ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇ-ಕಾಮರ್ಸ್ ನೀತಿ ಮತ್ತು ಗ್ರಾಹಕ

ಬಳಕೆದಾರರು ನೀತಿಯನ್ನು ಅರ್ಥಮಾಡಿಕೊಂಡು ತಮ್ಮ ಹಿತ ರಕ್ಷಿಸಿಕೊಳ್ಳಬೇಕು
Last Updated 23 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ಕೇಂದ್ರ ಸರ್ಕಾರದ ಕೈಗಾರಿಕಾ ಮತ್ತು ವಾಣಿಜ್ಯ ಸಚಿವಾಲಯ ಇತ್ತೀಚೆಗೆ ಸಿದ್ಧಪಡಿಸಿರುವ ಇ-ಕಾಮರ್ಸ್ ನೀತಿಯಲ್ಲಿರುವ ಅಂಶಗಳು ಮತ್ತು ಅದರ ಪರಿಣಾಮಗಳ ಬಗ್ಗೆ ಉದ್ಯಮ ವಲಯದಲ್ಲಿ ಚರ್ಚೆ ಆರಂಭವಾಗಿದೆ. ವಿಶೇಷವಾಗಿ ಇ-ಕಾಮರ್ಸ್ ದೈತ್ಯ, ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಸಂಸ್ಥೆಗಳು ತಮ್ಮ ವ್ಯಾಪಾರಕ್ಕೆ ಧಕ್ಕೆ ಉಂಟಾಗಬಹುದೆಂಬ ಭೀತಿಯಿಂದ ನೀತಿಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದರೆ, ಸಾಂಪ್ರದಾಯಿಕ ಮಾರಾಟಗಾರರು ಮನಸ್ಸಿನಲ್ಲೇ ಮಂಡಿಗೆ ತಿನ್ನುತ್ತಿದ್ದಾರೆ. ಆದರೆ ಬಳಕೆದಾರರು ಮಾತ್ರ ಯಾವುದರ ಬಗೆಗೂ ತಲೆಕೆಡಿಸಿಕೊಳ್ಳದೆ ಎಲ್ಲವನ್ನೂ ಸರ್ಕಾರಕ್ಕೆ ಒಪ್ಪಿಸಿದ್ದಾರೆ. ಇ-ಕಾಮರ್ಸ್ ವಹಿವಾಟಿನ ಬೆಳವಣಿಗೆಗೆ ಕಾರಣವಾಗಿರುವ ಬಳಕೆದಾರರು ಹೊಸ ನೀತಿಯನ್ನು ಅರ್ಥಮಾಡಿಕೊಂಡು ತಮ್ಮ ಹಿತವನ್ನು ರಕ್ಷಿಸಿಕೊಳ್ಳಲು ಮುಂದಾಗಬೇಕಿದೆ.

ಭಾರತದಲ್ಲಿ ಇ-ಕಾಮರ್ಸ್ ಉದ್ಯಮ ಬೃಹತ್ತಾಗಿ ಬೆಳೆಯುತ್ತಿದೆ. 2018ರ ಆರ್ಥಿಕ ವರದಿಯ ಪ್ರಕಾರ ದೇಶದ ಇ-ಕಾಮರ್ಸ್ ವಹಿವಾಟಿನ ಮೊತ್ತ ₹ 2.31 ಲಕ್ಷ ಕೋಟಿ. ಈ ಕ್ಷೇತ್ರ ಪ್ರತಿವರ್ಷ ಶೇ 19ರಷ್ಟು ಬೆಳವಣಿಗೆ ಕಾಣುತ್ತಿದೆ. ಇ-ಕಾಮರ್ಸ್ ಉದ್ಯಮದ ಪ್ರಕಾರ 2014ರಲ್ಲಿದ್ದ ಇ-ಕಾಮರ್ಸ್ ವಹಿವಾಟಿನ ಮೊತ್ತ ₹ 98,133 ಕೋಟಿ. 2026ರ ಹೊತ್ತಿಗೆ ಅದು ₹ 14 ಲಕ್ಷ ಕೋಟಿ ದಾಟುವ ನಿರೀಕ್ಷೆ ಇದೆ. ಇಷ್ಟು ಬೃಹತ್ತಾದ ಉದ್ಯಮಕ್ಕೆ ಸಂಬಂಧಿಸಿದ ನಿರ್ದಿಷ್ಟ ನೀತಿ ಇದುವರೆಗೆ ಇರಲಿಲ್ಲ.

ಇ-ಕಾಮರ್ಸ್ ಉದ್ಯಮಕ್ಕೆ ಸಂಬಂಧಿಸಿದ ನೀತಿ ಇಲ್ಲದಿದ್ದರೂ ಕೈಗಾರಿಕಾ ಸಚಿವಾಲಯದ ಕೈಗಾರಿಕಾ ನೀತಿಮತ್ತು ಉತ್ತೇಜನಾ (ಡಿಐಪಿಪಿ) ಇಲಾಖೆಯು 2016ರಲ್ಲಿ ಪ್ರಕಟಣೆಯೊಂದನ್ನು ಹೊರಡಿಸುವ ಮೂಲಕ ಇ-ಕಾಮರ್ಸ್ ಉದ್ಯಮವನ್ನು ನಿಯಂತ್ರಿಸಲು ಮುಂದಾಗಿತ್ತು. ಆದರೆ ಅದು ಅಂಥ ಪರಿಣಾಮ ಉಂಟುಮಾಡಲಿಲ್ಲ. ಅದರಲ್ಲಿನ ಲೋಪದೋಷಗಳನ್ನು ಬಳಸಿಕೊಂಡ ಕೆಲವು ಇ-ಕಾಮರ್ಸ್ ಸಂಸ್ಥೆಗಳು ಯಾವುದೇ ತಡೆಯಿಲ್ಲದೆ ವಹಿವಾಟನ್ನು ಮುಂದುವರಿಸುತ್ತಿರುವುದರಿಂದ ಇ-ಕಾಮರ್ಸ್ ನೀತಿ ಸಿದ್ಧಪಡಿಸಲಾಗಿದೆ. ಹೊಸ ನೀತಿ ರಚಿಸಲು ಮತ್ತೊಂದು ಕಾರಣ ವಿಶ್ವ ವ್ಯಾಪಾರ ಸಂಘಟನೆ (ಡಬ್ಲ್ಯುಟಿಒ). ಕೆಲವು ತಿಂಗಳ ಹಿಂದೆ ಬ್ಯೂನೆಸ್ ಐರಿಸ್‌ನಲ್ಲಿ ನಡೆದ ಅದರ ಸಭೆಯಲ್ಲಿ ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳು ಈ ವಿಷಯವನ್ನು ಚರ್ಚೆಗೆ ಒಳಪಡಿಸಿದ್ದು. ಸ್ಥಳೀಯ ವ್ಯಾಪಾರ ಒಪ್ಪಂದಗಳಲ್ಲೂ ಇ-ಕಾಮರ್ಸ್ ಬಗ್ಗೆ ಚರ್ಚೆ ನಡೆಯುತ್ತಿದೆ. ಭಾರತದ ಇ-ಕಾಮರ್ಸ್‌ ಉದ್ಯಮವನ್ನು ಗಮನಿಸಿರುವ ಈ ಬಲಿಷ್ಠ ರಾಷ್ಟ್ರಗಳು ಹೇಗಾದರೂ ಮಾಡಿ ಒಳನುಗ್ಗಲು ಪ್ರಯತ್ನಿಸುತ್ತಿವೆ. ಆನ್‍ಲೈನ್ ಮಾರಾಟದಲ್ಲಿ ಸಾಧನೆ ಮಾಡಿರುವ ಬೆಂಗಳೂರಿನ ಫ್ಲಿಪ್‍ಕಾರ್ಟ್, ಶೇ 77ರಷ್ಟು ಷೇರುಗಳನ್ನು ವಾಲ್‌ಮಾರ್ಟ್‌ಗೆ ವರ್ಗಾಯಿಸಲಿರುವುದುಸಹ ಇ-ಕಾಮರ್ಸ್ ನೀತಿಯ ಹಿಂದಿರುವ ಪ್ರೇರಣೆ.

ಅನ್‍ಲೈನ್ ವ್ಯಾಪಾರದ ಜೊತೆ ಜೊತೆಗೆ ಅದರ ಗ್ರಾಹಕರ ಸಮಸ್ಯೆಗಳೂ ಹೆಚ್ಚುತ್ತಲಿವೆ. ಈ ಸಮಸ್ಯೆಗಳನ್ನು ಪರಿಹರಿಸಲು ಸೂಕ್ತ ವೇದಿಕೆ ಇಲ್ಲದ ಕಾರಣ ಸರ್ಕಾರ ಅದರತ್ತ ಗಮನಹರಿಸಿದೆ. ಗ್ರಾಹಕ ಸಂರಕ್ಷಣಾ ಅಧಿನಿಯಮದ ಅಡಿಯಲ್ಲಿ ಸ್ಥಾಪನೆಗೊಂಡಿರುವ ವೇದಿಕೆಗಳು ಸ್ವಲ್ಪಮಟ್ಟಿಗೆ ಪರಿಹಾರ ನೀಡಿದ್ದರೂ ತಾಂತ್ರಿಕ ಕಾರಣಗಳಿಗಾಗಿ ಅನ್‍ಲೈನ್ ಶಾಪಿಂಗ್, ಈ ಅಧಿನಿಯಮದ ವ್ಯಾಪ್ತಿಗೆಒಳಪಡುವುದಿಲ್ಲ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಅನ್‍ಲೈನ್ ಮೂಲಕ ಖರೀದಿಸುವ ವಸ್ತುಗಳಲ್ಲಿರುವ ದೋಷಗಳಿಗಷ್ಟೇ ದೂರುಗಳು ಸೀಮಿತವಾಗಿಲ್ಲ. ಬಳಕೆದಾರರು ಸಲ್ಲಿಸುವ ಮಾಹಿತಿಯ ಗೋಪ್ಯತೆ, ಅದರ ಉಪಯೋಗ ಮತ್ತು ಮಾರಾಟದ ಬಗ್ಗೆಯೂ ಚರ್ಚೆ ಆರಂಭವಾಗಿದೆ.

ಆನ್‍ಲೈನ್ ಶಾಪಿಂಗ್ ಮಾಡುವಾಗ ಬಳಕೆದಾರರು ವಿವಿಧ ಮಾಹಿತಿಯನ್ನು ಒದಗಿಸುತ್ತಾರೆ. ಅವೆಲ್ಲವನ್ನೂ ಅನ್‍ಲೈನ್ ಸೈಟ್ ಗೋಪ್ಯವಾಗಿರಿಸುತ್ತದೆ ಎಂಬ ಖಾತ್ರಿಯಿಲ್ಲ. ಉದಾಹರಣೆಗೆ, ಬಳಕೆದಾರರೊಬ್ಬರು ಔಷಧಿ ಖರೀದಿಸಿದರೆ ಅದರಿಂದ ಬಳಕೆದಾರರು ಯಾವ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂಬುದು ಗೊತ್ತಾಗುತ್ತದೆ. ಈ ಮಾಹಿತಿಯನ್ನು ಸಂಸ್ಥೆಯು ವಿಮಾ ಕಂಪನಿಗೆ ಮಾರಾಟ ಮಾಡಬಹುದು. ಮುಂದಿನ ವರ್ಷ ಆ ಬಳಕೆದಾರನಿಗೆ ವಿಮಾ ಪಾಲಿಸಿಯನ್ನು ತಿರಸ್ಕರಿಸಿದರೂ ಆಶ್ಚರ್ಯವಿಲ್ಲ. ಇ-ಕಾಮರ್ಸ್ ನೀತಿಯ ಪ್ರಕಾರ ಆನ್‍ಲೈನ್ ಕಂಪನಿಗಳು ಸಂಗ್ರಹಿಸುವ ಮಾಹಿತಿಯನ್ನು ಭಾರತದಲ್ಲೇ ದಾಸ್ತಾನು ಮಾಡಬೇಕು. ಕೇಂದ್ರ ಸರ್ಕಾರವು ಈ ಮಾಹಿತಿಯನ್ನು ಬಳಕೆದಾರರ ಗೋಪ್ಯತೆ ಮತ್ತು ಖಾಸಗಿತನಕ್ಕೆ ಒಳಪಟ್ಟು, ರಾಷ್ಟ್ರದ ಭದ್ರತೆಗೆ ಮತ್ತು ಸಾರ್ವಜನಿಕ ನೀತಿಗೆ ಬಳಸಿಕೊಳ್ಳಬಹುದು.

ಅನ್‍ಲೈನ್ ಶಾಪಿಂಗ್‌ನ ಕುಂದುಕೊರತೆ ಮತ್ತು ದೂರುಗಳನ್ನು ಪರಿಹರಿಸಲು ಪ್ರತ್ಯೇಕ ಜಾರಿ ನಿರ್ದೇಶನಾಲಯವನ್ನು ಸ್ಥಾಪಿಸುವ ಅಂಶ ಇ-ಕಾಮರ್ಸ್ ನೀತಿಯಲ್ಲಿದೆ. ಸರಕುಗಳ ಮೇಲೆ ನೀಡುವ ರಿಯಾಯಿತಿಯು ಇತರ ವ್ಯಾಪಾರಿಗಳ ಮೇಲೆ ಉಂಟುಮಾಡುವ ದುಷ್ಪರಿಣಾಮವನ್ನು ತಡೆಗಟ್ಟಲು ಕೆಲವೊಂದು ಕ್ರಮಗಳನ್ನು ನೀತಿಯಲ್ಲಿ ಸೇರಿಸಲಾಗಿದೆ. ಕಾಲಕ್ರಮೇಣ ಡಿಸ್ಕೌಂಟ್ ನೀಡುವುದನ್ನು ನಿಯಂತ್ರಿಸಲಾಗುವುದು. ಇ-ಕಾಮರ್ಸ್ ಉದ್ಯಮದ ಮೇಲ್ವಿಚಾರಣೆಗಾಗಿ ಒಂದು ಪ್ರತ್ಯೇಕ ನಿಯಂತ್ರಣ ಪ್ರಾಧಿಕಾರವನ್ನು ಸ್ಥಾಪಿಸಲಾಗುವುದು. ಈ ಪ್ರಾಧಿಕಾರವು ನೇರ ಬಂಡವಾಳ ಹೂಡಿಕೆ, ಗ್ರಾಹಕ ಸಂರಕ್ಷಣೆ ಇತ್ಯಾದಿ ವಿಷಯಗಳ ಬಗ್ಗೆ ಗಮನಹರಿಸಲಿದೆ.

ಆನ್‍ಲೈನ್ ಶಾಪಿಂಗ್ ಸಂಸ್ಥೆಗಳು ವಿಶ್ವದಾದ್ಯಂತ ಕಾರ್ಯಾಚರಣೆ ಮಾಡುತ್ತವೆ. ಇದರಿಂದ ಬಳಕೆದಾರರಿಗೆ ಉತ್ತಮ ಸರಕು, ಹೆಚ್ಚು ಆಯ್ಕೆಯ ಅವಕಾಶ ಇತ್ಯಾದಿಸೌಲಭ್ಯಗಳುಂಟು. ಆದರೆ ಭಾರತದಲ್ಲಿ ನಿಷೇಧಗೊಂಡಿರುವ ಸರಕುಗಳು ನಮ್ಮ ದೇಶಕ್ಕೆ ಸರಬರಾಜು ಆಗುವ ಅಪಾಯವೂ ಇದೆ. ಉದಾಹರಣೆಗೆ ಕಾಮೋದ್ರೇಕ ಆಟಿಕೆಗಳನ್ನು ಭಾರತದಲ್ಲಿ ಮಾರಾಟ ಮಾಡುವಂತಿಲ್ಲ. ಇಂಟರ್‌ನೆಟ್ ಮೂಲಕ ಇವು ಸರಬರಾಜಾಗುವ ಸಾಧ್ಯತೆ ಇದೆ. ಯಾವ ದೇಶಕ್ಕೆ ವಸ್ತುವನ್ನು ಮಾರಾಟ ಮಾಡಲಾಗುತ್ತದೋ ಆ ದೇಶದ ಸ್ಥಳೀಯ ಕಾನೂನು, ನೀತಿ, ನಿಯಮ ಇತ್ಯಾದಿ ಅನುಸರಿಸಬೇಕೆಂಬುದು ವಿಶ್ವದಾದ್ಯಂತ ಚಾಲ್ತಿಯಲ್ಲಿರುವ ನಿಯಮ. ಇ-ಕಾಮರ್ಸ್ ಹೊಸ ನೀತಿಯಲ್ಲಿ ಇದರ ಪ್ರಸ್ತಾಪವಿದೆ.

ಬಳಕೆದಾರರ ಹಿತದೃಷ್ಟಿಯಿಂದ, ಅನ್‍ಲೈನ್ ಸಂಸ್ಥೆಗಳ ನೋಂದಣಿಯನ್ನು ಕಡ್ಡಾಯಗೊಳಿಸಲಾಗಿದೆ. ‘ಗ್ರಾಹಕ ಸಂರಕ್ಷಣಾ ಮಸೂದೆ– 2018’ರ (ಲೋಕಸಭೆಯ ಒಪ್ಪಿಗೆ ಪಡೆಯಬೇಕಿದೆ) ಅಡಿಯಲ್ಲಿ ಗ್ರಾಹಕ ಸಂರಕ್ಷಣಾ ಪ್ರಾಧಿಕಾರವನ್ನು ಸ್ಥಾಪಿಸಲಾಗುವುದು. ಅನ್‍ಲೈನ್ ಸಂಸ್ಥೆಗಳು ಈ ಪ್ರಾಧಿಕಾರದಲ್ಲಿ ನೋಂದಾಯಿಸಿಕೊಳ್ಳಬೇಕೆಂದು ಇ-ಕಾಮರ್ಸ್ ನೀತಿ ಹೇಳುತ್ತದೆ. ಇ-ಕಾಮರ್ಸ್ ಸಂಸ್ಥೆಗಳ ವಿರುದ್ಧ ಸೆಟೆದು ನಿಂತಿರುವ ಸಾಂಪ್ರದಾಯಿಕ ಚಿಲ್ಲರೆ ವ್ಯಾಪಾರಿಗಳ ಹಿತದೃಷ್ಟಿಯಿಂದ ಇ-ಕಾಮರ್ಸ್ ನೀತಿಯಲ್ಲಿ ಕೆಲವೊಂದು ಅಂಶಗಳನ್ನು ಸೇರಿಸಲಾಗಿದೆ. ಆನ್‍ಲೈನ್ ಮೂಲಕ ಸ್ಥಳೀಯ ಉತ್ಪನ್ನಗಳ ಮಾರಾಟವನ್ನು ಉತ್ತೇಜಿಸಲು ದಾಸ್ತಾನು ಮಾಡುವ ಅವಕಾಶ ಕಲ್ಪಿಸಲಾಗಿದೆ. ಆದರೆ ಅಂಥ ಸಂಸ್ಥೆಯು ಭಾರತೀಯರಿಂದ ಸ್ಥಾಪನೆಗೊಂಡಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT