ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಾಮಾನ್ಯ ಚಿಂತಕ

Last Updated 21 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

–ಬಾಬು ರೆಡ್ಡಿ ತುಂಗಳ

ಗುಂಡ್ಲುಪೇಟೆಯ ಆರಡಿ ಎತ್ತರದ ಸ್ಫುರದ್ರೂಪಿ ವ್ಯಕ್ತಿ ಅಬ್ದುಲ್‌ ನಜೀರ್‌ ಸಾಹೇಬರು ಅಲ್ಲಿಯ ಪುರಸಭಾ ಸದಸ್ಯರಾಗಿ ಕಾಂಗ್ರೆಸ್‌ ಮೂಲಕ ರಾಜಕೀಯ ಆರಂಭಿಸಿದವರು. ಗುಂಡ್ಲುಪೇಟೆಯ ಅನಭಿಷಕ್ತ ರಾಣಿಯೆನಿಸಿದ್ದ ಶ್ರೀಮತಿ ಕೆ.ಎಸ್‌. ನಾಗರತ್ನಮ್ಮನವರ ಗರಡಿಯಲ್ಲಿ ಬೆಳೆದವರು. ಅವರ ಆಶ್ರಯವಿಲ್ಲದೇ ಹೋಗಿದ್ದರೆ ನಜೀರ್‌ ಸಾಹೇಬರಿಗೆ ಅಂದು ಭವಿಷ್ಯವೇ ಇರಲಿಲ್ಲ. ನಾಗರತ್ನಮ್ಮ ನಾಲ್ಕು ಬಾರಿ ಶಾಸಕರಾಗಿ, ವಿಧಾನಸಭಾಧ್ಯಕ್ಷೆಯಾಗಿ ವಿಧಾನಸಭೆಯ ಪ್ರತಿಪಕ್ಷದ ನಾಯಕಿಯಾಗಿದ್ದರು.

ಕಾಂಗ್ರೆಸ್ಸಿನೊಂದಿಗೆ ಭಿನ್ನಾಭಿಪ್ರಾಯ ಬಂದು ನಜೀರ್‌ ಸಾಹೇಬರು ಬಂಗಾರಪ್ಪ ನೇತೃತ್ವದ ಕ್ರಾಂತಿರಂಗ ಸೇರಿದರು. 1983ರ ಚುನಾವಣೆಯಲ್ಲಿ ಶಾಸಕಾಂಗ ಪಕ್ಷದ ನಾಯಕರಾಗಿ ಹೆಗಡೆಯವರು ಆಯ್ಕೆಯಾದಾಗ ಬಂಗಾರಪ್ಪ, ಅಜೀಜ್‌ ಸೇಟ್‌, ಚಂದ್ರಪ್ರಭಾ ಅರಸು ಮುಂತಾದವರು ಸಿಡಿದು ಹೋದರು. ಆದರೆ, ಅದರ ರಾಜ್ಯಾಧ್ಯಕ್ಷರಾದ ನಜೀರ್ ಸಾಹೇಬರು ಮಾತ್ರ ಹೆಗಡೆಯವರೊಂದಿಗೆ ಉಳಿದು ವಿಧಾನಪರಿಷತ್ತಿಗೆ ಆಯ್ಕೆಯಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವರಾಗಿ ತಮ್ಮ ಜನಪರ ಚಿಂತನೆಯಿಂದಾಗಿ ಆಡಳಿತಕ್ಕೆ ಹೊಸ ಆಯಾಮವನ್ನೇ ಕೊಟ್ಟರು.

ಅದುವರೆಗೆ ಕುಡಿಯುವ ನೀರು ಕಾಣದ ಹಳ್ಳಿಗಳು–ತಾಂಡಾಗಳು ಶುದ್ಧ ಕುಡಿಯುವ ನೀರು ಕಾಣತೊಡಗಿದವು. ಅದೆಲ್ಲಿ ಅಡಗಿ ಕುಳಿತಿದ್ದವೋ, ರಾಜ್ಯದ ತುಂಬ ಕೊಳವೆಬಾವಿ ತೋಡುವ ದೈತ್ಯಾಕಾರದ ರಿಗ್‌ ಯಂತ್ರಗಳು ಗರ್ಜಿಸತೊಡಗಿದವು. ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಬೇಕು. ಅದನ್ನು ಕೊಡಲಾ
ಗದಿದ್ದರೆ ಹೇಗೆ ಎಂಬುದು ನಜೀರ್‌ ಸಾಹೇಬರು ಪ್ರಶ್ನೆ. ಹೆಗಡೆಜಿ ಈ ವಿಷಯದಲ್ಲಿ ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟರು. ಹಳ್ಳಿಹಳ್ಳಿಗಳಲ್ಲಿ ಎಲ್ಲಿ ನೋಡಿದಲ್ಲಿ, ದಾರಿಯ ಪಕ್ಕದಲ್ಲಿ ನಾಲ್ಕು ದಾರಿಗಳು ಕೂಡುವಲ್ಲಿ ಕೊಳವೆಬಾವಿಗಳ ಜತೆ ಕಿರುನೀರು ಪೂರೈಕೆ ಯೋಜನೆಗಳು ಪೂರ್ಣಗೊಂಡವು. ಹಿಂದೆ ಇದ್ದ ಯಾವ ಸರ್ಕಾರವೂ ಈ ಕಡೆಗೆ ಗಮನಕೊಟ್ಟಿರಲಿಲ್ಲ.

ರಾಷ್ಟ್ರೀಯ ಗ್ರಾಮಾಂತರ ನೀರು ಪೂರೈಕೆ, ವಿದ್ಯಾರ್ಥಿಗಳಿಗೆ ರಿಯಾಯಿತಿ ಬಸ್‌ಪಾಸು, ಗ್ರಾಮಾಂತರ ಪ್ರದೇಶಗಳಲ್ಲಿ ಹಾಸ್ಟೆಲ್‌ಗಳು, ಮಹಿಳೆಯರಿಗೆ ಹೆರಿಗೆ ಭತ್ಯೆ, ವಿಧವಾ ವೇತನ, ವಯಸ್ಸಾದವರಿಗೆ ಮಾಸಾಶನ, ಹಳ್ಳಿಗಳಿಗೆ ಸಂಪರ್ಕ ರಸ್ತೆಗಳ ನಿರ್ಮಾಣ.. ಇವೆಲ್ಲ ನಜೀರ್‌ ಸಾಹೇಬರ ಮಿದುಳಿನ ಕಲ್ಪನೆಗಳು. ಅವರು ಹೆಗಡೆಯವರ ಮುಂದೆ ಎಲ್ಲವನ್ನು ಮನದಟ್ಟಾಗುವಂತೆ ವಿವರಿಸಿ ಹುರಿದುಂಬಿಸಿದರು. ಮುಂದೆ ಎರಡೇ ವರ್ಷಗಳಲ್ಲಿ ಇಂದಿರಾಗಾಂಧಿಯವರ ಹತ್ಯೆಯ ಅನುಕಂಪವಿದ್ದರೂ ಹೆಗಡೆ, ನಜೀರ್‌ ಸಾಹೇಬರ ಸಾಧನೆಯಿಂದಾಗಿ ರಾಜ್ಯದಲ್ಲಿ ನೇಗಿಲುಹೊತ್ತ ರೈತನ ಪಕ್ಷ (ಜನತಾಪಕ್ಷ) ಅಭೂತಪೂರ್ವವಾದ ಜಯ ಸಾಧಿಸಿತು. ಅದೇ ಪ್ರಭಾವಳಿಯಲ್ಲಿ ನನ್ನಂಥ ಬರಿಗೈಯವರು ಕೂಡ ವಿಧಾನಸಭೆಗೆ ಬರುವುದು ಸಾಧ್ಯವಾಯಿತು.

ಎಲ್ಲ ರಾಜಕಾರಣಿಗಳಿಗಿದ್ದಂತೆ, ನಜೀರ್‌ ಸಾಹೇಬರಿಗೂ ಒಂದು ಅತ್ಯಂತ ಕೆಟ್ಟ ಚಟವಿತ್ತು. ಅದೆಂದರೆ: ಸತತ ಸಿಗರೇಟು ಸೇದುವುದು. 10–15 ನಿಮಿಷ ಸದನದಲ್ಲಿ ಕುಳಿತು ಹೊರಗೆ ಹೋಗಿ ಸಿಗರೇಟು ಸೇದಿ ಬಂದಾಗಲೇ ಅವರಿಗೆ ಒಂದು ತರದ ಸಮಾಧಾನ. ನಾನು, ಬಿ.ಜಿ. ಜಮಖಂಡಿ ಈ ಚೈನ್‌ ಸ್ಮೋಕಿಂಗ್‌ ಕುರಿತು ಅನೇಕ ಸಲ ಅವರನ್ನು ಎಚ್ಚರಿಸಿದ್ದೆವು. ಅವರು ಕೇಳಲಿಲ್ಲ. ಕ್ಯಾನ್ಸರ್‌ ಬೇನೆ ಅವರನ್ನು ಹಿಂಡತೊಡಗಿತು. ಆ ಕುರಿತು ಅವರಿಗೆ ನಂತರ ಅರಿವಾದಾಗ ಅದು ಉಲ್ಬಣವಾಗಿ ಕೈಮೀರಿತ್ತು. ಅಮೆರಿಕೆಗೆ ಹೋಗಿ ಬಂದರೂ ಪ್ರಯೋಜನವಾಗಲಿಲ್ಲ. ಒಂದು ಬೆಳಿಗ್ಗೆ ಬಿ.ಜಿ. ಜಮಖಂಡಿ ನನ್ನ ಕೋಣೆಗೆ ಫೋನ್‌ ಮಾಡಿ ಸಜೀರ್ ಸಾಹೇಬರ ನಿಧನದ ಕಠೋರ ಸಂಗತಿ ತಿಳಿಸಿದ್ದರು. ಇಬ್ಬರೂ ರೇಸ್‌ಕೋರ್ಸ್‌ ರಸ್ತೆಯ ಅವರ ನಿವಾಸ ತಲುಪಿದೆವು. ಮಗನನ್ನು ಕಳೆದುಕೊಂಡ ನಾಗರತ್ನಮ್ಮ, ಎಂ. ರಘುಪತಿ ಮುಂತಾದವರು ಅಳುತ್ತಿದ್ದರೆ, ಹೆಗಡೆಜಿ ಗರಬಡಿದಂತೆ ಮೂಲೆಯಲ್ಲಿ ಕುಳಿತಿದ್ದರು. ಅಸಾಮಾನ್ಯ ಚಿಂತಕನೊಬ್ಬ ಸಾಮಾನ್ಯ ಸಿಗರೇಟಿನ ಚಟಕ್ಕೆ ಬಲಿಯಾಗಿ ನನ್ನಂಥವರ ಹೊಟ್ಟೆಯಲ್ಲಿ ಬೆಂಕಿ ಇಟ್ಟು ನಮ್ಮನ್ನಗಲಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT