ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪರ್ಧೆಯಿಂದ ಯುವಸಮೂಹ ದೂರ

2013ರ ವಿಧಾನಸಭಾ ಚುನಾವಣೆ, 50–60ರ ವಯೋಮಾನದವರದ್ದೇ ಪ್ರಾಬಲ್ಯ
Last Updated 21 ಏಪ್ರಿಲ್ 2018, 6:26 IST
ಅಕ್ಷರ ಗಾತ್ರ

ಚಾಮರಾಜನಗರ: ಶಾಸನ ಸಭೆಗಳಲ್ಲಿ ಯುವ ಸಮುದಾಯದ ಪ್ರಾತಿನಿಧ್ಯ ಹೆಚ್ಚಬೇಕು ಎಂಬುದು ಹಳೆಯ ಕೂಗು. ಆದರೆ, ಪ್ರವೇಶ ಇರಲಿ, ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೂ ಯುವತಲೆಗಳು ಮುಂದೆ ಬಂದಿಲ್ಲ. ಜಿಲ್ಲೆಯಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಈ ನಿರಾಸಕ್ತಿ ಕಾಣಸಿಗುತ್ತದೆ.

ಚುನಾವಣೆಗೆ ಸ್ಪರ್ಧಿಸಲು ಕನಿಷ್ಠ ವಯಸ್ಸು 25. ನಾಲ್ಕೂ ವಿಧಾನಸಭಾ ಕ್ಷೇತ್ರಗಳಲ್ಲಿ 30ರ ಒಳಗಿನ ಒಬ್ಬರು ಮಾತ್ರ (ಹನೂರು ವಿಧಾನಸಭಾ ಕ್ಷೇತ್ರದಿಂದ ಪ್ರದೀಪ್‌ಕುಮಾರ್ ಪಕ್ಷೇತರ ಅಭ್ಯರ್ಥಿ)  ಸ್ಪರ್ಧಿಸಿದ್ದರು. ಇವರನ್ನು ಬಿಟ್ಟರೆ ಬೇರೆ ಕ್ಷೇತ್ರಗಳಲ್ಲಿ 30ರ ವಯೋಮಾನದ ಒಳಗಿನ ಒಬ್ಬರೂ ನಾಮಪತ್ರ ಸಲ್ಲಿಸಿರಲ್ಲ.

30–40ರ ವಯೋಮಾನ ಹಾಗೂ 40–50ರ ವಯೋಮಾನದವರು ಬೆರಳೆಣಿಕೆಯಷ್ಟು ಸಂಖ್ಯೆಯಲ್ಲಿ ಸ್ಪರ್ಧೆಯಲ್ಲಿದ್ದರು. ಒಟ್ಟು 47 ಅಭ್ಯರ್ಥಿಗಳ ಪೈಕಿ ಕೇವಲ 8 ಮಂದಿಯಷ್ಟೇ 30ರಿಂದ 40ರ ವಯೋಮಾನದವರು. 40–50ರ ವಯೋಮಾನದವರ ಸಂಖ್ಯೆ 10.

ಆದರೆ, ಇದಕ್ಕೆ ತದ್ವಿರುದ್ಧವಾಗಿ 50–60 ವಯೋಮಾನದವರ ಸಂಖ್ಯೆ ಹೆಚ್ಚಿದೆ. 20 ಮಂದಿ ಈ ಗುಂಪಿಗೆ ಸೇರುತ್ತಾರೆ. 60 ವರ್ಷ ದಾಟಿದವರ ಸಂಖ್ಯೆ 8.

ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ 2013ರ ವಿಧಾನಸಭಾ ಚುನಾವಣೆಯಲ್ಲಿ 14 ಮಂದಿ ಕಣದಲ್ಲಿದ್ದರು. ಇವರಲ್ಲಿ 30ರ ಒಳಗಿನ ವಯಸ್ಸಿನವರು ಒಬ್ಬರೂ ಇರಲಿಲ್ಲ. ಬಿಎಸ್‌ಪಿಯ ಆರ್‌.ಪಿ.ನಂಜುಂಡಸ್ವಾಮಿ ಮತ್ತು ಕೆಎಂಪಿ (ಕೆ)ಯಿಂದ ಸ್ಪರ್ಧಿಸಿದ್ದ ಕೆ.ವೀರಭದ್ರಸ್ಪಾಮಿ ಮಾತ್ರ 30–40ರ ವಯೋಮಾನದವರು. ಪಕ್ಷೇತರ ಅಭ್ಯರ್ಥಿಗಳಾದ ಮಹದೇವಸ್ವಾಮಿ ಮತ್ತು ಕೆ.ಕರುಣಾಕರ 40–50ರ ವಯೋಮಾನದವರು. ಬಿಜೆಪಿ ಯಿಂದ ಸ್ಪರ್ಧಿಸಿದ್ದ ಎಸ್.ಸೋಮನಾಯಕ, ಕಾಂಗ್ರೆಸ್‌ನ ಸಿ.ಪುಟ್ಟರಂಗಶೆಟ್ಟಿ, ಸಮಾಜವಾದಿ ಪಕ್ಷದ ಡಿ.ಎಸ್.ದೊರೆಸ್ವಾಮಿ, ಕೆಜೆಪಿಯಿಂದ ಸ್ಪರ್ಧಿಸಿದ್ದ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ, ಪಕ್ಷೇತರ ಅಭ್ಯರ್ಥಿ ರಾಜು, ಮಹಮ್ಮದ್ ಇನಾಯತ್ ಉಲ್ಲಾ 50–60ರ ವಯೋಮಾನದವರು. ಪಕ್ಷೇತರ ಅಭ್ಯರ್ಥಿ ಪುಟ್ಟರಾಜು, ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್, ಸಿಪಿಐ (ಎಂಎಲ್‌)(ಎಲ್‌)ನಿಂದ ಸ್ಪರ್ಧಿಸಿದ್ದ ಡಾ.ಎಂ.ಸಿ.ರಾಜಣ್ಣ  ಹಾಗೂ ಜೆಡಿಎಸ್‌ನ ಸಣ್ಣಮಾದಶೆಟ್ಟಿ 60–70ರ ವಯೋಮಾನದವರು.

ಗುಂಡ್ಲುಪೇಟೆ ಕ್ಷೇತ್ರದಲ್ಲಿ 2013ರ ಚುನಾವಣೆಯಲ್ಲಿ 10 ಮಂದಿ ಸ್ಪರ್ಧಿಸಿದ್ದರು. ಇವರಲ್ಲಿ ಯಾರೊಬ್ಬರೂ 30ಕ್ಕಿಂತ ಕಡಿಮೆ ವಯಸ್ಸಿನವರು ಆಗಿರಲಿಲ್ಲ. 30–40ರ ವಯೋಮಾನದಲ್ಲಿ ‍ಪಕ್ಷೇತರ ಅಭ್ಯರ್ಥಿ ಸುಭಾಷ್ ಒಬ್ಬರೇ ಇದ್ದರು. 40–50ರ ವಯೋಮಾನದಲ್ಲಿ ಬಿಎಸ್‌ಆರ್‌ಸಿಆರ್‌ನ ಸುರೇಶ್‌, ಕೆಜೆಪಿಯ ಸಿ.ಎಸ್.ನಿರಂಜನಕುಮಾರ್, ಬಿಎಸ್‌ಪಿಯ ನಾಗೇಂದ್ರ ಇದ್ದರು. 50–60ರ ವಯೋಮಾನದಲ್ಲಿ ಬಿಜೆಪಿಯ ಎಚ್.ಜಿ.ಮಲ್ಲಿಕಾರ್ಜುನಸ್ವಾಮಿ, ಕಾಂಗ್ರೆಸ್‌ನ ಎಚ್.ಎಸ್‌.ಮಹದೇವಪ್ರಸಾದ್, ಜೆಡಿಎಸ್‌ನ ಬಿ.ಪಿ.ಮುದ್ದುಮಲ್ಲು, ಎಸ್‌ಜೆಪಿ(ಕೆ) ನ ಜಿ.ಎಂ.ಗಾಡ್ಕರ್, ಆರ್‌ಪಿಐ(ಎ)ನ ಪಿ.ಸಂಘಸೇನಾ, ಪಕ್ಷೇತರ ಸದಸ್ಯರಾದ ಮರಿದಾಸಯ್ಯ ಇದ್ದರು.

ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ 10 ಮಂದಿ ಸ್ಪರ್ಧಿಸಿದ್ದರು. ಇವರ ಪೈಕಿ 30ರ ಒಳಗಿನ ವಯೋಮಾನದವರು ಒಬ್ಬರೂ ಇರಲಿಲ್ಲ. 30–40ರ ವಯೋಮಾನದಲ್ಲಿ ಪಕ್ಷೇತರ ಅಭ್ಯರ್ಥಿ ಪಿ.ಬಾಲರಾಜು, ಬಿಡಿಎಜೆಪಿನ ಜಿ.ನಿಂಗರಾಜು ಇದ್ದರೆ, 40–50ರ ವಯೋಮಾನದಲ್ಲಿ ಕೆಜೆಪಿಯ ಎಸ್.ಬಾಲರಾಜ್ ಇದ್ದರು. 50–60ರಲ್ಲಿ ಜೆಡಿಎಸ್‌ನ ಎನ್.ಚಾಮರಾಜು, ಪಕ್ಷೇತರ ಅಭ್ಯರ್ಥಿ ಎಲ್.ಚಂದ್ರಶೇಖರ್, ಬಿಜೆಪಿಯ ಜಿ.ಎನ್.ನಂಜುಂಡಸ್ವಾಮಿ, ಪಕ್ಷೇತರ ಅಭ್ಯರ್ಥಿ ಸುರೇಶ್‌ ಕುಮಾರ್, ಬಿಎಸ್‌ಪಿಯ ಎನ್.ಮಹೇಶ್ ಸೇರಿದ್ದರು. 60ರ ನಂತರದ ವಯೋಮಾನದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎಸ್.ಜಯಣ್ಣ ಹಾಗೂ ಜೆಡಿಯುನ ಎನ್.ನಂಜಯ್ಯ ಇದ್ದರು.

ಹನೂರು ವಿಧಾನಸಭಾ ಕ್ಷೇತ್ರದಲ್ಲಿ 13 ಮಂದಿ ಸ್ಪರ್ಧೆಯಲ್ಲಿದ್ದರು. ಇವರಲ್ಲಿ ಪಕ್ಷೇತರ ಅಭ್ಯರ್ಥಿ ಪ್ರದೀಪ್‌ಕುಮಾರ್ 30ರ ಒಳಗಿನದ ವಯೋಮಾನದವರಾಗಿದ್ದರು. 30–40ರ ವಯೋಮಾನದವರಲ್ಲಿ ಬಿಜೆಪಿಯ ಬಿ.ಕೆ.ಶಿವಕುಮಾರ್, ಜೆಡಿಯುನ ಗಂಗಾಧರ, ಪಕ್ಷೇತರ ಅಭ್ಯರ್ಥಿ ಆರ್.ಸಿದ್ದಪ್ಪ ಇದ್ದರು. 40–50ರ ವಯೋಮಾನದಲ್ಲಿ ಪಕ್ಷೇತರ ಅಭ್ಯರ್ಥಿ ಕೆ.ನಾಗರಾಜು, ಬಿಎಸ್‌ಆರ್‌ಸಿಯ ಬೀರೇಶ್, ಪಕ್ಷೇತರ ಅಭ್ಯರ್ಥಿ ಸಿ.ಎಂ.ಮಹದೇವಸ್ವಾಮಿ, ಎಸ್.ದತ್ತೇಶ್‌ಕುಮಾರ್ ಇದ್ದರು. 50–60ರ ವಯೋಮಾನದಲ್ಲಿ ಎಐಎಡಿಎಂಕೆಯ ರವಿ, ಕೆಜೆಪಿಯ ಪೊನ್ನಾಚಿ ಮಹದೇವಸ್ವಾಮಿ, ಬಿಎಸ್‌ಪಿಯ ಪುಟ್ಟರಾಜು ಇದ್ದರೆ, 60ರ ನಂತರ ವಯೋಮಾನದಲ್ಲಿ ಜೆಡಿಎಸ್‌ನ ಪರಿಮಳಾ ನಾಗಪ್ಪ ಹಾಗೂ ಬಿಎಸ್‌ಪಿ ಎಸ್‌.ಪುಟ್ಟರಾಜು ಸ್ಪರ್ಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT