ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೈರಿ ಆರಂಭಿಸುವವರಿಗೆ ಶೇ .25 ಸಹಾಯಧನ: ನಬಾರ್ಡ್

ಉದ್ಯಮ ಅಭಿವೃದ್ಧಿ ಕಾರ್ಯಾಗಾರ
Last Updated 23 ಆಗಸ್ಟ್ 2018, 12:59 IST
ಅಕ್ಷರ ಗಾತ್ರ

ಹೊಳಲ್ಕೆರೆ: ಡೈರಿ ಆರಂಭಿಸಲು ರೈತರಿಗೆ ಬ್ಯಾಂಕ್‌ಗಳು ಸಾಲ ಸೌಲಭ್ಯ ನೀಡಲಿದ್ದು, ನಬಾರ್ಡ್ ನಿಂದ ಶೇ 25ರಷ್ಟು ಸಹಾಯಧನ ನೀಡಲಾಗುವುದು ಎಂದು ನಬಾರ್ಡ್ ಡಿಡಿಎಂ ಮಾಲಿನಿ ಸುವರ್ಣಾ ಹೇಳಿದರು.

ತಾಲ್ಲೂಕಿನ ಮಲ್ಲಾಡಿಹಳ್ಳಿಯ ಹೊರವಲಯದಲ್ಲಿರುವ ಅಮೃತ್ ಆರ್ಗ್ಯಾನಿಕ್ಸ್ ಫರ್ಟಿಲೈಸರ್ಸ್ ಕಾರ್ಖಾನೆಯಲ್ಲಿ ಶುಕ್ರವಾರ ನಡೆದ ಡೈರಿ ಉದ್ಯಮ ಅಭಿವೃದ್ಧಿ ಕಾರ್ಯಾಗಾರದಲ್ಲಿ ಮಾತನಾಡಿದರು.

ರೈತರು ಡೈರಿ ಆರಂಭಿಸುವುದರಿಂದ ಹೆಚ್ಚು ಲಾಭ ಗಳಿಸಬಹುದು. ಹಸು ಖರೀದಿ, ಶೆಡ್ ನಿರ್ಮಾಣ ಹಾಗೂ ನಿರ್ವಹಣೆಗೆ ಅಗತ್ಯವಾದ ಸಾಲವನ್ನು ಬ್ಯಾಂಕ್ ಮೂಲಕ ಪಡೆಯಬಹುದು. ₹ 10 ಲಕ್ಷ ಸಾಲ ಪಡೆದರೆ, ₹ 1.75 ಲಕ್ಷ ಸಬ್ಸಿಡಿ ದೊರೆಯಲಿದೆ. ಇದಕ್ಕಿಂತ ಕಡಿಮೆ ಸಾಲ ಪಡೆದರೆ ಶೇ 25ರಷ್ಟು ಸಬ್ಸಿಡಿ ಸಿಗುತ್ತದೆ. ಡೈರಿ ಉದ್ಯಮ ಹೆಚ್ಚು ಲಾಭದಾಯಕವಾಗಿದ್ದು, ಸ್ವ ಉದ್ಯೋಗ ದೊರೆತಂತಾಗುತ್ತದೆ. ಉದ್ಯೋಗ ಹರಸಿ ಬೇರೆಡೆಗೆ ಹೋಗುವುದಕ್ಕಿಂತ ತಮ್ಮ ಸ್ವಂತ ಜಮೀನಿನಲ್ಲಿ ಡೈರಿ ಆರಂಭಿಸಿ ಸ್ವಾವಲಂಬಿಗಳಾಗಬಹುದು ಎಂದರು.

ಅಮೃತ್ ಆರ್ಗ್ಯಾನಿಕ್ಸ್ ಫರ್ಟಿಲೈಸರ್ಸ್ ಕಾರ್ಖಾನೆಯ ಮಾಲೀಕ ಕೆ. ನಾಗರಾಜ್ ಮಾತನಾಡಿ, ಡೈರಿ ಆರಂಭಿಸುವುದರಿಂದ ವಿವಿಧ ಲಾಭಗಳು ದೊರೆಯಲಿವೆ. ಡೈರಿ ಕೇವಲ ಹಾಲು ಮಾರಾಟ ಮಾಡುವುದಕ್ಕೆ ಸೀಮಿತ ಆಗಬಾರದು. ಹಾಲು ಮಾರಾಟದೊಂದಿಗೆ ಪೇಡ, ಕೋವ, ಮೈಸೂರ್ ಪಾಕ್, ಚೀಸ್, ತುಪ್ಪ ಮತ್ತಿತರ ಹಾಲಿನ ಉತ್ಪನ್ನಗಳನ್ನು ತಯಾರಿಸುವುದರಿಂದ ಹೆಚ್ಚು ಲಾಭ ಗಳಿಸಬಹುದು. ಹಸುವಿನ ಸಗಣಿ, ಗಂಜಲದಿಂದ ಸಾವಯವ ಗೊಬ್ಬರ, ಗೋಬರ್ ಗ್ಯಾಸ್ ತಯಾರಿಸಬಹುದು. ಹಸುವಿನ ಉತ್ಪನ್ನಗಳಿಗೆ ಆಯುರ್ವೇದ ಕ್ಷೇತ್ರದಲ್ಲಿ ಹೆಚ್ಚು ಬೇಡಿಕೆ ಇದೆ ಎಂದರು.

ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಜಿ.ಆರ್. ಮಂಜುನಾಥ್, ಚಿತ್ರದುರ್ಗದ ಕೆ.ಎಂ.ಎಫ್‌ನ ವ್ಯವಸ್ಥಾಪಕ ಡಾ.ಡಿ.ಎಂ. ತಿಪ್ಪೇಸ್ವಾಮಿ, ಪಶುವೈದ್ಯ ಇಲಾಖೆಯ ಡಿ.ಪಿ.ಟಿ. ಡಾ.ಡಿ. ಪರಮೇಶ್ವರ ನಾಯಕ್, ಸೆಲ್ಕೊ ಕಂಪನಿ ಮಂಜುನಾಥ್ ಭಾಗವತ್, ಪಿ.ಕೆ.ಜಿ.ಬಿ. ಪ್ರಾದೇಶಿಕ ವ್ಯವಸ್ಥಾಪಕ ಚಂದ್ರಶೇಖರಯ್ಯ, ವ್ಯವಸ್ಥಾಪಕ ಬಸವೇಶ್, ಕೆ.ಎಸ್.ಪಿ.ಎ.ಆರ್.ಡಿ. ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ವೇಣುಗೋಪಾಲ ನಾಯಕ್, ಪಶು ವೈದ್ಯಾಧಿಕಾರಿ ಡಾ.ಮಹೇಶ್, ಟಿ.ಒ. ಗೋಪಾಲಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT