ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಬಲ ಬೆಲೆಯಲ್ಲಿ ಹೆಸರು ಕಾಳು ಖರೀದಿಸಿ: ಸಂಸದ ಸುರೇಶ ಅಂಗಡಿ ಆಗ್ರಹ

Last Updated 23 ಆಗಸ್ಟ್ 2018, 13:17 IST
ಅಕ್ಷರ ಗಾತ್ರ

ಬೆಳಗಾವಿ: ‘ಜಿಲ್ಲೆಯಲ್ಲಿ ಹೆಸರು ಹಾಗೂ ಸೋಯಾಬೀನ್ ಖರೀದಿಗೆ ರಾಜ್ಯ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಕೇಂದ್ರ ಸರ್ಕಾರ ನಿಗದಿಪಡಿಸಿರುವ ಬೆಂಬಲ ಬೆಲೆ ರೈತರಿಗೆ ಸಿಗುವಂತೆ ನೋಡಿಕೊಳ್ಳಬೇಕು’ ಎಂದು ಸಂಸದ ಸುರೇಶ ಅಂಗಡಿ ಆಗ್ರಹಿಸಿದರು.

‘ಈ ಉತ್ಪನ್ನಗಳನ್ನು ರೈತರು ಅನಿವಾರ್ಯವಾಗಿ ಮಧ್ಯವರ್ತಿಗಳ ಮೂಲಕ ಮಾರುತ್ತಿದ್ದಾರೆ. ಇದರಿಂದಾಗಿ ನಷ್ಟ ಅನುಭವಿಸುತ್ತಿದ್ದಾರೆ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ಕ್ವಿಂಟಲ್‌ ಹೆಸರುಗೆ ₹ 6,975 ಬೆಲೆ ನಿಗದಿಪಡಿಸಲಾಗಿದೆ. ಮಾರುಕಟ್ಟೆಯಲ್ಲಿ ರೈತರಿಗೆ ₹ 4000ರಿಂದ ₹ 4200 ದೊರೆಯುತ್ತಿದೆ. ಇದರಿಂದ ಅವರಿಗೆ ₹ 2,700ಕ್ಕೂ ಹೆಚ್ಚಿನ ನಷ್ಟ ಉಂಟಾಗುತ್ತಿದೆ. ಅಂತೆಯೇ, ಸೋಯಾಬೀನ್‌ ಬೆಳೆದವರೂ ಕಡಿಮೆ ಬೆಲೆಗೆ ಮಾರುತ್ತಿದ್ದಾರೆ. ಖರೀದಿ ಪ್ರಕ್ರಿಯೆ ಆರಂಭಿಸಬೇಕಾದ ರಾಜ್ಯ ಸರ್ಕಾರ, ಕಾಳಜಿ ವಹಿಸುತ್ತಿಲ್ಲ. ಇದರಿಂದಾಗಿ ಅನ್ನದಾತರು ಸಂಕಷ್ಟಕ್ಕೆ ಒಳಗಾಗಿದ್ದಾರೆ’ ಎಂದು ಆರೋಪಿಸಿದರು.

ಸಂಪೂರ್ಣ ವಿಫಲ:‌‘ರೈತರಿಗೆ ನೆರವಾಗಲು ನಮ್ಮ ಸರ್ಕಾರವು ಬೆಂಬಲ ಬೆಲೆ ನಿಗದಿಪಡಿಸಿದೆ. ಬೆಳೆಗಳಿಗೆ ಉತ್ತಮ ಬೆಲೆ ದೊರೆತರೆ, ರೈತರ ಆತ್ಮಹತ್ಯೆ ಪ್ರಕರಣಗಳನ್ನು ತಡೆಯುವುದಕ್ಕೂ ಅವಕಾಶವಿದೆ. ಅವರ ಆರ್ಥಿಕ ಸ್ಥಿತಿಯೂ ಸುಧಾರಿಸುತ್ತದೆ. ಈ ಕುರಿತು ಕೇಂದ್ರ ಸಚಿವರಿಗೆ ನಾನೂ ಪತ್ರ ಬರೆದು ಆಗ್ರಹಿಸಿದ್ದೆ. ಸ್ಪಷ್ಟ ಮಾರ್ಗಸೂಚಿ ನೀಡಿದ್ದರೂ ಅದನ್ನು ಅನುಷ್ಠಾನಗೊಳಿಸಲು, ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಡಿಸಿಗೂ ಪತ್ರ ಬರೆದಿದ್ದೇನೆ. ಸರ್ಕಾರ ತಕ್ಷಣ ಕೇಂದ್ರಗಳನ್ನು ಆರಂಭಿಸಬೇಕು. ಇಲ್ಲವಾದಲ್ಲಿ, ರೈತರೊಂದಿಗೆ ಬೀದಿಗಿಳಿದು ಪ್ರತಿಭಟಿಸಬೇಕಾಗುತ್ತದೆ. ಆಗ ಉಂಟಾಗುವ ಅನಾಹುತಕ್ಕೆ ರಾಜ್ಯ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.‌

‘ಜೆಡಿಎಸ್–ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಿಂದ ರೈತರಿಗೆ ಅನುಕೂಲ ಆಗುತ್ತಿಲ್ಲ. ಸಾಧ್ಯವಾದರೆ ಜನಪರವಾಗಿ ಕೆಲಸ ಮಾಡಲಿ, ಇಲ್ಲವೇ ಕುರ್ಚಿ ಖಾಲಿ ಮಾಡಲಿ’ ಎಂದರು.

₹ 2,100 ಕೋಟಿ ವಾಪಸ್:‘ಕೇಂದ್ರ ಸರ್ಕಾರದಿಂದ ಮಂಜೂರಾಗಿದ್ದ ₹ 2,100 ಕೋಟಿ ಸಿಆರ್‌ಎಫ್‌ ಅನುದಾನವನ್ನು ಬಳಕೆ ಮಾಡಿಕೊಳ್ಳುವುದಕ್ಕೆ ಈ ಸರ್ಕಾರದಿಂದ ಆಗಿಲ್ಲ. ಇದರಿಂದಾಗಿ, ಆ ಅನುದಾನ ವಾಪಸಾಗಿದೆ. ಬಳಕೆ ಪ್ರಮಾಣಪತ್ರ ನೀಡದಿರುವುದೇ ಇದಕ್ಕೆ ಕಾರಣ. ರಾಜ್ಯದ ಎಲ್ಲ ಸಂಸದರ ನಿಯೋಗವನ್ನು ಕೇಂದ್ರ ಸಚಿವರ ಬಳಿಗೆ ಕರೆದುಕೊಂಡು ಹೋಗುತ್ತೇನೆ ಎಂದು ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ ಹೇಳಿದ್ದರು. ಈವರೆಗೂ ಆ ಕೆಲಸವಾಗಿಲ್ಲ’ ಎಂದು ಟೀಕಿಸಿದರು.

‘ಮಹದಾಯಿ ನ್ಯಾಯಮಂಡಳಿಯು ರಾಜ್ಯಕ್ಕೆ ಹಂಚಿಕೆ ಮಾಡಿರುವ ನೀರು ಸದ್ಬಳಕೆ ಮಾಡಿಕೊಳ್ಳಲು ರಾಜ್ಯ ಸರ್ಕಾರ ಪೂರ್ವ ತಯಾರಿಯನ್ನೇ ಮಾಡಿಕೊಂಡಿಲ್ಲ. ಪೂರ್ವ ಮಾಹಿತಿ ಇದ್ದರೂ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದೆ’ ಎಂದು ದೂರಿದರು.

ಆ. 25ರಂದು ಸಭೆ:‘ಹಿಂದಿನ ಸರ್ಕಾರದ ಅವಧಿಯಲ್ಲಿ, ಅಧಿಕಾರಿಗಳು ನಡೆಸುವ ಸ್ಮಾರ್ಟ್‌ ಸಿಟಿ ಯೋಜನೆಯ ಸಭೆಗೆ ನನ್ನನ್ನು ಕರೆದಿರಲೇ ಇಲ್ಲ. ಯೋಜನೆಯಡಿ ಅಧಿಕಾರಿಗಳು ರೂಪಿಸಿರುವ ಬಹಳಷ್ಟು ಕಾಮಗಾರಿಗಳು ಅವೈಜ್ಞಾನಿಕವಾಗಿವೆ. ನ್ಯೂನತೆಗಳನ್ನು ಆ. 25ರಂದು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಪ್ರಸ್ತಾಪಿಸಲಾಗುವುದು. ಶಾಸಕರೂ ಭಾಗವಹಿಸಲಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.

‘ಮಾಜಿ ಪ್ರಧಾನಿ ಎ.ಬಿ. ವಾಜಪೇಯಿ ಅವರ ಚಿತಾಭಸ್ಮವನ್ನು ಘಟಪ್ರಭಾ ನದಿಯಲ್ಲಿ ಆ. 25ರಂದು ವಿಸರ್ಜಿಸಲಾಗುವುದು. ಜಿಲ್ಲೆಯಲ್ಲಿ ಅವರ ಸ್ಮಾರಕ ಸ್ಥಾಪನೆ ಸಂಬಂಧ ಪಕ್ಷದ ವರಿಷ್ಠರು, ಜಿಲ್ಲೆಯ ನಾಯಕರೊಂದಿಗೆ ಚರ್ಚಿಸಲಾಗುವುದು’ ಎಂದರು.

ಶಾಸಕ ಅನಿಲ ಬೆನಕೆ, ಬಿಜೆಪಿ ಬೆಳಗಾವಿ ಗ್ರಾಮಾಂತರ ಘಟಕದ ಅಧ್ಯಕ್ಷ ವಿ.ಐ. ಪಾಟೀಲ, ಯುವ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷ ರಾಜು ಚಿಕ್ಕನಗೌಡ ಇದ್ದರು.
**
‘ಅಧಿವೇಶನ ನಡೆಸಲು ಬಿಡೋಲ್ಲ’
ದಕ್ಷಿಣ ಶಾಸಕ ಅಭಯ ಪಾಟೀಲ, ‘ನಗರದಲ್ಲಿ ರಸ್ತೆಗಳು ಹಾಳಾಗಿವೆ. ಸದ್ಯಕ್ಕೆ ನಗರದ ಅಭಿವೃದ್ಧಿಗೆ ₹ 200 ಕೋಟಿ ಅನುದಾನ ಬೇಕಾಗುತ್ತದೆ. ಈ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಸಮಯ ಕೋರಿ ನಾಲ್ಕು ಪತ್ರ ಬರೆದಿದ್ದೇನೆ. ಆದರೆ, ಸ್ಪಂದನೆ ದೊರೆತಿಲ್ಲ’ ಎಂದು ದೂರಿದರು.

‘ಸರ್ಕಾರ ಕೂಡಲೇ ಅನುದಾನ ಬಿಡುಗಡೆ ಮಾಡಬೇಕು. ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು. ಇಲ್ಲವಾದಲ್ಲಿ ಇಲ್ಲಿ ವಿಧಾನಮಂಡಲ ಅಧಿವೇಶನ ನಡೆಸಲು ಬಿಡುವುದಿಲ್ಲ. ಬೆಳಗಾವಿ ಬಂದ್‌ ಮಾಡಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
**
ತನ್ನಿಂದ ಆಗುವುದಿಲ್ಲ ಎಂದು ರಾಜ್ಯ ಸರ್ಕಾರವು ಪತ್ರ ಬರೆಯಲಿ. ಖರೀದಿ ಪ್ರಕ್ರಿಯೆ ನಡೆಸಲು ಕೇಂದ್ರ ಸಿದ್ಧವಿದೆ. ಇದನ್ನು ಸಿಎಂ ಪ್ರತಿಷ್ಠೆಯಾಗಿ ಪರಿಗಣಿಸಿ, ರೈತರ ಬದುಕಿನೊಂದಿಗೆ ಚೆಲ್ಲಾಟ ಆಡಬಾರದು.
ಸುರೇಶ ಅಂಗಡಿ, ‌ಸಂಸದ, ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT