ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನ ಪ್ರತಿ ದಹನ ಖಂಡಿಸಿ ಪ್ರತಿಭಟನೆ

ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆಗ್ರಹ
Last Updated 23 ಆಗಸ್ಟ್ 2018, 15:19 IST
ಅಕ್ಷರ ಗಾತ್ರ

ಬೀದರ್: ನವದೆಹಲಿಯಲ್ಲಿ ಸಂವಿಧಾನದ ಪ್ರತಿ ಸುಟ್ಟು ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಸಂವಿಧಾನ ರಕ್ಷಣಾ ಹೋರಾಟ ಸಮಿತಿ ಹಾಗೂ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದ ಪದಾಧಿಕಾರಿಗಳು ನಗರದಲ್ಲಿ ಗುರುವಾರ ಪ್ರತ್ಯೇಕ ಪ್ರತಿಭಟನೆ ನಡೆಸಿದರು.

ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ ರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿ ಅವರಿಗೆ ಪ್ರತ್ಯೇಕ ಮನವಿ ಪತ್ರ ರವಾನಿಸಿದರು.

ಸಂವಿಧಾನ ರಕ್ಷಣಾ ಹೋರಾಟ ಸಮಿತಿ:ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ದೇಶದಲ್ಲಿ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರ ಮೇಲೆ ನಿತ್ಯ ಅತ್ಯಾಚಾರ, ದೌರ್ಜನ್ಯ, ಕೊಲೆ ಪ್ರಕರಣಗಳು ನಿರಂತರ ನಡೆಯುತ್ತಿವೆ ಎಂದು ಸಂವಿಧಾನ ರಕ್ಷಣಾ ಹೋರಾಟ ಸಮಿತಿಯ ಪದಾಧಿಕಾರಿಗಳು ದೂರಿದರು.

ನವದೆಹಲಿಯಲ್ಲಿ ಸಂಘ ಪರಿವಾರದ ಕಿಡಿಗೇಡಿಗಳು ಸಂವಿಧಾನದ ಪ್ರತಿಗಳನ್ನು ಸುಟ್ಟು ಹಾಕಿ, ಸಂವಿಧಾನ, ಅಂಬೇಡ್ಕರ್ ಹಾಗೂ ಮೀಸಲಾತಿ ವಿರುದ್ಧ ಘೋಷಣೆ ಕೂಗಿದರೂ ಆರೋಪಿಗಳನ್ನು ಬಂಧಿಸುತ್ತಿಲ್ಲ. ಬದಲಾಗಿ, ಕೇಂದ್ರ ಸರ್ಕಾರ ಕಿಡಿಗೇಡಿಗಳ ರಕ್ಷಣೆಗೆ ನಿಂತಿರುವುದು ಖೇದದ ಸಂಗತಿಯಾಗಿದೆ ಎಂದು ಹೇಳಿದರು. ಘಟನೆಗೆ ಕಾರಣರಾದ ಕಿಡಿಗೇಡಿಗಳನ್ನು ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು.

ಸಮಿತಿಯ ಪ್ರಮುಖರಾದ ಕಲ್ಯಾಣರಾವ್ ಭೋಸ್ಲೆ, ಬಾಬು ಪಾಸ್ವಾನ್, ರಾಜಕುಮಾರ ಮೂಲಭಾರತಿ, ಅರುಣ ಕುದರೆ, ಯಶಪಾಲ್ ಬೋರೆ, ಮಹೇಶ ಮೂರ್ತಿ, ಬಾಬುರಾವ್ ಮಿಠಾರೆ, ಪ್ರದೀಪ ನಾಟೇಕರ್, ಚಂದ್ರಕಾಂತ ನಿರಾಟೆ, ಶಾಲಿವಾನ್ ಬಡಿಗೇರ, ಶ್ರೀಪತರಾವ್ ದೀನೆ, ಶಿವಕುಮಾರ ನೀಲಿಕಟ್ಟಿ, ರಘುನಾಥ ಗಾಯಕವಾಡ, ಬಾಬುರಾವ್ ಕೌಠಾ, ಕುಪೇಂದ್ರ ಶರ್ಮಾ ಮೊದಲಾದವರು ಭಾಗವಹಿಸಿದ್ದರು.

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ:ದೇಶದಲ್ಲಿ ಆಗಬಾರದ್ದು ಆಗುತ್ತಿದೆ. ದೇಶದ್ರೋಹಿಗಳು ತಲೆ ಎತ್ತುತ್ತಿದ್ದಾರೆ. ಒಂದೆಡೆ ದೇಶಕ್ಕೆ ದಿಕ್ಸೂಚಿ ಆಗಿರುವ ಸಂವಿಧಾನವನ್ನು ಧಿಕ್ಕರಿಸುವ ಪ್ರಯತ್ನಗಳು ಕೇಂದ್ರ ಸರ್ಕಾರದಿಂದ ನಡೆಯುತ್ತಿದ್ದರೆ, ಮತ್ತೊಂದೆಡೆ ಸಂಘ ಪರಿವಾರಕ್ಕೆ ಸೇರಿದ ಸಂಘಟನೆಗಳು ಸಂವಿಧಾನವನ್ನೇ ಸುಡುವ ನೀಚ ಕೃತ್ಯಕ್ಕೆ ಮುಂದಾಗಿವೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಆರೋಪಿಸಿದರು.
ಹಿಂದುತ್ವ ರಕ್ಷಣೆಗೆ ಹಿಂದೂ ಮುಖಂಡರು ಮುಂದೆ ಬರದೆ ಬಡವರು, ಅಮಾಯಕರು, ಶೂದ್ರರು ಹಾಗೂ ಅವರ ಮಕ್ಕಳನ್ನು ಮುಂದೆ ನೂಕುತ್ತಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ.

ನವದೆಹಲಿಯಲ್ಲಿ ಸಂವಿಧಾನದ ಪ್ರತಿಗಳನ್ನು ಸುಟ್ಟು ಹಾಕಿದವರಲ್ಲಿ ಆರಕ್ಷಣ್ ವಿರೋಧಿ ಪಕ್ಷ, ಭೂ ಮಿಹಾರ್ ಸೇನಾ, ಬ್ರಾಹ್ಮಣ ಏಕತಾ ಮಂಚ್‌, ಹಿಂದೂ ಆಜಾದ್ ಸೇನಾ ಮತ್ತಿತರ ಸಂಘಟನೆಯವರು ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಹೇಳಿದರು.

ಸಂವಿಧಾನದ ಪ್ರತಿಗಳನ್ನು ದಹಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ಧೆ, ಜಿಲ್ಲಾ ಸಂಘಟನಾ ಸಂಚಾಲಕ ಅರುಣ ಪಟೇಲ್, ದಲಿತ ಕಲಾ ಮಂಡಳಿ ಜಿಲ್ಲಾ ಸಂಚಾಲಕ ಶಿವರಾಜ ತಡಪಳ್ಳಿ, ಪ್ರಮುಖರಾದ ಸಂಜು ಸಿಂಧೆ, ರಾಜಕುಮಾರ ವಾಘಮಾರೆ, ಪ್ರಭು ಬಸಂತಪುರ, ಮನೋಹರ ಹೊಸಮನಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT