ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚಿನ್ನದ ಊರ’ಲ್ಲಿ ಹಾಲಿ– ಮಾಜಿ ಪುತ್ರಿಯರ ಕದನ

ರಂಗೇರಿದ ವಿಧಾನಸಭಾ ಚುನಾವಣಾ ಕಣ: ಕದನ ಕುತೂಹಲ ರೋಚಕ
Last Updated 21 ಏಪ್ರಿಲ್ 2018, 9:50 IST
ಅಕ್ಷರ ಗಾತ್ರ

ಕೋಲಾರ: ‘ಚಿನ್ನದ ಊರು’ ಕೆಜಿಎಫ್‌ ವಿಧಾನಸಭಾ ಕ್ಷೇತ್ರದಲ್ಲಿ ಸಂಸದ ಕೆ.ಎಚ್‌.ಮುನಿಯಪ್ಪರ ಪುತ್ರಿ ರೂಪಾ ಶಶಿಧರ್‌ ಹಾಗೂ ಮಾಜಿ ಶಾಸಕ ವೈ,ಸಂಪಂಗಿ ಅವರ ಪುತ್ರಿ (ಹಾಲಿ ಶಾಸಕಿ ವೈ.ರಾಮಕ್ಕರ ಮೊಮ್ಮಗಳು) ಅಶ್ವಿನಿ ಸಂಪಂಗಿ ನಡುವಿನ ಸ್ಪರ್ಧೆಯಿಂದ ಚುನಾವಣಾ ಕಣ ರಂಗೇರಿದೆ.

ರಾಜಕೀಯ ಹಿನ್ನೆಲೆಯ ಕುಟುಂಬದಿಂದ ಬಂದಿರುವ ಈ ಇಬ್ಬರು 2016ರ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಪಾರಂಡಹಳ್ಳಿ ಜಿ.ಪಂ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾರಣಕ್ಕೆ ಕ್ಷೇತ್ರವು ಪ್ರತಿಷ್ಠೆಯ ಕಣವಾಗಿತ್ತು. ಈ ಇಬ್ಬರು ವಿಧಾನಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಮುಖಾಮುಖಿಯಾಗಿದ್ದು, ಕದನ ಕುತೂಹಲ ರೋಚಕ ಘಟ್ಟ ತಲುಪಿದೆ.

ಚುನಾವಣಾ ಕಣದಲ್ಲಿ ಮೇಲ್ನೋಟಕ್ಕೆ ರೂಪಾ ಮತ್ತು ಅಶ್ವಿನಿ ಮಧ್ಯೆ ಸ್ಪರ್ಧೆ ಎಂಬಂತೆ ಭಾಸವಾಗುತ್ತದೆ. ಆದರೆ ಮುನಿಯಪ್ಪ ಹಾಗೂ ಸಂಪಂಗಿ ನಡುವಿನ ಸ್ಪರ್ಧೆ ಎಂದೇ ಬಿಂಬಿತವಾಗಿದೆ. ಈ ಇಬ್ಬರು ನಾಯಕರು ಚುನಾವಣೆಯನ್ನು ವೈಯಕ್ತಿಕ ಪ್ರತಿಷ್ಠೆಯಾಗಿ ಪರಿಗಣಿಸಿದ್ದು, ಪುತ್ರಿಯರ ಗೆಲುವಿಗೆ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.

ಅಶ್ವಿನಿ 2016ರ ಜಿ.ಪಂ ಚುನಾವಣೆಯಲ್ಲಿ ರೂಪಾ ಅವರಿಗೆ ತೀವ್ರ ಸ್ಪರ್ಧೆಯೊಡ್ಡಿದ್ದರು. ಸಾಕಷ್ಟು ಜಿದ್ದಾಜಿದ್ದಿಯ ಚುನಾವಣೆಯಲ್ಲಿ ವಿಜಯಲಕ್ಷ್ಮಿ ಅಶ್ವಿನಿ ಅವರಿಗೆ ಒಲಿದಿದ್ದಳು. ಅವರು ಸಮೀಪದ ಪ್ರತಿಸ್ಪರ್ಧಿ ರೂಪಾ ವಿರುದ್ಧ 153 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು.

2013ರ ವಿಧಾನಸಭಾ ಚುನಾವಣೆಯಲ್ಲೇ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಪ್ರಯತ್ನ ನಡೆಸಿದ್ದ ರೂಪಾ ಅವರಿಗೆ ಅಂತಿಮ ಕ್ಷಣದಲ್ಲಿ
ಟಿಕೆಟ್‌ ಕೈತಪ್ಪಿತ್ತು. ಹೀಗಾಗಿ ಅವರು ಜಿ.ಪಂ ಚುನಾವಣೆ ಮೂಲಕ ರಾಜಕೀಯ ಜೀವನ ಆರಂಭಿಸುವ ಪ್ರಯತ್ನ ಮಾಡಿದ್ದರು. ಆದರೆ ಮತದಾರರು ಅವರ ಕೈ ಹಿಡಿದಿರಲಿಲ್ಲ.

ಪುತ್ರಿಗೆ ಮಣೆ: ಬಿಜೆಪಿಯ ಮೊದಲ ಪಟ್ಟಿಯಲ್ಲಿ ಸಂಪಂಗಿ ಅವರಿಗೆ ಟಿಕೆಟ್‌ ಘೋಷಿಸಲಾಗಿತ್ತು. ಆದರೆ ಅವರ ವಿರುದ್ಧ ಲೋಕಾಯುಕ್ತದಲ್ಲಿ ದಾಖಲಾಗಿರುವ ಲಂಚ ಪ್ರಕರಣ ಸಂಬಂಧ ಹೈಕೋರ್ಟ್‌ನಲ್ಲಿ ಏ.26ರಿಂದ ವಿಚಾರಣೆ ಆರಂಭವಾಗಲಿದೆ. ನ್ಯಾಯಾಲಯದಲ್ಲಿ ಸಂಪಂಗಿ ವಿರುದ್ಧ ವ್ಯತಿರಿಕ್ತ ತೀರ್ಪು ಬಂದರೆ ಚುನಾವಣೆ ಹೊಸ್ತಿಲಲ್ಲಿ ಪಕ್ಷಕ್ಕೆ ಮುಜುಗರವಾಗುತ್ತದೆ ಎಂಬ ಕಾರಣಕ್ಕೆ ವರಿಷ್ಠರು ಕೊನೆ ಕ್ಷಣದಲ್ಲಿ ತಂದೆಯ ಬದಲು ಪುತ್ರಿಗೆ ಮಣೆ ಹಾಕಿದ್ದಾರೆ.

ಕಳಂಕಿತರು ಎಂಬ ಕಾರಣಕ್ಕೆ 2013ರ ಚುನಾವಣೆಯಲ್ಲೂ ಸಂಪಂಗಿ ಅವರಿಗೆ ಟಿಕೆಟ್‌ ನೀಡಲು ಪಕ್ಷ ನಿರಾಕರಿಸಿತ್ತು. ಅಂತಿಮವಾಗಿ ಅವರ ತಾಯಿ ರಾಮಕ್ಕ ಬಿಜೆಪಿಯಿಂದ ಕಣಕ್ಕಿಳಿದು ಜಯಗಳಿಸಿದ್ದರು.

ಹ್ಯಾಟ್ರಿಕ್‌ ನಿರೀಕ್ಷೆ: ಕಮಲ ಪಾಳಯವು ಕ್ಷೇತ್ರದಲ್ಲಿ ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿದೆ. ತಂದೆ, ಅಜ್ಜಿಯ ನಂತರ ಕ್ಷೇತ್ರದಲ್ಲಿ ಪಕ್ಷವನ್ನು ಪ್ರತಿನಿಧಿಸುತ್ತಿರುವ ಅಶ್ವಿನಿ ಚುನಾವಣೆಯಲ್ಲಿ ಜಯಭೇರಿ ಬಾರಿಸಿ ಸತತ ಮೂರನೇ ಬಾರಿಗೆ ಕಮಲ ಅರಳಿಸುವ ಕನಸು ಕಾಣುತ್ತಿದ್ದಾರೆ. ಜಿ.ಪಂ ಚುನಾವಣೆ ಸೋಲಿನ ಸೇಡು ತೀರಿಸಿಕೊಳ್ಳುವ ಹಟಕ್ಕೆ ಬಿದ್ದಿರುವ ರೂಪಾ ಅವರು ಕ್ಷೇತ್ರದ ಹಳ್ಳಿ ಹಳ್ಳಿಯನ್ನೂ ಸುತ್ತಿ ಗೆಲುವಿಗೆ ರಣತಂತ್ರ ರೂಪಿಸಿದ್ದಾರೆ.

ಜೆಡಿಎಸ್‌ನಿಂದ ಮಾಜಿ ಶಾಸಕ ಎಂ.ಭಕ್ತವತ್ಸಲಂ, ರಿಪಬ್ಲಿಕ್‌ ಪಾರ್ಟಿ ಆಫ್‌ ಇಂಡಿಯಾದಿಂದ (ಆರ್‌ಪಿಐ) ಮಾಜಿ ಶಾಸಕ ಎಸ್‌.ರಾಜೇಂದ್ರನ್‌, ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದಿಂದ (ಕೆಪಿಜೆಪಿ) ವಳ್ಳಲ್‌ ಮುನಿಸ್ವಾಮಿ, ಕರ್ನಾಟಕ ಜನತಾ ಪಕ್ಷದಿಂದ (ಕೆಜೆಪಿ) ಗಗನಾ ಸುಖನ್ಯಾ, ಸಿಪಿಎಂನಿಂದ ಪಿ.ತಂಗರಾಜ್‌ ಹುರಿಯಾಳುಗಳಾಗಿದ್ದಾರೆ.

ರೂಪಾ ಎದುರಾಳಿ: ಚುನಾವಣೆ ಸಪ್ಪೆ

ಕೆಜಿಎಫ್‌: ವಿಧಾನಸಭೆ ಚುನಾವಣೆಯಲ್ಲಿ ರೂಪಾ ಶಶಿಧರ್ ಬಿಟ್ಟು ಅವರ ತಂದೆ ಕೆ.ಎಚ್.ಮುನಿಯಪ್ಪ ಸ್ಪರ್ಧೆ ಮಾಡಿದ್ದರೆ ಸರಿ ಇರುತ್ತಿತ್ತು. ರೂಪಾ ಶಶಿಧರ್ ಸ್ಪರ್ಧೆಯಿಂದಾಗಿ ಚುನಾವಣೆ ಸಪ್ಪೆಯಾಗಿದೆ ಎಂದು ಬಿಜೆಪಿ ಅಭ್ಯರ್ಥಿ ಅಶ್ವಿನಿ ಹೇಳಿದರು. ನಗರಸಭೆ ಕಚೇರಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ನಮಗೆ ಸಂಸ್ಕಾರ ಕಲಿಸಿದೆ. ದೊಡ್ಡವರಿಗೆ, ಚಿಕ್ಕವರಿಗೆ ನೀಡಬೇಕಾದ ಗೌರವ ಕುರಿತು ನೀತಿ ಪಾಠ ಕಲಿಸಿದೆ. ಇಂತಹ ಸಂಸ್ಕಾರದ ಮೂಲಕ ಮತಯಾಚನೆ ಮಾಡುತ್ತೇನೆ’ ಎಂದರು.

**

ಹಿಂದಿನ ಚುನಾವಣೆಗಳಲ್ಲಿ ತಂದೆ ಮತ್ತು ಅಜ್ಜಿ ಗೆಲುವು ಸಾಧಿಸಿದ್ದಾರೆ. ಅವರ ಅಭಿವೃದ್ಧಿ ಕಾರ್ಯವೇ ನನಗೆ ಶ್ರೀರಕ್ಷೆ. ಕೊನೆ ಕ್ಷಣದಲ್ಲಿ ತಂದೆ ಬದಲಿಗೆ ನನಗೆ ಟಿಕೆಟ್‌ ನೀಡಿರುವುದರಿಂದ ಪರಿಣಾಮ ಬೀರುವುದಿಲ್ಲ – ಅಶ್ವಿನಿ ಸಂಪಂಗಿ, ಬಿಜೆಪಿ ಅಭ್ಯರ್ಥಿ.

**

ಸಂಸದ ಮುನಿಯಪ್ಪರ ವರ್ಚಸ್ಸು ಪಕ್ಷಕ್ಕೆ ವರವಾಗಲಿದೆ. ರೂಪಾ ಅವರು ಮೂರ್ನಾಲ್ಕು ವರ್ಷದಿಂದ ಕ್ಷೇತ್ರದಲ್ಲೇ ಇದ್ದು ಪಕ್ಷ ಸಂಘಟಿಸಿದ್ದು, ಈ ಬಾರಿ ಗೆಲುವು ಸಾಧಿಸುತ್ತಾರೆ – ರಾಧಾಕೃಷ್ಣರೆಡ್ಡಿ, ಕೆಜಿಎಫ್‌ ಗ್ರಾಮಾಂತರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT