ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಹದ ಒಡಲಿಂದ ತವರಿನ ಮಡಿಲು ಸೇರಿದ ರೊಜಾರಿಯೊ ದಂಪತಿ 

Last Updated 23 ಆಗಸ್ಟ್ 2018, 6:41 IST
ಅಕ್ಷರ ಗಾತ್ರ

ಬೆಂಗಳೂರು: ‘ನಿನ್ನೆ ಮುಂಬೈ ತಲುಪಿದ್ದೇವೆ. ಮನೆ, ಮಕ್ಕಳನ್ನು ನೋಡಿ ಹೊಸ ಜನ್ಮ ಲಭಿಸಿದಂತಾಗಿದೆ. ಇಲ್ಲಿಯವರೆಗೆ ಬಂದು ತಲುಪುತ್ತೇವೆ ಎಂದುಕೊಂಡಿರಲಿಲ್ಲ. ದೇವರು ನಮ್ಮನ್ನು ಕಾಪಾಡಿದ’ – ಮುಂಬೈನಲ್ಲಿರುವ ಕ್ಲಬ್‌ನ ಹಿರಿಯ ಫುಟ್‌ಬಾಲ್ ಆಟಗಾರ ರೊಜಾರಿಯೊ ಮತ್ತು ಸುಮನ್ ರಾಡ್ರಿಗಸ್ ದಂಪತಿಯ ಭಾವುಕ ನುಡಿಗಳಿವು.

ಆಗಸ್ಟ್‌ 16ರಂದು ಕೇರಳದ ತ್ರಿಶೂರ್ ಬಳಿ ಇರುವ ಚಾಲಕ್ಕುಡಿಯಲ್ಲಿರುವ ಕೊಟ್ಟಾದಲ್ಲಿರುವ ಡಿವೈನ್ ಸೆಂಟರ್‌ನಲ್ಲಿದ್ದ ಪ್ರಾರ್ಥನಾ ಕಾರ್ಯಕ್ರಮಕ್ಕೆ ದಂಪತಿ ತೆರಳಿದ್ದರು. ಆದರೆ ಪ್ರವಾಹ ಪರಿಸ್ಥಿತಿಯಲ್ಲಿ ಸಿಲುಕಿಕೊಂಡ ಅವರು ಮುಂಬೈ ತಲುಪಲು ಹರಸಾಹಸ ಮಾಡಿದರು. ಆ ಕಥೆಯನ್ನು ಅವರಿಂದಲೇ ಕೇಳಬೇಕು.

‘ಹೋದ ಬುಧವಾರ ನಾವು ಚಾಲಕ್ಕುಡಿಯಲ್ಲಿದ್ದೆವು. ಸಂಜೆ ಪ್ರಾರ್ಥನೆ ಮುಗಿಸಿದ ಮೇಲೆ ವಿಶ್ರಾಂತಿಗೆ ತೆರಳಿದ್ದೆವು. ಮಳೆ ಬರುತ್ತಲೇಇತ್ತು. ಸಾಕಷ್ಟು ಚಳಿಯೂ ಇತ್ತು. ಆದರೆ ಗುರುವಾರ ಬೆಳಿಗ್ಗೆ ಎದ್ದಾಗ ಪರಿಸ್ಥಿತಿ ಬೇರೆಯೇ ಇತ್ತು. ಅಲ್ಲ ಕಡೆಯೂ ನೀರು. ರಸ್ತೆಗಳು ನಿಧಾನವಾಗಿ ಕಣ್ಮರೆಯಾಗುವಂತೆ ಭಾಸವಾಗುತ್ತಿತ್ತು. ಬೇರೆ ಬೇರೆ ಊರುಗಳಿಂದ ಅಲ್ಲಿಗೆ ಬಂದಿದ್ದ ಸುಮಾರು 500 ಜನರು ಅಲ್ಲಿದ್ದೆವು. ಮಾಧ್ಯಮಗಳಲ್ಲಿಯೂ ಪ್ರವಾಹದ ಮಾಹಿತಿ ಬರುತ್ತಿತ್ತು. ಆಗ ಅಲ್ಲಿಂದ ತೆರಳುವುದು ಸೂಕ್ತ ಎಂದು ಸ್ಥಳೀಯರು ಹೇಳಿದರು. ಶನಿವಾರ (ಆ 18) ಕೊಚ್ಚಿಯಿಂದ ವಿಮಾನ ಮೂಲಕ ಮುಂಬೈಗೆ ಮರಳಬೇಕಿತ್ತು. ಆದರೆ ಅಷ್ಟೊತ್ತಿಗೆ ಆಗಲೇ ಕೊಚ್ಚಿ ಏರ್‌ಪೋರ್ಟ್‌ ಕೂಡ ನೀರಿನಿಂದ ಆವೃತವಾಗಿತ್ತು. ವಿಮಾನ ಹಾರಾಟವು ಸ್ಥಗಿತವಾದ ಸುದ್ದಿ ಮೊಬೈಲ್‌ನ ಸಂದೇಶದ ಮೂಲಕ ಸಿಕ್ಕಿತು. ಆದ್ದರಿಂದ ತ್ರಿಶೂರ್‌ಗೆ ತೆರಳಿ ಅಲ್ಲಿಂದ ಮುಂದೆ ಹೋಗುವ ಬಗ್ಗೆ ವಿಚಾರ ಮಾಡಿದೆವು. ಚಾಲಕ್ಕುಡಿಯಿಂದ ತ್ರಿಶೂರ್‌ಗೆ ಆಟೋ ರಿಕ್ಷಾವೊಂದರಲ್ಲಿ ಬಂದೆವು. ಈ ಪರಿಸ್ಥಿತಿಯನ್ನು ಮುಂಬೈನ ಸ್ನೇಹಿತರೊಂದಿಗೆ ಇರುವ ವಾಟ್ಸ್‌ಆಪ್‌ ಗುಂಪಿನಲ್ಲಿ ಹಂಚಿಕೊಂಡೆ. ಪತ್ರಕರ್ತ ಮಿತ್ರರೊಬ್ಬರು, ಪಾಲಕ್ಕಾಡ್‌ನಲ್ಲಿರುವ ತಮ್ಮ ಸಹೋದರನ ಮೂಲಕ ನಮಗೆ ಸಹಾಯ ಹಸ್ತ ಚಾಚಿದರು’

’ಪಾಲಕ್ಕಾಡ್‌ ಗಣೇಶ್ ಮರಾರ್‌ ಅವರು ಪರಿಹಾರ ಪೀಡಿತರಿಗಾಗಿ ಬಹಳಷ್ಟು ಕೆಲಸ ಮಾಡುತ್ತಿದ್ದಾರೆ. ಅವರು ಮತ್ತು ಅವರ ಸ್ನೇಹಿತರು ನಮಗೆ ಟೆಂಪೊ ಟ್ರಾವಲರ್‌ ಮಾಡಿ ತ್ರಿಶೂರ್‌ಗೆ ತೆರಳುವ ವ್ಯವಸ್ಥೆ ಮಾಡಿದರು. ಆದರೆ ಅಲ್ಲಿಂದ ಮುಂಬೈನತ್ತ ತೆರಳುವ ಮಾರ್ಗ ಮತ್ತು ಸೌಲಭ್ಯಗಳ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಅದೇ ಸಂದರ್ಭದಲ್ಲಿ ಪಾಲಕ್ಕಾಡ್‌ನಿಂದ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಮಂಗಳೂರು ಮತ್ತು ಬೆಂಗಳೂರಿಗೆ ಬಿಡಲಾಗುತ್ತಿದೆ ಎಂದು ತಿಳಿಯಿತು. ಆದ್ದರಿಂದ ಮತ್ತೆ ಪಾಲಕ್ಕಾಡ್‌ಗೆ ಹೋಗಿ ಶುಕ್ರವಾರ ರಾತ್ರಿ ಐರಾವತ್ ಬಸ್‌ನಲ್ಲಿ ಪಯಣಿಸಿ ಶನಿವಾರ ಮಂಗಳೂರಿಗೆ ಬಂದೆವು. ಭಾನುವಾರ ಬೆಂಗಳೂರಿಗೆ ಬಂದೆವು. ನಮ್ಮ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡು, ಮಂಗಳವಾರ ವಿಮಾನ ಮೂಲಕ ಮುಂಬೈಗೆ ಬಂದೆವು’

‘ಕೇರಳದಲ್ಲಿ ಪರಿಸ್ಥಿತಿ ತುಂಬಾ ಗಂಭೀರವಿದೆ. ಎಲ್ಲಕ್ಕಿಂತ ದೊಡ್ಡ ಸಮಸ್ಯೆಯೆಂದರೆ ಇಲ್ಲಿಂದ ಅಲ್ಲಿಗೆ ಹೋದ ಪ್ರವಾಸಿಗರ ಜೇಬಿನಲ್ಲಿ ಅಗತ್ಯಕ್ಕೆ ತಕ್ಕಷ್ಟು ದುಡ್ಡು ಇಲ್ಲದಿರುವುದು. ವಿದ್ಯುತ್, ಇಂಟರ್‌ನೆಟ್‌ ಸಂಪರ್ಕಗಳೆಲ್ಲ ಕಡಿತಗೊಂಡಿದ್ದರಿಂದ ಎಟಿಎಂ ಯಂತ್ರಗಳು ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದಾಗಿ ಸುರಕ್ಷಿತ ಪ್ರದೇಶಗಳಿಗೆ ತೆರಳಲು ವಾಹನ, ಆಹಾರ ಮತ್ತಿತರ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ಪರದಾಡುವಂತಾಗಿದೆ.ಮೂರು ದಿನ ನಾವು ಬರೀ ಬ್ರೆಡ್‌ಮಾತ್ರ ತಿಂದು ಬದುಕಿದ್ದೆವು. ಕೆಲವು ವಾಹನಗಳ ಮಾಲೀಕರು ಉಚಿತ ಸೇವೆ ನೀಡಲು ಮುಂದೆ ಬಂದಿದ್ದಾರೆ. ಆದರೆ ಪೆಟ್ರೋಲ್, ಡಿಸೆಲ್‌ ಕೂಡ ಸಿಗದಂತಹ ಪರಿಸ್ಥಿತಿ. ಪ್ರವಾಹ ಇಳಿದ ಮೇಲೆಯೂ ಸಾಂಕ್ರಾಮಿಕ ರೋಗಗಳ ಭೀತಿ ಅಲ್ಲಿದೆ. ಆದ್ದರಿಂದ ಮೊದಲು ಅಲ್ಲಿಂದ ಹೊರಡುವ ವಿಚಾರ ಮಾಡಿದೆವು. ಕೆಎಸ್‌ಆರ್‌ಟಿಸಿ ನೆರವಿನಿಂದ ಸುರಕ್ಷಿತವಾಗಿ ಬಂದಿದ್ದೇವೆ’ ಎಂದು ರೊಜಾರಿಯೊ–ಸುಮನ್ ದಂಪತಿ ಹೇಳುತ್ತಾರೆ.

ಪ್ರವಾಹದ ನೀರು ಸುತ್ತುರವರಿದಿರುವ ಚೆಲಕ್ಕುಡಿಯ ಡಿವೈನ್ ರಿಟ್ರಿಟ್‌ ಸೆಂಟರ್
ಪ್ರವಾಹದ ನೀರು ಸುತ್ತುರವರಿದಿರುವ ಚೆಲಕ್ಕುಡಿಯ ಡಿವೈನ್ ರಿಟ್ರಿಟ್‌ ಸೆಂಟರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT