ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಪು ಈರುಳ್ಳಿ ಬೆಳೆದವರು ಕಂಗಾಲು

ಈರುಳ್ಳಿ ಬೆಳೆಗಾರರಿಗೆ ಬೆಲೆ ಕುಸಿತದ ಬಿಸಿ; ಲಾಭದಾಯಕ ಬೆಲೆ ಕೊಟ್ಟು ಖರೀದಿಸುವ ಭರವಸೆ ನೀಡಿದ್ದ ವ್ಯಾಪಾರಿಗಳ ಸುಳಿವಿಲ್ಲ
Last Updated 21 ಏಪ್ರಿಲ್ 2018, 9:55 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ಕೆಂಪು ಈರುಳ್ಳಿ ಬೆಳೆಗಾರರಿಗೆ ಬೆಲೆ ಕುಸಿತದ ಬಿಸಿ ತಟ್ಟಿದೆ. ಕೆಂಪು ಈರುಳ್ಳಿ ಬೆಳೆದ ರೈತರು ಹಾಕಿದ ಬಂಡವಾಳವೂ ಕೈಗೆ ಬರದೆ ಕಂಗಾಲಾಗಿದ್ದಾರೆ.

ತಾಲ್ಲೂಕಿನ ಉತ್ತರ ಭಾಗದ ರೈತರು ಕೊಳವೆ ಬಾವಿ ಆಶ್ರಯದಲ್ಲಿ ಕೆಂಪು ಈರುಳ್ಳಿ ಬೆಳೆದಿದ್ದಾರೆ. ಉತ್ತಮ ಇಳುವರಿ ಬಂದಿದೆ. ಕೆಲವು ರೈತರು ಒಂದು ಎಕರೆ ವಿಸ್ತೀರ್ಣದಲ್ಲಿ 250 ಮೂಟೆ ಬೆಳೆದಿದ್ದಾರೆ. ಆದರೆ ಅದಕ್ಕೆ ತಕ್ಕಂತೆ ಬೆಲೆ ಇಲ್ಲ. 50 ಕೆಜಿ ತೂಗುವ ಮೂಟೆಯೊಂದು ₹ 300 ರಿಂದ 400 ರಂತೆ ಖರೀದಿಸಲಾಗುತ್ತಿದೆ.

ವ್ಯಾಪಾರಿಗಳು ರೈತರಿಗೆ ಬಿತ್ತನೆ ಬೀಜ ಉಚಿತವಾಗಿ ನೀಡುತ್ತಾರೆ. ಬೆಳೆದ ಮೇಲೆ ಬೀಜ ನೀಡಿದ ವ್ಯಾಪಾರಿಗೇ ಈರುಳ್ಳಿ ಮಾರಾಟ ಮಾಡಬೇಕಾದ ಅಲಿಖಿತ ಒಪ್ಪಂದ ಇದೆ. ಕೆಲವು ರೈತರು ಬೆಳೆಗೆ ಅಗತ್ಯವಾದ ಗೊಬ್ಬರ ಹಾಗೂ ಔಷಧವನ್ನು ಅವರಿಂದಲೇ ತರುತ್ತಾರೆ. ಇದು ಹಲವು ದಶಕಗಳಿಂದ ನಡೆದು ಬಂದಿದೆ.

ಕೆಲವು ಈರುಳ್ಳಿ ವ್ಯಾಪಾರಿಗಳು ಗ್ರಾಮೀಣ ಪ್ರದೇಶದಲ್ಲಿ ಸಂಚರಿಸಿ ಈರುಳ್ಳಿ ಬೆಳೆಯಲು ರೈತರ ಮನವೊಲಿಸುವುದುಂಟು. ಮನವೊಲಿಸುವ ಸಂದರ್ಭದಲ್ಲಿ ಬೆಳೆದ ಈರುಳ್ಳಿಗೆ ಲಾಭದಾಯಕ ಬೆಲೆ ಕೊಟ್ಟು ಖರೀದಿಸುವ ಭರವಸೆ ನೀಡುತ್ತಾರೆ. ಬೆಲೆ ಇದ್ದರೆ ಖರೀದಿಸುತ್ತಾರೆ. ಇಲ್ಲವಾದರೆ ತೋಟಗಳ ಕಡೆ ತಿರುಗಿ ನೋಡುವುದಿಲ್ಲ.

ಬೆಲೆ ಕುಸಿತ ಉಂಟಾದ ಸಂದರ್ಭದಲ್ಲಿ ಕೆಲವು ವ್ಯಾಪಾರಿಗಳು ಕಡಿಮೆ ಬೆಲೆಗೆ ಈರುಳ್ಳಿ ಖರೀದಿಸಿ ಮೂಟೆಗಳಿಗೆ ತುಂಬುತ್ತಾರೆ. ಹಣ ಕೊಡುವುದಿಲ್ಲ. ಮೂಟೆ ಸರಕು ಎತ್ತಿಕೊಂಡು ಹೋಗುವಾಗ ಕೊಡುವುದಾಗಿ ತಿಳಿಸುತ್ತಾರೆ. ಬೆಲೆ ಬಂದರೆ ಬಂದು ಸರಕು ಕೊಂಡೊಯ್ಯುತ್ತಾರೆ, ಇಲ್ಲವಾದರೆ ಬಿಟ್ಟುಬಿಡುತ್ತಾರೆ. ಈರುಳ್ಳಿ ಚೀಲದಲ್ಲಿಯೇ ಕೊಳೆತು ಹಾಳಾಗುತ್ತದೆ. ಇಂತಹ ಹಲವು
ಉದಾಹರಣೆಗಳಿವೆ.

ಈರುಳ್ಳಿ ನಿರ್ವಹಣೆ ಸುಲಭದ ಮಾತಲ್ಲ. ಕಿತ್ತ ಮೇಲೆ ನೆರಳಿನಲ್ಲಿ ಹಾಕಿ ಒಣಗಿಸಬೇಕು. ಹದಕ್ಕೆ ಬಂದ ಈರುಳ್ಳಿಯನ್ನು ದಂಟು ಸಹಿತ ಸಾರವೆ ಹಾಕಬೇಕು. ಮಳೆ ಬಂದರೆ ಪ್ಲಾಸ್ಟಿಕ್‌ ಹಾಳೆ ಹಾಕಿ ನನೆಯದಂತೆ ನೋಡಿಕೊಳ್ಳಬೇಕು. ದಂಟು ಕೊಯ್ದ ಮೇಲೆ ಈರುಳ್ಳಿ ಹೆಚ್ಚು ಕಾಲ ಉಳಿಯುವುದಿಲ್ಲ. ವ್ಯಾಪಾರಿಗಳು ಖರೀದಿಸಿ ಬಿಟ್ಟು ಹೋದರೂ, ಮೂಟೆಗಳ ಉಸ್ತುವಾರಿ ರೈತನಿಗೆ ಸೇರಿದ್ದು, ಏಕೆಂದರೆ ಹಣ ಬಂದಿರುವುದಿಲ್ಲ.

ಈ ಹಿಂದೆ ಒಂದು ಮೂಟೆ ಈರುಳ್ಳಿ ₹ 3,000 ದಿಂದ 3,500ವರೆಗೆ ಮಾರಾಟವಾಗುತ್ತಿತ್ತು. ಆ ಬೆಲೆಯಿಂದ ಆಕರ್ಷಿತರಾದ ರೈತರ ಕೆಂಪು
ಈರುಳ್ಳಿ ಬೆಳೆಯಲು ಮುಂದಾದರು. ಈರುಳ್ಳಿ ವ್ಯಾಪಾರಿಗಳು ಮೂಟೆಯೊಂದಕ್ಕೆ ಕನಿಷ್ಠ ₹ 1,000 ಕೊಟ್ಟು ಖರೀದಿಸುವುದಾಗಿ ಭರವಸೆ ನೀಡಿದ್ದರು. ಹಾಗೆ ಹೇಳಿದವರು ಈಗ ಈ ಕಡೆ ತಲೆಹಾಕುತ್ತಿಲ್ಲ ಎಂಬುದು ಬೆಳೆಗಾರರ
ಅಳಲು.

ತೋಟಗಳ ಪಕ್ಕದಲ್ಲಿ ದಂಟು ಸಹಿತ ದಂಟು ಕೊಯ್ದ, ಹಾಗೂ ಮೂಟೆಗಳಿಗೆ ತುಂಬಿದ ಈರುಳ್ಳಿ ಇದೆ. ಈಗ ಮಳೆ ಪ್ರಾರಂಭವಾಗಿದೆ. ಬಿಸಿಲಿನ ಬೇಗೆ ಹೆಚ್ಚಿದೆ. ನಿರ್ವಹಣೆ ಕಷ್ಟವಾಗಿದೆ. ಮನೆ ಮಂದಿಯೆಲ್ಲ ಕಣ್ಣಲ್ಲಿ ಕಣ್ಣಿಟ್ಟು ಕಾಯಬೇಕಾದ ಅನಿವಾರ್ಯತೆ ಉಂಟಾಗಿದೆ. ವ್ಯಾಪಾರಿಗಳು ಖರೀದಿಗೆ ಮುಂದಾಗುತ್ತಿಲ್ಲ. ಖರೀದಿ ಮಾಡಲಾಗಿರುವ ಸರಕನ್ನು ಸಾಗಿಸುತ್ತಿಲ್ಲ. ಇದು ಬೆಳೆಗಾರರ ನೆಮ್ಮದಿ
ಕೆಡಿಸಿದೆ.

ಕೆಂಪು ಈರುಳ್ಳಿಯನ್ನು ಗುಲಾಬಿ ಈರುಳ್ಳಿ ಎಂದೂ ಕರೆಯುತ್ತಾರೆ. ಈ ಈರುಳ್ಳಿಗೆ ದೇಸಿ ಮಾರುಕಟ್ಟೆಯಲ್ಲಿ ಮಾನ್ಯತೆ ಇಲ್ಲ. ಇದನ್ನು ಇಲ್ಲಿನವರು ತಿನ್ನುವುದಿಲ್ಲ. ಈ ಉತ್ಪನ್ನ ಚೆನ್ನೈ ಮೂಲಕ ವಿದೇಶಗಳಿಗೆ ರಫ್ತಾಗುತ್ತದೆ. ಇದರಿಂದಾಗಿ ರೈತರು ಮಧ್ಯವರ್ತಿಗಳ ಮೂಲಕವೇ ಸರಕು ಮಾರಾಟ ಮಾಡಬೇಕಾಗಿದೆ. ಬೆಲೆ ಇದ್ದಾಗ ಸ್ಪರ್ಧಾತ್ಮಕ ಬೆಲೆಗೆ ಖರೀದಿಸುವ ವ್ಯಾಪಾರಿಗಳು, ಬೆಲೆ ಬಿದ್ದಾಗ ರೈತರಿಂದ ದೂರ ಉಳಿಯುತ್ತಾರೆ. ಈಗ ಬೆಳೆಗೆ ಹಾಕಿದ ಬಂಡವಾಳಕ್ಕೂ ಸಂಚಕಾರ ಬಂದಿದೆ.

**

ಬಂಗಾರದಂತಹ ಬೆಳೆ ಬಂದಿದೆ. ಮೂಟೆಯೊಂದಕ್ಕೆ ₹ 1000 ಕೊಟ್ಟು ಖರೀದಿಸುತ್ತೇವೆ ಎಂದು ಹೇಳಿ ಬೀಜ ಬಿತ್ತನೆ ಮಾಡಿಸಿದ್ದ ವ್ಯಾಪಾರಿಗಳು ಇತ್ತ ಸುಳಿದಿಲ್ಲ – ಸುಬ್ಬಣ್ಣ, ಈರುಳ್ಳಿ ಬೆಳೆಗಾರ, ಕೊಪ್ಪೋರಿಪಲ್ಲಿ.

**

ಕೆಂಪು ಈರುಳ್ಳಿಗೆ ಈಗ ವಿದೇಶಿ ಮಾರುಕಟ್ಟೆಯಲ್ಲೂ ಬೇಡಿಕೆ ಕುಸಿದಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ. ರೈತ ಬೆಳೆದ ತಪ್ಪಿಗೆ ಬೆಲೆ ತೆರಬೇಕಾಗಿದೆ – ರಾಜಣ್ಣ, ಪನಸಮಾಕನಹಳ್ಳಿ ರೈತ.

**

ಆರ್‌.ಚೌಡರೆಡ್ಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT