ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಘನತ್ಯಾಜ್ಯ ವಿಲೇವಾರಿಗೆ ಶೀಘ್ರವೇ ಹೊಸ ನಿಯಮ: ಸಂಘಟಕರಿಗೇ ಹೊಣೆ!

ಸ್ಥಳೀಯ ಸಂಸ್ಥೆಗಳಲ್ಲಿ
Last Updated 23 ಆಗಸ್ಟ್ 2018, 20:09 IST
ಅಕ್ಷರ ಗಾತ್ರ

ಬೆಂಗಳೂರು: ನೂರಕ್ಕೂ ಹೆಚ್ಚು ಜನರನ್ನು ಸೇರಿಸಿ ಸಾರ್ವಜನಿಕ ಕಾರ್ಯಕ್ರಮ ಹಮ್ಮಿಕೊಳ್ಳುವುದಾದರೆ, ಇನ್ನು ಮುಂದೆ ಕನಿಷ್ಠ ಮೂರು ದಿನಗಳ ಮೊದಲೇ ಆಯಾ ವ್ಯಾಪ್ತಿಯ ಸ್ಥಳೀಯ ಸಂಸ್ಥೆಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಲಿದೆ!

ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಇಲಾಖೆ ಜಾರಿಗೆ ತರಲು ಉದ್ದೇಶಿಸಿದ ಹೊಸ ಉಪನಿಯಮಗಳ ಕರಡಿನಲ್ಲಿ ಈ ವಿಷಯ ಪ್ರಸ್ತಾಪಿಸಲಾಗಿದೆ.

ಕಾರ್ಯಕ್ರಮ ಆಯೋಜಿಸಿ ಸ್ಥಳದಲ್ಲಿ ಸೃಷ್ಟಿಯಾದ ಎಲ್ಲ ಘನ ತ್ಯಾಜ್ಯವನ್ನು 24 ಗಂಟೆಯ ಒಳಗೆ ಸಂಘಟಕರೇ ವಿಲೇವಾರಿ ಮಾಡಬೇಕು. ಒಂದೊಮ್ಮೆ ವಿಲೇವಾರಿ ಮಾಡಲು ಸಾಧ್ಯ ಇಲ್ಲದಿದ್ದರೆ, ಸ್ಥಳೀಯ ಸಂಸ್ಥೆ ನಿಗದಿಪಡಿಸಿದ ಶುಲ್ಕ ಕಟ್ಟಬೇಕು. ಸ್ಥಳೀಯ ಸಂಸ್ಥೆಯೇ ಕಸ ವಿಲೇವಾರಿ ಮಾಡಲಿದೆ.

ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಪಟ್ಟಂತೆ ನಗರಾಭಿವೃದ್ಧಿ ಇಲಾಖೆ ರೂಪಿಸಿದ ನಿಯಮಗಳ ಕರಡನ್ನು ಇತ್ತೀಚೆಗೆ ಪ್ರಕಟಿಸಿದೆ. ಅದರಲ್ಲಿ ಸೂಚಿಸಿರುವ ಪ್ರಕಾರ, ಕಾರ್ಯಕ್ರಮ ಸಂಘಟಕರು ಮೂರು ದಿನಗಳ ಮೊದಲು ಸ್ಥಳೀಯ ಸಂಸ್ಥೆಗೆ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕು. ಕಾರ್ಯಕ್ರಮದ ಬಳಿಕ ಆ ಜಾಗದಲ್ಲಿ ಉಂಟಾಗುವ ಕಸವನ್ನು ಕಾರ್ಯಕ್ರಮ ಮುಗಿದ 24 ಗಂಟೆಯ ಒಳಗೆ ವಿಲೇವಾರಿ ಮಾಡಲು ಬದ್ಧ ಎಂದೂ ಲಿಖಿತವಾಗಿ ತಿಳಿಸಬೇಕು. ಅಲ್ಲದೆ, ‘ಸ್ವಚ್ಛತಾ ಠೇವಣಿ’ಯನ್ನೂ ಕಟ್ಟಬೇಕು. ನಿಗದಿತ ಸಮಯದ ಒಳಗೆ ಕಸ ವಿಲೇವಾರಿ ಮಾಡಿದರೆ ಠೇವಣಿ ಮೊತ್ತವನ್ನು ಸ್ಥಳೀಯ ಸಂಸ್ಥೆಯು ಸಂಘಟಕರಿಗೆ ಹಿಂದಿರುಗಿಸಲಿದೆ.

ಅಧಿಕಾರಿಗಳು ಪರಿಶೀಲನೆ ವೇಳೆ ಜಾಗ ಸ್ವಚ್ಛ ಇಲ್ಲದಿದ್ದರೆ, ಠೇವಣಿ ಮೊತ್ತ ಮುಟ್ಟಗೋಲು ಹಾಕಿಕೊಳ್ಳಲಾಗುವುದು. ಸಂಘಟಕರು ಸ್ವಚ್ಛ ಮಾಡಿಕೊಳ್ಳಲು ತಯಾರಿಲ್ಲ ಎಂದಾದರೆ ಸ್ಥಳೀಯ ಸಂಸ್ಥೆ ವಿಧಿಸುವ ಶುಲ್ಕವನ್ನು ಮುಂಗಡವಾಗಿ ಪಾವತಿಸಬೇಕು ಎಂದು ನಿಯಮದಲ್ಲಿ ಪ್ರಸ್ತಾವಿಸಲಾಗಿದೆ.

1986ರ ಪರಿಸರ ಸಂರಕ್ಷಣೆ ಕಾಯ್ದೆ ಅಡಿ ಈ ಹೊಸ ಉಪ ನಿಯಮಗಳನ್ನು ರಚಿಸಲಾಗಿದೆ. ರಾಜ್ಯಪತ್ರದಲ್ಲಿ ಪ್ರಕಟಿಸಿದ ಬಳಿಕ ಈ ನಿಯಮಗಳು ಜಾರಿಗೆ ಬರಲಿವೆ ಎಂದು ಇಲಾಖೆ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಘನ ತ್ಯಾಜ್ಯ ವಿಲೇವಾರಿ– ನಿಯಮ ಉಲ್ಲಂಘಿಸಿದರೆ ದಂಡ

* 1ಲಕ್ಷದಿಂದ 10 ಲಕ್ಷದವರೆಗೆ ಜನಸಂಖ್ಯೆ ಇರುವ ಸ್ಥಳೀಯ ಸಂಸ್ಥೆಗಳ ಸಾರ್ವಜನಿಕ ಪ್ರದೇಶಗಳಲ್ಲಿ ಉಗುಳುವವರು ಮತ್ತು ಬೇಕಾಬಿಟ್ಟಿ ಕಸ ಬಿಸಾಕಿದರೆ– ₹ 1,500

* ತ್ಯಾಜ್ಯ ವಿಂಗಡಣೆ ಮಾಡಲು ಮನೆ ಮಾಲೀಕರು ವಿಫಲರಾದರೆ– ₹ 5,000

* ತ್ಯಾಜ್ಯ ವಿಂಗಡಣೆ ಮಾಡಲು ಹೋಟೆಲುಗಳು ವಿಫಲವಾದರೆ– ₹ 15,000

* ಮನೆ ಕಟ್ಟಿದ ಬಳಿಕ ಉಳಿಕೆಯಾಗುವ ತ್ಯಾಜ್ಯಗಳನ್ನು ಸರಿಯಾಗಿ ಶೇಖರಿಸದಿದ್ದರೆ ಅಥವಾ ವಿಲೇವಾರಿ ಮಾಡದಿದ್ದರೆ– ₹ 25,000

ಬಳಕೆದಾರ ಶುಲ್ಕ (ಪ್ರತಿ ತಿಂಗಳಿಗೆ)

* 1 ಲಕ್ಷದಿಂದ 10 ಲಕ್ಷದವರೆಗೆ ಜನಸಂಖ್ಯೆ ಇರುವ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 50 ಚದರ ಮಿಟರ್‌ವರೆಗಿನ ವಿಸ್ತೀರ್ಣದ ಮನೆಗಳಿಗೆ– ₹ 40

* 300 ಚದರ ಮಿಟರ್‌ವರೆಗಿನ ವಿಸ್ತೀರ್ಣದ ಮನೆಗಳಿಗೆ– ₹ 150

* 200 ಚದರ ಮೀಟರ್‌ಗಿಂತ ಕಡಿಮೆ ವಿಸ್ತೀರ್ಣದ ವಾಣಿಜ್ಯ ಕಟ್ಟಡಗಳಿಗೆ– ₹400

* 300 ಚದರ ಮಿಟರ್‌ವರೆಗಿನ ವಿಸ್ತೀರ್ಣದ ಹೋಟೆಲ್‌ಗಳಿಗೆ– ₹ 3,000

* ಹಾಸ್ಟೆಲ್‌ಗಳಿಗೆ– ₹ 1,500

* 50 ಆಸನಗಳಿರುವ ರೆಸ್ಟೋರೆಂಟ್‌ಗಳಿಗೆ– ₹ 1,500

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT