ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರ ಖಂಡಿಸಿ ಪ್ರತಿಭಟನೆ

ಪ್ರಧಾನಿ ನರೇಂದ್ರ ಮೋದಿ ಮೌನ ಮುರಿಯಲು ಮನವಿ
Last Updated 21 ಏಪ್ರಿಲ್ 2018, 11:16 IST
ಅಕ್ಷರ ಗಾತ್ರ

ಮಾಗಡಿ: ಕಠುವಾ ಅತ್ಯಾಚಾರದಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬೇಬಿ ಆಯೇಷಾ ಮಹಿಳಾ ಅಭಿವೃದ್ಧಿ ಸಂಘ, ನ್ಯಾಷನಲ್ ವಿಮೆನ್ ಫ್ರಂಟ್, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ, ಎಸ್ಎಫ್ಐ, ಎಸ್‌ಟಿಎಂಸಿ ಸಮಿತಿಗಳ ಸಹಯೋಗದಲ್ಲಿ ಶುಕ್ರವಾರ ಸಂಜೆ ಕಲ್ಯಾ ಬಾಗಿಲು ನಾರಸಿಂಹ ವೃತ್ತದ ಬಳಿ ರಸ್ತೆ ತಡೆದು ಬೃಹತ್ ಪ್ರತಿಭಟನೆ ನಡೆಸಲಾಯಿತು.

ರಾಜ್ಯ ಎಸ್ಎಫ್ಐ ಉಪಾಧ್ಯಾಕ್ಷ ಚಿಕ್ಕರಾಜು ಎಸ್. ಮಾತನಾಡಿ, ಕಠುವಾ, ಉನ್ನಾವೋ, ಸೂರತ್ ಹಾಗೂ ದೇಶದ ವಿವಿಧೆಡೆಗಳಲ್ಲಿ ಪುಟ್ಟ ಕಂದಮ್ಮಗಳು ಮತ್ತು ಯುವತಿಯರ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಕೊಲೆಗಡುಕರನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕಠುವಾ ಪ್ರಕರಣ ಮಾನವ ಸಮುದಾಯವೇ ತಲೆ ತಗ್ಗಿಸುವ ಘಟನೆಯಾಗಿದೆ. ಉತ್ತರಪ್ರದೇಶದ ಉನ್ನಾವೋದಲ್ಲಿ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಹಾಗೂ ಇತರರು 17 ವರ್ಷದ ಯುವತಿಯ ಮೇಲೆ ಅತ್ಯಾಚಾರವೆಸಗಿ ಆಕೆಯ ತಂದೆಯನ್ನು ಲಾಕಪ್‌ನಲ್ಲಿ ಸಾಯಿಸಿದ್ದಾರೆ. ಗುಜರಾತ್‌ನ ಸೂರತ್ ಬೆಸ್ತಾನ್ ಪ್ರದೇಶದಲ್ಲಿ 11 ವರ್ಷದ ಬಾಲಕಿಯನ್ನು 8 ದಿನಗಳ ಕಾಲ ಕೂಡಿ ಹಾಕಿ ಅತ್ಯಾಚಾರವೆಸಗಿ ಮೃತ ದೇಹವನ್ನು ಕ್ರಿಕೆಟ್ ಮೈದಾನದಲ್ಲಿ ಎಸೆಯಲಾಗಿದೆ ಎಂದರು.

ದೇಶದಲ್ಲಿ ದಲಿತ, ಮುಸ್ಲಿಂ, ಹಿಂದುಳಿದ ವರ್ಗಗಳ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರವೆಸಗಿ ಈ ಸಮುದಾಯಗಳನ್ನು ಬೆದರಿಸಲಾ
ಗುತ್ತಿದೆ. ಕೋಮುವಾದಿ ಶಕ್ತಿಗಳು ನಡೆಸುತ್ತಿರುವ ಸಂಘಟಿತ, ವ್ಯವಸ್ಥಿತ ಕೃತ್ಯಗಳನ್ನು ತಡೆಗಟ್ಟುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಅವರು ಆರೋಪಿಸಿದರು.

ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಪ್ರತಿನಿಧಿ ಎಸ್.ಜಿ. ವನಜ ಮಾತನಾಡಿ, ಮುಗ್ಧ ಮಕ್ಕಳ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದಿಂದಾಗಿ ವಿಶ್ವ ಮಟ್ಟದಲ್ಲಿ ನಮ್ಮ ದೇಶದ ಹೆಸರು ಹಾಳಾಗಿದೆ. ಕೇಂದ್ರ ಸರ್ಕಾರದ ಭೇಟಿ ಬಚಾವೋ, ಭೇಟಿ ಪಡಾವೋ ಆಂದೋಲನದ ರಾಯಭಾರಿಯಾಗಿರುವ ಅಮಿತಾಬ್ ಬಚ್ಚನ್ ಸಹ ಪುಟಾಣಿಗಳ ಮೇಲೆ ನಡೆಯುತ್ತಿರುವ ಅತ್ಯಾಚಾರವನ್ನು ಖಂಡಿಸಿದ್ದಾರೆ. ಕೇಂದ್ರ ಸರ್ಕಾರ ಅತ್ಯಾಚಾರಿಗಳಿಗೆ ಮರಣದಂಡನೆ ವಿಧಿಸಬೇಕು ಎಂದು ಆಗ್ರಹಿಸಿದರು.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಅಧ್ಯಕ್ಷ ಖದೀಮ್ ಫಾಷ, ನೂರುಲ್ಲಾ, ಸೋಶಿಯಲ್ ಡೆಮಾಕ್ರಟಿಕ್ ಫಾರ್ಟಿ ಆಫ್ ಇಂಡಿಯಾದ ಸಯ್ಯದ್ ತಾಜಿಲ್, ಅನ್ಸರ್ ಫಾಷ, ನ್ಯಾಷನಲ್ ವುಮನ್ಸ್ ಫ್ರಂಟ್ ನ ಸುಮೈರಾ, ನಜೀಮ್, ನಯೀಮ್ ತಾಜ್, ಗೋಹರ್ ಜಾನ್, ಬೇಬಿ ಆಯೇಷ ಸಂಘದ ರೇಷ್ಮತಾಜ್, ಸಬೀನಾ, ಟಿಪ್ಪು ಕಮಿಟಿಯ ಫಯಾಜ್ ಫಾಷ, ಮಿಲಾಜ್ ಸಮಿತಿಯ ನಜರತ್, ಅಬ್ದುಲ್ ರೆಹಮಾನ್, ಜಾಮೀಯ ಮಸೀದಿ ಅಧ್ಯಕ್ಷ ಸಯ್ಯದ್ ನೇಮತ್, ಅಬ್ದುಲ್ ರೆಹಮಾನ್, ಸಯ್ಯದ್ ಅಸಾದುಲ್ಲಾ ಮಾತನಾಡಿ ಆಸೀಫಾ ಮಗುವಿನ ಮೇಲಿನ ಅತ್ಯಾಚಾರ ಖಂಡಿಸಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಶೋಕ್, ಕಾರ್ಯದರ್ಶಿ ಸವಿತ, ನಜೀರ್, ಸಯ್ಯದ್ ತಾಸೀಮ, ಸಬೀನಾ ತಾಜ್ ಹಾಗೂ ಹೊಸ ಮಸೀದಿ ಮೊಹಲ್ಲ, ಹಳೇ ಮಸೀದಿ ಮೊಹಲ್ಲಗಳಿಂದ ಆಗಮಿಸಿದ್ದ ಸಹಸ್ರಾರು ಮಹಿಳೆಯರು ರಸ್ತೆ ತಡೆ ನಡೆಸಿ ತಹಶೀಲ್ದಾರ್ ಎನ್. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಗಲ್ಲುಶಿಕ್ಷೆ ವಿಧಿಸಲು ಆಗ್ರಹ

ಪ್ರಧಾನಮಂತ್ರಿ ನರೇಂದ್ರ ಮೋದಿ ಮೌನ ಕೈ ಬಿಟ್ಟು ಅತ್ಯಾಚಾರದ ಘಟನೆಗಳನ್ನು ಖಂಡಿಸಬೇಕು. ಆರೋಪಿತರಿಗೆ ಗಲ್ಲುಶಿಕ್ಷೆಯಾಗಬೇಕು. ಪ್ರಧಾನಮಂತ್ರಿಗಳು ದೇಶದಲ್ಲಿನ ಎಲ್ಲರ ರಕ್ಷಣೆಯ ಜವಾಬ್ದಾರಿ ಹೊತ್ತಿದ್ದಾರೆ. ಹಿಂದುತ್ವವಾದಿಗಳು ನಡೆಸುತ್ತಿರುವ ಅತ್ಯಾಚಾರಗಳನ್ನು ಖಂಡಿಸಿ ಸರ್ವಜನಾಂಗದ ತವರೂರಾದ ಭಾರತದಲ್ಲಿನ ಕೋಮುಸೌಹಾರ್ದತೆಯನ್ನು ರಕ್ಷಿಸಲು ಮುಂದಾಗಬೇಕು ಎಂದು ನ್ಯಾಷನಲ್ ಫ್ರಂಟ್ ಆಫ್ ಇಂಡಿಯಾದ ಜಿಲ್ಲಾ ಅಧ್ಯಕ್ಷೆ ನಸೀಮ್ ಹೇಳಿದರು.

**

ವಿಶ್ವಸಂಸ್ಥೆ ಕೂಡ ಭಾರತ ದೇಶದಲ್ಲಿ ಹೆಣ್ಣು ಮಕ್ಕಳು ಮತ್ತು ವಿಚಾರವಂತರು ಸುರಕ್ಷಿತವಾಗಿಲ್ಲ ಎಂದು ಎಚ್ಚರಿಸಿದೆ – ಎಸ್.ಜಿ. ವನಜ,ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಪ್ರತಿನಿಧಿ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT