ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈನುರಾಸುಗಳಿಗೆ ಆಧಾರ್‌ ಸಂಖ್ಯೆಯ ಕಿವಿಯೋಲೆ

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಆರಂಭವಾದ ಅಭಿಯಾನ
Last Updated 22 ಆಗಸ್ಟ್ 2018, 17:18 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯ ಹೈನುರಾಸುಗಳಿಗೆ ವಿಶಿಷ್ಟ ಗುರುತಿನ ಸಂಖ್ಯೆ ಇರುವ ಕಿವಿಯೋಲೆ ಅಳವಡಿಸುವ ಅಭಿಯಾನವನ್ನು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಆರಂಭಿಸಿದೆ.

ಕಿವಿಯೋಲೆ ಅಳವಡಿಸಿದ ಬಳಿಕ ಹೈನುರಾಸುಗಳನ್ನು ಆನ್‌ಲೈನ್‌ ನೋಂದಣಿ ಮಾಡಲಾಗುತ್ತಿದೆ. ಈ ಮೂಲಕ ರಾಸುಗಳ ವಿಮೆ, ಮರಣ ಪರಿಹಾರ ಧನ ವಿತರಣೆ, ಮೌಲ್ಯಮಾಪನ , ಉತ್ಪಾದಕತೆಯ ಅಂದಾಜು, ರಾಸುಗಳ ತಳಿ ಅಭಿವೃದ್ದಿ, ಲಸಿಕೆ ಹಾಕುವುದು, ಬ್ಯಾಂಕಿನ ಸಾಲ ಸೌಲಭ್ಯ ಒದಗಿಸುವುದು, ಜಾನುವಾರು ಕಳ್ಳತನವಾದಲ್ಲಿ ಗುರುತಿಸುವಿಕೆ ಮತ್ತು ಸಾಮಾಜಿಕ, ಆರ್ಥಿಕ ಕಾರ್ಯಕ್ರಮಗಳ ಅನುಷ್ಠಾನ ಸೇರಿದಂತೆ ಸರ್ಕಾರದಿಂದ ಜಾರಿಯಾಗುವ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದಕ್ಕೆ ಸಾಧ್ಯ ಎನ್ನುವುದು ಸರ್ಕಾರದ ದೂರದೃಷ್ಟಿ ಯೋಜನೆ ಇದಾಗಿದೆ.

ಕಿವಿಯೋಲೆ ಅಳವಡಿಸಿದ ಹೈನುರಾಸುಗಳ ಕುರಿತಾಗಿ ಅದರ ಮಾಲೀಕರಿಗೆ ಹೆಲ್ತ್ ಕಾರ್ಡ್ ಸಹ ಕೊಡಲಾಗುತ್ತದೆ. ಯಾವುದೇ ಚಿಕಿತ್ಸೆಯ ಅಗತ್ಯವಿದ್ದರೆ ಇಲಾಖೆಯ ವೈದ್ಯರು ಕೂಡಲೇ ಕಾರ್ಯಪ್ರವೃತ್ತರಾಗುತ್ತಾರೆ. ಹೈನುರಾಸುಗಳ ಪಾಲನೆಗೆ ಆದ್ಯತೆ ವಹಿಸಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಆಗಸ್ಟ್‌ 16 ರಿಂದಲೇ ಅಭಿಯಾನ ಆರಂಭವಾಗಿದ್ದು, ಹೈನುರಾಸುಗಳಿಗೆ ಕಿವಿಯೋಲೆ ಹಾಕಲಾಗುತ್ತಿದೆ. ಪಶುವೈದ್ಯಕೀಯ ಸೇವಾ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಗ್ರಾಮಗಳಿಗೆ ತೆರಳಿ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ.

ಕೇಂದ್ರ ಸರ್ಕಾರವು ಕಳೆದ ವರ್ಷ ಘೋಷಿಸಿದ ಪಶು ಸಂಜೀವಿನಿ ಯೋಜನೆಯಡಿ ವಿಶಿಷ್ಟ ಗುರುತಿನ ಸಂಖ್ಯೆ ಇರುವ ಆಧಾರ್‌ ಅಳವಡಿಸುವ ಈ ಅಭಿಯಾನ ಕೈಗೊಳ್ಳಲಾಗಿದೆ. ಕಿವಿಯೋಲೆಗಳನ್ನು ಕೇಂದ್ರ ಸರ್ಕಾರ ಪೂರೈಕೆ ಮಾಡಿದ್ದು, ಒಂದು ಕಿವಿಯೋಲೆಗಾಗಿ ₨10 ವೆಚ್ಚ ಮಾಡಲಾಗಿದೆ. ಕಿವಿಯೋಲೆ ಅಳವಡಿಸುವಾಗ ಪಶುವಿನ ಎತ್ತರ, ಲಿಂಗ, ವಯಸ್ಸು, ತಳಿ ಹಾಗೂ ಅದರ ದೇಹದ ಮೇಲಿರುವ ಗುರುತುಗಳ ಮಾಹಿತಿ ಸಂಗ್ರಹಿಸಿಕೊಳ್ಳಲಾಗುತ್ತದೆ. ಈ ಎಲ್ಲ ಮಾಹಿತಿಯು ಕಿವಿಯೋಲೆಯ ಚಿಪಿನಲ್ಲಿಯೂ ಇರುತ್ತದೆ.

2022 ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸಬೇಕೆನ್ನುವ ಕೇಂದ್ರದ ಗುರಿ ಸಾಧನೆಗಾಗಿ ಈ ನೋಂದಣಿಯು ನೆರವಾಗಲಿದೆ ಎನ್ನುವುದು ಅಧಿಕಾರಿಗಳ ವಿವರಣೆ. ಮೊದಲ ಹಂತವಾಗಿ ದೇಶದಲ್ಲಿ ನಾಲ್ಕು ಕೋಟಿ ಹೈನುರಾಸುಗಳಿಗೆ ಕಿವಿಯೋಲೆ ಚಿಪ್ಪು ಅಳವಡಿಸಲು ಕೇಂದ್ರವು ಯೋಜಿಸಿದ್ದು, ಇದನ್ನು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.

ಕಿವಿಯೋಲೆ ಅಳವಡಿಸುವ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಪಶು ವೈದ್ಯರು ಮತ್ತು ಸಿಬ್ಬಂದಿಯನ್ನು ಇಲಾಖೆಯು ಹೊರಗುತ್ತಿಗೆ ಆಧಾರದಲ್ಲಿ ನೇಮಕಗೊಳಿಸಿದೆ.
************

ಜಿಲ್ಲೆಯ ಎಲ್ಲಾ ಪಶು ಪಾಲಕರು ತಮ್ಮ ಹೈನುರಾಸುಗಳಿಗೆ ತಪ್ಪದೆ ಕಿವಿಯೋಲೆಗಳನ್ನು ಅಳವಡಿಸಲು ಮತ್ತು ಮಾಹಿತಿ ನೀಡಲು ಸಹಕರಿಸಬೇಕು. ಅಭಿಯಾನ ಸೆಪ್ಟೆಂಬರ್‌ 5 ರವರೆಗೂ ನಡೆಯಲಿದೆ.
- ಡಾ.ಅಶೋಕ ಕೊಳ್ಳಾ,ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT