ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾರ್ಟ್‌ಫೋನ್‌ ಕಾಲದ ಪುಸ್ತಕ ಸಂಸ್ಕೃತಿ

Last Updated 21 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

‘...ಸಂಪರ್ಕ ಸಾಧನಗಳಲ್ಲಿ ಕ್ರಾಂತಿಯಾಗಿದ್ದರೂ, ಅನುಭವ, ಆಲೋಚನೆ, ವಿಚಾರ, ವಿಷಯಗಳ ಸಂವಹನ ಮತ್ತು ಹಸ್ತಾಂತರಕ್ಕೆ ಅತ್ಯಂತ ಅಗ್ಗದ ಮತ್ತು ಕ್ಷಿಪ್ರ ವಾಹಕಗಳೆಂದರೆ ಇಂದಿಗೂ ಪುಸ್ತಕಗಳೇ...’ ಇದು ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಆಡಿದ್ದ ಮಾತುಗಳು.

ಅವರು ಈ ಮಾತುಗಳನ್ನು ಹೇಳಿದ್ದು 1998ರ ಸುಮಾರಿಗೆ. ಆ ಸಂದರ್ಭದಲ್ಲಿ ಭಾರತದಲ್ಲಿ ಮೊಬೈಲ್‌ ಕ್ರಾಂತಿ ಆಗಿರಲಿಲ್ಲ. ಮೊಬೈಲ್‌ ಫೋನುಗಳು ಜನರ ಕಿಸೆಯಲ್ಲಿ ಬೆಚ್ಚಗೆ ಕುಳಿತಿರಲಿಲ್ಲ. ಆಗ ಅವುಗಳ ಬೆಲೆ ಕಿಸೆಗೆ ಹಗುರವಾಗಿಯೂ ಇರಲಿಲ್ಲ. ತೇಜಸ್ವಿ ಅವರು ತಮ್ಮ ಮಾತುಗಳನ್ನು ಮುಂದುವರಿಸಿ, ‘ಕಾಲದ ಅಗ್ನಿ‍ಪರೀಕ್ಷೆಯನ್ನು ನಿರಾಯಾಸವಾಗಿ ಗೆದ್ದಿರುವ ಪುಸ್ತಕಗಳು ಜ್ಞಾನದ ನೀರನ್ನು ಕಡಿಮೆ ಅದೃಷ್ಟವಂತರತ್ತ ಸರ್ವದಾ ಹರಿಸುತ್ತ ಬಂದಿರುವ ಗಂಗಾ ನದಿಗಳೆಂದೇ ಹೇಳಬಹುದು’ ಎಂದಿದ್ದರು.

ತೇಜಸ್ವಿ ಅವರು ಈ ಮಾತುಗಳನ್ನು ಹೇಳಿ ಇಪ್ಪತ್ತು ವರ್ಷಗಳು ಕಳೆದಿವೆ. ಗಂಗಾ ನದಿಯಲ್ಲಿ ಸಾಕಷ್ಟು ನೀರು ಹರಿದುಹೋಗಿದೆ. ಫೀಚರ್‌ ಫೋನ್‌ಗಳನ್ನು ಹಿಡಿಯಲು ಒದ್ದಾಡುತ್ತಿದ್ದ ತಲೆಮಾರು ಕೂಡ ಈಗ ಸ್ಮಾರ್ಟ್‌ಫೋನ್‌ಗಳನ್ನು ಆರಾಮವಾಗಿ ಹಿಡಿದುಕೊಂಡು ಅಂತರ್ಜಾಲದಲ್ಲಿ ಅಲೆಯುವುದನ್ನು ಕಲಿತುಕೊಂಡಿದೆ. ಸ್ಮಾರ್ಟ್‌ಫೋನ್‌ಗಳಷ್ಟೇ ಅಲ್ಲದೆ ಅಮೆಜಾನ್‌ ಕಿಂಡಲ್‌ನಂತಹ ಇ–ಪುಸ್ತಕ ಓದುವ ಸಾಧನಗಳು ಟೀಪಾಯ್‌ಗಳ ಮೇಲೆ ಕುಳಿತಿವೆ. ತೇಜಸ್ವಿ ಹೇಳಿದ್ದ ‘ಕಾಲದ ಅಗ್ನಿ‍ಪರೀಕ್ಷೆಯನ್ನು ನಿರಾಯಾಸವಾಗಿ ಗೆದ್ದಿರುವ ಪುಸ್ತಕಗಳು...’ ಮಾತು ಈ ಯುಗದಲ್ಲಿಯೂ ಪ್ರಸ್ತುತವಾಗಿಯೇ ಉಳಿದಿದೆಯೇ?

ಭಾರತದ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ಗಳು ಮೊದಲು ಕಾಣಿಸಿಕೊಂಡಿದ್ದು 2008-09ರ ಸುಮಾರಿಗೆ. ಸ್ಮಾರ್ಟ್‌ಫೋನ್‌ಗಳ ಪೈಕಿ ಭಾರತಕ್ಕೆ ಮೊದಲು ಬಂದಿದ್ದು ಆ್ಯಪಲ್‌ ಕಂಪನಿಯ ಐಫೋನ್‌. ನಂತರ ಬಂದಿದ್ದು ಆ್ಯಂಡ್ರಾಯ್ಡ್‌ ಫೋನ್‌ಗಳು. ಇ–ಪುಸ್ತಕಗಳನ್ನು ಓದಲೆಂದೇ ಸಿದ್ಧಪಡಿಸಿದ ಅಮೆಜಾನ್‌ ಕಿಂಡಲ್‌ ಸಾಧನ ಭಾರತದ ಮಾರುಕಟ್ಟೆಗೆ ಬಂದಿದ್ದು 2012ರಲ್ಲಿ. ಪುಸ್ತಕಗಳನ್ನು ಓದುವುದು ಮಾಹಿತಿ ಪಡೆಯಲು, ರಸಾನುಭವ ಪಡೆಯಲು ಎಂದು ಹೇಳುವುದಾದರೆ, 2008ರವರೆಗೆ ಪುಸ್ತಕಗಳಿಗೆ ಪ್ರತಿಸ್ಪರ್ಧಿಯಾಗಿ ಇದ್ದವು ಟಿ.ವಿ. ವಾಹಿನಿಗಳು, ರೇಡಿಯೊ ಮತ್ತು ವಿವಿಧ ಕಲಾಪ್ರಕಾರಗಳು ಎನ್ನಬಹುದು. ಆದರೆ ಈ ಎಲ್ಲ ಮಾಧ್ಯಮಗಳ ಜೊತೆಯಲ್ಲಿ ಪುಸ್ತಕ ಮಾಧ್ಯಮ ಜಿದ್ದಿಗೆ ಬಿದ್ದಿದ್ದಂತೆ ಕಾಣುವುದಿಲ್ಲ. ಹಾಗಾಗಿಯೇ ತೇಜಸ್ವಿ ಆ ಮಾತು ಹೇಳಿದ್ದಿರಬಹುದು. ಆದರೆ 2008ರ ನಂತರ...?

‘ಬ್ರಿಟನ್ನಿನಲ್ಲಿ ಮುದ್ರಿತ ಪುಸ್ತಕಗಳ ಮಾರಾಟ ಏರುಗತಿಯನ್ನು ಕಂಡುಕೊಂಡಿದೆ. ಇ– ಪುಸ್ತಕಗಳ ಮಾರಾಟ ಕಡಿಮೆ ಆಗುತ್ತಿದೆ. ಮುದ್ರಿತ ಪುಸ್ತಕಗಳ ಮಾರಾಟ ಹೆಚ್ಚುತ್ತಿರುವುದರ ಹಿಂದೆ ಇರುವುದು ಯುವ ಸಮುದಾಯ.

2016ರಲ್ಲಿ ಇ– ಪುಸ್ತಕಗಳ ಮಾರಾಟದಲ್ಲಿ ಶೇಕಡ 4ರಷ್ಟು ಕುಸಿತ ಆಗಿದೆ, ಮುದ್ರಿತ ಪುಸ್ತಕಗಳ ಮಾರಾಟ ಶೇಕಡ 7ರಷ್ಟು ಹೆಚ್ಚಳವಾಗಿದೆ’ ಎಂದು ಆ ದೇಶದ ಪ್ರತಿಷ್ಠಿತ ಪತ್ರಿಕೆ ‘ದಿ ಗಾರ್ಡಿಯನ್’ ವರದಿ ಮಾಡಿತ್ತು. ಈ ವರದಿಗೆ ಪತ್ರಿಕೆಯು ನೀಲ್ಸನ್‌ ಸಂಸ್ಥೆ ನೀಡಿದ ಅಂಕಿ–ಅಂಶಗಳನ್ನು ಆಧಾರವಾಗಿ ನೀಡಿತ್ತು. ಮುದ್ರಿತ ಪುಸ್ತಕಗಳ ಮಾರಾಟ ಹೆಚ್ಚಳ ಆಗುತ್ತಿದೆ ಎನ್ನುವ ವರದಿಗಳು ಅಮೆರಿಕದಿಂದಲೂ ಬರುತ್ತಿವೆ.

ಅಂಕಿ–ಅಂಶಗಳನ್ನೇ ಆಧಾರವಾಗಿ ಇಟ್ಟುಕೊಂಡು ವರದಿಗಳನ್ನು ನೀಡುವ ಸ್ಟ್ಯಾಟಿಸ್ಟಾ ಅಂತರ್ಜಾಲ ತಾಣದಲ್ಲಿ (https://goo.gl/hs9PDR) ಒಂದು ಮಾಹಿತಿ ಇದೆ. ಹಿರಿಯರಿಗೆ ಸಂಬಂಧಿಸಿದ ನಾನ್‌ ಫಿಕ್ಷನ್‌, ಮಕ್ಕಳಿಗೆ ಸಂಬಂಧಿಸಿದ ಫಿಕ್ಷನ್ ಮತ್ತು ನಾನ್‌ ಫಿಕ್ಷನ್‌ ಪುಸ್ತಕಗಳ ಮಾರಾಟ 2013ರ ನಂತರದ ವರ್ಷಗಳಲ್ಲಿ ಹೆಚ್ಚಳ ಆಗುತ್ತಿರುವುದನ್ನು ಈ ಅಂಕಿ–ಅಂಶಗಳು ಹೇಳುತ್ತಿವೆ. ಸ್ಮಾರ್ಟ್‌ಫೋನ್‌, ಕಿಂಡಲ್‌ನಂತಹ ಸಾಧನಗಳ ಬಳಕೆಯಲ್ಲಿ, ಇಂಟರ್ನೆಟ್‌ ಸಂಪರ್ಕದ ಪ್ರಮಾಣದಲ್ಲಿ ಭಾರತಕ್ಕಿಂತ ಬಹುಮುಂದೆ ಇರುವ ಬ್ರಿಟನ್ ಮತ್ತು ಅಮೆರಿಕದಲ್ಲಿ ಮುದ್ರಿತ ಪುಸ್ತಕಗಳ ಮಾರಾಟ ಈಚಿನ ವರ್ಷಗಳಲ್ಲಿ ಹೆಚ್ಚಾಗಿದೆ ಎಂದಾದರೆ, ಕರ್ನಾಟಕದಲ್ಲಿ ಏನಾಗುತ್ತಿದೆ ಎನ್ನುವ ಹುಡುಕಾಟವನ್ನು ವಿಶ್ವ ಪುಸ್ತಕ ದಿನದ (ಏಪ್ರಿಲ್‌ 23) ನೆವದಲ್ಲಿ ನಡೆಸಬಹುದಲ್ಲ?

ಕರ್ನಾಟಕದ ಪುಸ್ತಕ ಮಾರುಕಟ್ಟೆಯ ಗಾತ್ರ ಏನು, ಪುಸ್ತಕ ಮಾರುಕಟ್ಟೆಯ ವಾರ್ಷಿಕ ವಹಿವಾಟು ಎಷ್ಟು, ಎಲ್ಲ ಪುಸ್ತಕ ಪ್ರಕಾಶನ ಸಂಸ್ಥೆಗಳ ಒಟ್ಟು ಲಾಭ ಅಥವಾ ನಷ್ಟ ಎಷ್ಟು ಎಂಬ ಮಾಹಿತಿ ಒಂದೇ ಕಡೆ ಸಿಗುವ ವ್ಯವಸ್ಥೆ ಇಲ್ಲ. ಹಾಗಾಗಿ, ಕನ್ನಡ ಪುಸ್ತಕಗಳು ಮಾರುಕಟ್ಟೆಯಲ್ಲಿ ಹೇಗೆ, ಎಷ್ಟು ಮಾರಾಟ ಆಗುತ್ತಿವೆ ಎಂಬುದನ್ನು ಕಂಡುಕೊಳ್ಳುವುದು ಸುಲಭದ ಕೆಲಸವಲ್ಲ. ಆದರೆ, ಪುಸ್ತಕಗಳ ಪ್ರಮುಖ ಪ್ರಕಾಶಕರು ಮತ್ತು ಮಾರಾಟಗಾರರನ್ನು ಸಂಪರ್ಕಿಸಿದರೆ ಕನ್ನಡ ಪುಸ್ತಕಗಳ ಮಾರಾಟದ ಸ್ಥಿತಿ ಕುರಿತ ಸ್ಥೂಲ ನೋಟವಂತೂ ಸಿಗುತ್ತದೆ. ಕನ್ನಡ ಪುಸ್ತಕಗಳ ಮಾರಾಟ ಹೆಚ್ಚಾಯಿತೇ ಎಂಬ ಸರಳ ಪ್ರಶ್ನೆಗೆ, ಹೌದು ಮತ್ತು ಇಲ್ಲ ಎಂಬ ಎರಡೂ ಉತ್ತರಗಳು ಸಿಗುತ್ತವೆ.

ಚಲನೆಯಿಲ್ಲದ ಸ್ಥಿತಿ 
ಕನ್ನಡದ ಹಳೆಯ ಹಾಗೂ ಪ್ರಮುಖ ಪುಸ್ತಕ ಪ್ರಕಾಶನ ಸಂಸ್ಥೆಗಳಲ್ಲಿ ನವಕರ್ನಾಟಕ ಪ್ರಕಾಶನವೂ ಒಂದು. ‘ಬೇರೆ ಬೇರೆ ಪ್ರಕಾಶನ ಸಂಸ್ಥೆಗಳ ಪುಸ್ತಕಗಳನ್ನೂ ನಾವು ಮಾರಾಟ ಮಾಡುತ್ತೇವೆ. ನಮ್ಮ ಪ್ರಕಾಶನದ ಪುಸ್ತಕಗಳ ಮಾರಾಟ ಕಳೆದ ಎರಡು–ಮೂರು ವರ್ಷಗಳಿಂದ ಕಡಿಮೆ ಆಗುತ್ತಿದೆ. ಸಾಹಿತ್ಯ, ವಿಜ್ಞಾನ, ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಪುಸ್ತಕಗಳ ಮಾರಾಟ ಕಡಿಮೆ ಆಗುತ್ತಿದೆ. 2008ರಿಂದ 2015ರವರೆಗೆ ನಮ್ಮ ಪ್ರಕಾಶನದ ಪುಸ್ತಕಗಳ ಮಾರಾಟ ವಹಿವಾಟಿನ ಹೆಚ್ಚಳ ಪ್ರಮಾಣವು ವಾರ್ಷಿಕ ಶೇಕಡ 3ರಿಂದ 5ರಷ್ಟು ಇತ್ತು’ ಎನ್ನುತ್ತಾರೆ ನವಕರ್ನಾಟಕ ಪ್ರಕಾಶನದ ಕಾರ್ಯನಿರ್ವಾಹಕ ನಿರ್ದೇಶಕ ಎ.ಆರ್‌. ಉಡುಪ.

‘ವಹಿವಾಟು ಮೊತ್ತ ಹೆಚ್ಚುತ್ತಿದ್ದರೂ, ಪುಸ್ತಕಗಳ ಪ್ರತಿಗಳ ಮಾರಾಟ ಪ್ರಮಾಣ 2008ರ ನಂತರ ಹೆಚ್ಚಳವನ್ನೇನೂ ಕಾಣುತ್ತಿರಲಿಲ್ಲ. ಕಳೆದ ಮೂರು ವರ್ಷಗಳಿಂದ ಪ್ರತಿಗಳ ಮಾರಾಟ ಕಡಿಮೆ ಆಗುತ್ತಿದೆ’ ಎನ್ನುವ ಮಾಹಿತಿ ನೀಡಿದರು ಉಡುಪ.

ಪುಸ್ತಕಗಳ ಮಾರಾಟ ಕಡಿಮೆ ಆಗಿದೆ ಎನ್ನುವ ಮಾತನ್ನು ರಾಜ್ಯದ ಖ್ಯಾತ ಪುಸ್ತಕ ಮಾರಾಟಗಾರರಾದ ಸಪ್ನಾ ಬುಕ್‌ ಹೌಸ್‌ನ ವ್ಯವಸ್ಥಾಪಕ ದೊಡ್ಡೇಗೌಡ ಅವರೂ ಹೇಳುತ್ತಾರೆ. ‘ಪುಸ್ತಕ ಕೊಳ್ಳುವ ಪ್ರಮಾಣ ಮೂರರಿಂದ ಐದು ವರ್ಷಗಳ ಅವಧಿಯಲ್ಲಿ ಕಡಿಮೆ ಆಗಿದೆ. ರಾಜ್ಯದ ಸಾಕ್ಷರತಾ ಪ್ರಮಾಣ ಹೆಚ್ಚಾಗುತ್ತಿದೆ, ಜನಸಂಖ್ಯೆಯೂ ಹೆಚ್ಚಾಗುತ್ತಿದೆ. ಹೀಗಿರುವಾಗ ಪುಸ್ತಕ ಓದುವವರ ಸಂಖ್ಯೆ ಹೆಚ್ಚಾಗಬೇಕಿತ್ತು. ಆದರೆ, ಪುಸ್ತಕಗಳ ಮಾರುಕಟ್ಟೆಯಲ್ಲಿ ಮುನ್ನಡೆ ಕಾಣಿಸುತ್ತಿಲ್ಲ’ ಎನ್ನುತ್ತಾರೆ ಅವರು. ದೊಡ್ಡೇಗೌಡ ಅವರು ಉಲ್ಲೇಖಿಸಿದ ಇನ್ನೊಂದು ವಿಚಾರವನ್ನೂ ಇಲ್ಲಿ ಹೇಳಬೇಕು. ‘ನೋಟು ರದ್ದತಿ ಕ್ರಮ ಹಾಗೂ ಸರಕು ಮತ್ತು ಸೇವಾ ತೆರಿಗೆಯ (ಜಿ.ಎಸ್‌.ಟಿ) ಜಾರಿ ನಂತರದ ದಿನಗಳಲ್ಲಿ ಪುಸ್ತಕಗಳ ಮಾರಾಟ ಕಡಿಮೆ ಆಗಿದೆ. ನೋಟು ರದ್ದತಿಯ ನಂತರ ಪುಸ್ತಕಗಳ ಮಾರಾಟ ಅಂದಾಜು ಶೇಕಡ 25ರಷ್ಟರಿಂದ ಶೇಕಡ 30ರಷ್ಟು ಕಡಿಮೆ ಆಯಿತು’ ಎನ್ನುವುದು ಅವರು ಹೇಳುವ ಮಾತು.

ಪುಸ್ತಕಗಳಿಗೆ ಜಿ.ಎಸ್‌.ಟಿಯಿಂದ ವಿನಾಯಿತಿ ನೀಡಲಾಗಿದ್ದರೂ, ಮುದ್ರಣ, ಲೇಖಕರಿಗೆ ನೀಡುವ ರಾಯಧನಕ್ಕೆ ತೆರಿಗೆ ಇದೆ. ಹಾಗೆಯೇ ಪ್ರಕಾಶಕರಿಗೆ ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ ಸೌಲಭ್ಯ ಇಲ್ಲ. ಅದರ ಹೊರೆ ಪುಸ್ತಕ ಕೊಳ್ಳುವವರ ಹೆಗಲಿಗೆ ವರ್ಗವಾಗಿದೆ.

‘ಅಂಕಿತ ಪುಸ್ತಕ’ದ ಪ್ರಕಾಶ್ ಕಂಬತ್ತಳ್ಳಿ ಅವರು, ಕನ್ನಡ ಪುಸ್ತಕಗಳ ಮಾರಾಟ ಕಡಿಮೆ ಆಗುತ್ತಿರುವುದಕ್ಕೆ ಇನ್ನೊಂದು ಕಾರಣವನ್ನು ನೀಡುತ್ತಾರೆ. ‘ಸ್ಮಾರ್ಟ್‌ಫೋನ್‌ ಬಳಕೆ ಹೆಚ್ಚಿದ್ದಕ್ಕೂ ಕನ್ನಡ ಪುಸ್ತಕಗಳ ಮಾರಾಟ ಕಡಿಮೆ ಆಗಿದ್ದಕ್ಕೂ ಸಂಬಂಧ ಇಲ್ಲ. ಕನ್ನಡದಲ್ಲಿ ಕಲಿಯುವವರು ಕಡಿಮೆ ಆಗಿರುವ ಕಾರಣದಿಂದಾಗಿಯೇ ಕನ್ನಡ ಪುಸ್ತಕಗಳ ಮಾರಾಟ ಕಡಿಮೆ ಆಗುತ್ತಿದೆ. ಹಾಗಾಗಿ, ನಮಗೆ ತೊಂದರೆ ಆಗಿರುವುದು ಇಂದಿನ ಶಿಕ್ಷಣ ಕ್ರಮದಿಂದಾಗಿ’ ಎನ್ನುವುದು ಪ್ರಕಾಶ್ ಅವರ ಮಾತು. ‘ಪುಸ್ತಕಗಳ ಮಾರಾಟ ನಿರೀಕ್ಷಿತ ಮಟ್ಟದಲ್ಲಿ ನಡೆಯದ ಕಾರಣ ಬೆಂಗಳೂರು ಸೇರಿದಂತೆ ರಾಜ್ಯದ ಕೆಲವೆಡೆ ಪುಸ್ತಕದ ಅಂಗಡಿಗಳು ಬಾಗಿಲು ಮುಚ್ಚಿವೆ. ಹತ್ತು ವರ್ಷಗಳ ಅವಧಿಯಲ್ಲಿ ನಮ್ಮಲ್ಲಿ ಪುಸ್ತಕ ಮಾರಾಟ ಶೇಕಡ 10ರಷ್ಟು ಕಡಿಮೆ ಆಗಿದೆ’ ಎಂದು ಪ್ರಕಾಶ್‌ ತಿಳಿಸಿದರು.

ಕನ್ನಡದ ಪುಸ್ತಕಗಳ ಮಾರಾಟ ಕಡಿಮೆ ಆಗಿದೆ ಎನ್ನುವ ಮಾತನ್ನು ಖಚಿತ ದನಿಯಲ್ಲಿ ಕೆಲವು ಪುಸ್ತಕ ಮಾರಾಟಗಾರರು ಹೇಳುತ್ತಿದ್ದಾರೆ. ಹಾಗಾದರೆ, ಕನ್ನಡದ ಪುಸ್ತಕ ಪ್ರೇಮಿಗಳೆಲ್ಲ ಸ್ಮಾರ್ಟ್‌ಫೋನ್‌ ಅಥವಾ ಕಿಂಡಲ್‌ ಸಾಧನ ಬಳಸಿ ಪುಸ್ತಕ ಓದುತ್ತಿದ್ದಾರೆಯೇ? ಈ ಪ್ರಶ್ನೆಗೆ ಕೂಡ, ‘ಹೌದು, ಅವರೆಲ್ಲ ಚೂಟಿಯಾಗಿದ್ದಾರೆ. ಆಧುನಿಕ ಗ್ಯಾಜೆಟ್‌ಗಳನ್ನು ಬಳಸಿ ಪುಸ್ತಕ ಓದಿಕೊಳ್ಳುತ್ತಿದ್ದಾರೆ’ ಎನ್ನುವ ಸ್ಥಿತಿ ಇಲ್ಲ.

ಏಕೆಂದರೆ, ಕನ್ನಡದಲ್ಲಿ ಇ–ಪುಸ್ತಕಗಳ ಲಭ್ಯತೆಯೇ ಸರಿಯಾಗಿ ಇಲ್ಲ! ಇ– ಪುಸ್ತಕಗಳ ಮಾರಾಟದ ವಿಚಾರದಲ್ಲಿ ಜನಪ್ರಿಯತೆ ಗಳಿಸಿರುವ ಅಮೆಜಾನ್‌ ಕಿಂಡಲ್‌ನಲ್ಲಿ ಕನ್ನಡ ಪುಸ್ತಕಗಳನ್ನು ಹುಡುಕಿದರೆ ಕಾಣಿಸಿಗುವವು ಕೆಲವೇ ಕೆಲವು ಪುಸ್ತಕಗಳು. ಕುವೆಂಪು, ಕಾರಂತ, ತೇಜಸ್ವಿ, ಭೈರಪ್ಪ, ಲಂಕೇಶ್, ಅಡಿಗ... ಇವರ‍್ಯಾರ ಪುಸ್ತಕಗಳೂ ಅಲ್ಲಿ ಕಾಣಿಸುವುದಿಲ್ಲ. ಗೂಗಲ್‌ ಸಂಸ್ಥೆಯವರ ಪ್ಲೇಬುಕ್ಸ್‌ನಲ್ಲಿ ಕನ್ನಡದ ಕೆಲವು ಖ್ಯಾತನಾಮರ ಪುಸ್ತಕಗಳು ಇವೆಯಾದರೂ, ಅವುಗಳ ವಿನ್ಯಾಸ ಮೊಬೈಲ್‌ ಮೂಲಕ ಓದಲು ಬಹಳ ಕಷ್ಟವಾಗುವಂತೆ ಇದೆ! ಈ ಪುಸ್ತಕಗಳ ವಿನ್ಯಾಸವನ್ನು ಇಂಗ್ಲಿಷ್‌ ಪುಸ್ತಕಗಳ ಜೊತೆ ಹೋಲಿಸುವ ಗೋಜಿಗೆ ಹೋಗುವುದೇ ವ್ಯರ್ಥ.

‘ಜನ ಸ್ಮಾರ್ಟ್‌ಫೋನ್‌ ಬಳಸಿ ಪುಸ್ತಕಗಳನ್ನು ಓದುತ್ತಿದ್ದಾರೆ ಎನ್ನಲು ಸಾಧ್ಯವಿಲ್ಲ. ಅವರು ಅದರಲ್ಲಿ ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ಗಳ ಮೇಲೆ ಹೆಚ್ಚಿನ ಸಮಯ ವ್ಯಯಿಸುತ್ತಿದ್ದಾರೆ. ಆನ್‌ಲೈನ್‌ ಮಾಧ್ಯಮವೊಂದು ಕೆಲವು ವರ್ಷಗಳ ಹಿಂದೆ ನಮ್ಮ ಪ್ರಕಾಶನದ ಪುಸ್ತಕಗಳ ಡಿಜಿಟಲ್‌ ಆವೃತ್ತಿಯ ಮಾರಾಟದ ಹೊಣೆ ಹೊತ್ತುಕೊಂಡಿತ್ತು. ಆರಂಭದ ದಿನಗಳಲ್ಲಿ ಪ್ರತಿ ತಿಂಗಳೂ ಸರಾಸರಿ ಎರಡು ಸಾವಿರ ಡಿಜಿಟಲ್ ಪುಸ್ತಕಗಳು ಮಾರಾಟ ಆಗಿದ್ದೂ ಇದೆ. ಆದರೆ ಈಗ ತಿಂಗಳಿಗೆ ಅಂದಾಜು ಇನ್ನೂರು ಪುಸ್ತಕಗಳ ಮಾರಾಟ ಆಗುತ್ತಿದೆ’ ಎಂದು ತಿಳಿಸಿದರು ಉಡುಪ.

‘ಡಿಜಿಟಲ್‌ ಸ್ವರೂಪದಲ್ಲಿ ಪುಸ್ತಕಗಳನ್ನು ಮಾರಾಟ ಮಾಡುವವರು ಮೊದಲು ವೆಂಚರ್‌ ಕ್ಯಾಪಿಟಲಿಸ್ಟ್‌ಗಳಿಂದ ಬಂಡವಾಳ ತಂದು, ಆ ಹಣದಿಂದ ಗ್ರಾಹಕರಿಗೆ ಭಾರಿ ಪ್ರಮಾಣದ ರಿಯಾಯಿತಿಗಳನ್ನು ನೀಡುತ್ತಿದ್ದರಂತೆ. ಕಾಲಕ್ರಮೇಣ ಆ ರಿಯಾಯಿತಿಗಳೆಲ್ಲ ನಿಂತವು. ಡಿಜಿಟಲ್ ಪುಸ್ತಕಗಳ ಮಾರಾಟ ಕೂಡ ಕಡಿಮೆ ಆಯಿತು’ ಎಂಬ ವಿವರವನ್ನು ಉಡುಪ ನೀಡಿದರು. ಅವರ ಮಾತುಗಳನ್ನು ಆಲಿಸಿದಾಗ ‘ಕನ್ನಡದ ಓದುಗ ಡಿಜಿಟಲ್‌ ಪುಸ್ತಕಗಳ ಕಡೆ ಮುಖ ಮಾಡಿರುವುದು ತೀರಾ ಸೀಮಿತ ಪ್ರಮಾಣದಲ್ಲಿ’ ಎಂಬುದು ಗೊತ್ತಾಗುತ್ತದೆ.

ಅಭಿನವ ಪ್ರಕಾಶನದ ನ. ರವಿಕುಮಾರ ಅವರು ಕನ್ನಡ ಪುಸ್ತಕೋದ್ಯಮದ ಬಗ್ಗೆ ಭಿನ್ನವಾದ, ಆಶಾದಾಯಕ ಸಂಗತಿಗಳನ್ನು ಹೇಳುತ್ತಾರೆ. ‘2008ರ ನಂತರ ಕನ್ನಡ ಪುಸ್ತಕಗಳ ಪ್ರಕಟಣೆ ಮತ್ತು ಮಾರಾಟಗಳೆರಡೂ ಹೆಚ್ಚಾಗಿವೆ. ಪುಸ್ತಕ ಓದುವ ಆಸಕ್ತಿ ಇರುವ ಜನರ ಸಂಖ್ಯೆ ಎಲ್ಲ ಸಂದರ್ಭಗಳಲ್ಲಿಯೂ ಕಡಿಮೆ ಇರುತ್ತದೆ. ಆದರೆ, ಕಾರಂತರ ಕೆಲವು ಪುಸ್ತಕಗಳನ್ನು ಮಾರಾಟ ಮಾಡಲು ಏಳೆಂಟು ತಿಂಗಳುಗಳು ಬೇಕಾಗುತ್ತಿದ್ದವಂತೆ. ಈಗ ಕೆಲವು ಲೇಖಕರ ಪುಸ್ತಕಗಳು ಒಂದೇ ತಿಂಗಳಿಗೆ ಹಲವು ಮುದ್ರಣಗಳನ್ನು ಕಾಣುತ್ತಿವೆ’ ಎನ್ನುವುದು ರವಿಕುಮಾರ ಅವರು ಹೇಳುವ ಮಾತು.


 

‘ಕನ್ನಡ ಪುಸ್ತಕಗಳ ಮಾರುಕಟ್ಟೆ ವಿಸ್ತರಣೆ ಕಂಡಿದೆ. ಓದುಗರ ಸಂಖ್ಯೆ ಏನೇ ಇದ್ದರೂ ಮಾರಾಟವಂತೂ ಹೆಚ್ಚಾಗಿದೆ. ಕನ್ನಡದ ಮೇಷ್ಟ್ರುಗಳು ಮಾತ್ರವೇ ಅಲ್ಲ, ಬೇರೆ ಬೇರೆ ಉದ್ಯೋಗಗಳಲ್ಲಿ ಇರುವವರು ಕೂಡ ಕನ್ನಡ ಪುಸ್ತಕಗಳನ್ನು ಓದುತ್ತಿದ್ದಾರೆ. ಕನ್ನಡದ ಪುಸ್ತಕಗಳನ್ನು ಯುವ ಪೀಳಿಗೆ ಓದಬೇಕು ಎಂದಾದರೆ, ಮಕ್ಕಳಲ್ಲಿ ಪುಸ್ತಕದ ಅಭಿರುಚಿ ಬೆಳೆಯುವಂತೆ ಮಾಡಬೇಕಿದೆ ಎನ್ನುತ್ತಾರೆ ರವಿಕುಮಾರ.

ಎಲ್ಲಿ ಸಿಗುತ್ತದೆ ಪುಸ್ತಕ?
ಕನ್ನಡ ಪುಸ್ತಕಗಳ ಮಾರಾಟ ಕಡಿಮೆ ಆಗುತ್ತಿದೆ ಎನ್ನುವುದು ಪ್ರಕಾಶಕರು ಆಡುವ ಮಾತುಗಳಾದರೆ, ಓದುಗರು ಬಹುಮುಖ್ಯ ಪ್ರಶ್ನೆಯೊಂದನ್ನು ಕೇಳುತ್ತಾರೆ. ‘ಪುಸ್ತಕ ಎಲ್ಲಿ ಸಿಗುತ್ತದೆ? ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ–ಧಾರವಾಡದಲ್ಲಿ ಇರುವವರಿಗೆ ಬೇಕಾದ ಪುಸ್ತಕ ಬೇಕಾದ ದಿನ ದೊರೆಯಬಹುದು. ಆದರೆ ಹೈದರಾಬಾದ್‌ ಕರ್ನಾಟಕ ಪ್ರದೇಶದ ತಾಲ್ಲೂಕು ಕೇಂದ್ರಗಳಲ್ಲಿ ಇರುವವರಿಗೆ ಅಥವಾ ರಾಜಧಾನಿಯಿಂದ ದೂರದಲ್ಲಿರುವ ಊರುಗಳಲ್ಲಿ ಇರುವವರಿಗೆ ಬೇಕಿರುವ ಕನ್ನಡ ಪುಸ್ತಕಗಳು ಮಾರುಕಟ್ಟೆಯಲ್ಲಿ ಸಿಗುವ ಸ್ಥಿತಿ ಇಂದಿಗೂ ಇಲ್ಲವಲ್ಲ’ ಎಂದು ಹೇಳುವ ಓದುಗರೂ ಇದ್ದಾರೆ.

‘ಕೆಲವು ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಪುಸ್ತಕ ಮಳಿಗೆಗಳು ಆರಂಭವಾಗಿವೆ. ಆದರೆ ದೂರದ ಊರುಗಳಲ್ಲಿ ಹೆಚ್ಚಾಗಿ ದೊರೆಯುವುದು ಕನ್ನಡದ ಬೆಸ್ಟ್‌ ಸೆಲ್ಲರ್ ಪುಸ್ತಕಗಳು. ಅಪರೂಪದ ಪುಸ್ತಕಗಳೆಲ್ಲ ಅಲ್ಲಿ ಬೇಕೆಂದಾಗ ಸಿಗುವುದಿಲ್ಲ. ಅಂದರೆ ಕನ್ನಡ ಪುಸ್ತಕ ಮಾರುಕಟ್ಟೆ ಪೂರ್ಣ ಪ್ರಮಾಣದಲ್ಲಿ ವಿಸ್ತರಣೆ ಆಗಿಲ್ಲ’ ಎಂಬ ಮಾತಿಗೆ ಸಹಮತ ಸೂಚಿಸುತ್ತಾರೆ ಉಡುಪ.

ಈ ವಿಚಾರದ ಬಗ್ಗೆ ಪ್ರಕಾಶ್‌ ಆಡುವ ಮಾತು ತುಸು ಭಿನ್ನವಾಗಿದೆ. ‘ರಾಜ್ಯದ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಪುಸ್ತಕದ ಅಂಗಡಿಗಳು ಇಲ್ಲ. ಅಷ್ಟೇ ಏಕೆ, ಕೆಲವು ಜಿಲ್ಲಾ ಕೇಂದ್ರಗಳಲ್ಲೂ ಪುಸ್ತಕದ ಅಂಗಡಿಗಳು ಇಲ್ಲ. ಅಲ್ಲೆಲ್ಲ ನಾವು ಮಾರುಕಟ್ಟೆಯನ್ನು ಕಂಡುಕೊಳ್ಳಬೇಕಿದೆ’ ಎನ್ನುವುದು ಅವರ ಅನಿಸಿಕೆ.

‘ಪುಸ್ತಕಗಳು ನಾಡಿನ ಎಲ್ಲೆಡೆ ಸಿಗುವಂತೆ ಮಾಡುವ ವ್ಯವಸ್ಥೆ ಮುಂದುವರಿದ ದೇಶಗಳಲ್ಲಿ ಇದೆ. ಆದರೆ ನಮ್ಮಲ್ಲಿ ಅಂತಹ ವ್ಯವಸ್ಥೆ ಇಲ್ಲ. ರಾಜ್ಯದ ಎಲ್ಲೆಡೆಯೂ ಪುಸ್ತಕ ಮಳಿಗೆ ತೆರೆದು, ಹೊಸ ಪುಸ್ತಕಗಳು ಅಲ್ಲಿ ಲಭ್ಯವಾಗುವಂತೆ ಮಾಡಬೇಕು ಎಂದು ನಾನು ಹೇಳುತ್ತಿಲ್ಲ. ಆದರೆ, ಬೇರೆ ಬೇರೆ ಊರುಗಳಲ್ಲಿನ ಸ್ಟೇಷನರಿ ಅಂಗಡಿಗಳನ್ನೇ ಬಳಸಿಕೊಂಡು, ಅಲ್ಲಿ ಕನ್ನಡ ಪುಸ್ತಕಗಳು ಲಭ್ಯವಾಗುವಂತೆ ಮಾಡಬೇಕು’ ಎನ್ನುವ ಪರಿಹಾರ ಸೂತ್ರವನ್ನು ರವಿಕುಮಾರ ನೀಡುತ್ತಾರೆ.

ಕನ್ನಡ ಪುಸ್ತಕಗಳ ಮಾರಾಟಗಾರರ ಜೊತೆ ಮಾತನಾಡುವಾಗ ಮನಸ್ಸಿಗೆ ನಾಟುವ ಸಾಮಾನ್ಯ ಎಳೆಯೊಂದು ಇದೆ. ಅದು: ‘ಪುಸ್ತಕಗಳನ್ನು ಕೊಳ್ಳಲು ಮಳಿಗೆಗಳಿಗೆ ಬರುತ್ತಿರುವವರಲ್ಲಿ ಬಹುತೇಕರು 35–40 ವರ್ಷ ವಯಸ್ಸಾಗಿರುವವರು. ಹೆಚ್ಚಾಗಿ ಮಾರಾಟ ಆಗುತ್ತಿರುವುದು ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಪುಸ್ತಕಗಳು. ಆದರೆ, ಹೆಚ್ಚು ಮಾರಾಟ ಆಗುತ್ತಿರುವ ಪುಸ್ತಕಗಳು ಇವು ಮಾತ್ರವೇ ಅಲ್ಲ. ಭೈರಪ್ಪ, ಲಂಕೇಶ್, ಕಾರಂತ, ತೇಜಸ್ವಿ, ಕುವೆಂಪು ಪುಸ್ತಕಗಳಿಗೆ ಬೇಡಿಕೆ ಯಾವತ್ತೂ ಕಡಿಮೆ ಆಗಿಲ್ಲ. ಕೆಲವು ಲೇಖಕರು ಕನ್ನಡದ ಪಾಲಿಗೆ ಎವರ್‌ ಗ್ರೀನ್‌!’

ಹೀಗೂ ಇದ್ದಾರೆ
ಪ್ರಿಯದರ್ಶಿನಿ ರೈ ಅವರು ಇಂಗ್ಲಿಷ್‌ ಮಾಧ್ಯಮದಲ್ಲಿ ಶಿಕ್ಷಣ ಪಡೆದವರು. ‘ನನ್ನ ಈ ವರ್ಷದ ಹುಟ್ಟಿದ ಹಬ್ಬಕ್ಕೆ ಕಿಂಡಲ್‌ ಕೊಡಿಸುತ್ತೇನೆ ಎಂದು ಗಂಡ ಹೇಳಿದ. ನಾನೇ ಅದು ಬೇಡ ಎಂದೆ. ಮೊಬೈಲ್‌ನಲ್ಲಿ ಕಿಂಡಲ್‌ ಆ್ಯಪ್‌ ಬಳಸಿ ಕೆಲವು ಪುಸ್ತಕಗಳನ್ನು ಓದಿದೆ. ಆದರೆ ಮುದ್ರಿತ ಪುಸ್ತಕಗಳನ್ನು ಓದುವುದಕ್ಕೆ ಅದು ಪರ್ಯಾಯವಲ್ಲ. ಹಾಗೆಯೇ, ಇಂಗ್ಲಿಷ್‌ನ ಒಂದಿಷ್ಟು ಲೇಖಕರ ಪುಸ್ತಕಗಳನ್ನು ಓದಿ ನಾನು ಈಗ ಮತ್ತೆ ಕಾರಂತ, ಕುವೆಂಪು ಕಡೆ ಮುಖ ಮಾಡಿದ್ದೇನೆ...’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT