ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿ: ಒಂದು ನಗಣ್ಯ ಪ್ರತಿಕ್ರಿಯೆ!

Last Updated 23 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

‘ಉತ್ತರ ಕರ್ನಾಟಕಕ್ಕೆ ಎಂಥ ಅಭಿವೃದ್ಧಿ ಬೇಕು?’ (ಪ್ರ.ವಾ., ಆ. 16) ಎಂಬ ಪ್ರಸನ್ನ ಅವರ ಲೇಖನವನ್ನು ಓದಿ ನನ್ನನ್ನು ಕಾಡುತ್ತಿರುವ ಕೆಲವು ಆಲೋಚನೆಗಳನ್ನು ಪೂರಕವಾಗಿ ಹೇಳಲು ಬಯಸುತ್ತೇನೆ.

ಉತ್ತರ ಕರ್ನಾಟಕವೆಂದಾಗ ಧಾರವಾಡ, ಬೆಳಗಾವಿ ಮತ್ತು ವಿಜಯಪುರ ಎಂದಷ್ಟೇ ಭಾವಿಸಿದಂತಿದೆ. ಉತ್ತರ ಕನ್ನಡ ಜಿಲ್ಲೆಯ ಸಮಸ್ಯೆಗಳ ಬಗೆಗೆ ಯಾರೂ ಸೊಲ್ಲೆತ್ತುವುದಿಲ್ಲ. ಭೌಗೋಳಿಕವಾಗಿ, ಸಾಮಾಜಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಉತ್ತರ ಕನ್ನಡ ಜಿಲ್ಲೆಯು ಮೇಲೆ ಉಲ್ಲೇಖಿಸಿದ ಜಿಲ್ಲೆಗಳಿಂದ ಭಿನ್ನವಾಗಿದೆ. ಅಲ್ಲಿ ಗೌಳಿ, ಸಿದ್ಧಿ, ಕುಣಬಿ, ಹಾಲಕ್ಕಿ, ಖಾರ್ವಿ ಮುಂತಾದ ಸಮುದಾಯಗಳ ಜನರಿದ್ದಾರೆ. ಬುಡಕಟ್ಟು ಸಮುದಾಯದವರಿದ್ದಾರೆ. ಅವರಸಮಸ್ಯೆಗಳು ಯಾವ ಸರ್ಕಾರಕ್ಕೂ ಕಾಣುವುದಿಲ್ಲ. ಕರಾವಳಿಯ ಜನರಂತೂ ಶತಮಾನಗಳಿಂದ ನೈಸರ್ಗಿಕ ಹಾಗೂ ಇತ್ತೀಚೆಗೆ ಆಧುನಿಕ ಪ್ರಗತಿ ಹೆಸರಿನಲ್ಲಿ ನಡೆಯುತ್ತಿರುವ ಚಟುವಟಿಕೆಗಳಿಂದ ತತ್ತರಿಸಿ ಹೋಗಿದ್ದಾರೆ. ಅಲ್ಲಿಯ ಜನನೆಲೆ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಹೊಲಗದ್ದೆಗಳಿಂದ ಸಿಗುವ ಆದಾಯ ನಗಣ್ಯ. ಅಡಿಕೆ ತೋಟ ಇದ್ದವರು ಒಂದಿಷ್ಟು ಹಾಯಾಗಿದ್ದಾರೆ. ಉಳಿದವರದ್ದು ನಾಯಿ‍ಪಾಡು.

ಪ್ರಸನ್ನ ಹೇಳಿದಂತೆ ‘ಹೆದ್ದಾರಿ (ಅ)ನಾಗರಿಕತೆ’ ಮಲೆನಾಡು ಮತ್ತು ಕರಾವಳಿಯ ಜನರ ಜೀವನವನ್ನು ಅಕ್ಷರಶಃ ನುಂಗಿ ಹಾಕಿದೆ. ಈಗೀಗ ಇಲ್ಲಿಯ ಸುಶಿಕ್ಷಿತರು ಬೆಂಗಳೂರು ಎಂಬ ಐ.ಟಿ. ನಗರಕ್ಕೆ ಧಾವಿಸಿ, ಅಲ್ಲೇ ಬೇರು ಬಿಡಲು ಆರಂಭಿಸಿದ್ದಾರೆ. ಹೀಗಾಗಿ ಸ್ಥಳೀಯ ಸಂಪನ್ಮೂಲವನ್ನು ಸದುಪಯೋಗಪಡಿಸಿಕೊಳ್ಳುವ ಜಾಯಮಾನವೇ ಬದಲಾಗಿದೆ. ನೀರಾವರಿಗೆ ಉಪಯೋಗವಾಗುವ ಒಂದೇ ಒಂದು ನದಿಯೂ ಇಲ್ಲಿಲ್ಲವೆಂದರೆ ಅಚ್ಚರಿಪಡಬೇಕಿಲ್ಲ. ಜೋಗ ‍ಜಲಪಾತ ಕರ್ನಾಟಕಕ್ಕೆ ವಿದ್ಯುತ್ ನೀಡಿದರೂ ಇಲ್ಲಿಯ ಬದುಕು ಮಾತ್ರ ದೀಪದಡಿಯ ಕತ್ತಲು.

ಈ ಜಿಲ್ಲೆಯ ಸಮಸ್ಯೆಗಳನ್ನು ಎಷ್ಟೆಂದು ಹೇಳಲಿ. ಪ್ರತಿಸಲವೂ ಉತ್ತರ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಮಾತನಾಡುವಾಗ ಉತ್ತರ ಕನ್ನಡ ಜಿಲ್ಲೆಯನ್ನು ಹೊರಗಿಟ್ಟು ಮಾತನಾಡುತ್ತಾರೆ. ಇಲ್ಲಿಯ ರಾಜಕಾರಣಿಗಳ ನಡುವೆ ಹೊಂದಾಣಿಕೆಯಿಲ್ಲ. ಇವತ್ತಿಗೂ ಕೆಲ ಭಾಗಗಳಲ್ಲಿ ಪಾಳೇಗಾರಿಕೆ ಪದ್ಧತಿ ಇದೆ. ವಿಲಾಸಿ ಜೀವನ ಶೈಲಿಯೂ ಇದೆ. ಮತ್ತೊಂದೆಡೆ ಬರಗಾಲದಿಂದ ತತ್ತರಿಸಿ ಹೋಗುವ ಸ್ಥಿತಿ ಇದೆ.

ಬೆಳಗಾವಿಯನ್ನು ರಾಜ್ಯದ ಎರಡನೇ ರಾಜಧಾನಿಯನ್ನಾಗಿ ಮಾಡುವ ಕನಸುಗಳನ್ನು ಬಿತ್ತುತ್ತಾರೆ. ಇದರಿಂದ ‘ರಿಯಲ್ ಎಸ್ಟೇಟ್’ ಉದ್ಯಮಕ್ಕೆ ಭಾರಿ ಬೇಡಿಕೆ, ಮನ್ನಣೆ ಸಿಗುತ್ತದೆ. ಇಲ್ಲಿಯ ದಲ್ಲಾಳಿಗಳ ಉಪಟಳ ಹೇಳಿ ಮುಗಿಸುವಂತಹದಲ್ಲ. ಅವರ ಸಹಾಯವಿಲ್ಲದೆ ಯಾವ ಗಿಡದ ಎಲೆಯೂ ಅಲುಗಾಡುವುದಿಲ್ಲ. ಬೆಳಗಾವಿಯನ್ನು ಕೆಲವು ದಿನಗಳಲ್ಲಿ ‘ಸ್ಮಾರ್ಟ್ ಸಿಟಿ’ಯ ಬದಲು ಬೆಂಗಳೂರಿನಂತಹುದೇ ಮತ್ತೊಂದು ನಗರವನ್ನಾಗಿ ಮಾಡಿದರೆ ಬೆರಗುಪಡಬೇಕಾಗಿಲ್ಲ. ಬೆಳಗಾವಿಯೂ ‘ವಲಸೆಗಾರರ ನಗರ’ವಾಗಲು ಹೆಚ್ಚು ಸಮಯ ಬೇಕಾಗಿಲ್ಲ.

ಈ ಸಮಸ್ಯೆಗಳು ಮತ್ತು ಇತರ ಬೇರೆ ಬೇರೆ ಸಮಸ್ಯೆಗಳ ಬಗೆಗೆ ಈಗಿನಿಂದಲೇ ಗಂಭೀರವಾಗಿ ಆರ್ಥಿಕ ತಜ್ಞರೊಂದಿಗೆ ಚರ್ಚಿಸಿದರೆ ಉತ್ತರ ಕರ್ನಾಟಕ ವಿಕಾಸ ಹೊಂದುವ ಕನಸು ಕಾಣಬಹುದು. ಇಲ್ಲದಿದ್ದರೆ ಪ್ರಸನ್ನ ಅವರ ಚಿಂತನೆಗಳು ಮರೀಚಿಕೆಯಾಗಬಹುದೇನೋ?

-ಚಂದ್ರಕಾಂತ ಪೋಕಳೆ, ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT