ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಿಗೆ ಶಿಬಿರದಲ್ಲಿ ಮಕ್ಕಳ ಚಿಲಿಪಿಲಿ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬಾಲಭವನ ಸೊಸೈಟಿಯಿಂದ ಆಯೋಜನೆ
Last Updated 21 ಏಪ್ರಿಲ್ 2018, 9:36 IST
ಅಕ್ಷರ ಗಾತ್ರ

ಕಾರವಾರ: ಇಲ್ಲಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಬಾಲಭವನ ಸೊಸೈಟಿಯೊಂದಿಗೆ ಜಂಟಿಯಾಗಿ ಆಯೋಜಿಸಿರುವ ಬೇಸಿಗೆ ಶಿಬಿರವು ಮಕ್ಕಳನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ನಿತ್ಯವೂ ಸುಮಾರು 70 ಮಕ್ಕಳು ದಿನವೂ ಶಿಬಿರಕ್ಕೆ ಹಾಜರಾಗಿ ವಿವಿಧ ಚಟುವಟಿಕೆಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ ಜತೆ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜೇಂದ್ರ ಬೇಕಲ್, ‘ಇದೇ 13ರಂದು ಆರಂಭವಾಗಿರುವ ಶಿಬಿರವು ನಿರೀಕ್ಷೆ ಮೀರಿ ಯಶಸ್ವಿಯಾಗಿರುವು ನಮ್ಮನ್ನು ಹುರಿದುಂಬಿಸಿದೆ. ಪೋಷಕರು  ಮಕ್ಕಳನ್ನು ಬೆಳಿಗ್ಗೆಯೇ ಕರೆದುಕೊಂಡು ಬರುತ್ತಿದ್ದಾರೆ. ಎಲ್ಲ ವರ್ಗಗಳ ಮಕ್ಕಳೂ ಸಕ್ರಿಯರಾಗಿ ಭಾಗವಹಿಸುತ್ತಿದ್ದಾರೆ. ಇದಕ್ಕೆ ಪೋಷಕರ ಸಹಕಾರ ಮುಖ್ಯ ಕಾರಣ’ ಎಂದು ಸಂತಸ ವ್ಯಕ್ತಪಡಿಸಿದರು.

ಪ್ರತಿದಿನ ಬೆಳಿಗ್ಗೆ 9ಕ್ಕೆ ಶಿಬಿರ ಆರಂಭವಾದರೆ 10ರವರೆಗೆ ಯೋಗ ತರಬೇತಿಯಿರುತ್ತದೆ. ನಂತರ 10.45ರವರೆಗೆ ಕರಾಟೆ ಹೇಳಿಕೊಡಲಾಗುತ್ತದೆ. ಇದು ಬಾಲಕಿಯರಿಗೆ ಹೆಚ್ಚು ಸಹಕಾರಿಯಾಗಿದೆ. ಇಂದಿನ ದಿನಗಳಲ್ಲಿ ಸ್ವರಕ್ಷಣೆಗೆ ಇಂತಹ ಕ್ರೀಡೆ ಹೆಚ್ಚು ಸೂಕ್ತವಾಗಿದೆ ಎಂದರು.

ಇದೇರೀತಿ, ಬೆಳಿಗ್ಗೆ 11ರಿಂದ 11.30ವರೆಗೆ ಚಿತ್ರಕಲೆಯಲ್ಲಿ ತರಬೇತಿ ನೀಡಲಾಗುವುದು. ಮುಖ ವಾಡ ತಯಾರಿಸುವುದನ್ನು ಮಧ್ಯಾಹ್ನ 12ರವರೆಗೆ ಹೇಳಿಕೊಡ ಲಾಗುತ್ತದೆ. ನಂತರ ಅರ್ಧಗಂಟೆ ನೃತ್ಯ, ಬಳಿಕ 12.30ರಿಂದ 1.30ರವರೆಗೆ ಸಂಗೀತ ಕಲಿಸಲಾಗುತ್ತದೆ. ವಾರಾಂತ್ಯದಲ್ಲಿ ಮಧ್ಯಾಹ್ನದ ನಂತರ ನೃತ್ಯ, ಚಿತ್ರಕಲೆ, ಕ್ರಾಫ್ಟ್, ನಾಟಕ, ಯೋಗ ತರಬೇತಿ ನೀಡಲಾಗುತ್ತಿದೆ. ಇಷ್ಟಲ್ಲದೇ ಬಾಲವೇದಿಕೆಯ
ಅಡಿಯಲ್ಲಿ ಪ್ರತಿ ಭಾನುವಾರ ಬೆಳಿಗ್ಗೆ 9ರಿಂದ ಮಧ್ಯಾಹ್ನ 12ರವರೆಗೆ ಆಹ್ವಾನಿತ ತಂಡಗಳಿಂದ ನೃತ್ಯ, ನಾಡಕ ಮತ್ತು ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಈ ಎಲ್ಲ ಕಾರ್ಯಕ್ರಮಗಳಿಗೆ ನುರಿತ ಶಿಕ್ಷಕರು ಹಾಗೂ ತರಬೇತುದಾರರ ತಂಡ ಕಾರ್ಯನಿರ್ವಹಿಸುತ್ತಿದೆ.

ಪ್ರತಿಭೆ ಪ್ರದರ್ಶನಕ್ಕೆ ಅವಕಾಶ

ಪ್ರತಿ ಭಾನುವಾರ ಆಯೋಜಿಸಲಾಗುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ 5ರಿಂದ 16 ವರ್ಷ ವಯೋಮಾನದ ಮಕ್ಕಳಿಗೆ ನೃತ್ಯ, ಗಾಯನ ಹಾಗೂ ವಾದ್ಯ ಸಂಗೀತ ನುಡಿಸಲು ಅವಕಾಶ ನೀಡಲಾಗಿದೆ. ಮಕ್ಕಳು ವೈಯಕ್ತಿಕವಾಗಿ ಅಥವಾ ತರಬೇತಿ ಪಡೆಯುತ್ತಿರುವ ಸಂಸ್ಥೆಗಳಿಂದ 5–6 ಸದಸ್ಯರ ತಂಡದೊಂದಿಗೆ ಪಾಲ್ಗೊಂಡು ಪ್ರತಿಭೆ ಪ್ರದರ್ಶನ ಮಾಡಬಹುದು. ಮಾಹಿತಿಗೆ ದೂರವಾಣಿ: 08382 226761 ಸಂಪರ್ಕಿಸಬಹುದು ಎಂದು ರಾಜೇಂದ್ರ ಬೇಕಲ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT