ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗಸ್ಟ್‌ 25ಕ್ಕೆ ಕಾನೂನು ವಿದ್ಯಾರ್ಥಿಗಳ ರಾಜ್ಯ ಸಮ್ಮೇಳನ

Last Updated 23 ಆಗಸ್ಟ್ 2018, 12:46 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ವತಿಯಿಂದ ಕಾನೂನು ವಿದ್ಯಾರ್ಥಿಗಳ ರಾಜ್ಯ ಸಮ್ಮೇಳನ ಆ.25ರಂದು ಬೆಳಿಗ್ಗೆ 10.30ಕ್ಕೆ ಹುಬ್ಬಳ್ಳಿಯ ಬಿವಿಬಿ ಬಯೋ ಟೆಕ್ನಾಲಜಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಪರಿಷತ್‌ನ ರಾಜ್ಯ ಕಾರ್ಯದರ್ಶಿ ಹರ್ಷ ನಾರಾಯಣ ತಿಳಿಸಿದರು.

ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಆಫ್‌ ಇಂಡಿಯಾದ ಪ್ರಭುಲಿಂಗ ನಾವದಗಿ ಸಮ್ಮೇಳನವನ್ನು ಉದ್ಘಾಟಿಸುವರು. ಕರ್ನಾಟಕ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಈಶ್ವರ ಭಟ್‌ ಹಾಗೂ ಎಬಿವಿಪಿ ರಾಷ್ಟ್ರೀಯ ಅಧ್ಯಕ್ಷ ಡಾ.ಸುಬ್ಬಯ್ಯ ಈ ಸಮ್ಮೇಳನದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ ಎಂದು ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ರಾಜ್ಯದ 100ಕ್ಕೂ ಹೆಚ್ಚು ಕಾಲೇಜುಗಳಿಂದ 600ಕ್ಕೂ ಹೆಚ್ಚು ಕಾನೂನು ವಿದ್ಯಾರ್ಥಿಗಳು ಹಾಗೂ ರಾಜ್ಯದ ಕಾನೂನು ತಜ್ಞರು, ವಕೀಲರು, ಚಿಂತಕರು ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದರು.

‘ಕಾನೂನು ಸುಧಾರಣೆ; ಒಂದು ಚಿಂತನೆ’ ಚರ್ಚಾಗೋಷ್ಠಿ ಹಾಗೂ ಕಾನೂನು ವಿಶ್ವವಿದ್ಯಾಲಯದ ಪರೀಕ್ಷಾ ಸುಧಾರಣೆ, ಮೌಲ್ಯಮಾಪನದ ಗೊಂದಲ, ಪ್ರಾದೇಶಿಕ ಕಚೇರಿ ತೆರೆಯುವುದು, ಕನ್ನಡದಲ್ಲಿ ಪಠ್ಯಪುಸ್ತಕ ಲಭಿಸುವಂತಾಗಬೇಕು ಎಂಬ ಆಗ್ರಹ ಸೇರಿದಂತೆ ಹತ್ತು ಹಲವು ವಿಷಯಗಳನ್ನೊಳಗೊಂಡ ನಿರ್ಣಯಗಳನ್ನು ಈ ಸಮ್ಮೇಳನದಲ್ಲಿ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ವಿವಿ ನಿರ್ಲಕ್ಷ್ಯ:ರಾಜ್ಯಕ್ಕೆ ಮಾದರಿಯಾಗಬೇಕಾಗಿದ್ದ ಕರ್ನಾಟಕ ಕಾನೂನು ವಿಶ್ವವಿದ್ಯಾಲಯ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಸ್ಥಾಪನೆಯಾಗಿ 10 ವರ್ಷವಾದರೂ ಉದ್ದೇಶಿತ ಗುರಿ ತಲುಪುವಲ್ಲಿ ವಿಫಲವಾಗಿದೆ ಎಂದು ಹೇಳಿದರು.

ಖಂಡನೆ:

ನವದೆಹಲಿಯಲ್ಲಿ ಸಂವಿಧಾನದ ಪ್ರತಿಯನ್ನು ಸುಟ್ಟುಹಾಕಿರುವ ಪ್ರಕರಣವನ್ನು ಎಬಿವಿಪಿ ಖಂಡಿಸುತ್ತದೆ. ಭಾರತೀಯರಿಗೆ ಸಂವಿಧಾನ ಪರೋಚ್ಛವಾಗಿದೆ. ಸಂವಿಧಾನಕ್ಕೆ ದಕ್ಕೆ ತರುವವರಿಗೆ ನಮ್ಮ ಬೆಂಬಲ ಇಲ್ಲ ಎಂದರು.

ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ಪವನ್‌ ಕರಿಕಟ್ಟಿ, ಕಾನೂನು ವಿದ್ಯಾರ್ಥಿಗಳಾದ ಸೂರಜ್‌ ಕಟಗಿ, ಸಚಿನ್‌, ರೇಖಾ ಹೊಸೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT