ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ ಅಖಾಡಕ್ಕೆ ಅಪ್ಪಚ್ಚು

‘ಶುಭ ಶುಕ್ರವಾರ’ ನಾಮಪತ್ರ ಸಲ್ಲಿಕೆ, ಚೌಡೇಶ್ವರಿ ದೇವಸ್ಥಾನದಲ್ಲಿ ಪೂಜೆ
Last Updated 21 ಏಪ್ರಿಲ್ 2018, 9:46 IST
ಅಕ್ಷರ ಗಾತ್ರ

ಮಡಿಕೇರಿ: ಮಡಿಕೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಪಿ. ಅಪ್ಪಚ್ಚು ರಂಜನ್‌ ಅವರು ಶುಕ್ರವಾರ ನಾಮಪತ್ರ ಸಲ್ಲಿಸುವ ಮೂಲಕ ವಿಧಾನಸಭೆ ಚುನಾವಣೆ ಅಖಾಡಕ್ಕೆ ಇಳಿದರು. ನಾಲ್ಕು ಬಾರಿ ಶಾಸಕರಾಗಿದ್ದ ಅಪ್ಪಚ್ಚು ಐದನೇ ಬಾರಿ ಅದೃಷ್ಟ ಪರೀಕ್ಷೆಗೆ ಅಧಿಕೃತವಾಗಿ ಪ್ರವೇಶಿಸಿದರು.

ನಾಮಪತ್ರ ಸಲ್ಲಿಸುವುದಕ್ಕೂ ಮೊದಲು ನಗರದ ಚೌಡೇಶ್ವರಿ ದೇಗುಲದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ಬೆಂಬಲಿಗರು ಹಾಗೂ ಕಾರ್ಯಕರ್ತರೊಂದಿಗೆ ಮೆರವಣಿಗೆ ಯಲ್ಲಿ ಸಾಗಿ ಬಂದರು. ಮೆರವಣಿಗೆಯು ಮಹದೇವಪೇಟೆ ರಸ್ತೆ, ಚೌಕಿ, ಖಾಸಗಿ ಬಸ್‌ ನಿಲ್ದಾಣ, ಕೊಡವ ಸಮಾಜದ ಎದುರು, ಟೌನ್‌ಹಾಲ್‌, ಜನರಲ್‌ ತಿಮ್ಮಯ್ಯ ವೃತ್ತದ ಮೂಲಕ ಗಾಂಧಿ ಮೈದಾನ ತಲುಪಿತು. ಅಲ್ಲಿಂದ ಜಿಲ್ಲಾಡಳಿತ ಭವನಕ್ಕೆ ಅಭ್ಯರ್ಥಿ ಸೇರಿದಂತೆ ಐವರಿಗೆ ಮಾತ್ರ ಅವಕಾಶ ಕಲ್ಪಿಸಲಾಯಿತು.

ಅಭ್ಯರ್ಥಿ ಅಪ್ಪಚ್ಚು ರಂಜನ್‌, ಶಾಸಕ ಕೆ.ಜಿ. ಬೋಪಯ್ಯ, ಸಂಸದ ಪ್ರತಾಪಸಿಂಹ, ವಕೀಲ ಅಭಿಮನ್ಯು ಕುಮಾರ್‌, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಬಿ. ಭಾರತೀಶ್‌ ಅವರು ಸಹಾಯಕ ಚುನಾವಣಾಧಿಕಾರಿ ರಮೇಶ್‌ ಪಿ. ಕೋನರೆಡ್ಡಿಗೆ ನಾಮಪತ್ರ ಸಲ್ಲಿಸಿದರು. ಮಧ್ಯಾಹ್ನ 12.40ಕ್ಕೆ ಐವರು ಕೊಠಡಿ ಪ್ರವೇಶಿಸಿ, ಒಟ್ಟು ನಾಲ್ಕು ನಾಮಪತ್ರಗಳನ್ನು ಸಲ್ಲಿಸಿದರು.

ಪೊಲೀಸ್‌ ಭದ್ರತೆ: ಜಿಲ್ಲಾಧಿಕಾರಿ ಕಚೇರಿ ಸುತ್ತಮುತ್ತ ಭಾರಿ ಭದ್ರತೆ ಒದಗಿಸಲಾಗಿತ್ತು. ಮೆರವಣಿಗೆಗೂ ಸ್ಥಳೀಯ ಪೊಲೀಸರು ಹಾಗೂ ಸಿಆರ್‌ಪಿಎಫ್‌ ಸಿಬ್ಬಂದಿ ಭದ್ರತೆ ಒದಗಿಸಿದರು. ಜಿಲ್ಲಾಧಿಕಾರಿ ಕಚೇರಿ ಬಳಿಯೂ ಬ್ಯಾರಿಕೇಡ್‌ ಅಳವಡಿಸಿ, ಕಾರ್ಯಕರ್ತರನ್ನು ಅಲ್ಲಿಯೇ ತಡೆಯಲಾಯಿತು. ಬಳಿಕ ಮಾತನಾಡಿದ ಅಪ್ಪಚ್ಚು ರಂಜನ್, ‘ಮಡಿಕೇರಿ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆಯೇ ಕದನ. ಜೆಡಿಎಸ್‌ ಅಭ್ಯರ್ಥಿಗೆ ಅನಾರೋಗ್ಯ. ಆ ಪಕ್ಷದ ಅಭ್ಯರ್ಥಿ ನಮಗೆ ಪ್ರತಿಸ್ಪರ್ಧಿ ಅಲ್ಲ’ ಎಂದು ಕುಟುಕಿದರು.

‘ಈಗಾಗಲೇ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದೇನೆ. ಬಿಜೆಪಿಯ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮತದಾರರೂ ನಮ್ಮ ಪರವಾಗಿದ್ದಾರೆ. ಸಿದ್ದರಾಮಯ್ಯ ಅವರ ದುರಾಡಳಿತ ಕೊನೆಯಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಬಿಜೆಪಿ ಸರ್ಕಾರವಿದ್ದಾಗ ₹ 1,800 ಕೋಟಿ ಅನುದಾನವು ಜಿಲ್ಲೆಗೆ ಬಂದಿತ್ತು. ಮೊರಾರ್ಜಿ ದೇಸಾಯಿ ಶಾಲೆ, ಜಿಲ್ಲಾಡಳಿತ ಭವನ, ಸೈನಿಕ ಶಾಲೆ, ಎಂಜಿನಿಯರಿಂಗ್‌ ಕಾಲೇಜು, ವೈದ್ಯಕೀಯ ಕಾಲೇಜು ಕಟ್ಟಡವು ನಮ್ಮ ಅವಧಿಯಲ್ಲಿಯೇ ಮಂಜೂರಾಗಿತ್ತು. ಈಗಿನ ಸರ್ಕಾರ ಬಜೆಟ್‌ನಲ್ಲಿ ಘೋಷಣೆ ಮಾಡಿರುವ ಯೋಜನೆಗಳಿಗೂ ಅನುದಾನ ಬಿಡುಗಡೆ ಮಾಡಲಿಲ್ಲ’ ಎಂದು ದೂರಿದರು.

‘ಪ್ರಚಾರಕ್ಕೆ ಪ್ರಧಾನಿ ಮೋದಿ ಅವರನ್ನು ಕರೆಸುವ ಆಲೋಚನೆಯಿದೆ. ಈ ಸಂಬಂಧ ಸಂಸದರೊಂದಿಗೂ ಚರ್ಚಿಸಲಾಗುವುದು’ ಎಂದು ತಿಳಿಸಿದರು.

ಪ್ರತಾಪಸಿಂಹ ಮಾತನಾಡಿ, ‘ಐದನೇ ಬಾರಿಗೆ ಅಪ್ಪಚ್ಚು ರಂಜನ್‌ ಆಯ್ಕೆ ಆಗುವುದು ಖಚಿತ. ಬಳಿಕ ಮಂತ್ರಿಯೂ ಆಗಲಿದ್ದಾರೆ. ಕೊಡಗಿನ ಸಮಸ್ತ ಜನರ ಆಶೀರ್ವಾದ ಅವರ ಮೇಲಿದೆ. ಎರಡು ಕ್ಷೇತ್ರಗಳಲ್ಲೂ ಈ ಬಾರಿಯೂ ಬಿಜೆಪಿಯೇ ಜಯಭೇರಿ ಆಗಲಿದೆ’ ಎಂದು ಹೇಳಿದರು.

ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ‘ಬಿಜೆಪಿಗೆ 2018ರ ಚುನಾವಣೆ ಅತ್ಯಂತ ಸವಾಲಿನದ್ದು; ಅದರಲ್ಲಿ ಪಕ್ಷ ಯಶಸ್ವಿಯಾಗಲಿದೆ’ ಎಂದು ಹೇಳಿದರು.

ಮೆರವಣಿಗೆಯಲ್ಲಿ ಬಾಲಚಂದ್ರ ಕಳಗಿ, ಸುಬ್ರಹ್ಮಣ್ಯ ಉಪಾಧ್ಯಾಯ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್‌, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್‌, ಬೆಲ್ಲು ಸೋಮಯ್ಯ, ಮಂಜುಳಾರೀ, ಬಲ್ಲಾರಂಡ ಮಣಿ ಉತ್ತಪ್ಪ, ನಗರಸಭೆ ಸದಸ್ಯರಾದ ಕೆ.ಎಸ್‌. ರಮೇಶ್‌, ಪಿ.ಡಿ. ಪೊನ್ನಪ್ಪ, ಅನಿತಾ ಪೂವಯ್ಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT