ಬೆಂಬಲಿಗರ ಸಭೆಯಲ್ಲಿ ಮಾಜಿ ಸಚಿವ ಶ್ರೀನಿವಾಸಗೌಡ ಹೇಳಿಕೆ

ಚುನಾವಣೆಗೆ ಸ್ಪರ್ಧಿಸುವ ನಿರ್ಧಾರ ಅಚಲ

‘ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ನಿರ್ಧಾರ ಅಚಲ. ಜೆಡಿಎಸ್ ಪಕ್ಷದ ಟಿಕೆಟ್ ಸಿಗಲಿ ಬಿಡಲಿ ಸ್ಪರ್ಧೆಯ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ’ ಎಂದು ಮಾಜಿ ಸಚಿವ ಕೆ.ಶ್ರೀನಿವಾಸಗೌಡ ಹೇಳಿದರು.

ಮಾಜಿ ಸಚಿವ ಕೆ.ಶ್ರೀನಿವಾಸಗೌಡ ಅವರು ಬೆಂಬಲಿಗರ ಸಭೆ ನಡೆಸಿದರು

ಕೋಲಾರ: ‘ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ನಿರ್ಧಾರ ಅಚಲ. ಜೆಡಿಎಸ್ ಪಕ್ಷದ ಟಿಕೆಟ್ ಸಿಗಲಿ ಬಿಡಲಿ ಸ್ಪರ್ಧೆಯ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ’ ಎಂದು ಮಾಜಿ ಸಚಿವ ಕೆ.ಶ್ರೀನಿವಾಸಗೌಡ ಹೇಳಿದರು.

ನಗರದಲ್ಲಿ ಶನಿವಾರ ನಡೆದ ಬೆಂಬಲಿಗರ ಸಭೆಯಲ್ಲಿ ಮಾತನಾಡಿ, ‘ಪಕ್ಷೇತರನಾಗಿ ಕಣಕ್ಕೆ ಇಳಿಯುವುದು ಖಚಿತ. ಶಾಸಕ ವರ್ತೂರು ಪ್ರಕಾಶ್ ಅವರನ್ನು ಸೋಲಿಸುವುದೇ ನನ್ನ ಗುರಿ. ಇದಕ್ಕೆ ಎಲ್ಲರೂ ಪಕ್ಷಾತೀತವಾಗಿ ಸಹಕರಿಸಬೇಕು’ ಎಂದು ಮನವಿ ಮಾಡಿದರು.

‘ಏ.23ರಂದು ಬೆಳಿಗ್ಗೆ 11ಕ್ಕೆ ನಾಮಪತ್ರ ಸಲ್ಲಿಸುತ್ತೇನೆ. ನಗರದ ಪ್ರವಾಸಿ ಮಂದಿರದಿಂದ ಉಪ ವಿಭಾಗಾಧಿಕಾರಿ ಕಚೇರಿವರೆಗೆ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಸುಮಾರು 20 ಸಾವಿರ ಮಂದಿ ಮೆರವಣಿಗೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಬೆಂಬಲಿಗರು ಹಾಗೂ ಆಪ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶಕ್ತಿ ಪ್ರದರ್ಶನ ಮಾಡಬೇಕು’ ಎಂದು ತಿಳಿಸಿದರು.

‘ಯಾರೂ ಏನೇ ಹೇಳಲಿ ಈ ಬಾರಿ ವರ್ತೂರು ಪ್ರಕಾಶ್‌ ಅವರನ್ನು ಸೋಲಿಸಿ ಮನೆಗೆ ಕಳಿಸಲೇಬೇಕು. ಆತ ಕ್ಷೇತ್ರಕ್ಕೆ ಕಾಲಿಟ್ಟ ಮೇಲೆ ರಾಜಕೀಯ ಹೊಲಸಾಗಿದೆ. ಈ ಸಂಗತಿ ಎಲ್ಲರಿಗೂ ಗೊತ್ತಿದೆ. ಸಮಾಜ ಸೇವೆ ಹೆಸರಿನಲ್ಲಿ ಬಂದ ಆಸಾಮಿ ಸಮಾಜವನ್ನು ಛಿದ್ರಗೊಳಿಸಿ ಇಡೀ ಕ್ಷೇತ್ರವನ್ನು ಜಾತಿ ಮತಗಳಿಂದ ಹಾಳು ಮಾಡಿದ. ಈಗ ನಾವೆಲ್ಲಾ ಒಂದಾಗಿ ಮನಸ್ತಾಪ ಬದಿಗೊತ್ತಿ ವರ್ತೂರು ಪ್ರಕಾಶ್‌ನನ್ನು ಕ್ಷೇತ್ರದಿಂದ ಖಾಲಿ ಮಾಡಿಸೋಣ’ ಎಂದರು.

ಪಿತೂರಿ ಮಾಡಿದ್ದಾರೆ: ‘ಜೆಡಿಎಸ್ ಪಕ್ಷದಲ್ಲಿ ಟಿಕೆಟ್ ಕೊಡುತ್ತಾರೆಂಬ ವಿಶ್ವಾಸವಿತ್ತು. ಆದರೆ, ವರಿಷ್ಠರು ಟಿಕೆಟ್ ಕೊಡಲಿಲ್ಲ. ನನ್ನ ನೆರಳಿನಲ್ಲೇ ಬೆಳೆದವರು ಟಿಕೆಟ್‌ ತಪ್ಪಿಸಲು ಪಿತೂರಿ ಮಾಡಿದ್ದಾರೆ. ವರಿಷ್ಠರ ಬಳಿ ನನ್ನ ವಿರುದ್ಧ ಇಲ್ಲಸಲ್ಲದ್ದನ್ನು ಹೇಳಿದ್ದಾರೆ. ಇದರಿಂದ ಬೇಸತ್ತು ಕಾಂಗ್ರೆಸ್ ಕಡೆ ಮುಖ ಮಾಡಿದೆ. ಆದರೆ, ಆ ಪಕ್ಷದಲ್ಲೂ ಟಿಕೆಟ್‌ ಸಿಗಲಿಲ್ಲ. ನಂತರ ಮತ್ತೆ ಜೆಡಿಎಸ್ ಟಿಕೆಟ್ ಬಯಸಿದ್ದು ನಿಜ. ಆದರೆ, ಅದೂ ಸಾಧ್ಯವಾಗಲಿಲ್ಲ’ ಎಂದು
ವಿವರಿಸಿದರು.

‘ಕಾಂಗ್ರೆಸ್‌ ಪಕ್ಷದಲ್ಲಿದ್ದ ವಕ್ಕಲೇರಿ ರಾಮು ಅವರನ್ನು ಪಕ್ಷಕ್ಕೆ ಕರೆತಂದು ಹಲವರ ವಿರೋಧದ ನಡುವೆಯೂ ಅವರ ಪತ್ನಿಯನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯಾಗಿ ಮಾಡಿದೆ. ನಂತರ ಒಕ್ಕಲಿಗರ ಸಂಘಕ್ಕೆ ರಾಮು ಅವರನ್ನು ನಿರ್ದೇಶಕರನ್ನಾಗಿ ಮಾಡಿದೆ. ಕಾರಣಾಂತರದಿಂದ ಅವರು ಕ್ಯಾಲನೂರು ಕ್ಷೇತ್ರದಲ್ಲಿ ಜಿ.ಪಂ ಚುನಾವಣೆಯಲ್ಲಿ ಸೋತರು. ಆ ಚುನಾವಣೆಯಲ್ಲೂ ಅವರ ಗೆಲುವಿಗೆ ಶಕ್ತಿಮೀರಿ ಪ್ರಯತ್ನಿಸಿದ್ದೆ’ ಎಂದರು.

‘ಪಕ್ಷದಲ್ಲಿನ ಕೆಲವರನ್ನು ಮನೆ ಮಕ್ಕಳಂತೆ ನೋಡಿಕೊಂಡೆ. ಜನ ಏನೇ ದೂರು ಹೇಳಿದರೂ ನಂಬಲಿಲ್ಲ. ಆದರೆ, ಆ ವ್ಯಕ್ತಿಗಳೇ ಈಗ ನನ್ನ ವಿರುದ್ಧ ವರಿಷ್ಠರಿಗೆ ಚಾಡಿ ಹೇಳಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಬೆಂಬಲಿಗರು, ‘ಅಣ್ಣ ನೀವು ಯೋಚನೆ ಮಾಡಬೇಡಿ. ನಾವು ನಿಮ್ಮ ಜತೆಗಿದ್ದೇವೆ. ಯಾರೇ ನಿಮ್ಮ ವಿರುದ್ಧ ನಿಂತರೂ ನಾವು ನಿಮ್ಮ ಕೈ ಬಿಡುವುದಿಲ್ಲ. ನೀವು ಜೆಡಿಎಸ್‌ನಿಂದ ಸ್ಪರ್ಧಿಸಬೇಕು ಎನ್ನುವುದು ನಮ್ಮ ಆಸೆಯಾಗಿತ್ತು. ನೀವು ಪಕ್ಷ ಬಿಡುವುದು ಇಷ್ಟವಿರಲಿಲ್ಲ. ಆದರೆ, ವರಿಷ್ಠರೇ ನಿಮಗೆ ಅವಮಾನ ಮಾಡಿದರು. ದುಃಖ ಪಡಬೇಡಿ, ನಿಮ್ಮನ್ನು ಗೆಲ್ಲಿಸಿಯೇ ತೀರುತ್ತೇವೆ’ ಎಂದು ಭರವಸೆ ನೀಡಿದರು.

ಜೆಡಿಎಸ್‌ಗೆ ಹೋಗಬೇಡಿ: ‘ಜೆಡಿಎಸ್‌ ಟಿಕೆಟ್ ಸಿಗದಿರುವುದಕ್ಕೆ ಚಿಂತೆ ಮಾಡಬೇಡಿ. ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಸಾಧಿಸಿ. ಆಗ ಎಲ್ಲರೂ ನಿಮ್ಮ ಬಳಿ ಬರುತ್ತಾರೆ. ಈವರೆಗೆ ಆಗಿರುವ ಅವಮಾನವೇ ಸಾಕು. ವರಿಷ್ಠರು ತಾವಾಗಿಯೇ ಕರೆದು ಟಿಕೆಟ್ ಕೊಡುತ್ತೇವೆ ಎಂದರೂ ಜೆಡಿಎಸ್‌ಗೆ ಹೋಗಬೇಡಿ’ ಎಂದು ಮನವಿ ಮಾಡಿದರು.

ವೇಮಗಲ್, ಕ್ಯಾಲನೂರು, ವಕ್ಕಲೇರಿ, ನರಸಾಪುರ ಹೋಬಳಿಗಳ ವ್ಯಾಪ್ತಿಯ ಕಾರ್ಯಕರ್ತರು ಹಾಗೂ ಬೆಂಬಲಿಗರು ಸಭೆಯಲ್ಲಿ ಭಾಗವಹಿಸಿದ್ದರು. ಜೆಡಿಎಸ್‌ ಜಿಲ್ಲಾ ಘಟಕದ ಉಪಾಧ್ಯಕ್ಷ ಇ.ಗೋಪಾಲಪ್ಪ, ಕಾರ್ಯಾಧ್ಯಕ್ಷ ಅನ್ವರ್‌ ಪಾಷಾ, ಡಿಸಿಸಿ ಬ್ಯಾಂಕ್‌ ನಿರ್ದೇಶಕರಾದ ಸೋಮಣ್ಣ, ದಯಾನಂದ್, ಬೆಂಬಲಿಗರಾದ ಉಮಾಶಂಕರ್, ಚಂದ್ರಪ್ಪ, ಮುರಳಿರೆಡ್ಡಿ, ಗೋಪಾಲಗೌಡ, ಚಂದ್ರಮೌಳಿ ಹಾಜರಿದ್ದರು.

**

ಪಕ್ಷೇತರನಾಗಿ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಕ್ಷೇತ್ರದ ಜನ ಮತ್ತು ಬೆಂಬಲಿಗರು ಇಷ್ಟು ವರ್ಷ ರಾಜಕೀಯವಾಗಿ ಬೆಳೆಸಿದ್ದಾರೆ ಅವರ ಋಣ ನನ್ನ ಮೇಲಿದೆ  – ಕೆ.ಶ್ರೀನಿವಾಸಗೌಡ, ಮಾಜಿ ಸಚಿವ.

**

Comments
ಈ ವಿಭಾಗದಿಂದ ಇನ್ನಷ್ಟು
ಬಾವಲಿ ಕಂಡರೆ ಭಯ ಬೀಳುತ್ತಿರುವ ಜನರು

ಶ್ರೀನಿವಾಸಪುರ
ಬಾವಲಿ ಕಂಡರೆ ಭಯ ಬೀಳುತ್ತಿರುವ ಜನರು

26 May, 2018
ಖಾಸಗಿ ಶಾಲೆಗೆ ಬೀಗ, ಬೀದಿಗೆ ಮಕ್ಕಳು

ಬಂಗಾರಪೇಟೆ
ಖಾಸಗಿ ಶಾಲೆಗೆ ಬೀಗ, ಬೀದಿಗೆ ಮಕ್ಕಳು

26 May, 2018

ಕೋಲಾರ
ಮಕ್ಕಳ ಕಳ್ಳರ ವದಂತಿ: ಕರಪತ್ರ ಹಂಚಿಕೆ

ರಾಜ್ಯಕ್ಕೆ ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ವದಂತಿ ಹಬ್ಬಿರುವ ಹಿನ್ನೆಲೆಯಲ್ಲಿ ನಗರದ ಗಲ್‌ಪೇಟೆ ಠಾಣೆ ಪೊಲೀಸರು ಸಾರ್ವಜನಿಕರ ಆತಂಕ ದೂರ ಮಾಡಲು ನಗರದಲ್ಲಿ ಶುಕ್ರವಾರ...

26 May, 2018

ಕೆಜಿಎಫ್‌
ಪೊಲೀಸರಿಗೆ ದಲಿತ ಸಮಾಜ ಸೇನೆ ಮನವಿ

ಮಕ್ಕಳ ಅಪಹರಣ ಬಗ್ಗೆ ವದಂತಿ ಹಬ್ಬಿದ್ದು, ಕೂಡಲೇ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ದಲಿತ ಸಮಾಜ ಸೇನೆಯ ಅಧ್ಯಕ್ಷ ಸೂಲಿಕುಂಟೆ ಆನಂದ್ ಒತ್ತಾಯಿಸಿದರು. ...

25 May, 2018

ಕೆಜಿಎಫ್‌
ಮಕ್ಕಳ ಅಪಹರಣ: ಪೋಷಕರಲ್ಲಿ ನಿವಾರಣೆಯಾಗದ ಭೀತಿ

ಮಕ್ಕಳ ಅಪಹರಣದ ಕುರಿತ ವದಂತಿ ಹಾಗೂ ಅಮಾಯಕರ ಮೇಲೆ ಹಲ್ಲೆ ನಡೆಯುತ್ತಿರುವ ಬಗ್ಗೆ ಪೊಲೀಸರು ಸಮರ್ಪಕ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಅಸಮಾಧಾನ ವ್ಯಕ್ತವಾಗುತ್ತಿದೆ. ಕಳೆದ...

25 May, 2018