ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಡಗಲಿ ಮಲ್ಲಿಗೆ’ ಬೆಲೆಯಲ್ಲಿ ಚೇತರಿಕೆ

ಅಧಿಕ ಆಷಾಢದಲ್ಲಿ ಬೆಲೆ ಕುಸಿತದಿಂದ ಕಂಗಾಲಾಗಿದ್ದ ಪುಷ್ಪ ಕೃಷಿಕರು
Last Updated 23 ಆಗಸ್ಟ್ 2018, 12:28 IST
ಅಕ್ಷರ ಗಾತ್ರ

ಹೂವಿನಹಡಗಲಿ: ಶ್ರಾವಣ ಮಾಸದ ನಿಮಿತ್ತ ಇಲ್ಲಿನ ಪಾರಂಪರಿಕ ಮಲ್ಲಿಗೆ ಬೆಳೆಗೆ ಬೇಡಿಕೆ ಹೆಚ್ಚಾಗಿದೆ. ನಾಗರ ಪಂಚಮಿಯಿಂದ ಸಾಲು ಸಾಲು ಹಬ್ಬಗಳು ಆರಂಭ ಆಗಿರುವುದರಿಂದ ಮಾರುಕಟ್ಟೆಯಲ್ಲಿ ಮಲ್ಲಿಗೆ ಹೂವಿನ ಬೆಲೆ ಚೇತರಿಕೆ ಕಂಡಿದ್ದು, ಬೆಳೆಗಾರರ ಮುಖದಲ್ಲಿ ಕೊಂಚ ನಿರಾಳಭಾವ ಮೂಡಿದೆ.

ಅತ್ಯಧಿಕ ಇಳುವರಿ ಮತ್ತು ಅಧಿಕ ಆಷಾಢ ನಿಮಿತ್ತ ಜೂನ್‌, ಜುಲೈನಲ್ಲಿ ಮಲ್ಲಿಗೆ ಬೆಲೆ ತೀವ್ರವಾಗಿ ಕುಸಿದಿತ್ತು. ಪ್ರತಿ ಕೆ.ಜಿ. ಮಲ್ಲಿಗೆಗೆ ಉತ್ಪಾದನಾ ವೆಚ್ಚ ₨150 ತಗುಲಿದರೆ, ಹೂ ಮಾರುಕಟ್ಟೆಯಲ್ಲಿ ಕೆ.ಜಿ.ಗೆ ಬರೀ ₨30 ಸಿಗುತ್ತಿತ್ತು. ಇದರಿಂದ ಕಂಗಾಲಾಗಿದ್ದ ಬೆಳೆಗಾರರು ಪಾರಂಪರಿಕ ಮಲ್ಲಿಗೆ ಕೃಷಿಗೆ ವಿದಾಯ ಹೇಳುವ ಮಾತುಗಳನ್ನು ಆಡುತ್ತಿದ್ದರು.

ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆಯೇ ಎಲ್ಲ ಬಗೆಯ ಹೂಗಳ ಬೆಲೆ ಏರಿಕೆಯಾಗಿದೆ. ಆಷಾಢದಲ್ಲಿ ₨100 ಒಳಗೆ ಮಾರಾಟವಾಗುತ್ತಿದ್ದ ಹಡಗಲಿಯ ಸುವಾಸನೆ ಮಲ್ಲಿಗೆಗೆ ಶ್ರಾವಣದಲ್ಲಿ ಪ್ರತಿ ಕೆ.ಜಿ.ಗೆ ₨500 ಗರಿಷ್ಠ ಬೆಲೆ ದೊರೆತಿದೆ. ಕನಕಾಂಬರ ಕೆ.ಜಿ.ಗೆ ₨1,200 ರಿಂದ 15,00, ಸುಗಂಧರಾಜ ಮತ್ತು ಸೇವಂತಿಗೆ ₨150 ರಿಂದ 200, ಚೆಂಡು ಹೂ ₨20 ರಿಂದ 30 ರ ವರೆಗೆ ಮಾರಾಟವಾಗುತ್ತಿದೆ.

ಹೂವಿನಹಡಗಲಿಯ ಚಿಲ್ಲರೆ ಹೂ ಮಾರುಕಟ್ಟೆಯಲ್ಲಿ ಸಾಮಾನ್ಯ ದಿನಗಳಲ್ಲಿ ಮಲ್ಲಿಗೆ ಮಾರೊಂದಕ್ಕೆ ₨10–20 ಇರುತ್ತಿತ್ತು. ಶ್ರಾವಣದಲ್ಲಿ ₨50–60ಕ್ಕೆ ಏರಿಕೆಯಾಗಿದೆ. ಕನಕಾಂಬರ ಬೆಲೆ ₨100ರ ಆಸುಪಾಸಿನಲ್ಲಿದೆ. ಗುಲಾಬಿ ಒಂದಕ್ಕೆ ₨10ರಂತೆ ಮಾರಾಟವಾಗುತ್ತಿದೆ. ಹೂವಿನ ಹಾರಗಳು ₨50 ರಿಂದ ₨200, ₨300 ವರೆಗೆ ಮಾರಾಟವಾಗುತ್ತಿವೆ. ‘ವರಮಹಾಲಕ್ಷ್ಮಿ ಪೂಜೆಯ ಅಂಗವಾಗಿ ಹೂ ಬೆಲೆ ಇನ್ನಷ್ಟು ಹೆಚ್ಚಳವಾಗುವ ನಿರೀಕ್ಷೆಯಿದೆ’ ಎನ್ನುತ್ತಾರೆ ಹೂ ವ್ಯಾಪಾರಿ ಮುನೀರ್.

ಶ್ರಾವಣ ಮಾಸ ಪೂರ್ತಿ ಎಲ್ಲರ ಮನೆಗಳಲ್ಲೂ ವಿಶೇಷ ಪೂಜೆ, ವ್ರತ ಆಚರಣೆಗಳು ಜರುಗುತ್ತವೆ. ಹೂಗಳು ಹೆಚ್ಚು ಇದ್ದಷ್ಟೂ ಪೂಜಾ ಕೈಂಕರ್ಯಗಳ ಸೊಬಗು ಹೆಚ್ಚುತ್ತದೆ. ಮಾರುಕಟ್ಟೆಯಲ್ಲಿ ಹೂ ಮಾರಾಟ ಭರಾಟೆಯಿಂದ ಸಾಗಿದ್ದರೆ, ಶ್ರಾವಣ ಮಾಸವು ಪುಷ್ಪ ಕೃಷಿಕರ ಕೈ ಹಿಡಿದಿದೆ. ಮಧ್ಯವರ್ತಿಗಳ ಹಾವಳಿಯ ನಡುವೆಯೂ ಮಲ್ಲಿಗೆ ಬೆಳೆಗಾರರ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT