ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್, ಎಸ್‌ಎಸ್‌ಎಂ, ಎಸ್‌ಎಆರ್‌ ನಾಮಪತ್ರ ಸಲ್ಲಿಕೆ

ದಾವಣಗೆರೆ ದಕ್ಷಿಣ, ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಕಣಕ್ಕಿಳಿದ ಧುರೀಣರು; ಮಾಯಕೊಂಡದಲ್ಲಿ ಶೀಲಾ ನಾಯ್ಕ
Last Updated 21 ಏಪ್ರಿಲ್ 2018, 8:09 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯಲ್ಲಿ ವಿವಿಧ ಪಕ್ಷಗಳ ಅಭ್ಯರ್ಥಿಗಳು ಶುಕ್ರವಾರ ನಾಮಪತ್ರ ಸಲ್ಲಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ, ಶಾಸಕರಾದ ಶಾಮನೂರು ಶಿವಶಂಕರಪ್ಪ, ವಡ್ನಾಳ್‌ ರಾಜಣ್ಣ, ಮಾಜಿ ಸಚಿವ ಎಸ್‌.ಎ. ರವೀಂದ್ರನಾಥ್, ಮಾಜಿ ಶಾಸಕರಾದ ಮಾಡಾಳ್‌ ವಿರೂಪಾಕ್ಷಪ್ಪ, ಬಿ.ಪಿ.ಹರೀಶ್‌, ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಮಹಿಮ ಪಟೇಲ್ ನಾಮಪತ್ರ ಸಲ್ಲಿಸಿದ ಪ್ರಮುಖರು.

ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಎಸ್‌.ಎ. ರವೀಂದ್ರನಾಥ್‌ ಮೊದಲಿಗರಾಗಿ ಪತ್ನಿಯೊಂದಿಗೆ ನಾಮಪತ್ರ ಸಲ್ಲಿಸಿದರು. ಪಾಲಿಕೆಯಲ್ಲಿರುವ ಚುನಾವಣಾಧಿಕಾರಿ ಕಚೇರಿಗೆ ಬಂದ ಅವರಿಗೆ ಮುಖಂಡ ಡಾ.ಎ.ಎಚ್‌. ಶಿವಯೋಗಿ ಸ್ವಾಮಿ ಸಾಥ್‌ ನೀಡಿದರು. ನಾಮಪತ್ರಕ್ಕೆ ನಗರಸಭೆ ಮಾಜಿ ಅಧ್ಯಕ್ಷ ಗುರುನಾಥ್ ಸೂಚಕರಾಗಿದ್ದರು. ಇದಕ್ಕೂ ಮೊದಲು ಶಿರಮಗೊಂಡನಹಳ್ಳಿಯ ಆಂಜನೇಯ, ಬಸವಣ್ಣ, ಈಶ್ವರನ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ನಂತರ, ಮನೆದೇವರು ಶಾಮನೂರು ಆಂಜನೇಯ, ಅಲ್ಲಿಯೇ ಸಮೀಪ ಇರುವ ರಾಮಮಂದಿರ, ಈಶ್ವರ ದೇವಸ್ಥಾನಗಳಿಗೂ ಭೇಟಿ ನೀಡಿದರು. ದಾವಣಗೆರೆಯ ದುಗ್ಗಮ್ಮ ದೇವಸ್ಥಾನದಲ್ಲೂ ಪೂಜೆ ಸಲ್ಲಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್‌ ಜಾಧವ್ ಅವರು ಪತ್ನಿ ಹಾಗೂ ಮೂರು ಜನ ಮುಖಂಡರೊಂದಿಗೆ ಬಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು.

ಒಟ್ಟಿಗೆ ಬಂದ ಅಪ್ಪ–ಮಗ: ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ ನಾಮಪತ್ರ ಸಲ್ಲಿಕೆಗೆ ಒಟ್ಟಾಗಿ ಬಂದರು. ಮಲ್ಲಿಕಾರ್ಜುನ ಅವರಿಗೆ ಪತ್ನಿ ಪ್ರಭಾ, ಮುಖಂಡ ಪ್ರಸನ್ನಕುಮಾರ್ ಸಾಥ್‌ ನೀಡಿದರು. ಮೌಲಸಾಬ್, ಕಕ್ಕರಗೊಳ್ಳ ತಿಪ್ಪಣ್ಣ ಸೂಚಕರಾಗಿದ್ದರು. ಶಾಮನೂರು ಅವರಿಗೆ ಮಗ ಎಸ್‌.ಎಸ್‌. ಗಣೇಶ್, ಮುಖಂಡ ಎಂ. ಮಂಜುನಾಥ್‌ ಸಾಥ್‌ ನೀಡಿದರು. ಅಯೂಬ್‌ ಪೈಲ್ವಾನ್, ಎಚ್‌.ಬಿ. ಗೋಣೆಪ್ಪ ಸೂಚಕರಾಗಿದ್ದರು.

ನಾಮಪತ್ರ ಸಲ್ಲಿಕೆಗೂ ಮೊದಲು ಮಲ್ಲಿಕಾರ್ಜುನ ಅವರು ಹೊಳಲ್ಕೆರೆಯ ಹಿರೇಎಮ್ಮಿಗನೂರು ಕಲ್ಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ನಂತರ ಅಪ್ಪ–ಮಗ ನಗರದ ದುಗ್ಗಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಶಾಮನೂರು ಪರವಾಗಿ ಠೇವಣಿ ಹಣದ ಅರ್ಧದಷ್ಟು (₹ 5,000) ನೀಡಲು ಸಮಗ್ರ ಕರ್ನಾಟಕ ಅಂಗವಿಕಲರ ಕಲ್ಯಾಣ ಅಭಿವೃದ್ಧಿ ಸಂಘದ ಅಧ್ಯಕ್ಷ ಯತಿರಾಜ್ ಮಠದ್ ಪತ್ನಿ ಸಮೇತರಾಗಿ ಬಂದಿದ್ದರು. ಆದರೆ, ಇದನ್ನು ನಿರಾಕರಿಸಿದ ಶಾಮನೂರು, ಅವರ ಕುಟುಂಬಕ್ಕೆ ಮುಂದೆ ತಾವೇ ಸಹಾಯ ಮಾಡುವುದಾಗಿ ಹೇಳಿ ಕಳುಹಿಸಿದರು.

ಮೆರವಣಿಗೆ ಇಲ್ಲ: ದಾವಣಗೆರೆ ಉತ್ತರ, ದಕ್ಷಿಣ ವಿಧಾನಸಭಾ ಕ್ಷೇತ್ರಗಳಿಂದ ನಾಮಪತ್ರ ಸಲ್ಲಿಸಿದ ಯಾವುದೇ ಪಕ್ಷದ ಅಭ್ಯರ್ಥಿಗಳು ಮೆರವಣಿಗೆಯಲ್ಲಿ ಬರಲಿಲ್ಲ. ಇವರೆಲ್ಲರೂ ಮತ್ತೊಮ್ಮೆ ನಾಮಪತ್ರ ಸಲ್ಲಿಸಲ್ಲಿದ್ದು, ಅಂದು ರೋಡ್‌
ಷೋ ಆಯೋಜಿಸಲಾಗಿದೆ ಎಂದು ಆಯಾ ಪಕ್ಷಗಳ ಮೂಲಗಳು ತಿಳಿಸಿವೆ.

ಶೀಲಾನಾಯ್ಕ ನಾಮಪತ್ರ ಸಲ್ಲಿಕೆ: ಮಾಯಕೊಂಡ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶೀಲಾನಾಯ್ಕ ತಮ್ಮ ಬೆಂಬಲಿಗರೊಂದಿಗೆ ರೋಡ್‌ ಷೋ ನಡೆಸಿ ನಾಮಪತ್ರ ಸಲ್ಲಿಸಿದರು. ಶೀಲಾನಾಯ್ಕ ಅವರ ಜತೆಯಲ್ಲಿ ಎನ್‌.ಆರ್‌. ನಾಯ್ಕ, ಶಾಸಕ ಎಚ್‌.ಎಸ್‌. ಶಿವಶಂಕರ್, ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಬಿ. ಚಿದಾನಂದಪ್ಪ ಇದ್ದರು. ಮುಖಂಡ ತುಕಾರಂ ಸೂಚಕರಾಗಿದ್ದರು. ನಗರದ ಬೀರಲಿಂಗೇಶ್ವರ ದೇವಸ್ಥಾನದಿಂದ ಹೊರಟ ರೋಡ್‌ ಷೋ ಗಣಪತಿ ದೇವಸ್ಥಾನದಲ್ಲಿ ಮುಕ್ತಾಯಗೊಂಡಿತು. ನಂತರ ತಹಶೀಲ್ದಾರ್‌ ಹಳೇ ಕಚೇರಿಯಲ್ಲಿರುವ ಚುನಾವಣಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.

‘ಅಭಿವೃದ್ಧಿ ಆಧಾರದಲ್ಲೇ ಚುನಾವಣೆ’

‘ಅಭಿವೃದ್ಧಿ ಆಧಾರದಲ್ಲೇ ಚುನಾವಣೆ ನಡೆಯಲಿದೆ. ಕಳೆದ ಐದು ವರ್ಷಗಳಲ್ಲಿ ಜಿಲ್ಲೆಯಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆಗಳ ಅನುಷ್ಠಾನ, ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಭ್ರಷ್ಟಾಚಾರರಹಿತ ಆಡಳಿತ ನೀಡಲಾಗಿದೆ. ಹಾಗಾಗಿ, ಮತ್ತೊಮ್ಮೆ ಜನ ನಮ್ಮನ್ನು ಆಶೀರ್ವದಿಸುತ್ತಾರೆ’ ಎಂದು ಸಚಿವ ಮಲ್ಲಿಕಾರ್ಜುನ ವಿಶ್ವಾಸ ವ್ಯಕ್ತಪಡಿಸಿದರು.

ಕ್ಷೇತ್ರದಲ್ಲಿ ಎಲ್ಲಾ ಜಾತಿ, ಜನಾಂಗದ ಜನರನ್ನು ಸಮಾನವಾಗಿ ನೋಡಿದ್ದೇವೆ. ಜನರ ಕಷ್ಟ–ಸುಖಗಳನ್ನು ಆಲಿಸಿದ್ದೇವೆ. ಅಭಿವೃದ್ಧಿ ನೋಡಿ ಜನ ವೋಟ್‌ ಮಾಡಲ್ಲ ಎಂದರೆ ಮತ್ಯಾಕೆ ಶಾಸಕರಾಗಬೇಕು? ಇನ್ಯಾಕೆ ಅವರ ಮುಖಂಡರು ಅಭಿವೃದ್ಧಿ ಮಂತ್ರಿ ಜಪಿಸಬೇಕು ಎಂದು ಎಸ್‌.ಎ. ರವೀಂದ್ರನಾಥ್ ಅವರಿಗೆ ತಿರುಗೇಟು ನೀಡಿದರು.

ಈಗ ಮೋದಿ ಹವಾ ಇಲ್ಲ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದ ಕಾರ್ಯಕ್ರಮಗಳು ಎಲ್ಲಾ ವರ್ಗದ ಜನರನ್ನು ತಲುಪಿವೆ. ಹಾಗಾಗಿ, ಜಿಲ್ಲೆಯಲ್ಲಿ ಅಷ್ಟೂ ಸ್ಥಾನಗಳನ್ನು ಕಾಂಗ್ರೆಸ್‌ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಅಭಿವೃದ್ಧಿಯೊಂದೇ ನಿರ್ಣಾಯಕವಲ್ಲ’

‘ಈ ಚುನಾವಣೆಯಲ್ಲಿ ಅಭಿವೃದ್ಧಿ ನಿರ್ಣಾಯಕವಲ್ಲ. ನಾವೂ ಇದ್ದಾಗ ಅಭಿವೃದ್ಧಿ ಕೆಲಸ ಮಾಡಿದ್ದೇವೆ. ಅದು ಲೆಕ್ಕಕ್ಕೆ ಬರುವುದಿಲ್ಲ. ಜನರೊಂದಿಗೆ ನಮ್ಮ ನಡವಳಿಕೆಯೇ ಚುನಾವಣೆಯಲ್ಲಿ ಕೆಲಸ ಮಾಡುತ್ತದೆ’ ಎಂದು ಮುಖಂಡ ಎಸ್‌.ಎ. ರವೀಂದ್ರನಾಥ್ ಅಭಿಪ್ರಾಯಪಟ್ಟರು.

‘2008ರಲ್ಲಿ 53 ಸಾವಿರ ಮತಗಳ ಅಂತರದಿಂದ ಗೆದ್ದಿದ್ದೆ. 2013ರಲ್ಲಿ 57 ಸಾವಿರ ಮತಗಳ ಅಂತರದಲ್ಲಿ ಸೋತಿದ್ದೆ. ಇದಾಗಿ ಒಂದು ವರ್ಷದಲ್ಲೇ ಬಂದ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದಿಂದ ಇನ್ನೂ 24 ಸಾವಿರ ಹೆಚ್ಚು ಮತವನ್ನು ಕೊಡಿಸಿದೆ. ಲೋಕಸಭಾ ಚುನಾವಣೆಗಳಲ್ಲಿ ಸತತವಾಗಿ ಗೆಲ್ಲುತ್ತಾ ಬಂದಿದ್ದೇವೆ’ ಎಂದು ಹೇಳಿದರು.

ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರಗಳಲ್ಲಿ ಸಾಕಷ್ಟು ದೋಷಗಳಿವೆ. ಹಾಗಾಗಿ, ಗೆಲುವು ನಮ್ಮದಾಗಲಿದೆ’ ಎಂದು
ವಿಶ್ವಾಸ ವ್ಯಕ್ತಪಡಿಸಿದರು.

‘ಮಾಯಕೊಂಡ ಕ್ಷೇತ್ರದ ಟಿಕೆಟ್ ಇನ್ನೂ ಹಂಚಿಕೆಯಾಗಿಲ್ಲ. ಕೆಜೆಪಿ–ಬಿಜೆಪಿ, ಬಿಎಸ್ಆರ್ ಎಂಬುದು ಈಗ ಇಲ್ಲ. ಬಸವರಾಜ್‌ ನಾಯ್ಕ ಅವರಿಗೆ ಟಿಕೆಟ್‌ ಕೊಡಿಸಲು ಪ್ರಯತ್ನಿಸಲಾಗುತ್ತಿದೆ. ಅವರು ಪಕ್ಷ ಬದಲಿಸುವ ಬಗ್ಗೆ ನನಗೆ ಮಾಹಿತಿ ಇಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

ಹಿಂದೆ ದಾವಣಗೆರೆ ನಗರದಲ್ಲಿ ಬಿಜೆಪಿ ಆಡಳಿತದಲ್ಲಿ ಪ್ರತಿಯೊಂದು ಕಾಮಗಾರಿಗಳಲ್ಲಿಯೂ ಭ್ರಷ್ಟಾಚಾರ ನಡೆದಿದೆ. ಸ್ಮಾರ್ಟ್‌ ಸಿಟಿ ಅನುದಾನ ಬಿಡುಗಡೆಗೂ ಮೊದಲೇ ರಾಜ್ಯ ಸರ್ಕಾರದ ಅನುದಾನದಲ್ಲಿ ದಾವಣಗೆರೆ ನಗರವನ್ನು ಅಭಿವೃದ್ಧಿಪಡಿಸಿದ್ದೇವೆ ಎಂದು ಹೇಳಿದರು.

‘ನಿಮ್ಮದು ಎಷ್ಟು ಸಲ ಕೊನೆ ಚುನಾವಣೆ’

‘ಪ್ರತಿ ಸಲ ಸ್ಪರ್ಧಿಸುವಾಗಲೂ ಇದು ನನ್ನ ಕೊನೆಯ ಚುನಾವಣೆ ಎಂದೇ ಶಾಮನೂರು ಹೇಳಿಕೊಂಡು ಬಂದಿದ್ದಾರೆ. ಮಾತು ಉಳಿಸಿಕೊಳ್ಳದಿರುವ ಅವರಿಂದ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯವೇ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್‌ ಜಾಧವ್‌ ಪ್ರಶ್ನಿಸಿದರು.

ಗೊಂದಲಗಳು ಎಲ್ಲಾ ಪಕ್ಷಗಳಲ್ಲೂ ಇವೆ. ಇದು ಸಹಜ ಪ್ರಕ್ರಿಯೆ. ಪಕ್ಷ ಯಾರಿಗೆ ‘ಬಿ’ ಫಾರಂ ಕೊಡುತ್ತದೆ ಅವರೇ ಅಭ್ಯರ್ಥಿ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಜಿಲ್ಲೆಯಲ್ಲಿ ಅಷ್ಟೂ ಸ್ಥಾನಗಳನ್ನು ಬಿಜೆಪಿ ಗೆಲ್ಲಲ್ಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

**

ಎದುರಾಳಿಗಳು ನನ್ನೆದುರು ಖಾಲಿ ಡಬ್ಬಗಳು. ಅವರೆಲ್ಲರೂ ಮೊದಲು ಠೇವಣಿ ಉಳಿಸಿಕೊಳ್ಳಲಿ – ಶಾಮನೂರು ಶಿವಶಂಕರಪ್ಪ, ಶಾಸಕ. 

**

ದೇವೇಗೌಡ ಅವರ ಬಲಿಷ್ಠ ನಾಯಕತ್ವ, ಕುಮಾರಸ್ವಾಮಿ ಅವರ ಅಭಿವೃದ್ಧಿ ಚಿಂತನೆಗಳು ನನ್ನ ಗೆಲುವಿಗೆ ಪೂರಕವಾಗಲಿವೆ – ಶೀಲಾನಾಯ್ಕ,ಮಾಯಕೊಂಡ ಜೆಡಿಎಸ್‌ ಅಭ್ಯರ್ಥಿ, ದೇವೇಗೌಡ ಅವರ ಬಲಿಷ್ಠ ನಾಯಕತ್ವ, ಕುಮಾರಸ್ವಾಮಿ ಅವರ ಅಭಿವೃದ್ಧಿ ಚಿಂತನೆಗಳು ನನ್ನ ಗೆಲುವಿಗೆ ಪೂರಕವಾಗಲಿವೆ – ಶೀಲಾನಾಯ್ಕ, ಮಾಯಕೊಂಡ ಜೆಡಿಎಸ್‌ ಅಭ್ಯರ್ಥಿ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT