ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನಪದ ನಮ್ಮ ದೇಹದ ರಕ್ತ ಇದ್ದಂತೆ - ಗೊ.ರು. ಚನ್ನಬಸಪ್ಪ

ವಿಶ್ವ ಜಾನಪದ ದಿನಾಚರಣೆ: ಹಿರಿಯ ಕಲಾವಿದರಿಗೆ ಸನ್ಮಾನ
Last Updated 22 ಆಗಸ್ಟ್ 2018, 12:03 IST
ಅಕ್ಷರ ಗಾತ್ರ

ರಾಮನಗರ: ‘ದೇಶವೆಂಬ ದೇಹದೊಳಗೆ ಜನಪದವು ರಕ್ತದಂತೆ ಬೆರೆದಿದ್ದು, ಅದನ್ನು ಕಡೆಗಣಿಸಿದರೆ ನಮ್ಮ ವಿನಾಶ ಖಂಡಿತ’ ಎಂದು ಜಾನಪದ ವಿದ್ವಾಂಸ ಗೊ.ರು. ಚನ್ನಬಸಪ್ಪ ಎಚ್ಚರಿಸಿದರು.

ಇಲ್ಲಿನ ಜಾನಪದ ಲೋಕದಲ್ಲಿ ಬುಧವಾರ ನಡೆದ ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು, ‘ಜನಪದ ಎಂಬುದು ದೇಸಿ, ಉಳಿದದ್ದೆಲ್ಲ ಪರದೇಸಿ. ಇಂದು ನಮ್ಮ ಊಟ–ಉಪಚಾರ, ವೇಷಭೂಷಣ ಎಲ್ಲವೂ ಪರದೇಸಿ ಆಗಿದ್ದರೂ ನಮ್ಮೊಳಗೆ ಹರಿದಿರುವ ನಮ್ಮ ಪೂರ್ವಜರ ರಕ್ತ ದೇಸಿಯೇ ಆಗಿದೆ. ನಮ್ಮ ತನವನ್ನು ಉಳಿಸಿಕೊಳ್ಳುವ ಕೆಲಸ ಆಗಬೇಕಿದೆ’ ಎಂದು ನುಡಿದರು.

‘ಇಂದು ಸಮಾಜದಲ್ಲಿ ನೈತಿಕ ವ್ಯಭಿಚಾರ ಹೆಚ್ಚಾಗಿದೆ. ಇದರಿಂದಾಗಿ ನಮ್ಮ ಚಾರಿತ್ರ್ಯಕ್ಕೆ ಬೆಂಕಿ ಬಿದ್ದು, ನಾವೆಲ್ಲ ಅದರ ಬೂದಿಯಲ್ಲಿ ಹೊರಳಾಡುತ್ತಿದ್ದೇವೆ’ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಎದೆಹಾಲಿನಂತಿರುವ ಜನಪದವನ್ನು ಪ್ರತಿಯೊಬ್ಬರೂ ಆಸ್ವಾದಿಸಬೇಕು. ಕಲಾವಿದರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸವನ್ನು ಸರ್ಕಾರಗಳು, ಸಂಘ–ಸಂಸ್ಥೆಗಳು ಮಾಡಬೇಕು ಎಂದು ಸಲಹೆ ನೀಡಿದರು.

ನಾಡಿನ ಜಾನಪದ ವಿಶ್ವವಿದ್ಯಾಲಯ, ವಿವಿಧ ವಿಶ್ವವಿದ್ಯಾಲಯಗಳಲ್ಲಿನ ಜಾನಪದ ವಿಭಾಗಗಳು, ಪರಿಷತ್ತು ಈ ದಿನವನ್ನು ಅತ್ಯಂತ ಸಂಭ್ರಮದಿಂದ ಆಚರಿಸಬೇಕು. ಇಲ್ಲವಾದಲ್ಲಿ ಅದು ಜಾನಪದಕ್ಕೆ ನಾವು ಬಗೆಯುವ ದ್ರೋಹ ಎಂದು ಎಚ್ಚರಿಸಿದರು.

ಕರ್ನಾಟಕ ಸಾಹಸಕಲಾ ಅಕಾಡೆಮಿಯ ಅಧ್ಯಕ್ಷ ಹಾಸನ ರಘು ಮಾತನಾಡಿ, ಸರ್ಕಾರಗಳು ಜಾನಪದ ದಿನವನ್ನು ಅಧಿಕೃತವಾಗಿ ಗೆಜೆಟ್ ಪ್ರಕಟಣೆ ಹೊರಡಿಸಿ, ಅದರ ಆಚರಣೆಗೆ ಒತ್ತು ನೀಡಬೇಕು ಎಂದು ಆಗ್ರಹಿಸಿದರು.

ಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ ಮಾತನಾಡಿ, ಶಾಲೆ ಕಾಲೇಜು ಶಿಕ್ಷಣದಲ್ಲಿ ಜನಪದವೂ ಒಂದು ಕಡ್ಡಾಯ ವಿಷಯವಾಗಬೇಕು. ಅಖಿಲ ಭಾರತ ಮಟ್ಟದಲ್ಲಿ ಇದಕ್ಕೆಂದೇ ಪ್ರತ್ಯೇಕ ಅಕಾಡೆಮಿಯನ್ನು ಕೇಂದ್ರ ಸರ್ಕಾರ ಸ್ಥಾಪಿಸಬೇಕು. ಹಾವೇರಿಯಲ್ಲಿರುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯಕ್ಕೆ ಶಕ್ತಿ ತುಂಬುವ ಕೆಲಸ ಆಗಬೇಕು ಎಂದು ಒತ್ತಾಯಿಸಿದರು.

ಕಲಾವಿದರನ್ನು ಕೇವಲ ಸಭೆ–ಸಮಾರಂಭಗಳಲ್ಲಿ ದುಡಿಮೆಯ ವಸ್ತುವನ್ನಾಗಿ ಬಳಸಿಕೊಳ್ಳುತ್ತಿರುವುದು ವಿಷಾದನೀಯ. ನಮ್ಮೆಲ್ಲರನ್ನೂ ಒಗ್ಗೂಡಿಸುವ ಜಾನಪದದ ಮೂಲ ಸೆಲೆಯನ್ನು ಸರಿಯಾಗಿ ಬಳಸಿಕೊಳ್ಳುವ ಕೆಲಸ ಆಗಬೇಕು ಎಂದರು.

ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷ ಟಿ. ತಿಮ್ಮೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪರಿಷತ್ತಿನ ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ್‌, ಕಲಾವಿದೆಯರಾದ ಗಂಗಹುಚ್ಚಮ್ಮ, ಗೌರಮ್ಮ, ಅಖಿಲ ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟದ ಅಧ್ಯಕ್ಷ ಜೋಗಿಲ ಸಿದ್ದರಾಜು, ನರಸಿಂಹಮೂರ್ತಿ, ಎಂ.ಕೆ. ಸಿದ್ದರಾಜು, ಜಾನಪದ ಲೋಕದ ಆಡಳಿತಾಧಿಕಾರಿ ಕುರುವ ಬಸವರಾಜು, ರಂಗನಿರ್ದೇಶಕ ಬೈರ್ನಳ್ಳಿ ಶಿವರಾಮು ಇದ್ದರು.

ಸನ್ಮಾನ: ರಾಜಸ್ತಾನದ ಹಿರಿಯ ಕಲಾವಿದ ಸುರಂನಾಥ್‌ ಕಲಬೇಲಿಯಾ, ಧಾರವಾಡದ ಸೋಬಾನೆ ಗಾಯಕಿ ನಾಗವ್ವ ಹಲಗಿ, ಬೆಂಗಳೂರಿನ ಗೊರವರ ಕುಣಿತದ ಕಲಾವಿದ ಹೊನ್ನಯ್ಯ, ತಮಟೆ ಕಲಾವಿದ ಮುನಿಚೂಡಯ್ಯ, ಚನ್ನಪಟ್ಟಣದ ದೇವರ ಪದಗಳ ಗಾಯಕಿ ಚಲ್ಲಮ್ಮ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಕರ್ನಾಟಕ ಜಾನಪದ ಪರಿಷತ್ತು, ಅಖಿಲ ಭಾರತ ಬುಡಕಟ್ಟು ಕಲಾ ಪರಿಷತ್ತು, ಅಖಿಲ ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟ, ಕರ್ನಾಟಕ ಸಾಹಸ ಕಲಾ ಅಕಾಡೆಮಿ ಹಾಗೂ ಸಂಭ್ರಮ ಸಂಘಟನೆಯ ಸಹಯೋಗದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
******************
ರಾಜಕಾರಣಿಗಳಿಗೆ ಚುನಾವಣೆ ಬಂದಾಗ ಮಾತ್ರ ಜನಪದ ಕಲಾವಿದರು ನೆನಪಾಗುತ್ತಾರೆ. ನಮ್ಮ ಸಮಷ್ಟಿಯ ಹಿತಕ್ಕೆ ಅವರು ಬಳಕೆ ಆಗುತ್ತಿಲ್ಲ
- ಗೊ.ರು, ಚನ್ನಬಸಪ್ಪ,ಜಾನಪದ ವಿದ್ವಾಂಸ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT