ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಣಗುತ್ತಿರುವ ತೆಂಗು, ಅಡಿಕೆ

ಕೊಳವೆ ಬಾವಿ ಕೊರೆಸಿದರೂ ಸಿಗದ ನೀರು, ಸಂಕಷ್ಟದಲ್ಲಿ ರೈತರು
Last Updated 21 ಏಪ್ರಿಲ್ 2018, 7:16 IST
ಅಕ್ಷರ ಗಾತ್ರ

ಹಿರಿಯೂರು: ತಾಲ್ಲೂಕಿನ ವಾಣಿವಿಲಾಸ ಜಲಾಶಯದ ಅಚ್ಚುಕಟ್ಟು ಪ್ರದೇಶವೂ ಸೇರಿ 60 ಎಕರೆ ಪ್ರದೇಶದಲ್ಲಿರುವ ಪ್ರಮುಖ ವಾಣಿಜ್ಯ ಬೆಳೆಗಳಾಗಿರುವ ತೆಂಗು ಮತ್ತು ಅಡಿಕೆ ತೋಟಗಳು ಅಂತರ್ಜಲದ ಕುಸಿತದ ಕಾರಣದಿಂದ ಒಣಗತೊಡಗಿದ್ದು, ರೈತರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

ಹಿಂದಿನ ಹತ್ತು ವರ್ಷದಿಂದ ತೆಂಗು ಬೆಳೆಗೆ ನುಸಿರೋಗ ತಗುಲಿ ಉತ್ತಮ ಗುಣಮಟ್ಟದ ಕಾಯಿ ಸಿಗದೆ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಸಮೃದ್ಧ ನೀರು ಇದ್ದ ಕಾಲದಲ್ಲಿ ಮರವೊಂದಕ್ಕೆ 100ರಿಂದ 200 ಕಾಯಿ ಸಿಗುತ್ತಿತ್ತು. ಈಗ 20–30 ಕಾಯಿ ಸಿಕ್ಕರೆ ಹೆಚ್ಚು. ಅದೂ ನಿರೀಕ್ಷಿತ ಗಾತ್ರದ ಕಾಯಿ ಸಿಗುತ್ತಿಲ್ಲ. ವಾಣಿವಿಲಾಸ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ಸುಮಾರು 25 ಸಾವಿರ ಎಕರೆ ತೆಂಗು, 10 ಸಾವಿರ ಎಕರೆಯಷ್ಟು ಅಡಿಕೆ ಬೆಳೆ ಇದೆ. ಬಹುತೇಕ ತೋಟಗಳಿಗೆ ಅಗತ್ಯವಿರುವಷ್ಟು ನೀರು ಸಿಗದೆ ರೈತರು ದಿಕ್ಕು ತೋಚದಂತಾಗಿದ್ದಾರೆ ಎಂದು ಆಲೂರಿನ ಎಂಜಿನಿಯರಿಂಗ್ ಪದವಿ ನಂತರ ವೇತನ ಬರುವ ಉದ್ಯೋಗಕ್ಕೆ ಹೋಗದೆ ಕೃಷಿಯಲ್ಲಿ ತೊಡಗಿಸಿಕೊಂಡಿರುವ ರವೀಂದ್ರ ಹೇಳುತ್ತಾರೆ.

‘ತೆಂಗಿನಕಾಯಿ ಬೆಲೆ ಗಗನಕ್ಕೆ ಏರಿದೆ. ಬೇಸರದ ಸಂಗತಿ ಎಂದರೆ ಈಗ ನಮ್ಮ ತೋಟಗಳಲ್ಲಿ ಕಾಯಿ ಸಿಗುತ್ತಿಲ್ಲ. ಫಸಲು ಹೋಗಲಿ, ಮರಗಳನ್ನು ಉಳಿಸಿಕೊಳ್ಳಲೂ ಹರಸಾಹಸ ಪಡಬೇಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸ್ಥಳೀಯ ಶಾಸಕ ಡಿ. ಸುಧಾಕರ್ ಭರವಸೆ ನೀಡಿದಂತೆ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ 2015ಕ್ಕೆ ಮುಗಿದು, ಭದ್ರೆಯ ನೀರು ಬಂದಿದ್ದರೆ ರೈತರ ಬದುಕು ಹಸನಾಗುತ್ತಿತ್ತು’ ಎಂಬುದು ರೈತ ಮುಖಂಡ ಕಸವನಹಳ್ಳಿ ರಮೇಶ್ ಅನಿಸಿಕೆ.

‘2017ರ ಡಿಸೆಂಬರ್ ವೇಳೆಗೆ ನೀರು ಕೊಡುತ್ತೇವೆ ಎಂದರು. ಮೇ 2018 ರ ಒಳಗೆ ಹರಿಸಿಯೇ ತೀರುತ್ತೇವೆ ಎಂದು ಭರವಸೆ ನೀಡಿದರೂ ಎಲ್ಲವೂ ಹುಸಿಯಾದವು. ನಮಗೆ ಬರಬೇಕಿದ್ದ ನೀರನ್ನು ಹೊಸದುರ್ಗದ ಶಾಸಕರು, ಕಾನೂನು ಸಚಿವ ಜಯಚಂದ್ರ ತಮ್ಮ ಕ್ಷೇತ್ರಗಳಿಗೆ ಒಯ್ದಿದ್ದಾರೆ. ನಮ್ಮ ಜಲಾಶಯಕ್ಕೆ ಭದ್ರಾ ಯೋಜನೆಯಲ್ಲಿ ಒಂದು ಹನಿ ನೀರು ಬರುವುದಿಲ್ಲ ಎಂದು ಜನ ಆಡಿಕೊಳ್ಳುತ್ತಿದ್ದಾರೆ. ಇದು ನಿಜವಾದರೆ ಇಡೀ ತಾಲ್ಲೂಕಿನ ರೈತರು ಗುಳೇ ಹೋಗಬೇಕಾಗುತ್ತದೆ’ ಎಂದು ಕಸವನಹಳ್ಳಿ ರಮೇಶ್ ಆತಂಕ ವ್ಯಕ್ತಪಡಿಸಿದ್ದಾರೆ.

ಐದು ವರ್ಷದಲ್ಲಿ 41 ರೈತರ ಆತ್ಮಹತ್ಯೆ: ತಾಲ್ಲೂಕಿನಲ್ಲಿ ಸಾಲದ ಹೊರೆ ತಾಳಲಾರದೆ 41 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಂತರ್ಜಲ ಕುಸಿತ, ಬೆಳೆ ವೈಫಲ್ಯ, ಸೂಕ್ತ ಬೆಂಬಲ ಬೆಲೆ ನೀಡದಿರುವುದು ಆತ್ಮಹತ್ಯೆಗೆ ಪ್ರಮುಖ ಕಾರಣಗಳು ಎಂಬುದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಹೊರಕೇರಪ್ಪ ಅವರ ಅನಿಸಿಕೆ.

2000ನೇ ಸಾಲಿನಲ್ಲಿ ಅತಿವೃಷ್ಟಿಯಿಂದ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬಂದ ಪರಿಣಾಮ 122.50 ಅಡಿಗೆ ನೀರಿನ ಮಟ್ಟ ಹೆಚ್ಚಿತ್ತು. 2010ರಲ್ಲಿ 112.75 ಅಡಿ ತಲುಪಿದ್ದು ಹೊರತುಪಡಿಸಿದರೆ ಹಿಂದಿನ 8 ವರ್ಷದಲ್ಲಿ ನೀರು ಖಾಲಿಯಾಗಿದ್ದೆ ಹೆಚ್ಚು. ಜಲಾಶಯದಲ್ಲಿ ಪ್ರಸ್ತುತ 67.50 ಅಡಿ ನೀರಿದ್ದು, ಈ ವರ್ಷ ಅಚ್ಚುಕಟ್ಟು ಪ್ರದೇಶಕ್ಕೆ ನೀರು ದೊರೆತಿಲ್ಲ. ವರ್ಷದಲ್ಲಿ ಒಂದು ಅಥವಾ ಎರಡು ಬಾರಿ ನಾಲೆಗಳಲ್ಲಿ ನೀರು ಹರಿಸಿದರೂ ತೋಟಗಳು ಜೀವಂತವಾಗಿ ಉಳಿಯುತ್ತವೆ. ಇಲ್ಲವಾದಲ್ಲಿ ವರ್ಷದಿಂದ ವರ್ಷಕ್ಕೆ ತೋಟಗಳು ಕಣ್ಮರೆಯಾಗುತ್ತವೆ ಎಂದು ಅವರು ಆತಂಕ ವ್ಯಕ್ತಪಡಿಸುತ್ತಾರೆ.

2007 ರಲ್ಲಿ ತಾಲ್ಲೂಕು ರೈತಸಂಘದ ನೇತೃತ್ವದಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಜಾರಿಗಾಗಿ ಆರಂಭವಾದ ಹೋರಾಟ 540 ದಿನ ದಾಟಿದ ನಂತರ ತೀವ್ರರೂಪ ಪಡೆಯುತ್ತಿದ್ದಂತೆ ಆಗಿನ ಬಿಜೆಪಿ ಸರ್ಕಾರ ಯೋಜನೆಗೆ ಮಂಜೂರಾತಿ ನೀಡಿ ವಾಣಿವಿಲಾಸ ಜಲಾಶಯಕ್ಕೆ 5 ಟಿಎಂಸಿ ನೀರು ಬಿಡಲು ಆದೇಶ ಮಾಡಿತು. ಸರ್ಕಾರಗಳು ಬದಲಾಗಿದ್ದರಿಂದ ಒಂದೆರಡು ವರ್ಷದಲ್ಲಿ ಮುಗಿಯಬೇಕಿದ್ದ ಕಾಮಗಾರಿ ಹತ್ತು ವರ್ಷ ಕಳೆದರೂ ಮುಗಿದಿಲ್ಲ. ಹಾಗಾಗಿ ಯೋಜನೆಯ ವೆಚ್ಚ ₹ 3388 ಕೋಟಿಯಿಂದ ₹ 12,340 ಕೋಟಿಗೆ ಹೆಚ್ಚಿತು. ನೀರು ಬಂದೇ ಬಿಟ್ಟಿತು ಎಂದು ಕಾದಿದ್ದ ರೈತರು ಮತ್ತೆ ತಲೆ ಮೇಲೆ ಕೈಹೊತ್ತು ಕೂರುವಂತಾಯಿತು ಎನ್ನುವುದು ಕಸವನಹಳ್ಳಿ ರಮೇಶ್ ಅವರ ಬೇಸರದ ಮಾತು.

ಮಧ್ಯ ಕರ್ನಾಟಕದ ಜನರ ಹಿತದೃಷ್ಠಿಯಿಂದ ಆ ಯೋಜನೆಯನ್ನು ತುರ್ತಾಗಿ ರಾಷ್ಟ್ರೀಯ ಯೋಜನೆಯೆಂದು ಘೋಷಿಸಬೇಕು. ರಾಜಕೀಯ ಕೆಸರೆರಚಾಟ ಬಿಟ್ಟು, ಯೋಜನೆಯಿಂದ ಹಿರಿಯೂರು ತಾಲ್ಲೂಕಿಗೆ ಗರಿಷ್ಠ ಮಟ್ಟದ ನೀರು ತರುವುದು ಹೇಗೆ ಎಂದು ಸಮಾಲೋಚನೆ ನಡೆಸಬೇಕು. ನಮ್ಮ ನೀರಿನ ಹಕ್ಕನ್ನು ಕದಿಯುತ್ತಿರುವವರು ಯಾರೇ ಆಗಲಿ ಖಂಡಿಸಬೇಕು ಎನ್ನು
ವುದು ರಮೇಶ್ ಅವರ ಸಲಹೆಯಾಗಿದೆ.

ಜನಪ್ರತಿನಿಧಿಗಳಿಗೆ ಕಾಳಜಿಯ ಕೊರತೆ

ದೇವರಾಜ ಅರಸು ಮುಖ್ಯಮಂತ್ರಿ ಆಗಿದ್ದಾಗ ಹಿರಿಯೂರು ಕ್ಷೇತ್ರವನ್ನು ಪ್ರತಿನಿಧಿಸಿದ್ದ ಪ್ರಭಾವಿ ರಾಜಕಾರಣಿ ಕೆ.ಎಚ್. ರಂಗನಾಥರು ಮನಸ್ಸು ಮಾಡಿದ್ದರೆ ವಾಣಿವಿಲಾಸ ಜಲಾಶಯಕ್ಕೆ ಎಂದೋ ನೀರು ತರಬಹುದಿತ್ತು. ಮುಖ್ಯಮಂತ್ರಿ ನಂತರದ ಸ್ಥಾನದಲ್ಲಿ ಅವರು ಇದ್ದರು. ಅವರಷ್ಟೇ ರಾಜಕೀಯ ಮುತ್ಸದ್ದಿತನ ಇದ್ದ ಡಿ. ಮಂಜುನಾಥ ಅವರು ಸಚಿವರಾದರೂ ನೀರು ತರುವ ವಿಚಾರದಲ್ಲಿ ಗಂಭೀರ ಪ್ರಯತ್ನ ಮಾಡಲಿಲ್ಲ. ದೇವೇಗೌಡರು ಮುಖ್ಯಮಂತ್ರಿ ಆಗಿದ್ದಾಗ ಕೃಷ್ಣ ಕಣಿವೆಗೆ ಸೇರಿದ್ದ ಯಗಚಿ ನದಿಯನ್ನು ಹಾಸನಕ್ಕೆ ಒಯ್ಯುವ ಮೂಲಕ ನಮ್ಮ ವಾಣಿವಿಲಾಸ ಜಲಾಶಯಕ್ಕೆ ವಿಶ್ವೇಶ್ವರಯ್ಯ ಸೂಚಿಸಿದ್ದ ನೀರಿನ ಮೂಲವನ್ನು ಇಲ್ಲದಂತೆ ಮಾಡಿದರು. ನಮ್ಮ ಜನಪ್ರತಿನಿಧಿಗಳ ನೀರಾವರಿ ಬಗೆಗಿನ ನಿಷ್ಕಾಳಜಿ ರೈತರು ಈಗ ಅನುಭವಿಸುತ್ತಿರುವ ದುಸ್ಥಿತಿಗೆ ಕಾರಣ ಎನ್ನುತ್ತಾರೆ ರೈತ ಸಂಘದ ಹಿರಿಯ ಮುಖಂಡ ಸಿ. ಸಿದ್ದರಾಮಣ್ಣ.

–ಸುವರ್ಣ ಬಸವರಾಜ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT