ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗಿನಲ್ಲಿ ಬಸ್ಸುಗಳ ಕೊರತೆ :ಪ್ರಯಾಣಿಕರ ಪರದಾಟ

Last Updated 23 ಆಗಸ್ಟ್ 2018, 13:35 IST
ಅಕ್ಷರ ಗಾತ್ರ

ನಾಪೋಕ್ಲು: ಕೆಲ ದಿನಗಳಿಂದ ಖಾಸಗಿ ಬಸ್‌ಗಳ ಸಂಚಾರ ಸ್ಥಗಿತಗೊಂಡಿರುವುದರಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.

ಬುಧವಾರ ಶಾಲಾ ಕಾಲೇಜುಗಳು ಪುನರಾರಂಭಗೊಂಡಿದ್ದು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಬಸ್ಸುಗಳಿಲ್ಲದೆ ಪರದಾಡುವಂತಾಯಿತು. ವಿವಿಧ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಕೊರತೆ ಇತ್ತು.

ಜಿಲ್ಲಾಡಳಿತ ಮಡಿಕೇರಿಯಿಂದ ಸುಳ್ಯಕ್ಕೆ ಐದು ಬಸ್ಸುಗಳ ಸಂಚಾರವನ್ನು ಆರಂಭಿಸಿದ್ದು, ಭಾಗಮಂಡಲ ಮೂಲಕ ಸುಳ್ಯಕ್ಕೆ ಈ ಬಸ್ಸುಗಳು ತೆರಳುತ್ತಿವೆ. ಬುಧವಾರ ಮಡಿಕೇರಿಯಿಂದ ಬೆಟ್ಟಗೇರಿ, ಭಾಗಮಂಡಲ, ಕರಿಕೆ ಮೂಲಕ ಸುಳ್ಯಕ್ಕೆ ಮೂರು ಬಸ್ಸುಗಳು ಸಂಚಾರ ಆರಂಭಿಸಿದವು. ಬಸ್ಸುಗಳ ಸಂಚಾರ ಅವಧಿ ತಿಳಿಯದೆ ಜನರು ತೊಂದರೆ ಅನುಭವಿಸಿದರು.

ಬೆಳಗ್ಗಿನ ಅವಧಿಯಲ್ಲಿ ಭಾಗಮಂಡಲ ಚೆಟ್ಟಿಮಾನಿ, ಚೇರಂಬಾಣೆ ಭಾಗಗಳಿಂದ ಮಡಿಕೇರಿಗೆ ತೆರಳಲು ಬಸ್ಸು ಸೌಕರ್ಯವಿಲ್ಲದೆ ಸಮಸ್ಯೆಯಾಗಿದೆ. ಇತ್ತ ಭಾಗಮಂಡಲದಿಂದ ನಾಪೋಕ್ಲು ಪಟ್ಟಣಕ್ಕೆ ಬಸ್ಸುಗಳು ಸಂಚರಿಸುತ್ತಿಲ್ಲ. ಭಾಗಮಂಡಲದಿಂದ ನಾಪೋಕ್ಲು ಮುಖಾಂತರ ಒಂದು ಸರ್ಕಾರಿ ಬಸ್ಸು ಸಂಚರಿಸುತ್ತಿದ್ದು ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಅನುಕೂಲವಾಗುತ್ತಿಲ್ಲ.

ನೆಲಜಿ, ಬಲ್ಲಮಾವಟಿ, ಪುಲಿಕೋಟು, ಅಯ್ಯಂಗೇರಿ ಭಾಗಗಳಿಗೂ ಬಸ್ಸು ವ್ಯವಸ್ಥೆ ಇಲ್ಲದೆ ಪ್ರಯಾಣಿಕರು ಸಂಕಷ್ಟ ಎದುರಿಸಿದರು. ಭಾಗಮಂಡಲದಲ್ಲಿ ಸಾಕಷ್ಟು ಪ್ರಯಾಣಿಕರು ಮಡಿಕೇರಿಗೆ ತೆರಳಲು ಬುಧವಾರ ಕಾದು ಕುಳಿತಿದ್ದ ದೃಶ್ಯ ಕಂಡುಬಂತು. ಜಿಲ್ಲಾಡಳಿತ ಬಸ್ಸು ಸಂಚಾರದ ವೇಳಾಪಟ್ಟಿ ಪ್ರಕಟಿಸಬೇಕು. ಮಿನಿ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಭಾಗಮಂಡಲದಿಂದ ನಾಪೋಕ್ಲುವಿಗೆ ಅಯ್ಯಂಗೇರಿ ಮೂಲಕ ಖಾಸಗಿ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿರುವ ಗ್ರಾಮಸ್ಥರು ಸ್ವಂತ ವಾಹನವುಳ್ಳ ಶಾಲೆಗಳಿಗೆ ಮಾತ್ರ ವಿದ್ಯಾರ್ಥಿಗಳು ತೆರಳುವಂತಾಗಿದೆ. ಸಾರ್ವಜನಿಕ ಸಾರಿಗೆಯನ್ನು ಅವಲಂಬಿಸಿದವರಿಗೆ ಸಮಸ್ಯೆಯಾಗಿದೆ ಎಂದಿದ್ದಾರೆ.

ಸ್ವಂತ ವಾಹನಗಳಿಗೂ ಇಂಧನದ ಕೊರತೆ ಕಾಡುತ್ತಿದೆ. ಇಂಧನಕ್ಕಾಗಿ ಸರತಿ ಸಾಲಿನಲ್ಲಿ ಕಾಯುವಂತಾಗಿದೆ. ಮಡಿಕೇರಿ ಹೊರತುಪಡಿಸಿ ತಾಲ್ಲೂಕಿನ ವಿವಿಧ ಭಾಗಗಳಿಗೆ ಖಾಸಗಿ ಬಸ್ಸುಗಳ ಓಡಾಟಕ್ಕೆ ಜಿಲ್ಲಾಡಳಿತ ಅನುವು ಮಾಡಿಕೊಡಬೇಕು. ಬಸ್ಸು ಸಂಚಾರವಿಲ್ಲದೇ ಉದ್ಯೋಗಸ್ಥರು ಹಾಗೂ ವಿದ್ಯಾರ್ಥಿಗಳು ಸಾಕಷ್ಟು ಸಮಸ್ಯೆಯನ್ನು ಎದುರಿಸುವಂತಾಗಿದೆ. ಜಿಲ್ಲಾಡಳಿತ ಸ್ಪಂದಿಸಲಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT