ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀವ್ರ ಮನವೊಲಿಕೆ ನಂತರ ಶಮನವಾದ ಭಿನ್ನಮತ

ಕೈತಪ್ಪಿದ ಬಿಜೆಪಿ ಟಿಕೆಟ್; ಮುನಿಸಿಕೊಂಡಿದ್ದ ಶ್ರೀಶೈಲಪ್ಪ
Last Updated 21 ಏಪ್ರಿಲ್ 2018, 8:28 IST
ಅಕ್ಷರ ಗಾತ್ರ

ಗದಗ: ಗದಗ ವಿಧಾನಸಭಾ ಮತಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಕೈತಪ್ಪಿದ್ದಕ್ಕೆ ಮುನಿಸಿಕೊಂಡಿದ್ದ ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ ಅವರನ್ನು, ಪಕ್ಷದ ಜಿಲ್ಲಾ ಮುಖಂಡರು ಮನವೊಲಿಕೆ ಮಾಡಿದ್ದು, ಭಿನ್ನಮತ ತಹಬದಿಗೆ ಬಂದಿದೆ ಎನ್ನಲಾಗಿದೆ.

‘ಬಿದರೂರ ಅವರು ಪಕ್ಷದಲ್ಲೇ ಉಳಿಯುತ್ತಾರೆ. ನಾಲ್ಕೂ ವಿಧಾಸಭಾ ಕ್ಷೇತ್ರಗಳಲ್ಲಿ ಪ್ರಚಾರದಲ್ಲೂ ಅವರ ಭಾಗವಹಿಸಲಿದ್ದಾರೆ. ಸದ್ಯಕ್ಕೆ ಯಾವ ಬಿಕ್ಕಟ್ಟೂ ಇಲ್ಲ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಸಿ ಪಾಟೀಲ ಹೇಳಿದರು.

‘ಟಿಕೆಟ್ ಘೋಷಣೆಯಾದ ಬೆನ್ನಲ್ಲೇ, ಬಿಜೆಪಿ ತಮಗೆ ಅನ್ಯಾಯ ಮಾಡಿದೆ ಎಂದು ಬಿದರೂರ ಅವರು ಬಹಿರಂಗವಾಗಿ ಆಕ್ರೋಶ ಹೊರ ಹಾಕಿದ್ದರು. ಬೆಂಬಲಿಗರು ಹಾಗೂ ಅಭಿಮಾನಿಗಳ ಸಭೆ ಕರೆದು ಚರ್ಚಿಸಿ, ಇನ್ನೆರಡು ದಿನಗಳಲ್ಲಿ ಪರ್ಯಾಯ ರಾಜಕೀಯ ಶಕ್ತಿ ಪ್ರದರ್ಶನದ ಕುರಿತು ಸ್ಪಷ್ಟ ನಿಲುವು ಪ್ರಕಟಿಸುವುದಾಗಿ ಹೇಳಿದ್ದರು. ಆದರೆ, 2 ದಿನಗಳು ಕಳೆದರೂ ಅವರು ಈ ಕುರಿತು ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ.

ಮುನಿಸಿಕೊಂಡ ಬಿದರೂರ ಅವರು ರೋಣ ಮತಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು.

ಆದರೆ, ಶುಕ್ರವಾರ ಜೆಡಿಎಸ್‌ ಅಭ್ಯರ್ಥಿ ಪಟ್ಟಿ ಪ್ರಕಟಗೊಂಡಿದ್ದು, ರೋಣ ಮತಕ್ಷೇತ್ರದಿಂದ ದೊಡ್ಡಮೇಟಿ ಕುಟುಂಬ ರವೀಂದ್ರನಾಥ ದೊಡ್ಡಮೇಟಿ ಅವರಿಗೆ ಟಿಕೆಟ್‌ ಲಭಿಸಿದೆ.

ಸಿ.ಸಿ. ಪಾಟೀಲ ಅವರ ಸಂಧಾನದಿಂದ ತಕ್ಕಮಟ್ಟಿಗೆ ಭಿನ್ನಮತ ಶಮನವಾಗಿದ್ದು, ಕಾರ್ಯಕರ್ತರಲ್ಲಿದ್ದ ಗೊಂದಲ ಸದ್ಯದ ಮಟ್ಟಿಗೆ ದೂರವಾಗಿದೆ.

‘ಟಿಕೆಟ್ ವಿಷಯ ಪಕ್ಷದ ನಿರ್ಧಾರ. ಟಿಕೆಟ್ ಸಿಗದಿದ್ದಾಗ ಆಕ್ರೋಶ ಸಹಜ. ಬಿದರೂರ ಅವರು ಪಕ್ಷದ ಹಿರಿಯರು. ಜಿಲ್ಲಾ ಘಟಕದ ಅಧ್ಯಕ್ಷ ಸಿ.ಸಿ. ಪಾಟೀಲ ಅವರ ಜತೆಗೆ, ಅವರನ್ನು ಭೇಟಿ ಮಾಡುತ್ತೇನೆ. ಪ್ರಚಾರ ಮಾಡಲು ಕರೆಯುತ್ತೇನೆ’ ಎಂದು ಗದಗ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಪಡೆದುಕೊಂಡಿರುವ ಅನಿಲ ಮೆಣಸಿನಕಾಯಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT