ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಕ್ತಿ ಪ್ರದರ್ಶಿಸಿದ ಲಕ್ಷ್ಮಿ ಹೆಬ್ಬಾಳಕರ

ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ
Last Updated 21 ಏಪ್ರಿಲ್ 2018, 5:44 IST
ಅಕ್ಷರ ಗಾತ್ರ

ಬೆಳಗಾವಿ: ಗ್ರಾಮೀಣ ಮತಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಲಕ್ಷ್ಮಿ ಹೆಬ್ಬಾಳಕರ ಇಲ್ಲಿನ ತಹಶೀಲ್ದಾರ್‌ ಕಚೇರಿಯಲ್ಲಿ ಶುಕ್ರವಾರ ಮಧ್ಯಾಹ್ನ ನಾಮಪತ್ರ ಸಲ್ಲಿಸಿದರು.

ತಾಲ್ಲೂಕಿನ ಸುಳೇಭಾವಿ ಮಹಾಲಕ್ಷ್ಮಿ ದೇವಸ್ಥಾನ ಹಾಗೂ ಹಿಂಡಲಗಾ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ, ಸಿಪಿಇಡಿ ಕಾಲೇಜು ಮೈದಾನದಿಂದ ಸಾವಿರಾರು ಮಂದಿ ಬೆಂಬಲಿಗರು ಮತ್ತು ಕಾರ್ಯಕರ್ತರೊಂದಿಗೆ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿದರು. ಕ್ಲಬ್‌ ರಸ್ತೆ, ರಾಣಿ ಚನ್ನಮ್ಮ ವೃತ್ತದ ಮೂಲಕ ಮೆರವಣಿಗೆ ಸಾಗಿತು. ಕೆಲವರು ಕಾಂಗ್ರೆಸ್‌ ಬಾವುಟ ಹಿಡಿದು ಭಾಗವಹಿಸಿದ್ದರು. ಹೆಚ್ಚಿನ ಸಂಖ್ಯೆಯಲ್ಲಿದ್ದ ಮಹಿಳೆಯರೂ ಸೇರಿ ಬಹುತೇಕರು ಕೇಸರಿಪೇಟ ತೊಟ್ಟು ಪಾಲ್ಗೊಂಡಿದ್ದುದು ವಿಶೇಷವಾಗಿತ್ತು. ಲಕ್ಷ್ಮಿ ಜೊತೆ ಕಾಂಗ್ರೆಸ್‌ ಗ್ರಾಮೀಣ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ, ಮುಖಂಡ ಯುವರಾಜ ಕದಂ ಮೊದಲಾದವರು ಸಾಥ್‌ ನೀಡಿದರು.

ಉಮೇದುವಾರಿಕೆ ಸಲ್ಲಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ದೇವರು, ಕುಟುಂಬದವರು ಹಾಗೂ ಕ್ಷೇತ್ರದ ಹಿರಿಯರ ಆಶೀರ್ವಾದದೊಂದಿಗೆ ನಾಮಪತ್ರ ಸಲ್ಲಿಸಿದ್ದೇನೆ. ಕ್ಷೇತ್ರದಲ್ಲಿನ ಎಲ್ಲ ವರ್ಗದವರ ಅಭಿವೃದ್ಧಿ ನನ್ನ ಮಂತ್ರವಾಗಿದೆ. ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಮಹಿಳೆಯರ ಅಭಿವೃದ್ಧಿಗೂ ಗಮನಹರಿಸಿದ್ದೇನೆ. ಇದನ್ನು ಈ ಬಾರಿ ಮತದಾರರು ಬೆಂಬಲಿಸುತ್ತಾರೆ ಎನ್ನುವ ವಿಶ್ವಾಸವಿದೆ. ಕ್ಷೇತ್ರದ ಜನರು ನನ್ನನ್ನು ಸಹೋದರಿ, ಮನೆಯ ಮಗಳಂತೆ ಕಾಣುತ್ತಿದ್ದಾರೆ. ಹೀಗಾಗಿ, ಜಿದ್ದಾಜಿದ್ದಿ ಇಲ್ಲದೇ ಅನಾಯಾಸವಾಗಿ ಆಯ್ಕೆಯಾಗುತ್ತೇನೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಆನೆ ಬಲ ಬಂದಂತಾಗುತ್ತದೆ:

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಾದಾಮಿಯಲ್ಲಿ ಸ್ಪರ್ಧಿಸಿದರೆ ನಮಗೆ ಆನೆಬಲ ಬಂದಂತಾಗುತ್ತದೆ. ಅವರು ಇಲ್ಲಿ ಆಯ್ಕೆಯಾಗುವುದರಿಂದ ಈ ಭಾಗದ ಅಭಿವೃದ್ಧಿಯೂ ಸಾಧ್ಯವಾಗುತ್ತದೆ. ದೊಡ್ಡ ನಾಯಕರೊಬ್ಬರು ನಮ್ಮಲ್ಲಿ ಸ್ಪರ್ಧಿಸುವುದು ಖುಷಿಯ ವಿಚಾರ. ನಾನೂ ಹೋಗಿ ಪ್ರಚಾರ ಮಾಡುತ್ತೇನೆ’ ಎಂದು ಪ್ರತಿಕ್ರಿಯಿಸಿದರು.

‘ಕ್ಷೇತ್ರದ ಈಗಿನ ಶಾಸಕರಂತೆ ಒಡೆದು ಆಳುವ ಕೆಲಸವನ್ನು ಮಾಡುವುದಿಲ್ಲ. ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದೇನೆ. ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕವಾಗಿ ಸ್ಪಂದಿಸುತ್ತೇನೆ. 10 ವರ್ಷಗಳಿಂದ ಅಲ್ಲಿ ಅಭಿವೃದ್ಧಿ ಕಾರ್ಯ ನಡೆದಿಲ್ಲ. ಅಲ್ಲಿನ ಜನರಿಗೆ ಬಹಳ ಅನ್ಯಾಯವಾಗಿದೆ. ಹೀಗಾಗಿ, ಅಭಿವೃದ್ಧಿ ವಿಷಯಗಳನ್ನು ಮಂದಿಟ್ಟುಕೊಂಡು ಚುನಾವಣೆಗೆ ಹೋಗುತ್ತಿದ್ದೇನೆ’ ಎಂದು ತಿಳಿಸಿದರು – ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಶಂಕರಗೌಡ ಪಾಟೀಲ, ದಲಿತ ಮುಖಂಡ ಮಲ್ಲೇಶ ಚೌಗುಲೆ ಇದ್ದರು.

ಪ್ರಸಾದದೊಂದಿಗೇ ಬಂದರು!

ನಾಮಪತ್ರ ಸಲ್ಲಿಸುವುದಕ್ಕೆ ಕೇಸರಿಪೇಟ ತೊಟ್ಟುಕೊಂಡೇ ಆಗಮಿಸಿದ ಲಕ್ಷ್ಮಿ ಹೆಬ್ಬಾಳಕರ, ಸುಳೇಬಾವಿ ಲಕ್ಷ್ಮಿ ದೇವಸ್ಥಾನದಲ್ಲಿ ಪ್ರಸಾದವಾಗಿ ನೀಡಿದ್ದ ಹೂಗಳಿದ್ದ ಸಣ್ಣ ಡಬ್ಬಿಯನ್ನು ಜೊತೆಯಲ್ಲೇ ತಂದಿದ್ದರು.‌ ‘ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬಂದಿದ್ದೇನೆ. ದೇವರ ಮೂರ್ತಿಯಲ್ಲಿದ್ದ ಹೂಗಳಿವು. ಲಕ್ಷ್ಮಿ ಜೊತೆಯಲ್ಲೇ ಇರಲೆಂದು ತಂದಿದ್ದೇನೆ’ ಎಂದು ಪತ್ರಕರ್ತರಿಗೆ ತಿಳಿಸಿದರು.

**

ಶಾಸಕ ಸಂಜಯ ಪಾಟೀಲ ರಾಮ ರಾಮ ಎಂದು ಹೇಳಿ, ರಾವಣನ ಕೆಲಸ ಮಾಡಬಾರದು. ಎಲ್ಲರ ಒಳಿತನ್ನೂ ರಾಮ ಬಯಸಿದ್ದ ಎಂಬುದನ್ನು ಅವರು ಅರಿಯಬೇಕು – ಲಕ್ಷ್ಮಿ ಹೆಬ್ಬಾಳಕರ, ಕಾಂಗ್ರೆಸ್‌ ಅಭ್ಯರ್ಥಿ, ಗ್ರಾಮೀಣ ಕ್ಷೇತ್ರ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT