ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಪಿಎ: ಬ್ಯಾಂಕ್‌ ಮುಖ್ಯಸ್ಥರಿಗೆ ತಾಕೀತು

‘ಎನ್‌ಪಿಎ’ ವಂಚನೆ ತಡೆಗಟ್ಟಿ: ಹಣಕಾಸು ಇಲಾಖೆ
Last Updated 22 ಆಗಸ್ಟ್ 2018, 19:14 IST
ಅಕ್ಷರ ಗಾತ್ರ

ನವದೆಹಲಿ: ವಸೂಲಾಗದ ಸಾಲದ ಖಾತೆಗಳಲ್ಲಿನ (ಎನ್‌ಪಿಎ) ವಂಚನೆ ಪ್ರಕರಣಗಳಿಗೆ ಕಡಿವಾಣ ಹಾಕಿ, ಇಲ್ಲದಿದ್ದರೆ ಕ್ರಿಮಿನಲ್‌ ಸಂಚಿನ ಆರೋಪ ಎದುರಿಸಬೇಕಾದೀತು ಎಂದು ಹಣಕಾಸು ಸಚಿವಾಲಯವು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ (ಪಿಎಸ್‌ಬಿ) ಮುಖ್ಯಸ್ಥರಿಗೆ ತಾಕೀತು ಮಾಡಿದೆ.

ಖಾತೆಗಳಲ್ಲಿನ ವಂಚನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಬ್ಯಾಂಕ್‌ ಮುಖ್ಯಸ್ಥರು ಕಾನೂನು ಪ್ರಕ್ರಿಯೆಯ ಸಿಕ್ಕುಗಳಲ್ಲಿ ಸಿಲುಕದಂತೆ ತಡೆಯುವ ಮುಂಜಾಗ್ರತಾ ಕ್ರಮವೂ ಇದಾಗಿದೆ ಎಂದು ಮೂಲಗಳು ತಿಳಿಸಿವೆ.

ಖಾತೆಯಿಂದ ಅಕ್ರಮವಾಗಿ ಹಣ ವರ್ಗಾಯಿಸಿದ ಆರೋಪದ ಮೇಲೆ, ಭೂಷಣ್‌ ಸ್ಟೀಲ್ಸ್‌ನ ಈ ಮೊದಲಿನ ಪ್ರವರ್ತಕ ನೀರಜ್‌ ಸಿಂಘಾಲ್‌ ಅವರನ್ನು ಗಂಭೀರ ವಂಚನೆ ತನಿಖಾ ಕಚೇರಿಯ ಅಧಿಕಾರಿಗಳು ಬಂಧಿಸಿದ ನಂತರ ಈ ಕಟ್ಟುನಿಟ್ಟಿನ ಎಚ್ಚರಿಕೆಯ ಆದೇಶ ಹೊರಡಿಸಲಾಗಿದೆ.

ಬ್ಯಾಂಕ್‌ಗಳಿಂದ ಪಡೆದಿದ್ದ ₹ 2 ಸಾವಿರ ಕೋಟಿ ಸಾಲವನ್ನು ಬೇರೆಡೆ ವರ್ಗಾಯಿಸಿದ್ದ ಆರೋಪದ ಮೇಲೆ ಸಿಂಘಾಲ್‌ ಅವರನ್ನು ಬಂಧಿಸಲಾಗಿದೆ. ಇತರ ಪ್ರವರ್ತಕರೂ ಇದೇ ಬಗೆಯಲ್ಲಿ ವಂಚನೆ ಎಸಗಿದ ಹಲವಾರು ನಿದರ್ಶನಗಳು ಇವೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬ್ಯಾಂಕ್‌ ಖಾತೆಯಲ್ಲಿ ನಡೆದಿರಬಹುದಾದ ವಂಚನೆ ಬಗ್ಗೆ ಮಾಹಿತಿ ನೀಡಿರದ ಪ್ರಕರಣಗಳನ್ನು ತನಿಖಾ ಸಂಸ್ಥೆಗಳು ಆನಂತರ ಪತ್ತೆ ಹಚ್ಚಿದಾಗ, ಭಾರತೀಯ ದಂಡ ಸಂಹಿತೆ 120ಬಿ ಪ್ರಕಾರ, ವಂಚನೆಗೆ ಬ್ಯಾಂಕ್‌ ಮುಖ್ಯಸ್ಥರನ್ನೂ ಹೊಣೆಗಾರರನ್ನಾಗಿ ಮಾಡಲು ಅವಕಾಶ ಇದೆ.

ಸುಸ್ತಿ ಖಾತೆಗಳಿಂದ ಹಣವನ್ನು ಬೇರೆಡೆ ವರ್ಗಾಯಿಸಿರುವುದು ತನಿಖೆಯಲ್ಲಿ ಬಹಿರಂಗಗೊಂಡರೆ, ಬ್ಯಾಂಕ್‌ ಸಿಇಒಗಳ ವಿರುದ್ಧ ಕ್ರಿಮಿನಲ್‌ ಕ್ರಮವನ್ನೂ
ಜರುಗಿಸಬಹುದಾಗಿದೆ.

ದಿವಾಳಿ ಸಂಹಿತೆಯಡಿ, ಸಾಲ ವಸೂಲಿಗೆ ಕೈಗೊಂಡಿರುವ 12ಕ್ಕೂ ಹೆಚ್ಚು ಕಂಪನಿಗಳ ಬ್ಯಾಂಕ್‌ ಖಾತೆಯಿಂದ ಹಣ ವರ್ಗಾವಣೆಯೂ ಸೇರಿದಂತೆ ವಂಚನೆ ಚಟುವಟಿಕೆಗಳು ನಡೆದಿರುವುದನ್ನು ಬ್ಯಾಂಕ್‌ಗಳು ಮತ್ತು ತನಿಖಾ ಸಂಸ್ಥೆಗಳು ಪರಿಶೀಲಿಸುತ್ತಿವೆ.

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿನ ‘ಎನ್‌ಪಿಎ’ ₹ 8 ಲಕ್ಷ ಕೋಟಿ ದಾಟಿದೆ. ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ವಜ್ರದ ವ್ಯಾಪಾರಿ ನೀರವ್‌ ಮೋದಿ ₹ 14 ಸಾವಿರ ಕೋಟಿಗಳ ವಂಚನೆ ಎಸಗಿದ್ದಾನೆ. ಇತರ ಸಣ್ಣ ಪುಟ್ಟ ವಂಚನೆಗಳ ಪ್ರಕರಣಗಳೂ ಸಾಕಷ್ಟಿವೆ.

40 – ದಿವಾಳಿ ಸಂಹಿತೆಯಡಿ (ಐಬಿಸಿ) ಸಾಲ ವಸೂಲಿಗೆ ಆರ್‌ಬಿಐ ಗುರುತಿಸಿರುವ ಉದ್ದಿಮೆ ಸಂಸ್ಥೆಗಳು

455 – ‘ಐಬಿಸಿ’ಯಡಿ, ರಾಷ್ಟ್ರೀಯ ಕಂಪನಿ ಕಾಯ್ದೆ ನ್ಯಾಯಮಂಡಳಿಯು (ಎನ್‌ಸಿಎಲ್‌ಟಿ) ಕೈಗೊಂಡ ನಿರ್ಧಾರಗಳ ಸಂಖ್ಯೆ

200ಕ್ಕೂ ಹೆಚ್ಚು ‘ಎನ್‌ಸಿಎಲ್‌ಟಿ’ ಶಾಖೆಗಳಲ್ಲಿ ವಿಚಾರಣೆ ಹಂತದಲ್ಲಿ ಇರುವ ಪ್ರಕರಣಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT