ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪರ್ಧೆ ಯಾರ ವಿರುದ್ಧವಲ್ಲ; ಜನಸೇವೆಗಾಗಿ

ಶಿಗ್ಗಾವಿ: ಪಕ್ಷೇತರ ಅಭ್ಯರ್ಥಿ ಸೋಮಣ್ಣ ಬೇವಿನಮರದ ಹೇಳಿಕೆ
Last Updated 21 ಏಪ್ರಿಲ್ 2018, 9:03 IST
ಅಕ್ಷರ ಗಾತ್ರ

ಶಿಗ್ಗಾವಿ: ‘ನಾನು ಚುನಾವಣೆ ಕಣಕ್ಕಿಳಿದಿರುವುದು ಯಾರ ವಿರುದ್ಧವಲ್ಲ. ಯಾರನ್ನೂ ಸೋಲಿಸಲು ಅಲ್ಲ. ಜನ ಸೇವೆ, ಅಭಿವೃದ್ಧಿಗಾಗಿ ಎಂಬುವುದನ್ನು ಮರೆಯಬಾರದು’ ಎಂದು ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ ಹೇಳಿದರು.

ಪಟ್ಟಣದ ಸಂತೆ ಮೈದಾನದಲ್ಲಿ ಗುರುವಾರ ಚುನಾವಣೆ ನಾಮ ಪತ್ರ ಸಲ್ಲಿಸುವ ಮುನ್ನ ನಡೆದ ಅಭಿಮಾನಿಗಳ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

‘ಸೋಮಣ್ಣ ನಾಮಪತ್ರ ಸಲ್ಲಿಸುವುದಿಲ್ಲ ಎಂಬ ಪ್ರಶ್ನೆಗೆ ಇಂದು ತೆರೆ ಕಂಡಿದ್ದು, ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಇಂದು ನಾಮ ಪತ್ರ ಸಲ್ಲಿಸುತ್ತಿದ್ದೇನೆ. ಸುಮಾರು ವರ್ಷಗಳಿಂದ ಬಿಜೆಪಿ ತಾಲ್ಲೂಕು ಘಟಕ, ಜಿಲ್ಲಾ ಘಟಕ, ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದೇನೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯಾಗಿಸಲು ಶ್ರಮಿಸಿದ್ದೇನೆ ವಿನಾ ಅಧಿಕಾರ, ಹಣದಾಸೆಗಲ್ಲ’ ಎಂದರು.

‘ದೇವರ ಸಾಕ್ಷಿಯಾಗಿ, ಗುರುಹಿರಿಯ ಸಾಕ್ಷಿಯಾಗಿ ಸತ್ಯವನ್ನೇ ಹೇಳುತ್ತೇನೆ. ಶಾಸಕ ಬಸವರಾಜ ಬೊಮ್ಮಾಯಿ ಅವರು ಕ್ಷೇತ್ರ ಬಿಟ್ಟುಕೊಡುವುದಾಗಿ ತಾಯಿ, ದೇವರಾಣೆ ಮಾಡಿದ್ದಾರೆ. ಸೋಮಣ್ಣ ಎಂದಾಕ್ಷಣ ತಂದೆ ನೆನಪಾಗುತ್ತದೆ ಎಂದು ಹೇಳಿ ನಂಬಿಸಿದ್ದರು. ಹೀಗಾಗಿ ಮರ ನಂಬಬೇಕೋ, ಮನುಷ್ಯರನ್ನು ನಂಬಬೇಕೋ ಎಂಬುದೇ ತಿಳಿಯದಾಗಿದೆ’ ಎಂದರು.

‘ಪ್ರಥಮ ಚುನಾವಣೆಯಲ್ಲಿ ₹2ಕೋಟಿ, 2ನೇ ಚುನಾವಣೆಯಲ್ಲಿ ₹3ಕೋಟಿ, ಈಗ ₹10ಕೋಟಿ ಕೇಳುತ್ತಿದ್ದಾರೆ ಎಂದು ಶಾಸಕರ ಹಿಂಬಾಲಕರು ಸುಳ್ಳು ಆಪಾದನೆ ಮಾಡುತ್ತಿದ್ದಾರೆ. ಇಂತಹ ಆಪಾದನೆ ಸಹಿಸದೆ ಚುನಾವಣೆ ಕಣಕ್ಕೆ ಇಳಿದಿದ್ದೇನೆ. ಅಲ್ಲದೆ ರಾಜಕೀಯವಾಗಿ ತುಳಿಯುವ ಹುನ್ನಾರ ನಡೆದಿದೆ. ಜನ ಜಾಗೃತರಾಗಿದ್ದಾರೆ. ಈ ಬಾರಿ ಸೋಮಣ್ಣನಿಗೆ ಆಶೀರ್ವಾದ ಮಾಡಲಿದ್ದಾರೆ’ ಎಂದರು.

ಶಿಗ್ಗಾವಿ, ಸವಣೂರ ಕ್ಷೇತ್ರ ಅಭಿವೃದ್ಧಿ ಶಾಸಕರ, ಸಂಸದರ ಹಾಗೂ ವಿಧಾನ ಪರಿಷತ್‌ ಅನುದಾನದಲ್ಲಿ ಬೃಹತ್ ಅಭಿವೃದ್ಧಿ ಕಂಡಿದೆ. ಹೀಗಾಗಿ ಅಭಿವೃದ್ಧಿಯಲ್ಲಿ ನಮ್ಮ ಪಾಲಿದೆ. ಸುಮಾರು ₹ 8ಕೋಟಿ ಅನುದಾನ ದೇವಸ್ಥಾನಗಳ ಅಭಿವೃದ್ಧಿಗೆ ನೀಡಿದ್ದೇನೆ’ ಎಂದರು.

ಸಂತೆ ಮೈದಾನದಿಂದ ಪಾದಯಾತ್ರೆ ಮೂಲಕ ಮೆರವಣಿಗೆ ನಡೆಸಿದರು. ಹಳೆಬಸ್‌ ನಿಲ್ದಾಣ, ಪಿಎಲ್‌ಡಿ ಬ್ಯಾಂಕ್‌ ವೃತ್ತ, ಹೊಸಬಸ್‌ ನಿಲ್ದಾಣದ ಮೂಲಕ ಸಂಚರಿಸಿ ತಹಶೀಲ್ದಾರ್‌ ಕಚೇರಿಗೆ ತಲುಪಿ ಚುನಾವಣೆ ಅಧಿಕಾರಿಗೆ ನಾಮಪತ್ರ ಸಲ್ಲಿಸಿದರು.

ಮುಖಂಡ ವಿರೂಪಾಕ್ಷಪ್ಪ ಸಿಂಧೂರ, ಶಶಿಧರ ಯಲಿಗಾರ, ಬಸವರಾಜ ಸಿಂಧೂರ, ಚನ್ನಪ್ಪ ಹಳವಳ್ಳಿ, ಸಿ.ಎಸ್‌.ಪಾಟೀಲ, ಫಕ್ಕೀರಪ್ಪ ವಾಲ್ಮೀಕಿ, ಬಸನಗೌಡ್ರ ದುಂಡಿಗೌಡ್ರ, ವಿರೂಪಾಕ್ಷಗೌಡ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT