿಂದ ದಿನಕ್ಕೆ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದು, ಮುಂಬರುವ ದಿನಗಳಲ್ಲಿ ನೀರಿನ ಆಭಾವ ತಲೆದೋರುವ ಸಾಧ್ಯತೆ ಇದೆ’ ಎನ್ನುತ್ತಾರೆ ಸದಲಗಾದ ಕೃಷಿಕ ತಾತ್ಯಾಸಾಹೇಬ ಕದಂ.

ನಿರ್ಬಳ್ಳಿಯದ್ದೇ ಸಮಸ್ಯೆ:

‘ತಾಲ್ಲೂಕಿನ ಜೀವನದಿ ಕೃಷ್ಣೆಯ ಒಡಲಲ್ಲಿ ನಿರ್ಬಳ್ಳಿ ಹಬ್ಬಿಕೊಂಡಿದ್ದು, ಜೀವಜಲ ಕಲುಷಿತವಾಗುತ್ತಿದೆ. ಚಿಕ್ಕೋಡಿ ಪಟ್ಟಣ ಸೇರಿ ನದಿ ಪಕ್ಕದ ಹತ್ತಾರು ಹಳ್ಳಿಗಳಿಗೆ ಕೃಷ್ಣಾ ನದಿಯಿಂದ ಕುಡಿಯುವ ನೀರು ಸರಬರಾಜು ಆಗುತ್ತದೆ. ಕಲುಷಿತ ಕುಡಿಯುವ ನೀರು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ನದಿ ನೀರಿನಲ್ಲಿ ನಿರ್ಬಳ್ಳಿ ಆವರಿಸಿ ತಿಂಗಳು ಕಳೆಯುತ್ತ ಬಂದರೂ ಅಧಿಕಾರಿಗಳು ಅದರತ್ತ ಗಮನ ಹರಿಸಿಲ್ಲ. ಅನಾಹುತ ಘಟಿಸುವ ಮುನ್ನ ನದಿಯಿಂದ ನಿರ್ಬಳ್ಳಿ ತೆರವುಗೊಳಿವಂತೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಮಾಂಜರಿ ನಿವಾಸಿ ಸಂತೋಷ ಕಾಮತ್ ಆಗ್ರಹಿಸಿದರು.

**

ಸದ್ಯ ಚಿಕ್ಕೋಡಿಗೆ ಕುಡಿಯುವ ನೀರು ಪೂರೈಸುವ ಜಾಕ್‌ವೆಲ್‌ ಬಳಿ ನೀರು ಇರುವದರಿಂದ ಇನ್ನೂ ಒಂದು ತಿಂಗಳು ನೀರಿನ ಸಮಸ್ಯೆ ಎದುರಾಗುವುದಿಲ್ಲ – ಜಗದೀಶ ಹುಲಿಗೆಜ್ಜಿ, ಪುರಸಭೆ ಮುಖ್ಯಾಧಿಕಾರಿ.

**

ಸುಧಾಕರ ತಳವಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT