ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು: ದುರ್ಬಳಕೆಯಾದ ಪರಿಹಾರ ಸಾಮಗ್ರಿ?

ಕೊಡಗು ಜಿಲ್ಲೆಯತ್ತ ಬರುತ್ತಿವೆ ನೂರಾರು ಲಾರಿಗಳು
Last Updated 22 ಆಗಸ್ಟ್ 2018, 19:35 IST
ಅಕ್ಷರ ಗಾತ್ರ

ಮಡಿಕೇರಿ: ರಾಜ್ಯದ ಎಲ್ಲ ರಸ್ತೆಗಳು ಈಗ ಕೊಡಗಿನತ್ತಲೇ ತಿರುಗಿರುವಂತೆ ಪರಿಹಾರದ ಸಾಮಗ್ರಿಗಳನ್ನು ಹೊತ್ತ ನೂರಾರು ಲಾರಿಗಳು ಮಡಿಕೇರಿಯತ್ತ ಧಾವಿಸಿ ಬರುತ್ತಿವೆ. ಹಾಗೆ ಬಂದಿರುವ ಸಾಮಗ್ರಿಗಳು ಸಂತ್ರಸ್ತರಿಗಿಂತ ಅನ್ಯರ ಪಾಲಾಗಿರುವ ಪ್ರಮಾಣವೇ ಹೆಚ್ಚು ಎಂಬ ದೂರುಗಳು ವ್ಯಾಪಕವಾಗಿವೆ.

ಸಂತ್ರಸ್ತರಿಗೆ ಬಂದ ಪರಿಹಾರ ಸಾಮಗ್ರಿಗಳು ದುರ್ಬಳಕೆಯಾದ ಬಗೆಗೆ ದೂರುಗಳು ಬಂದಿರುವುದನ್ನು ಒಪ್ಪಿಕೊಂಡ ಉಪವಿಭಾಗಾಧಿಕಾರಿ ಡಾ.ನಂಜುಂಡೇಗೌಡ, ‘ಅದಕ್ಕೀಗ ಕಡಿವಾಣ ಹಾಕುತ್ತಿದ್ದೇವೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ನಗರದ ಮೈತ್ರಿ ಹಾಲ್‌ನಲ್ಲಿ ಸಂತ್ರಸ್ತರಿಗಾಗಿ ಶಿಬಿರ ತೆರೆಯಲಾಗಿದೆ. ಮಂಗಳವಾರದ ತನಕ ಈ ಶಿಬಿರಕ್ಕೆ ಹೊರಗಿನವರು ಕೂಡ ನುಗ್ಗಿ ಹಾಸಿಗೆ–ಬಟ್ಟೆಗಳನ್ನು, ಆಹಾರ ಸಾಮಗ್ರಿಗಳನ್ನು ಮನೆಗೆ ಸಾಗಿಸಿದ್ದಾರೆ.

‘ಹೊರಗಿನವರೂ ಶಿಬಿರದೊಳಗೆ ನುಗ್ಗಿ ಸಂತ್ರಸ್ತರಿಗೆ ವಿತರಿಸುತ್ತಿದ್ದ ಸಾಮಗ್ರಿಗಳನ್ನು ಪಡೆದುಕೊಂಡು ಹೋಗಿದ್ದು ನಿಜ. ಅರ್ಹರು ಯಾರು ಎಂಬುದನ್ನು ಗುರುತಿಸುವುದೇ ಕಷ್ಟವಾಗಿತ್ತು. ಇವತ್ತಿನಿಂದ ಬಾಗಿಲು ಬಳಿ ಪೊಲೀಸ್‌ ಕಾವಲನ್ನೂ ಹಾಕಿದ್ದೇವೆ. ಸಂತ್ರಸ್ತರನ್ನು ಮಾತ್ರ ಒಳಗೆ ಬಿಡುತ್ತಿದ್ದೇವೆ’ ಎಂದು ಹೇಳಿದರು, ಶಿಬಿರದ ಉಸ್ತುವಾರಿಯಲ್ಲಿದ್ದ ಕಂದಾಯ ಅಧಿಕಾರಿ ಸಣ್ಣಸ್ವಾಮಿ.

ಶಿಬಿರದಲ್ಲಿ ಆಶ್ರಯ ಪಡೆದವರಿಗೆ ಮಾತ್ರ ಸಾಮಗ್ರಿಗಳನ್ನು ನೀಡಲು ನಿರ್ಧರಿಸಿರುವ ಜಿಲ್ಲಾಡಳಿತ, ಸಂತ್ರಸ್ತರಿಗೆ ಈಗ ಗುರುತಿನ ಚೀಟಿಗಳನ್ನೂ ವಿತರಿಸಿದೆ. ಯಾರಿಗೆ, ಏನೇ ಕೊಟ್ಟರೂ ಆ ವಿವರವನ್ನು ದಾಖಲು ಮಾಡಲಾಗುತ್ತಿದೆ.

ನಗರಸಭೆ ಕಾರ್ಯಾಲಯದಲ್ಲಿ ಜಿಲ್ಲಾಡಳಿತದಿಂದ ಅಕ್ಕಿ ಹಾಗೂ ಆಹಾರ ಪದಾರ್ಥಗಳನ್ನು ವಿತರಣೆ ಮಾಡಲಾಗುತ್ತಿದೆ. ಸುರಿಯುವ ಮಳೆಯಲ್ಲೂ ಹನುಮನ ಬಾಲದಂತೆ ಸರದಿ ಬೆಳೆಯುತ್ತಲೇ ಇರುತ್ತದೆ. ಎಷ್ಟು ಹಂಚಿಕೆಯಾದರೂ ಸರದಿ ಕರಗುವುದಿಲ್ಲ.

‘ಅಕ್ಕಿಯನ್ನು ಪಡೆದವರು ಪಕ್ಕದ ಗಲ್ಲಿಯಲ್ಲಿ ನಿಂತ ತಮ್ಮ ವಾಹನಗಳಲ್ಲಿ ಇಟ್ಟು ಮತ್ತೆ ಬಂದು ಸರದಿಯಲ್ಲಿ ನಿಲ್ಲುತ್ತಾರೆ. ಹೀಗಾದರೆ ಎಲ್ಲವನ್ನೂ ಕಳೆದುಕೊಂಡು ಬೀದಿಯಲ್ಲಿ ನಿಂತವರಿಗೆ ಅಕ್ಕಿ ಸಿಕ್ಕಂತೆಯೇ ಸರಿ’ ಎಂದು ಚಾಮುಂಡೇಶ್ವರಿನಗರದ ಮಣಿ ಸಿಟ್ಟಿನಿಂದ ಹೇಳಿದರು. ಅಂತಹ ಒಂದೆರಡು ಪ್ರಸಂಗಗಳನ್ನೂ ಅವರು ತೋರಿಸಿದರು.

‘ಗುರುತಿನ ದಾಖಲೆಗಳನ್ನು ಕೇಳಿ ಆಹಾರ ಪದಾರ್ಥಗಳ ವಿತರಣೆಗೆ ನಿಂತರೆ, ನೈಜ ಸಂತ್ರಸ್ತರ ಬಳಿಯೀಗ ಒಂದು ದಾಖಲೆಯೂ ಇಲ್ಲ. ಹಾಗೇ ಹಂಚಲು ಹೊರಟರೆ ಅರ್ಹರಿಗೆ ತಲುಪುತ್ತಿರುವ ಗ್ಯಾರಂಟಿ ಇಲ್ಲ. ನಾವಾದರೂ ಏನು ಮಾಡಬೇಕು ಹೇಳಿ’ ಎಂದು ಸ್ಥಳದಲ್ಲಿದ್ದ ಅಧಿಕಾರಿಗಳು ಪ್ರಶ್ನಿಸಿದರು.

ನಿರಾಶ್ರಿತರ ಶಿಬಿರಗಳಲ್ಲಿ ಔಷಧಿ ದಾಸ್ತಾನು ಬೇಕಾದಷ್ಟು ಪ್ರಮಾಣದಲ್ಲಿ ಇದೆ. ಆದರೆ, ಪರಿಹಾರ ಸಾಮಗ್ರಿ ಹೊತ್ತು ಬರುತ್ತಿರುವ ಲಾರಿಗಳು ಭಾರಿ ಪ್ರಮಾಣದ ಔಷಧಿಗಳನ್ನೂ ಹೊತ್ತು ತರುತ್ತಿವೆ.

‘ಸದ್ಯದ ಸ್ಥಿತಿಯಲ್ಲಿ ಔಷಧಿ ಏನೂ ಅಷ್ಟಾಗಿ ಬೇಕಿಲ್ಲ. ಆ್ಯಂಟಿಬಯಾಟಿಕ್‌ ಸೇರಿದಂತೆ ಎಲ್ಲ ಔಷಧಿಗಳು ಅಗತ್ಯ ಪ್ರಮಾಣದಲ್ಲಿ ಲಭ್ಯವಿವೆ. ಮಾನಸಿಕವಾಗಿ ಆಘಾತಗೊಂಡ ಸಂತ್ರಸ್ತರಿಗೆ ಔಷಧಿಗಿಂತ ಕೌನ್ಸೆಲಿಂಗ್‌ನ ಅಗತ್ಯ ಹೆಚ್ಚಾಗಿದೆ’ ಎಂದು ಕೊಡವ ಸಮಾಜ ಭವನದ ಶಿಬಿರದಲ್ಲಿ ಮಾತಿಗೆ ಸಿಕ್ಕ ವೈದ್ಯಾಧಿಕಾರಿಗಳು ತಿಳಿಸಿದರು.ರಾಜಕೀಯ ಪಕ್ಷಗಳು ಹಾಗೂ ವಿವಿಧ ಸಂಘಟನೆಗಳು ಸಂಗ್ರಹಿಸಿದ ಪರಿಹಾರ ಸಾಮಗ್ರಿಗಳನ್ನು ಎಲ್ಲಿ ವಿತರಿಸಬೇಕು ಎಂಬ ಗೊಂದಲ ಅವುಗಳನ್ನು ಹೊತ್ತು ತಂದ ಕಾರ್ಯಕರ್ತರಿಗೆ. ‘ಸಂತ್ರಸ್ತರನ್ನು ತೋರಿಸುವ ನೆಪದಲ್ಲಿ ಕೆಲವರು ತಮ್ಮ ಸಂಬಂಧಿಗಳಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ’ ಎಂದು ಹಲವು ನಿರಾಶ್ರಿತರ ಶಿಬಿರಗಳ ವ್ಯವಸ್ಥಾಪಕರು ದೂರಿದರು.

ಹೊರಗಿನಿಂದ ಸಾಮಗ್ರಿ ತಂದವರು ಸಿಕ್ಕ–ಸಿಕ್ಕಲ್ಲಿ ಲಾರಿಗಳನ್ನು ನಿಲ್ಲಿಸಿ, ದಾರಿಹೋಕರಿಗೆ ಅವುಗಳನ್ನು ವಿತರಣೆ ಮಾಡುವುದು ಹಲವು ಕಡೆಗಳಲ್ಲಿ ಬುಧವಾರ ಕಂಡುಬಂತು.

‘ಮಾನವೀಯ ನೆಲೆಯಲ್ಲಿ ಏನೊಂದೂ ವಿಚಾರಿಸದೆ, ಆಹಾರ ಪದಾರ್ಥ ವಿತರಿಸಲು ಹೊರಟರೆ, ರಸ್ತೆ ಬದಿಗಳಲ್ಲಿ ಚೀಲ ಹಿಡಿದುಕೊಂಡು ನಿಲ್ಲುವ ನೂರಾರು ಮಂದಿ ಲಾರಿಗಳಿಂದ ಆಹಾರ ಪದಾರ್ಥ ಪಡೆಯುವುದನ್ನೇ ಒಂದು ಕಾಯಕ ಮಾಡಿಕೊಂಡಿದ್ದಾರೆ’ ಎಂದು ಬಿ.ಕೆ. ದೊಡ್ಡಯ್ಯ ಒಳನೋಟ ಬೀರಿದರು.

ಉತ್ತರ ಕರ್ನಾಟಕ ಭಾಗಗಳ ಜನ ಪ್ರೀತಿಯಿಂದ ರೊಟ್ಟಿ ಕಳುಹಿಸಿದ್ದಾರೆ. ಆದರೆ, ಇಲ್ಲಿನ ಜನರಿಗೆ ಖಡಕ್‌ ರೊಟ್ಟಿ ತಿಂದು ಅಭ್ಯಾಸವಿಲ್ಲ. ಹೀಗಾಗಿ ಅವುಗಳ ಬಳಕೆ ಆಗುತ್ತಿರುವುದು ತುಂಬಾ ಕಡಿಮೆ. ಎಲ್ಲೆಡೆಗಳಿಂದ ಬಳಸಿದ ಬಟ್ಟೆಗಳ ದೊಡ್ಡ ರಾಶಿಯೇ ಬಂದು ಬಿದ್ದಿದೆ. ಅವುಗಳನ್ನು ಉಪಯೋಗ ಮಾಡುವವರು ಕೂಡ ಇಲ್ಲಿ ಯಾರೂ ಇಲ್ಲ.

‘ಭಾವೋದ್ವೇಗಕ್ಕೆ ಒಳಗಾಗಿ ಏನೇನೋ ಸಾಮಗ್ರಿಗಳನ್ನು ಕಳುಹಿಸುವ ಬದಲು ಇಲ್ಲಿನವರಿಗೆ ಏನು ಅಗತ್ಯ ಎಂಬುದನ್ನು ಅರಿತು ಕಳುಹಿಸಿದರೆ ಒಳಿತು’ ಎಂದು ಕೊಡವ ಸಮಾಜದ ಶಿಬಿರದಲ್ಲಿ ಮಾತಿಗೆ ಸಿಕ್ಕ ಸಿ.ಕೆ. ಪೊನ್ನಪ್ಪ ಹೇಳಿದರು.

ನೇರ ವಿತರಣೆಗೆ ಅವಕಾಶವಿಲ್ಲ

ಪರಿಹಾರ ಸಾಮಗ್ರಿಗಳ ದುರುಪಯೋಗ ತಪ್ಪಿಸಲು ಜಿಲ್ಲಾಡಳಿತ ಕೊನೆಗೂ ಮುಂದಾಗಿದೆ. ಹೊರಗಿನಿಂದ ಬಂದ ಲಾರಿಗಳಿಗೆ ಈಗ ನೇರವಾಗಿ ಸಂತ್ರಸ್ತರಿಗೆ ಪದಾರ್ಥಗಳನ್ನು ವಿತರಿಸಲು ಅವಕಾಶವಿಲ್ಲ. ತಾನು ತೆರೆದಿರುವ ನಾಲ್ಕು ಗೋದಾಮುಗಳಿಗೆ ಮಾತ್ರ ಅವುಗಳನ್ನು ಸಾಗಿಸಬೇಕು ಎಂದು ಸ್ಪಷ್ಟವಾಗಿ ಸೂಚಿಸಿದೆ.

ಸಾಮಗ್ರಿ ಹೊತ್ತು ಬರುವ ಲಾರಿಗಳಿಗಾಗಿ ಕುಶಾಲನಗರದಲ್ಲಿ ಚೆಕ್‌ಪೋಸ್ಟ್ ಸ್ಥಾಪಿಸಲಾಗಿದ್ದು, ಪ್ರತಿ ಲಾರಿಗೂ ಸಾಮಾನು ಎಲ್ಲಿ ಸಾಗಿಸಬೇಕು ಎಂಬ ಸೂಚನಾ ಪತ್ರವನ್ನು ಕೊಡಲಾಗುತ್ತದೆ. ಚೆಕ್‌ಪೋಸ್ಟ್‌ನಲ್ಲಿ ಸೂಚಿಸಿದ ಗೋದಾಮಿನ ಹೊರತು ಬೇರೆಲ್ಲಿಯೂ ವಸ್ತುಗಳನ್ನು ಸಾಗಿಸುವಂತಿಲ್ಲ. ಹಾಗೊಂದು ವೇಳೆ ವಿತರಣೆ ಮಾಡಿದ್ದು ಕಂಡುಬಂದರೆ ಪೊಲೀಸರು ಲಾರಿಯನ್ನು ವಶಕ್ಕೆ ಪಡೆಯಲಿದ್ದಾರೆ ಎಂದು ಉಪವಿಭಾಗಾಧಿಕಾರಿ ನಂಜುಂಡೇಗೌಡ ಸ್ಪಷ್ಟಪಡಿಸಿದರು.
ಕುಶಾಲನಗರ ಎಪಿಎಂಸಿ, ಮಡಿಕೇರಿ ಎಪಿಎಂಸಿ, ಜಿಲ್ಲಾಡಳಿತ ಭವನ ಮತ್ತು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ – ಈ ನಾಲ್ಕು ಗೋದಾಮುಗಳನ್ನು ತೆರೆಯಲಾಗಿದೆ.
ಸಂಕಷ್ಟದಲ್ಲಿ ಕೊಡಗಿನ 32 ಹಳ್ಳಿಗಳು

ಕೊಡಗಿನ 32 ಹಳ್ಳಿಗಳು ಮಾತ್ರ ಗಂಭೀರ ಸ್ವರೂಪದ ಸಂಕಷ್ಟಕ್ಕೆ ಸಿಲುಕಿವೆ. ಮಡಿಕೇರಿ ಹಾಗೂ ಕುಶಾಲನಗರದ ಕೆಲವು ಪ್ರದೇಶಗಳನ್ನು ಹೊರತುಪಡಿಸಿದರೆ ಜಿಲ್ಲೆಯ ಇತರ ಭಾಗಗಳ ಜನಜೀವನ ಸಾಮಾನ್ಯವಾಗಿದೆ. ತಮ್ಮ ಜಿಲ್ಲೆಯ ಸಹೋದರ–ಸಹೋದರಿಯರ ಕಣ್ಣೀರು ಒರೆಸಲು ಆ ಭಾಗಗಳ ಜನರೂ ಜಿಲ್ಲಾಡಳಿತದ ಜತೆ ಕೈಜೋಡಿಸಿದ್ದಾರೆ. ‘ಜಿಲ್ಲೆಯೇ ಅಪಾಯದಲ್ಲಿ ಮುಳುಗಿದೆ ಎಂಬ ಭಯ ಬೇಡ’ ಎಂದು ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT