ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಕ್ಕಿಂತ ರಾಜಧಾನಿ ಮತದಾರರ ಪ್ರಮಾಣ ಕಡಿಮೆ

Last Updated 21 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜಧಾನಿಯಲ್ಲಿ ಜನಸಂಖ್ಯೆ 1.31 ಕೋಟಿ. ಇಲ್ಲಿ ವಿದ್ಯಾವಂತರು ಹೆಚ್ಚಾಗಿದ್ದರೂ ಮತದಾರರ ಪಟ್ಟಿಗೆ ಸೇರ್ಪಡೆಗೊಂಡವರ ಅನುಪಾತ ರಾಜ್ಯದ ಸರಾಸರಿಗಿಂತ ಕಡಿಮೆ ಇದೆ.

ರಾಜ್ಯದ ಮತದಾರರ ಅಂತಿಮ ಪಟ್ಟಿಯ ಪ್ರಕಾರ, ಒಟ್ಟು 4.96 ಕೋಟಿ ಮತದಾರರು ಇದ್ದಾರೆ. 2.52 ಕೋಟಿ ಪುರುಷ ಮತದಾರರು, 2.44 ಕೋಟಿ ಮಹಿಳಾ ಮತದಾರರು ಹಾಗೂ 4,552 ಇತರೆ ಮತದಾರರಿದ್ದಾರೆ. ಜನಸಂಖ್ಯೆ ಮತ್ತು ಮತದಾರರ ಅನುಪಾತ ಶೇ 72.34ರಷ್ಟಿದೆ.

ಬೆಂಗಳೂರಿನಲ್ಲಿ 87.98 ಲಕ್ಷ ಮತದಾರರಿದ್ದು, 46.04 ಲಕ್ಷ ಪುರುಷ ಮತದಾರರು ಹಾಗೂ 41.94 ಲಕ್ಷ ಮಹಿಳಾ ಮತದಾರರಿದ್ದಾರೆ. ನಗರದ ಜನಸಂಖ್ಯೆ ಮತ್ತು ಮತದಾರರ ಅನುಪಾತ ಶೇ 66.84ರಷ್ಟಿದೆ. ಅಂತಿಮ ಮತದಾರರ ಪಟ್ಟಿ ಪ್ರಕಟಿಸಿದ ಬಳಿಕವೂ ಹೆಸರು ನೋಂದಾಯಿಸಲು ಏಪ್ರಿಲ್‌ 14ರವರೆಗೆ ಅವಕಾಶ ಕಲ್ಪಿಸಲಾಗಿತ್ತು. ಈ ಅವಧಿಯಲ್ಲಿ 2.26 ಲಕ್ಷ ಅರ್ಜಿಗಳು ಸ್ವೀಕೃತಗೊಂಡಿವೆ.

ರಾಜ್ಯದ ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ರಾಜಧಾನಿಯಲ್ಲಿ ಹೆಚ್ಚಿನ ಜನಸಂಖ್ಯೆ ಇದೆ. ಇದಕ್ಕೆ ತಕ್ಕಂತೆ ಮತದಾರರ ಅನುಪಾತವೂ ಹೆಚ್ಚಾಗಿರಬೇಕಿತ್ತು. ಹೆಸರು ಸೇರ್ಪಡೆ, ತಿದ್ದುಪಡಿ, ಕ್ಷೇತ್ರ ಬದಲಾವಣೆಗಾಗಿ ಸಾವಿರಾರು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಅನೇಕರ ಹೆಸರು ಮತದಾರರ ಪಟ್ಟಿಗೆ ಸೇರ್ಪಡೆಯಾಗಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಮತದಾನ ಮಾಡಲು ಅವಕಾಶ ಸಿಗುತ್ತದೆಯೋ ಇಲ್ಲವೋ ಎನ್ನುವ ಅತಂತ್ರ ಸ್ಥಿತಿಯಲ್ಲಿದ್ದಾರೆ.

ಬೆಂಗಳೂರಿನಲ್ಲಿ ಮತದಾರರ ಪ್ರಮಾಣ ಕಡಿಮೆ ಆಗಲು ಅನೇಕ ಕಾರಣಗಳಿವೆ. ದೇಶದ ಪ್ರಮುಖ ನಗರಗಳ ಸಾಲಿನಲ್ಲಿ ಗುರುತಿಸಿಕೊಂಡಿರುವ ಉದ್ಯಾನ ನಗರಿಯಲ್ಲಿ ಉದ್ಯೋಗಾವಕಾಶಗಳಿಗೆ ಕೊರತೆ ಇಲ್ಲ. ರಾಜ್ಯ ಹಾಗೂ ದೇಶದ ವಿವಿಧೆಡೆಯಿಂದ ಕೆಲಸ ಅರಸಿ ಬರುವ ವಲಸಿಗರ ಪ್ರಮಾಣವೂ ಹೆಚ್ಚಾಗಿದೆ. ಹೀಗೆ ವಲಸೆ ಬಂದು ರಾಜಧಾನಿಯಲ್ಲಿ ನೆಲೆ ನಿಲ್ಲುವ ಬಹುತೇಕರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡುವುದಿಲ್ಲ. ಅವರ ಆಸ್ತಿ ಸ್ವಂತ ಊರಿನಲ್ಲಿರುವ ಕಾರಣ ಹಾಗೂ ಅಲ್ಲಿನ ಸೌಲಭ್ಯಗಳನ್ನು ಪಡೆಯುವ ಉದ್ದೇಶಕ್ಕಾಗಿ ಮತದಾರರ ಪಟ್ಟಿಯಿಂದ ಹೆಸರು ತೆಗೆಸಲು ಇಚ್ಛಿಸುವುದಿಲ್ಲ.

ನಗರದೊಳಗೆ ವಲಸೆ: ಮಕ್ಕಳಿಗೆ ಪ್ರತಿಷ್ಠಿತ ಶಾಲೆಯಲ್ಲಿ ಶಿಕ್ಷಣ ಕೊಡಿಸುವುದು, ಹೆಚ್ಚಿನ ಸಂಬಳ ನೀಡುವ ಕಂಪನಿಗೆ ಸೇರ್ಪಡೆಗೊಳ್ಳುವುದು, ಕಡಿಮೆ ಬಾಡಿಗೆ ಅಥವಾ ಲೀಸ್‌ಗೆ ನೀಡುವ ಮನೆಗಳ ಹುಡುಕಾಟ, ಬಾಡಿಗೆ ಮನೆಯಿಂದ ಸ್ವಂತ ಮನೆಗೆ ಸ್ಥಳಾಂತರ... ಹೀಗೆ ವಿವಿಧ ಕಾರಣಗಳಿಗಾಗಿ ನಗರದ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸ್ಥಳಾಂತರಗೊಳ್ಳುವುದು ಸಾಮಾನ್ಯ. ಅಂತಹವರು ಮತಗಟ್ಟೆ ಬದಲಾವಣೆಗಾಗಿ ಅರ್ಜಿ ಸಲ್ಲಿಸುತ್ತಾರೆ.

ಸುಲಭವಿಲ್ಲ ಹೆಸರು ನೋಂದಣಿ: ‘ಹೆಸರು ಸೇರ್ಪಡೆ ಹಾಗೂ ತಿದ್ದುಪಡಿಗೆ ಇದೇ 14ರವರೆಗೆ ಕಾಲಾವಕಾಶ ಕಲ್ಪಿಸಲಾಗಿತ್ತು. ಅರ್ಹರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲು ಎಲ್ಲ ಕ್ರಮ ಕೈಗೊಳ್ಳಲಾಗಿದೆ. ವಾಸಸ್ಥಳ ಹಾಗೂ ವಯಸ್ಸಿನ ದೃಢೀಕರಣ ಪತ್ರದ ಜತೆಗೆ ನಿರ್ದಿಷ್ಟ ನಮೂನೆಯ ಅರ್ಜಿ ಭರ್ತಿ ಮಾಡಿದರೆ ಸಾಕು ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದರು. ಆದರೆ, ಅದು ಅಷ್ಟು ಸುಲಭವಲ್ಲ ಎಂಬುದು ಪಾಲಿಕೆ ಕಚೇರಿಗೆ ಹೋದಾಗಲೇ ತಿಳಿದದ್ದು. ಆಧಾರ್‌ ಕಾರ್ಡ್‌ ತನ್ನಿ, ಅಫಿಡವಿಟ್‌ ತನ್ನಿ ಎಂದೆಲ್ಲಾ ಮತದಾರರ ನೋಂದಣಾಧಿಕಾರಿಗಳು ಅಲೆದಾಡಿಸಿದ್ದರು’ ಎಂದು ಮತದಾರರೊಬ್ಬರು ದೂರಿದರು.

‘ಕ್ವೀನ್ಸ್‌ ರಸ್ತೆಯ ಪಾಲಿಕೆ ಕಚೇರಿಯಲ್ಲಿ ಮಹಿಳಾ ಅಧಿಕಾರಿಯೊಬ್ಬರು ತಲೆ ಚಾಚಿಕೊಳ್ಳುತ್ತಾ ನಿಂತಿದ್ದರು. ಹೆಸರು ನೋಂದಾಯಿಸಲು ಬಂದಿದ್ದ ಸಾರ್ವಜನಿಕರ ಬಗ್ಗೆ ಅವರಿಗೆ ಪರಿವೇ ಇರಲಿಲ್ಲ. ಅನೇಕ ಪ್ರಯತ್ನಗಳ ಬಳಿಕ ಅರ್ಜಿ ಸ್ವೀಕರಿಸಿದ ಅವರು, ರಟ್ಟಿನ ಡಬ್ಬದೊಳಗೆ ಅರ್ಜಿ ಹಾಕುವಂತೆ ಹೇಳಿದರು. ಯಾವುದೇ ಸ್ವೀಕೃತಿ ಪತ್ರ ನೀಡಲಿಲ್ಲ. ಅರ್ಜಿ ಸಲ್ಲಿಸಿದ್ದೇವೆ ಎಂಬುದಕ್ಕೆ ನನ್ನ ಬಳಿ ಯಾವುದೇ ಆಧಾರವಿಲ್ಲ’ ಎಂದು ಅಳಲು ತೋಡಿಕೊಂಡರು.

ರಘು ಎಂಬುವರು ಹೆಬ್ಬಾಳ ಕ್ಷೇತ್ರದಿಂದ ದಾಸರಹಳ್ಳಿ ಕ್ಷೇತ್ರಕ್ಕೆ ಸ್ಥಳಾಂತರಗೊಂಡಿದ್ದಾರೆ. ಕ್ಷೇತ್ರ ಬದಲಾವಣೆಗಾಗಿ ಅರ್ಜಿ ಸಲ್ಲಿಸಿದ್ದಾರೆ.

‘ಹೆಬ್ಬಾಳ ಕ್ಷೇತ್ರದ ಮತದಾರರ ಪಟ್ಟಿಯಿಂದ ಹೆಸರು ತೆಗೆಸಿ, ಅದರ ಸ್ವೀಕೃತಿ ಪತ್ರವನ್ನು ತರುವಂತೆ ಮತದಾರರ ನೋಂದಣಾಧಿಕಾರಿಗಳು ತಿಳಿಸಿದ್ದರು. ಅವರ ಸೂಚನೆಯಂತೆ ಮಾಡಿದೆ. ಒಂದು ತಿಂಗಳು ಕಳೆದರೂ ಹೆಸರು ನೋಂದಾಯಿಸಿಲ್ಲ’ ಎಂದು ಅವರು ದೂರಿದರು.

‘ಯಾವುದೇ ಅಡೆತಡೆ ಇಲ್ಲದೆ ಹೆಸರು ನೋಂದಾಯಿಸಿಕೊಂಡವರೇ ಪುಣ್ಯವಂತರು. ಹಿರಿಯ ಅಧಿಕಾರಿಗಳು ಏನೇ ಆದೇಶ ನೀಡಿದರೂ, ಅದನ್ನು ಜಾರಿಗೊಳಿಸಬೇಕಾದವರು ತಳಮಟ್ಟದಲ್ಲಿ ಕೆಲಸ ಮಾಡುವ ಅಧಿಕಾರಿಗಳು. ಕಂದಾಯ ಇಲಾಖೆಯ ಅಧಿಕಾರಿಗಳ ಬಗ್ಗೆ ಏನೇ ಟೀಕೆ ಇದ್ದರೂ, ಚುನಾವಣಾ ವಿಷಯದಲ್ಲಿ ಅವರು ಕಟ್ಟುನಿಟ್ಟು. ಆದರೆ, ಪಾಲಿಕೆಯಲ್ಲಿರುವ ಕಂದಾಯ ವಿಭಾಗದ ಅಧಿಕಾರಿಗಳ ಕಾರ್ಯವೈಖರಿ ತೃಪ್ತಿಕರವಾಗಿಲ್ಲ’ ಅಸಮಾಧಾನ ವ್ಯಕ್ತಪಡಿಸಿದರು.

‘ಇದೇ 14ರವರೆಗೂ ಅರ್ಜಿಗಳನ್ನು ಪಡೆಯಬೇಕಿತ್ತು. ಆದರೆ, ಕಸವನಹಳ್ಳಿಯಲ್ಲಿ ಮತದಾರರ ನೋಂದಣಾಧಿಕಾರಿಗಳು ಅರ್ಜಿಗಳನ್ನು ಪಡೆಯಲಿಲ್ಲ. ಸ್ವೀಕೃತಿ ಪತ್ರವನ್ನೂ ನೀಡಲಿಲ್ಲ’ ಎಂದು ವೈಟ್‌ಫೀಲ್ಡ್‌ ರೈಸಿಂಗ್‌ ಸಂಘಟನೆಯ ಸದಸ್ಯರೊಬ್ಬರು ದೂರಿದರು.

‘ಅನುಪಾತದಲ್ಲಿ ವ್ಯತ್ಯಾಸವಿಲ್ಲ’

‘18 ವರ್ಷಕ್ಕಿಂತ ಮೇಲ್ಪಟ್ಟವರನ್ನು ಮಾತ್ರ ಮತದಾರರ ಪಟ್ಟಿಗೆ ಸೇರ್ಪಡೆ ಮಾಡುವುದರಿಂದ ಒಟ್ಟು ಜನಸಂಖ್ಯೆಗೆ ಹೋಲಿಸಿದರೆ ಮತದಾರರ ಪ್ರಮಾಣ ಕಡಿಮೆ ಇರುತ್ತದೆ. ಅಂತಿಮ ಮತದಾರರ ಪಟ್ಟಿಯನ್ನು ವಿಶ್ಲೇಷಿಸಿದಾಗ ಜನಸಂಖ್ಯೆ ಹಾಗೂ ಮತದಾರರ ಅನುಪಾತದಲ್ಲಿ ಅಂತಹ ವ್ಯತ್ಯಾಸ ಕಂಡುಬಂದಿಲ್ಲ. ಹೆಸರು ಬಿಟ್ಟು ಹೋಗಿರುವವರು ಹಾಗೂ ಹೊಸ ಮತದಾರರ ಹೆಸರು ನೋಂದಾಯಿಸಲು ಅಗತ್ಯ ಕ್ರಮ ಕೈಗೊಂಡಿದ್ದೇವೆ’ ಎಂದು ಜಂಟಿ ಮುಖ್ಯ ಚುನಾವಣಾಧಿಕಾರಿ (ತಾಂತ್ರಿಕ) ಕೆ.ಎನ್‌. ರಮೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಸಾರ್ವಜನಿಕರು ಸಲ್ಲಿಸುವ ಅರ್ಜಿಗಳಿಗೆ ಸ್ವೀಕೃತಿ ಪತ್ರ ಕೊಡಬಾರದು ಎಂದು ಆಯೋಗವು ಎಲ್ಲಿಯೂ ಹೇಳಿರಲಿಲ್ಲ. ಅರ್ಜಿದಾರರು ಸ್ವೀಕೃತಿ ಪತ್ರಗಳನ್ನು ಕೇಳಿ ಪಡೆಯಬೇಕಿತ್ತು. ಅದೇ ರೀತಿ, ಅರ್ಜಿಗಳನ್ನು ರಟ್ಟಿನ ಡಬ್ಬದಲ್ಲಿ ಹಾಕಿಸಿಕೊಳ್ಳುವಂತೆಯೂ ಮತಗಟ್ಟೆ ಅಧಿಕಾರಿಗಳಿಗೆ ಸೂಚನೆ ನೀಡಿರಲಿಲ್ಲ ಎಂದರು.

‘ಪಾಲಿಕೆ ಸದಸ್ಯರ ಶಿಫಾರಸು ಇರಬೇಕು’

‘ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡುವ ವಿಷಯದಲ್ಲಿ ಪಾಲಿಕೆ ಸದಸ್ಯರ ಲಾಬಿ ಕೆಲಸ ಮಾಡುತ್ತದೆ. ಅವರ ಶಿಫಾರಸು ಪತ್ರ ಇದ್ದವರ ಹೆಸರುಗಳನ್ನು ಕೂಡಲೇ ನೋಂದಾಯಿಸಲಾಗುತ್ತದೆ. ಬೆಂಬಲಿಗರ ಹೆಸರುಗಳನ್ನು ಮಾತ್ರ ಪಟ್ಟಿಗೆ ಸೇರಿಸುವಂತೆ ಮತದಾರರ ನೋಂದಣಾಧಿಕಾರಿಗಳಿಗೆ ಕೆಲ ಸದಸ್ಯರು ಸೂಚಿಸುತ್ತಾರೆ’ ಎಂದು ಹೆಸರು ಹೇಳಲು ಇಚ್ಛಿಸದ ವೈಟ್‌ಫೀಲ್ಡ್‌ ರೈಸಿಂಗ್‌ ಸಂಘಟನೆಯ ಸದಸ್ಯರೊಬ್ಬರು ಹೇಳಿದರು.

‘ವಿಧಾನಸಭೆ ಹಾಗೂ ಪಾಲಿಕೆಯ ಚುನಾವಣೆಗಳಲ್ಲಿ ಸ್ಪರ್ಧಿಸಿರುವವರು ನೂರಾರು ಮತಗಳ ಅಂತರದಲ್ಲಿ ಗೆಲುವು ಸಾಧಿಸಿರುತ್ತಾರೆ. ಅಪಾರ್ಟ್‌ಮೆಂಟ್‌ ಸಮುಚ್ಚಯಗಳ ನಿವಾಸಿಗಳಿಗೆ ಮತದಾರರ ಗುರುತಿನ ಚೀಟಿ ನೀಡಿದರೆ ಚುನಾವಣಾ ಫಲಿತಾಂಶದಲ್ಲಿ ಏರುಪೇರು ಆಗಬಹುದು ಎಂಬುದು ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರ ಲೆಕ್ಕಾಚಾರ’ ಎಂದರು.‘ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವವರು ಹಣ ಪಡೆದು ಮತ ಚಲಾಯಿಸುವುದಿಲ್ಲ. ಅವರು ಬಿಜೆಪಿ ಪರ ಮತ ಹಾಕುತ್ತಾರೆ ಎಂಬುದು ಕಾಂಗ್ರೆಸ್‌ ಪಕ್ಷದ ನಾಯಕರ ಊಹೆ. ಇಲ್ಲಿನವರು ನಮ್ಮ ಪಕ್ಷಕ್ಕೆ ಮತ ಹಾಕುತ್ತಾರೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ ಎಂಬುದು ಬಿಜೆಪಿ ನಾಯಕರ ನಿಲುವು. ಈ ಕಾರಣದಿಂದಲೇ ನಮ್ಮ ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರದಂತೆ ನೋಡಿಕೊಳ್ಳಲಾಗುತ್ತದೆ’ ಎಂದು ಅವರು ದೂರಿದರು.

‘ಗ್ರಾಮೀಣರಿಗೆ ಮತದಾನದ ಬಗ್ಗೆ ಗೌರವ’

ಗ್ರಾಮೀಣ ಜನರಿಗೆ ಮತದಾನದ ಬಗ್ಗೆ ಅಭಿಮಾನವಿದೆ. ಹೀಗಾಗಿ, ಹಳ್ಳಿಗಳಲ್ಲಿ ಹೆಚ್ಚಿನ ಮತದಾನವಾಗುತ್ತದೆ. ಆದರೆ, ನಗರಗಳಲ್ಲಿ ವಿದ್ಯಾವಂತರು ಹೆಚ್ಚಾಗಿದ್ದರೂ, ಮತ ಹಾಕುವವರ ಪ್ರಮಾಣ ಕಡಿಮೆ ಇದೆ. ತಮ್ಮ ಹೆಸರು ಯಾವ ಮತಗಟ್ಟೆಯಲ್ಲಿದೆ ಎಂಬುದೇ ಕೆಲವರಿಗೆ ಗೊತ್ತಿರುವುದಿಲ್ಲ. ಈ ಬಾರಿ ಮತದಾರರ ಹೆಸರು, ಮತಗಟ್ಟೆ ಸಂಖ್ಯೆ, ಮತದಾನದ ಸಮಯದ ಮಾಹಿತಿಯನ್ನು ಎಲ್ಲರಿಗೂ ನೀಡುವುದಾಗಿ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ. ಅದು ಕಾರ್ಯರೂಪಕ್ಕೆ ಬರುತ್ತದೆಯೋ ಕಾದುನೋಡಬೇಕು ಎಂದು ಸಿಟಿಜನ್‌ ಆ್ಯಕ್ಷನ್‌ ಫೋರಂನ ಅಧ್ಯಕ್ಷ ಡಿ.ಎಸ್‌. ರಾಜಶೇಖರ್‌ ತಿಳಿಸಿದರು.

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗ ಅರಸಿ ಬರುವವರು ಹೆಚ್ಚು. ಈ ಪೈಕಿ ಬಹುತೇಕರು ಸ್ವಂತ ಊರಿನಲ್ಲೇ ಮತದಾನ ಮಾಡುತ್ತಾರೆ. ಕೆಲವರು ಇಲ್ಲಿನ ಮತದಾರರಾಗಲು ಇಚ್ಛೆ ಹೊಂದಿದ್ದರೂ, ನೋಂದಣಿ ಪ್ರಕ್ರಿಯೆ ಸುಲಭವಲ್ಲದ ಕಾರಣ ಈ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಮತ ಹಾಕದಿದ್ದರೆ ಏನಾಗುತ್ತದೆ ಎಂಬ ನಿರ್ಧಾರಕ್ಕೆ ಬರುತ್ತಾರೆ ಎಂದರು.

ಮತದಾರರ ಹೆಸರು ನೋಂದಣಿ, ಚುನಾವಣಾ ಕಾರ್ಯಕ್ಕೆಂದೇ ಪ್ರತ್ಯೇಕ ಅಧಿಕಾರಿಗಳಿದ್ದರೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಆದರೆ, ಬಿಬಿಎಂಪಿಯ ಕಂದಾಯ ಅಧಿಕಾರಿಗಳನ್ನು ಚುನಾವಣಾ ಕರ್ತವ್ಯಕ್ಕಾಗಿ ನಿಯೋಜಿಸಲಾಗುತ್ತಿದೆ. ಅವರಿಗೆ ನೂರೆಂಟು ಕೆಲಸಗಳು ಇರುತ್ತವೆ. ಇದರ ಮಧ್ಯೆ ಚುನಾವಣಾ ಕೆಲಸ ಮಾಡಬೇಕು. ಇದರಿಂದ ಈ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಾರೆ. ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಾರೆ ಎಂದು ಅಭಿಪ್ರಾಯಪಟ್ಟರು.

‘ಅರ್ಹರ ನೋಂದಣಿ’

ಇದೇ 8ರಂದು ನಡೆಸಿದ್ದ ಮಿಂಚಿನ ನೋಂದಣಿ ಅಭಿಯಾನದಲ್ಲಿ ನಗರದ 1.24 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದರು. ಅವರ ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರಿಸಿ, ಗುರುತಿನ ಚೀಟಿಗಳನ್ನು ನೀಡಲಾಗುತ್ತದೆ. ಕೆಲ ನಗರಗಳಲ್ಲಿ 18 ವರ್ಷಕ್ಕಿಂತ ಕೆಳಗಿನವರ ಸಂಖ್ಯೆ ಹೆಚ್ಚಾಗಿರುತ್ತದೆ. ಹೀಗಾಗಿ, ಜನಸಂಖ್ಯೆ ಹಾಗೂ ಮತದಾರರ ನಡುವಿನ ಅನುಪಾತದಲ್ಲೂ ವ್ಯತ್ಯಾಸವಿರುತ್ತದೆ. ಕೈಬಿಟ್ಟಿರುವ ಎಲ್ಲರನ್ನೂ ಪಟ್ಟಿಗೆ ಸೇರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿತ್ತು ಎಂದು ಪಾಲಿಕೆಯ ವಿಶೇಷ ಆಯುಕ್ತ (ಹಣಕಾಸು) ಮನೋಜ್‌ ರಾಜನ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT