ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರಿಷ್ಠ ಮುಖಬೆಲೆಯ ನಗದು ಐ.ಟಿ. ವಶ

Last Updated 21 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಗರಿಷ್ಠ ಮುಖಬೆಲೆಯ ನೋಟುಗಳ ಚಲಾವಣೆ ಮೇಲೆ ಹದ್ದಿನ ಕಣ್ಣಿಟ್ಟಿರುವ ಆದಾಯ ತೆರಿಗೆ (ಐ.ಟಿ) ಇಲಾಖೆ ಅಧಿಕಾರಿಗಳು ₹ 2,000 ಹಾಗೂ ₹ 500 ಮುಖಬೆಲೆಯ ₹4.03 ಕೋಟಿ ಮೊತ್ತದ ನೋಟುಗಳನ್ನು ವಶ ಪಡಿಸಿಕೊಂಡಿದ್ದಾರೆ.

ರಾಜ್ಯ ಸೇರಿದಂತೆ ದೇಶದ ಕೆಲವು ಕಡೆಗಳಲ್ಲಿ ನೋಟುಗಳ ಅಭಾವ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಗರಿಷ್ಠ ಮುಖಬೆಲೆಯ ನೋಟುಗಳು ಚುನಾವಣೆಯಲ್ಲಿ ಬಳಕೆ ಆಗಲಿವೆ ಎಂಬ ಗುಪ್ತ ವರದಿಯ ಆಧರಿಸಿ ಎಲ್ಲ ಕಡೆಗಳಲ್ಲೂ ಇಲಾಖೆ ಕಟ್ಟೆಚ್ಚರ ವಹಿಸಿದೆ.

ಚುನಾವಣಾ ಪ್ರಕ್ರಿಯೆ ಆರಂಭವಾದ ಬಳಿಕ ರಾಜ್ಯದಲ್ಲಿ ₹ 4.13 ಕೋಟಿ ನಗದು, ₹ 1.32 ಕೋಟಿ ಮೌಲ್ಯದ 4.52ಕೆ.ಜಿ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕರ್ನಾಟಕ ಮತ್ತು ಗೋವಾ ಐ.ಟಿ ವೃತ್ತದ ( ತನಿಖಾ ವಿಭಾಗ) ಮಹಾನಿರ್ದೇಶಕ ಬಾಲಕೃಷ್ಣ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ₹ 2.47 ಕೋಟಿ ಮತ್ತು ಬಳ್ಳಾರಿಯಲ್ಲಿ ₹ 55 ಲಕ್ಷ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ಸಾರ್ವಜನಿಕರು ಹಾಗೂ ವಿವಿಧ ಸಂಸ್ಥೆಗಳಿಂದ ಚುನಾವಣೆ ಸಂಬಂಧಿತ ದೂರುಗಳನ್ನು ಸ್ವೀಕರಿಸಲು ಬೆಂಗಳೂರಿನಲ್ಲಿ  24X7 ಕಾರ್ಯ ನಿರ್ವಹಿಸುವ ನಿಯಂತ್ರಣ ಕೊಠಡಿ ತೆರೆಯಲಾಗಿದೆ. ದೂರು ಬಂದ ತಕ್ಷಣ ಕಾರ್ಯಾಚರಣೆ ನಡೆಸಲು ಅನುಕೂಲ ಆಗುವಂತೆ ದಾಳಿ ತಂಡಗಳನ್ನು ಎಲ್ಲ ಜಿಲ್ಲೆಗಳಲ್ಲೂ ರಚಿಸಲಾಗಿದೆ. ಹಣದ ಅಕ್ರಮ ಸಾಗಣೆ ಮತ್ತು ಹಂಚಿಕೆ ಕುರಿತು ಗುಪ್ತವಾಗಿ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಕರ್ನಾಟಕ ಹಾಗೂ ಗೋವಾದ ಎಲ್ಲ ವಿಮಾನ ನಿಲ್ದಾಣ, ರೈಲು ನಿಲ್ದಾಣ ಹಾಗೂ ಬಸ್‌ ನಿಲ್ದಾಣಗಳಲ್ಲೂ ತೀವ್ರ ಕಣ್ಗಾವಲು ವ್ಯವಸ್ಥೆ ಮಾಡಲಾಗಿದೆ. ವಿಮಾನ ನಿಲ್ದಾಣವೊಂದರಲ್ಲಿ ವ್ಯಕ್ತಿಯೊಬ್ಬರು ಕೊಂಡೊಯ್ಯುತ್ತಿದ್ದ ₹ 16.5 ಲಕ್ಷವನ್ನು ಜಪ್ತಿ ಮಾಡಲಾಗಿದೆ. ಇನ್ನೊಂದು ಪ್ರಕರಣದಲ್ಲಿ ವ್ಯಕ್ತಿಯೊಬ್ಬರಿಂದ ಸುಮಾರು ₹ 50 ಲಕ್ಷ ನಗದು ಸ್ವಾಧೀನಪಡಿಸಿಕೊಳ್ಳಲಾಗಿದೆ.

ಮೈಸೂರು ಬಳಿ ಉಗ್ರಾಣವೊಂದರಲ್ಲಿ ₹ 9.51 ಕೋಟಿಯ ಗೃಹಪಯೋಗಿ ವಸ್ತುಗಳನ್ನು ವಶ‍ಪಡಿಸಿಕೊಳ್ಳಲಾಗಿದೆ. ಇವುಗಳನ್ನು ಚುನಾವಣೆ ಸಮಯದಲ್ಲಿ ಮತದಾರರಿಗೆ ಹಂಚಲು ಸಂಗ್ರಹಿಸಿಡಲಾಗಿತ್ತು.  ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಚುನಾವಣಾಧಿಕಾರಿಗೆ ಸೂಚನೆ ನೀಡಲಾಗಿದೆ.

* ₹ 1.32 ಕೋಟಿ ಮೌಲ್ಯದ ಚಿನ್ನಾಭರಣ ವಶ

* ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯಿಂದ ಜಪ್ತಿ ಮಾಡಿದ ಹಣ ₹ 16.5 ಲಕ್ಷ

* ವ್ಯಕ್ತಿಯೊಬ್ಬರಿಂದ ವಶಪಡಿಸಿಕೊಂಡ ಮೊತ್ತ ₹ 50 ಲಕ್ಷ ನಗದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT