ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಅಹಂಮ್ಮಿನ ಕೋಟೆಯಲಿ...

Last Updated 21 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ರಾಘವೇಂದ್ರ ಈ ಹೊರಬೈಲು

‘ನಾನ್ಯಾಕ್ರೀ ಅವ್ರಿಗೆ ಗುಡ್ ಮಾರ್ನಿಂಗ್, ಗುಡ್ ಇವನಿಂಗ್ ವಿಷ್ ಮಾಡ್ಬೇಕು? ನಾನು ಸ್ಕೂಲ್‌ಗೇ ಹೆಡ್ಮಾಸ್ಟ್ರು, ನಾನ್ ಹೇಳಿದ ಹಾಗೆ ನಡೀಬೇಕು, ನಾನ್ಯಾಕ್ರೀ ಬೇರೆಯವರ್ ಮಾತು ಕೇಳ್ಬೇಕು?’

‘ಹೋಗ್ರಿರೀ ನಾನ್ಯಾಕೆ ವಿಷ್ ಮಾಡ್ಲಿ? ನನ್ ಎಕ್ಸ್‌ಪೀರಿಯನ್ಸ್ ಅಷ್ಟು ವಯಸ್ಸಾಗಿಲ್ಲ. ಹೆಡ್ಮಾಸ್ಟ್ರು ಆಗ್ಬಿಟ್ರೆ? ನಂಗ್ ಗೊತ್ತಿರೋದ್ರಲ್ಲಿ ಒಂದ್ ಪರ್ಸೆಂಟ್ ನಾಲೆಡ್ಜ್ ಇಲ್ಲ. ನಾನು ಯಾರಿಗೂ ತಲೆ ಬಾಗೊಲ್ಲಾರೀ’

ಮೇಲಿನ ಸಂಭಾಷಣೆ ಗಮನಿಸಿ. ಒಬ್ಬ ಮೇಲಧಿಕಾರಿಗೆ ತಾನು ಹೇಳಿದಂತೆಯೇ ಎಲ್ಲಾ ನಡೀಬೇಕು ಅನ್ನೋ ಅಹಂ ಎದ್ದು ಕಾಣ್ತಾ ಇದೆ. ಕೆಳ ಅಧಿಕಾರಿಗೆ ತಾನು ಅನುಭವದಲ್ಲಿ ಹಿರಿಯ. ನಾನ್ಯಾಕೆ ಎಲ್ಲದಕ್ಕೂ ತಲೆ ಬಗ್ಗಿಸಬೇಕು ಅನ್ನೋ ಅಹಂ. ಒಂದು ಶಾಲೆಯನ್ನು ಅಭಿವೃದ್ಧಿಯ ಕಡೆ ನಡೆಸಬೇಕಾದರೆ ನಾಯಕರಾದ ಮುಖ್ಯಶಿಕ್ಷಕರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಾಗಬೇಕು. ಹಾಗೆಯೇ ತನಗೆ ಅದೆಷ್ಟೇ ಹೆಚ್ಚಿನ ಅನುಭವವಾಗಿದ್ದರೂ ತನ್ನ ಮೇಲಧಿಕಾರಿ ಹೇಳಿದ ಸಲಹೆಯನ್ನು ತೆಗೆದುಕೊಳ್ಳುವ ಮನಸ್ಥಿತಿ ಒಬ್ಬ ಸಹಶಿಕ್ಷಕನಿಗೂ ಇರಬೇಕಲ್ಲವೇ? ಇರದಿದ್ದರೆ ಮನಸ್ಸು ಮುರಿಯುತ್ತದೆ, ಶಾಲೆ ಒಡೆದು ಛಿದ್ರವಾಗುತ್ತದೆ.

‘ನಾನು ಗೆಸ್ಟ್ ಆಗಿ ಬರಬೇಕಾದ್ರೆ ಅವನು ಬೇಡ ಕಣ್ರಿ, ಒಂದು ವೇಳೆ ಅವನು ಬರಲೇಬೇಕು ಅಂದ್ರೆ ನಾನು ಬರಲ್ಲ. ನನ್ ಹತ್ರಾನೇ ಓದಿರೋ ಹುಡುಗ ಅವನು, ನಾನೇ ಅವ್ನಿಗೆ ಈ ಹಂತಕ್ಕೆ ಬರೋ ಹಾಗೆ ಮಾಡಿದ್ದು. ಒಂದ್ವೇಳೆ ನಾನಿಲ್ಲ ಅಂದಿದ್ರೆ, ಅವನು ಉದ್ದಾರ ಆಗಕ್ಕೆ ಸಾಧ್ಯನೇ ಇರ್ಲಿಲ್ಲ. ಈಗ ತಾನೇ ಏನೋ ದೊಡ್ಡ ಮನುಷ್ಯ ಅನ್ನೋ ಹಾಗೆ ಆಡ್ತಾನೆ. ಅಂಥವನು ಬಂದ್ರೆ ನಂಗೆ ಆಗಿಬರೋಲ್ಲ ನೋಡ್ರಿ.’

‘ಅವರು ಬಂದ್ರೆ ನಾನು ಬರೋಲ್ಲಾರೀ, ನಮಗೆ ಪಾಠ ಮಾಡಿರ್ಬೌದು, ಆದ್ರೆ ನನ್ನ ಹತ್ರ ಪ್ರತಿಭೆ ಇಲ್ಲ ಅಂದ್ರೆ ಅವರು ಏನು ಮಾಡಿದ್ರೂ ಏನು ಪ್ರಯೋಜನ? ಯಾರೇನು ನನ್ನ ಕೈ ಹಿಡ್ಕೊಂಡು ಬೆಳ್ಸಿಲ್ಲ. ಸ್ವಪ್ರಯತ್ನ ಮತ್ತು ಪ್ರತಿಭೆಯಿಂದ ಬೆಳೆದಿದೀನಿ. ಆದ್ರೆ ಎಲ್ಲಾ ಕಡೆ ‘ನಾನೇ ಅವನನ್ನು ಬೆಳ್ಸಿದ್ದು, ನಾನಿಲ್ಲ ಅಂದಿದ್ರೆ ಅವನು ಉದ್ಧಾರ ಆಗ್ತಿರ್ಲಿಲ್ಲ’ ಅಂತ ಹೇಳ್ಕೊಂಡು ಓಡಾಡ್ತಾರೆ, ಅಂತವರು ಬರೋ ಕಡೆಗೆ ಬರೋದಕ್ಕೆ ನಂಗೆ ಇಷ್ಟ ಆಗಲ್ಲ ಕಣ್ರೀ’. ಒಂದು ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಬರಲು ಆಹ್ವಾನಿಸಿದಾಗ ಇಬ್ಬರು ಗಣ್ಯರಾಡಿದ ಮಾತುಗಳಿವು. ನನ್ನಿಂದಲೇ ಬೆಳೆದ ಶಿಷ್ಯ ಅನ್ನುವ ಗುರು, ಯಾರ ಮಾರ್ಗದರ್ಶನವೂ ಇಲ್ಲದೆ ನಾನೇ ಬೆಳದೆ ಎನ್ನುವ ಗುರು. ಈ ಇಬ್ಬರದೂ ಇಲ್ಲಿ ಅಹಂ.

ಮೇಲಿನ ಸನ್ನಿವೇಶಗಳನ್ನು ನೋಡಿ. ‘ನಾನು’ ಅನ್ನೋ ಪದ ಅದೆಷ್ಟು ಬಾರಿ ಪುನರಾವರ್ತನೆಯಾಗಿದೆ. ಕಾರಣ, ಇಂದಿನ (ಅಷ್ಟೇ ಯಾಕೆ ಹಿಂದಿನ ಕೂಡಾ) ಜಗತ್ತೇ ‘ನಾನು’ ಎಂಬ ಬಡಾಯಿತನದ ಮೇಲೆ ನಿಂತಿದೆ. ಎಲ್ಲರಿಗೂ ನಾನೇ ಹೆಚ್ಚು, ನನ್ನಿಂದಲೇ ಜಗತ್ತು ಎಂಬ ಕುರುಡುತನ ಹಾಗೂ ಶೋಕಿ. ಇಲ್ಲಿರುವವು ಕೇವಲ ಕೆಲವೇ ಸನ್ನಿವೇಶಗಳು. ಇಂಥ ಅನೇಕ ಸನ್ನಿವೇಶಗಳನ್ನು ನಮ್ಮ ಸುತ್ತ ಮುತ್ತ ಕಂಡಿರುತ್ತೇವೆ, ಕೇಳಿರುತ್ತೇವೆ, ಎಷ್ಟೋ ಸಾರಿ ಸ್ವತಃ ಅನುಭವಿಸಿರುತ್ತೇವೆ.

ಇಲ್ಲಿ ಒಬ್ಬರಿಗೆ ಇನ್ನೊಬ್ಬರ ಮೇಲೆ ಅಂತಹ ದ್ವೇಷ ಅಥವಾ ಹಗೆತನವಿಲ್ಲ. ಆದ್ರೆ ನಾನೇ ಹೆಚ್ಚು ಅನ್ನೋ ಅಹಂ ಇದೆ. ಇಂತಹ ಅಹಂನಿಂದಲೇ ಸುಂದರವಾದ ಸಂಬಂಧದಲ್ಲಿ ಬಿರುಕು ಮೂಡಿದೆ. ಇದೇ ಸಮಯಕ್ಕೆ ಕಾಯುವ ಕೆಲವು ಸಮಯಸಾಧಕರು ಆ ಎರಡೂ ಕಡೆಯವರಿಗೂ ವಿಷದ ಬೀಜ ಬಿತ್ತಿ, ಚಿಕ್ಕದಾಗಿದ್ದ ಬಿರುಕನ್ನು ದೊಡ್ಡ ಕಂದಕವನ್ನಾಗಿಸುತ್ತಾರೆ. ಮುಂದೆ ಸುಂದರವಾದ ಬಾಂಧವ್ಯ ಬೆಳೆಯಬೇಕಾದ ಸಂಬಂಧ ಕೊಳೆತು ದುರ್ನಾತ ಹೊಡೆಯುತ್ತದೆ. ಮೇಲಿನ ಸನ್ನಿವೇಶಗಳನ್ನೇ ನೋಡುವುದಾದರೆ, ಇಲ್ಲಿ ಯಾರೋ ಒಬ್ಬರು ತಮ್ಮ ಅಹಂ ಅನ್ನು ಬದಿಗೊತ್ತಿ, ರಾಜಿಯಾಗಲು ಹೊರಟರೆ ಪ್ರಪಂಚವೇನೂ ಮುಳಗುವುದಿಲ್ಲ. ಅಥವಾ ಅವರ ಮರ್ಯಾದೆಗೇನೂ ಧಕ್ಕೆ ಬರುವುದಿಲ್ಲ. ಬದಲಾಗಿ ಸುಂದರ ಸಂಬಂಧವುಳಿಯುತ್ತದೆ. ಆದರೆ ಹಾಗಾಗದೆ ನಾನ್ಯಾಕೆ ಇನ್ನೊಬ್ಬರಿಗೆ ತಲೆಬಾಗಬೇಕು ಎಂಬ ಹುಂಬ ಅಹಂನಿಂದ ಸಂಬಂಧ ಹಳ್ಳ ಹಿಡಿದಿದೆ.

‘ಫಲಭರಿತ ಮರ ಬಾಗುತ್ತದೆ, ಬೋಳು ಮರ ನಿಮಿರಿ ನಿಲ್ಲುತ್ತದೆ’ ಎಂಬ ಸಾರ್ವತ್ರಿಕ ಸತ್ಯದಂತೆ ನಮ್ಮ ಅಹಂಕಾರ ನಮ್ಮೊಳಗಿನ ಜೊಳ್ಳುತನವನ್ನು ಸೂಚಿಸಿದರೆ, ಬಾಗುವಿಕೆ ವಿನಯವನ್ನು ಸೂಚಿಸುತ್ತಾ ಸಂಬಂಧವನ್ನು ಗಾಢವಾಗಿಸುವ ಅಸ್ತ್ರವಾಗುತ್ತದೆ.

‘ಸ್ವರ್ಗಕ್ಕೆ ಹೋಗುವವರು ಯಾರು?’ ಎಂಬ ಪ್ರಶ್ನೆಗೆ ‘‘ನಾನು’ ಹೋದರೆ ಹೋದೇನು’ ಎಂಬ ಕನಕದಾಸರ ಉತ್ತರ ಎಂದೆಂದಿಗೂ ಸತ್ಯ. ಇಲ್ಲಿ ಸ್ವರ್ಗವೆಂದರೆ ಯಾರೂ ಕಾಣದಿರುವ ಅದ್ಯಾವುದೋ ಕಲ್ಪನಾ ಲೋಕವಲ್ಲ. ನಮ್ಮ ಕಣ್ಣ ಮುಂದೆಯೇ ಇರುವ ಸೌಹಾರ್ದಯುತವಾದ, ಎಲ್ಲರನ್ನೂ ಪ್ರೀತಿಸುತ್ತಾ, ಪ್ರೀತಿಯನ್ನು ಪಡೆಯುತ್ತಾ ಸಾಗುವ ಸಮರಸದ ಜೀವನ. ನಮ್ಮೊಳಗಿನ ‘ನಾನು’ ಅನ್ನೋ ಅಹಂ ಕಳಚುವವರೆಗೆ ನಾವು ಯಾರೊಂದಿಗೂ ರಾಜಿ ಆಗಲ್ಲ. ‘ನಾನು’ ಎಂಬ ಅಹಂಕಾರವನ್ನು ತೊರೆಯದೇ ಹೋದರೆ, ಸ್ವರ್ಗದಂತಹ ಸಂಬಂಧಕ್ಕೆ, ಸೌಹಾರ್ದತೆಗೆ, ಪಡೆಯಬಹುದಾದ ಪ್ರೀತಿಗೆ ನಾವೇ ನಮ್ಮ ಕೈಯಾರೆ ಬೆಂಕಿ ಇಟ್ಟುಕೊಂಡಂತೆ.

‘ಅಹಂಕಾರ ಎಂಬುದು ಅಧಃಪತನಕ್ಕೆ ದಾರಿ’ ಎಂಬ ಸತ್ಯವನ್ನು ಅದೆಷ್ಟೋ ಮಹನೀಯರು ಸಾರಿ ಹೋದರೂ ನಾವು ಅಹಂಕಾರವನ್ನು ಮೆಟ್ಟಿ ನಿಲ್ಲಲಾರದೆ, ಅದೊಂದು ಸಿಂಹಾಸನವೇನೋ ಎಂಬಂತೆ ಹೊತ್ತುಕೊಂಡು ಬದುಕುತ್ತಿದ್ದೇವೆ. ಇಂತಹ ಸಂಬಂಧಕಂಟಕವಾದ ಅಹಂನ್ನು ತೊರೆದು, ಎಲ್ಲರೊಂದಿಗೂ ಕಲೆತು, ಬೆರೆತು, ಬಾಗಿ ಬಾಳಿದರೆ ಸ್ವರ್ಗಸುಖ ಭೂಮಿಯಲ್ಲೇ ದೊರಕುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT