ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಡನಹಳ್ಳಿ: ಮಾದರಿ ಗ್ರಾಮ ಯೋಜನೆ ಅಡಿ ವಿವಿಧ ಸೌಲಭ್ಯ ನಿರ್ಮಾಣ

Last Updated 23 ಆಗಸ್ಟ್ 2018, 13:01 IST
ಅಕ್ಷರ ಗಾತ್ರ

ಬಿಡದಿ (ರಾಮನಗರ): ‘ಮೇಡನಹಳ್ಳಿ ಗ್ರಾಮದ ಅಭಿವೃದ್ಧಿಗೆ ಕೋಕಾಕೋಲಾ ಕಂಪನಿಯು ಹಲವು ರೀತಿಯಲ್ಲಿ ನೆರವು ನೀಡಿದೆ. ಸಾರ್ವಜನಿಕರು ಇವೆಲ್ಲವೂ ತಮ್ಮದೇ ಎಂದು ಭಾವಿಸಿ ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕಿ ಶುಕ್ಲಾ ವಾಸನ್‌ ಹೇಳಿದರು.

ಇಲ್ಲಿನ ಮೇಡನಹಳ್ಳಿಯಲ್ಲಿ ‘ಎಚ್‌ಸಿಸಿಸಿ ಮಾದರಿ ಗ್ರಾಮ ಯೋಜನೆ’ ಸಮರ್ಪಣೆ ಹಾಗೂ ವಿವಿಧ ಸೌಲಭ್ಯಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಗುರುವಾರ ಅವರು ಮಾತನಾಡಿದರು. ‘ಗ್ರಾಮದಲ್ಲಿ ಕಂಪನಿಯು 50 ಸಾವಿರ ಲೀಟರ್ ನೀರು ಸಂಗ್ರಹ ಸಾಮರ್ಥ್ಯದ ಟ್ಯಾಂಕ್‌ ನಿರ್ಮಿಸಲಾಗಿದ್ದು, ಇದರಿಂದ ಇಲ್ಲಿನ 771 ಮನೆಗಳಿಗೆ ನೀರು ಪೂರೈಕೆ ಸಾಧ್ಯವಾಗಲಿದೆ. 2017ರ ಡಿಸೆಂಬರ್‌ನಲ್ಲಿ ಇದರ ನಿರ್ಮಾಣ ಕಾಮಗಾರಿ ಆರಂಭಿಸಲಾಗಿತ್ತು. ಇದೀಗ ನಿರ್ಮಾಣ ಕಾರ್ಯ ಪೂರ್ಣಗೊಂಡು ಪುರಸಭೆಗೆ ಹಸ್ತಾಂತರಿಸಲಾಗುತ್ತಿದೆ’ ಎಂದು ತಿಳಿಸಿದರು.

‘ಕಂಪನಿಯು ಗ್ರಾಮವನ್ನು ದತ್ತು ತೆಗೆದುಕೊಂಡು ಹಲವು ಸವಲತ್ತುಗಳನ್ನು ಕಲ್ಪಿಸಿದೆ. ಈಗಾಗಲೇ ನೀರು ಶುದ್ಧೀಕರಣ ಘಟಕವನ್ನು ನಿರ್ಮಿಸಲಾಗಿದೆ. ಇಲ್ಲಿ ಕೌಶಲ ಅಭಿವೃದ್ಧಿ ಕೇಂದ್ರವನ್ನು ಸ್ಥಾಪಿಸಿ ಆ ಮೂಲಕ ಕಳೆದ ಐದು ವರ್ಷದಲ್ಲಿ 1100ಕ್ಕೂ ಹೆಚ್ಚು ಮಂದಿಗೆ ತರಬೇತಿ ನೀಡಲಾಗಿದೆ. ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳಿಗೂ ಉತ್ತೇಜನ ನೀಡಲಾಗುತ್ತಿದೆ’ ಎಂದು ಹೇಳಿದರು.

ಕಂಪನಿಯ ಕಾರ್ಯ ನಿರ್ವಾಹಕ ನಿರ್ದೇಶಕ ದಿನೇಶ್‌ ಜಾಧವ್‌ ಮಾತನಾಡಿ, ಸಮುದಾಯ ಅಭಿವೃದ್ಧಿ ಕಾರ್ಯಗಳಿಗೆ ಇಲ್ಲಿನ ಸಾರ್ವಜನಿಕರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಬಿ. ರಮೇಶ್‌ ಮಾತನಾಡಿ ‘ಕಂಪನಿಯು ನೀರಿನ ಟ್ಯಾಂಕ್ ನಿರ್ಮಾಣದ ಮೂಲಕ ಇಲ್ಲಿನ ಜನರ ಬವಣೆ ನೀಗಿಸಿರುವುದು ಶ್ಲಾಘನೀಯ. ಜನರು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು’ ಎಂದು ಸಲಹೆ ನೀಡಿದರು.

ಬಿಡದಿ ಪುರಸಭೆ ಅಧ್ಯಕ್ಷೆ ವೆಂಕಟೇಶಮ್ಮ ರಾಮಕೃಷ್ಣಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ ‘ಕಂಪನಿಯು ಇಲ್ಲಿನ ಮಕ್ಕಳ ಶಿಕ್ಷಣಕ್ಕೆ, ತರಬೇತಿಗೆ ನೆರವಾಗುತ್ತಿರುವುದು ಶ್ಲಾಘನೀಯ. ಅಂತೆಯೇ ಉದ್ಯೋಗ ನೀಡಿಕೆಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕು’ ಎಂದು ಮನವಿ ಮಾಡಿದರು.

ನೀರಿನ ಟ್ಯಾಂಕ್‌ ಹಾಗೂ ಶುದ್ಧ ನೀರು ಘಟಕಕ್ಕೆ ಭೂದಾನ ಮಾಡಿದ ಸತ್ಯಮೂರ್ತಿ ಹಾಗೂ ಹೊನ್ನಪ್ಪ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಪುರಸಭೆ ಉಪಾಧ್ಯಕ್ಷೆ ವೈಶಾಲಿ ಚನ್ನಪ್ಪ, ಸದಸ್ಯರಾದ ರಮೇಶ್, ಲೋಕೇಶ್, ಕುಮಾರ್‌, ರಾಜಣ್ಣ, ನಾಮನಿರ್ದೇಶಿತ ಸದಸ್ಯ ಶಿವರಾಜು, ಗ್ರಾಮದ ಮುಖಂಡರಾದ ಮುನಿತಿಮ್ಮಯ್ಯ, ರಾಮಕೃಷ್ಣಯ್ಯ, ಪುಟ್ಟಸ್ವಾಮಯ್ಯ, ನಾಗೇಶ್, ತಿಮ್ಮಣ್ಣ, ಕೋಕಾಕೋಲಾ ಕಂಪನಿಯ ಉಪಾಧ್ಯಕ್ಷ ಉಮೇಶ್‌ ಮಲಿಕ್ ಇದ್ದರು. ಕಂಪನಿಯ ಅಧಿಕಾರಿ ಧನಂಜಯ ನಿರೂಪಿಸಿದರು.
*
ಶಾಸಕ ಭಾಗಿ
ಗ್ರಾಮದಲ್ಲಿ ನಿರ್ಮಾಣವಾಗಿರುವ ಓವರ್‌ಹೆಡ್ ಟ್ಯಾಂಕ್ ಅನ್ನು ಶಾಸಕ ಎ.ಮಂಜುನಾಥ್ ಗುರುವಾರ ಬೆಳಿಗ್ಗೆ ಉದ್ಘಾಟಿಸಿದರು. ‘ಕಂಪನಿಯು ಈ ರೀತಿ ಜನೋಪಯೋಗಿ ಕಾರ್ಯಕ್ರಮಕ್ಕೆ ನೆರವು ನೀಡಿರುವುದು ಶ್ಲಾಘನೀಯ. ಬಿಡದಿ ಕೈಗಾರಿಕಾ ಪ್ರದೇಶದಲ್ಲಿನ ಇತರ ಕಂಪನಿಗಳೂ ಇಲ್ಲಿನ ಜನರಿಗೆ ಅನುಕೂಲವಾಗುವ ಸೌಲಭ್ಯಗಳನ್ನು ಕಲ್ಪಿಸಬೇಕು’ ಎಂದು ಅವರು ಹೇಳಿದರು.
**
ಮೇಡನಹಳ್ಳಿಯಲ್ಲಿ ಕೃಷಿಕರಿಗಾಗಿ ಹಲವು ಕಾರ್ಯಕ್ರಮ, ಆರೋಗ್ಯ ಶಿಬಿರಗಳ ಮೂಲಕ ಜನರಲ್ಲಿ ಅರಿವು ಮೂಡಿಸಲಾಗಿದೆ
ಶುಕ್ಲಾ ವಾಸನ್‌,ಕಾರ್ಯನಿರ್ವಾಹಕ ನಿರ್ದೇಶಕಿ, ಕೋಕಾಕೋಲಾ ಕಂಪನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT