ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತರ ಸಂಗ

Last Updated 21 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ನಾಗೇಶ್ ಜೆ. ನಾಯಕ

ಒಂದು ಊರಿನಲ್ಲಿ ಕಳ್ಳರ ಗುಂಪೊಂದಿತ್ತು. ಜನ ಮನೆಗಳಿಗೆ ಬೀಗ ಹಾಕಿ ಬೇರೆ ಊರುಗಳಿಗೆ ಅಥವಾ ಕೆಲಸಕ್ಕೆ ತೆರಳಿದ ಸಂದರ್ಭಗಳಲ್ಲಿ ಹೊಂಚು ಹಾಕಿ ಮನೆಯಲ್ಲಿದ್ದುದನ್ನೆಲ್ಲ ದೋಚಿ ಪರಾರಿಯಾಗುತ್ತಿತ್ತು ಆ ಗುಂಪು. ಕಳ್ಳರ ಗುಂಪಿನ ಮುಖಂಡನು ಸದಸ್ಯರಿಗೆ ಕಳ್ಳತನದ ಬಗ್ಗೆ ಕೆಲವು ನಿಯಮಗಳನ್ನು ಹೇಳಿಕೊಟ್ಟಿದ್ದ. ಮುಖ್ಯ ನಿಯಮವೆಂದರೆ ಸಾಧು-ಸಂತರ ಪ್ರವಚನಗಳಿಗೆ ಯಾವ ಕಾರಣಕ್ಕೂ ಕಿವಿಗೊಡದೇ ಇರುವುದು.

ಅವನ ಅಂಜಿಕೆ ಏನಾಗಿತ್ತೆಂದರೆ, ‘ಒಂದು ವೇಳೆ ಸಂತರ ಸಂದೇಶಗಳನ್ನು ಕೇಳಿ, ಗುಂಪಿನ ಸದಸ್ಯರ ಮನಸ್ಸು ಬದಲಾಗಿ ಕಳ್ಳತನ ಮಾಡುವುದನ್ನು ಬಿಟ್ಟು ಸಭ್ಯರಾಗಿ ಬದುಕಲು ತೊಡಗಿದರೆ, ನನ್ನ ಜೀವನ ಹೇಗೆ ನಡೆಯಬೇಕು?’ ಅದಕ್ಕಾಗಿ ಆತ ಎಲ್ಲರಿಗೂ ಕಟ್ಟುನಿಟ್ಟಾದ ಸೂಚನೆ ನೀಡಿದ್ದ.

ಹೀಗಿರಲು ಒಂದು ದಿನ ಊರಿನಲ್ಲಿ ಸಂತರ ಪ್ರವಚನ ಏರ್ಪಾಡು ಮಾಡಲಾಯಿತು. ಪ್ರತಿದಿನ ಸಂಜೆ ಊರಿನ ಜನರೆಲ್ಲ ಮನೆಯ ಬಾಗಿಲು ಹಾಕಿಕೊಂಡು ಸಂತರ ಮಾತುಗಳನ್ನು ಕೇಳಲು ಊರಾಚೆಯ ಮೈದಾನದಲ್ಲಿ ತಂಡೋಪತಂಡವಾಗಿ ಸೇರತೊಡಗಿದರು. ಕಳ್ಳತನಕ್ಕೆ ಇದೇ ಸುಸಮಯ ಎಂದುಕೊಂಡು ನಾಲ್ಕು ಜನ ಕಳ್ಳರು ಜನರ ಮನೆಗಳಿಗೆ ಮಾರುವೇಷದಲ್ಲಿ ನುಗ್ಗಿ ಹಣ, ಒಡವೆ, ಬೆಲೆಬಾಳುವ ವಸ್ತುಗಳನ್ನೆಲ್ಲ ಮೂಟೆ ಕಟ್ಟಿಕೊಂಡು ಯಾರಿಗೂ ಕಾಣದ ಹಾಗೆ ಕತ್ತಲಿನಲ್ಲಿ ಬಿರಬಿರನೆ ನಡೆಯತೊಡಗಿದರು.

ಆ ಕಳ್ಳರು ಸಾಗಬೇಕಿದ್ದ ದಾರಿ ಸಂತರು ಪ್ರವಚನ ಮಾಡುವ ಸ್ಥಳದ ಮೂಲಕವೇ ಸಾಗುತ್ತಿತ್ತು. ಕಳ್ಳರ ತಂಡದ ಹಿರಿಯ ಸದಸ್ಯ, ‘ಎಲ್ಲರೂ ಕಿವಿಗಳಿಗೆ ಹತ್ತಿ ಇಟ್ಟುಕೊಳ್ಳಿ. ಸಂತರ ಮಾತುಗಳು ನಮ್ಮ ಕಿವಿ ತಲುಪಬಾರದು. ನಾಯಕ ಹೇಳಿದ ಮಾತು ನೆನಪಿದೆಯಲ್ಲ’ ಎಂದ. ಅವನ ಮಾತಿಗೆ ಅನುಗುಣವಾಗಿ ಎಲ್ಲರೂ ಕಿವಿಗೆ ಹತ್ತಿ ಇಟ್ಟುಕೊಂಡರು. ಆದರೆ, ಈ ಕಳ್ಳರನ್ನು ಹಿಂಬಾಲಿಸುತ್ತಿದ್ದ ಊರಿನ ವ್ಯಕ್ತಿಯೊಬ್ಬ, ‘ಇವರು ಲೂಟಿ ಮಾಡಿ ತಂದಿರುವ ಹಣ, ಒಡವೆಯನ್ನೆಲ್ಲ ಹೇಗಾದರೂ ಮಾಡಿ ಲಪಟಾಯಿಸಬೇಕು’ ಎಂಬ ಯೋಚನೆಯಲ್ಲಿ ಮೈತುಂಬ ವಿಕಾರವಾಗಿ ಬಣ್ಣ ಬಳಿದುಕೊಂಡು ದೆವ್ವದ ತರಹ ಒಮ್ಮೆಲೇ ಮುಂದೆ ಬಂದು ನಿಂತ. ದೆವ್ವವೇ ಬಂತೆಂದು ಕಳ್ಳರಿಗೆಲ್ಲ ನಡುಕ ಶುರುವಾಯಿತು. ಹೆಗಲ ಮೇಲಿನ ಮೂಟೆಗಳನ್ನೆಲ್ಲ ಅಲ್ಲಿಯೇ ಎಸೆದು ಪ್ರಾಣ ಉಳಿದರೆ ಸಾಕೆಂದು ಓಡಹತ್ತಿದರು. ಆದರೆ ಅವರ ಪೈಕಿ ಒಬ್ಬ ಕಳ್ಳ ಮಾತ್ರ ಅಂಜಲಿಲ್ಲ. ದೆವ್ವದ ವೇಷ ಹಾಕಿದ್ದ ವ್ಯಕ್ತಿಗೆ ಅಲ್ಲಿಯೇ ಬಿದ್ದಿದ್ದ ಕಟ್ಟಿಗೆ ತುಂಡಿನಿಂದ ಬಾರಿಸತೊಡಗಿದ. ದೆವ್ವದ ವೇಷ ಧರಿಸಿದ್ದ ವ್ಯಕ್ತಿ ಹೊಡೆತ ತಾಳಲಾರದೆ ಕಾಲಿಗೆ ಬುದ್ಧಿ ಹೇಳಿದ.

ಇದನ್ನೆಲ್ಲ ದೂರದಿಂದ ನೋಡುತ್ತಿದ್ದ ಇನ್ನುಳಿದ ಕಳ್ಳರು ಆಶ್ಚರ್ಯದಿಂದ ಅವನ ಬಳಿ ಬಂದರು. ‘ನಿನಗೆ ದೆವ್ವ ಕಂಡರೆ ಭಯವಾಗುವುದಿಲ್ಲವೇ? ಅದು ಹೇಗೆ ನೀನು ಆ ದೆವ್ವವನ್ನು ಓಡಿಸಿದೆ’ ಎಂದು ಕೇಳಿದರು. ಆಗ ಆ ಕಳ್ಳ ಅವರಿಗೆ ಹೀಗೆ ಹೇಳಿದ: ‘ನನ್ನನ್ನು ಕ್ಷಮಿಸಿ, ಸಂತರು ಪ್ರವಚನ ಮಾಡುತ್ತಿದ್ದ ದಾರಿಯಲ್ಲಿ ಬರುತ್ತಿದ್ದಾಗ ನಾನು ಕಿವಿಯಲ್ಲಿ ಇಟ್ಟಿದ್ದ ಹತ್ತಿಯ ತುಂಡು ಕೆಳಗೆ ಬಿತ್ತು. ಆಗ ಆ ಕ್ಷಣಕ್ಕೆ ಅವರು ಹೇಳುತ್ತಿದ್ದ ಮಾತುಗಳು ಕಿವಿಗೆ ಬಿದ್ದವು. ದೆವ್ವ ಭೂತಗಳೆಲ್ಲ ನಮ್ಮ ದುರ್ಬಲ ಮನಸ್ಸಿನ ಭ್ರಮೆಗಳು. ದೆವ್ವ ಭೂತಗಳು ನಿಜಕ್ಕೂ ಇಲ್ಲ. ನೀವು ಅವುಗಳಿಗೆ ಹೆದರಬೇಕಿಲ್ಲ ಎಂದು ಸಂತರು ಹೇಳುತ್ತಿದ್ದರು. ಹಾಗಾಗಿ ದೆವ್ವದಂತೆ ನಟಿಸುತ್ತಿದ್ದ ಆ ವ್ಯಕ್ತಿಯನ್ನು ಥಳಿಸಿದೆ’.

ಅದನ್ನು ಕೇಳಿದ ಉಳಿದವರೆಲ್ಲ, ‘ಸಂತರ ಮಾತುಗಳು ಒಂದು ಕ್ಷಣ ನಮ್ಮ ಕಿವಿಗೆ ಬಿದ್ದಿದ್ದಕ್ಕೇ ನಮ್ಮಲ್ಲಿ ಈ ಬದಲಾವಣೆಯಾಯಿತು. ಇನ್ನು ಅವರ ಮಾತುಗಳನ್ನು ಸಂಪೂರ್ಣವಾಗಿ ಕೇಳಿದ್ದರೆ?’ ಎಂದು ಆಲೋಚಿಸಿದರು. ಅಂದಿನಿಂದ ಅವರು ಸಂತರ ಪ್ರವಚನಗಳನ್ನು ಆಗಾಗ ಕೇಳಿಸಿಕೊಳ್ಳುತ್ತ, ಕಳ್ಳತನ ಬಿಟ್ಟು ನಿಯತ್ತಿನಿಂದ ಬದುಕಲು ಆರಂಭಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT