ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಮಪತ್ರ ಸಲ್ಲಿಕೆಯಲ್ಲೂ ಬಲಪ್ರದರ್ಶನ

ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿ.ಟಿ.ದೇವೇಗೌಡ ಉಮೇದುವಾರಿಕೆ ಸಲ್ಲಿಕೆ
Last Updated 21 ಏಪ್ರಿಲ್ 2018, 10:46 IST
ಅಕ್ಷರ ಗಾತ್ರ

ಮೈಸೂರು: ಇಡೀ ರಾಜ್ಯದ ಗಮನ ಸೆಳೆದಿರುವ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಪರಸ್ಪರ ಪೈಪೋಟಿ ನಡೆಸಲು ತೊಡೆತಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜೆಡಿಎಸ್‌ ಶಾಸಕ ಜಿ.ಟಿ.ದೇವೇಗೌಡ ಅವರು ಶುಕ್ರವಾರ ಮಧ್ಯಾಹ್ನ ನಾಮಪತ್ರ ಸಲ್ಲಿಸಿದರು.

ಇಬ್ಬರು ನಾಯಕರು ಒಂದೇ ಅವಧಿಯಲ್ಲಿ ನಾಮಪತ್ರ ಸಲ್ಲಿಸಿದ್ದು, ಹಲವು ನಾಟಕೀಯ ರಂಗಗಳಿಗೆ ಸಾಕ್ಷಿಯಾಯಿತು. ಉಭಯ ಪಕ್ಷಗಳ ಸಾವಿರಾರು ಕಾರ್ಯಕರ್ತರು ನಗರದಲ್ಲಿ ಶಕ್ತಿ ಪ್ರದರ್ಶನ ನಡೆಸಿದರು.

ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಎರಡೂ ಪಕ್ಷಗಳ ಸುಮಾರು ಐದು ಸಾವಿರಕ್ಕೂ ಅಧಿಕ ಕಾರ್ಯಕರ್ತರು ನೆರೆದಿದ್ದರು. ಮಿನಿ ವಿಧಾನಸೌಧದ ಬಳಿಯೂ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕಾರ್ಯಕರ್ತರು ಜಮಾಯಿಸಿದ್ದರು.

ನಾಮಪತ್ರ ಸಲ್ಲಿಸುವುದಕ್ಕೆ ಮುನ್ನ ಇಬ್ಬರು ನಾಯಕರು ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಜಿ.ಟಿ.ದೇವೇಗೌಡ ಅವರು ಮೊದಲು ಪೂಜೆ ಸಲ್ಲಿಸಿ ಬೆಂಬಲಿಗರ ಜತೆ ಮೆರವಣಿಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಸಿದರು. ಸಿದ್ದರಾಮಯ್ಯ ಅವರು ಪೂಜೆ ಸಲ್ಲಿಸಿ ಕಾರಿನಲ್ಲಿ ನೇರವಾಗಿ ಕ್ಷೇತ್ರ ಚುನಾವಣಾಧಿಕಾರಿಗಳ ಕಚೇರಿಗೆ ತೆರಳಿದರು. ಕಾಂಗ್ರೆಸ್‌ ಕಾರ್ಯಕರ್ತರು ಮೆರವಣಿಗೆಯಲ್ಲಿ ಅವರನ್ನು ಹಿಂಬಾಲಿಸಿದರು.

ಜಿ.ಟಿ.ದೇವೇಗೌಡ ಅವರು ಚುನಾವಣಾಧಿಕಾರಿಗಳ ಕಚೇರಿಯಲ್ಲಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿ ಅಲ್ಲಿಗೆ ಬಂದರು. ಪ್ರತಿಸ್ಪರ್ಧಿಯ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಕೊನೆಗೊಳ್ಳಲು ಸುಮಾರು 20 ನಿಮಿಷ ಕಾದು ಕುಳಿತರು. ಆ ಬಳಿಕ ನಾಮಪತ್ರ ಸಲ್ಲಿಸಿದರು.

ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ, ಮಂಜುಳಾ ಮಾನಸ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಬಿ.ಜೆ.ವಿಜಯಕುಮಾರ್‌, ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್‌ ಮುಖಂಡರು ಮುಖ್ಯಮಂತ್ರಿ ಜತೆಗಿದ್ದರು.

ಕಾರ್ಯಕರ್ತರ ಜಟಾಪಟಿ: ಎರಡು ಪಕ್ಷಗಳ ಸಾವಿರಾರು ಕಾರ್ಯಕರ್ತರು ಏಕಕಾಲದಲ್ಲಿ ಪರಸ್ಪರ ಎದುರಾದದ್ದು ಜಟಾಪಟಿಗೆ ಕಾರಣವಾಯಿತು. ಪರಸ್ಪರರ ವಿರುದ್ಧ ಘೋಷಣೆ ಕೂಗಿದ್ದ ರಿಂದ ಕಾವೇರಿದ ವಾತಾವರಣ ನಿರ್ಮಾ ಣವಾಯಿತು. ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಕಾರ್ಯಕರ್ತರನ್ನು ನಿಯಂತ್ರಿಸಲು ಅಶ್ವಾರೋಹಿ ಪಡೆಯ ಸಿಬ್ಬಂದಿಯನ್ನೂ ಬಳಸಲಾಯಿತು.

ಮಿನಿವಿಧಾನಸೌಧ ಕಟ್ಟಡದ ಹೊರಭಾಗದಲ್ಲೂ ಕಾವೇರಿದ ವಾತಾವರಣ ಕಂಡು ಬಂತು. ಜಿ.ಟಿ.ದೇವೇಗೌಡ ಅವರು ನಾಮಪತ್ರ ಸಲ್ಲಿಸಿ ತೆರಳಿದ ಬಳಿಕವೂ ಕೆಲವು ಜೆಡಿಎಸ್‌ ಕಾರ್ಯಕರ್ತರು ಅಲ್ಲೇ ಇದ್ದರು. ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಕಾರಿನಲ್ಲಿ ಹೊರಬರುತ್ತಿದ್ದಂತೆಯೇ ಕೆಲವರು ಜೆಡಿಎಸ್‌ ಬಾವುಟ ಪ್ರದರ್ಶಿಸಿದರು.

ಸಂಚಾರ ದಟ್ಟಣೆ: ಜೆಡಿಎಸ್‌ ಮತ್ತು ಕಾಂಗ್ರೆಸ್‌ ಕಾರ್ಯಕರ್ತರು ಮೆರವಣಿಗೆ ನಡೆಸಿದ್ದರಿಂದ ಶುಕ್ರವಾರ ಮಧ್ಯಾಹ್ನ ಚಾಮರಾಜ ವೃತ್ತ, ಕೆ.ಆರ್‌.ವೃತ್ತ, ಅಶೋಕ ರಸ್ತೆ, ಹಾರ್ಡಿಂಗ್‌ ವೃತ್ತದ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಕಂಡು ಬಂತು. ಕೆಲವು ಮಾರ್ಗಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಿದ್ದರಿಂದ ವಾಹನ ಸವಾರರು ತೊಂದರೆ ಅನುಭವಿಸಿದರು.

‘ಪ್ರತ್ಯೇಕ ಸಮಯ ನಿಗದಿಪಡಿಸಿದ್ದೆವು‘

ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ಎರಡೂ ಪಕ್ಷಗಳ ಅಭ್ಯರ್ಥಿಗಳಿಗೆ ಬೇರೆ ಬೇರೆ ಸಮಯ ನಿಗದಿಪಡಿಸಿದ್ದೆವು. ಪ್ರತ್ಯೇಕ ಮಾರ್ಗಗಳಲ್ಲಿ ಮೆರವಣಿಗೆ ನಡೆಸುವಂತೆಯೂ ಸೂಚಿಸಿದ್ದೆವು. ಆದರೆ ಒಂದು ಪಕ್ಷದ ಕಾರ್ಯಕರ್ತರು ಸ್ಥಳಕ್ಕೆ ಬೇಗನೇ ಬಂದರು. ಇದರಿಂದ ಗೊಂದಲ ಉಂಟಾಯಿತು ಎಂದು ಪೊಲೀಸ್‌ ಕಮಿಷನರ್‌ ಸುಬ್ರಮಣ್ಯೇಶ್ವರ ರಾವ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಎರಡೂ ಪಕ್ಷಗಳ ಸಾವಿರಾರು ಮಂದಿ ಒಟ್ಟಿಗೆ ಸೇರಿದ್ದರಿಂದ ಕೆಲಕಾಲ ಬಿಗುವಿನ ಪರಿಸ್ಥಿತಿ ನಿರ್ಮಾಣವಾಯಿತು. ಪೊಲೀಸರು ಯಶಸ್ವಿಯಾಗಿ ಪರಿಸ್ಥಿತಿಯನ್ನು ನಿಭಾಯಿಸಿದರು ಎಂದರು.

ಗೆಲ್ಲುವ ವಿಶ್ವಾಸ: ಜಿ.ಟಿ.ದೇವೇಗೌಡ

ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮದವರ ಜತೆ ಮಾತನಾಡಿದ ಜಿ.ಟಿ.ದೇವೇಗೌಡ, ಸಿದ್ದರಾಮಯ್ಯ ಅವರು ಮಗನಿಗಾಗಿ ವರುಣಾ ಕ್ಷೇತ್ರವನ್ನು ಬಿಟ್ಟು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಲು ಬಂದಿದ್ದಾರೆ. ಈ ಬಗ್ಗೆ ಜನರಿಗೆ ಅಸಮಾಧಾನ ಇದೆ. ಮುಖ್ಯಮಂತ್ರಿ ಅವರನ್ನು ಸೋಲಿಸಲು ಮುಂದಾಗಿದ್ದಾರೆ ಎಂದು ಹೇಳಿದರು. ‘ಎರಡು ಮನಸ್ಸಿನಿಂದ ಇಲ್ಲಿ ಸ್ಪರ್ಧಿಸುತ್ತಿರುವ ಸಿದ್ದರಾಮಯ್ಯ ವಿರುದ್ಧ ಗೆಲ್ಲುವ ವಿಶ್ವಾಸ ನನಗಿದೆ’ ಎಂದು ನುಡಿದರು.

ಡಿಲೀಟ್‌ ಆದ ಪೋಸ್ಟ್

ಏ.23ರಂದು ಬಾದಾಮಿ ವಿಧಾನಸಭಾ ಕ್ಷೇತ್ರದಿಂದ ಸಿದ್ದರಾಮಯ್ಯ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಪುತ್ರ ಡಾ.ಯತೀಂದ್ರ ಅವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ‘ಪಕ್ಷದ ಶಾಸಕರು, ಮುಖಂಡರು ನನ್ನನ್ನು ಭೇಟಿಯಾಗಿ ಚರ್ಚೆ ನಡೆಸುವಾಗ ಯತೀಂದ್ರ ಇದ್ದ. ಹೀಗಾಗಿ, ಬರೆದುಕೊಂಡಿದ್ದಾನೆ’ ಎಂದರು.ಫೇಸ್‌ಬುಕ್‌ನಲ್ಲಿ ಅಪ್‌ಲೋಡ್‌ ಮಾಡಿದ್ದ ಪೋಸ್ಟ್‌ ವೈರಲ್‌ ಆಗುತ್ತಿದ್ದಂತೆ ಅದನ್ನು ಡಾ.ಯತೀಂದ್ರ ಡಿಲೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT