ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಬಲ್ಸ್‌ ವಿಭಾಗಕ್ಕೂ ಮನ್ನಣೆ ಸಿಗುತ್ತಿದೆ...

Last Updated 22 ಏಪ್ರಿಲ್ 2018, 21:01 IST
ಅಕ್ಷರ ಗಾತ್ರ

ಈ ಬಾರಿಯ ಕಾಮನ್‌ವೆಲ್ತ್‌ ಕ್ರೀಡಾಕೂಟದ ಮಿಶ್ರ ತಂಡ ವಿಭಾಗ ಮತ್ತು ಡಬಲ್ಸ್‌ನಲ್ಲಿ ಪದಕ ಗೆದ್ದಿದ್ದೀರಿ. ಈ ಸಾಧನೆ ಬಗ್ಗೆ ಹೇಳಿ.

ಮೊದಲ ಬಾರಿಗೆ ನಾವು ಮಿಶ್ರ ತಂಡ ವಿಭಾಗದಲ್ಲಿ ಚಿನ್ನ ಗೆದ್ದಿದ್ದೇವೆ. ಇದು ಚಾರಿತ್ರಿಕ ಸಾಧನೆ. ತಂಡದಲ್ಲಿದ್ದ ಎಲ್ಲರೂ ಶ್ರೇಷ್ಠ ಆಟ ಆಡಿದ್ದರಿಂದ ಗೋಲ್ಡ್‌ ಕೋಸ್ಟ್‌ನಲ್ಲಿ ಚಿನ್ನಕ್ಕೆ ಕೊರಳೊಡ್ಡಲು ಸಾಧ್ಯವಾಯಿತು. ಡಬಲ್ಸ್‌ನಲ್ಲಿ ನಾನು ಮತ್ತು ಸಿಕ್ಕಿ ರೆಡ್ಡಿ ಕಂಚಿನ ಪದಕ ಜಯಿಸಿದ್ದೆವು. ಈ ಸಾಧನೆ ಹೆಮ್ಮೆಯಿಂದ ಬೀಗುವಂತೆ ಮಾಡಿದೆ. ಮಿಶ್ರ ಡಬಲ್ಸ್‌ನಲ್ಲೂ ಪದಕ ಗೆಲ್ಲುವ ಅವಕಾಶ ಇತ್ತು. ಇದಕ್ಕಾಗಿ ನಾನು ಮತ್ತು ಸಾತ್ವಿಕ್‌ ಸಾಯಿರಾಜ್‌ ಶಕ್ತಿಮೀರಿ ಪ್ರಯತ್ನಿಸಿದ್ದೆವು. ಆದರೆ ಅದೃಷ್ಟ ಕೈಕೊಟ್ಟಿತು.

ಆಸ್ಟ್ರೇಲಿಯಾದ ಗೋಲ್ಡ್‌ ಕೋಸ್ಟ್‌ನಲ್ಲಿ ನಡೆದ ಕಾಮನ್‌ವೆಲ್ತ್‌ ಕ್ರೀಡಾಕೂಟದ ಮಹಿಳೆಯರ ಡಬಲ್ಸ್‌ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದ ಎನ್‌.ಸಿಕ್ಕಿ ರೆಡ್ಡಿ (ಎಡ) ಮತ್ತು ಅಶ್ವಿನಿ ಪೊನ್ನಪ್ಪ

**

ಕೂಟಕ್ಕೂ ಮುನ್ನ ತಯಾರಿ ಹೇಗಿತ್ತು?

ಎಲ್ಲರೂ ಕಠಿಣ ಅಭ್ಯಾಸ ನಡೆಸಿದ್ದೆವು. ರಾಷ್ಟ್ರೀಯ ಕೋಚ್‌ ಪುಲ್ಲೇಲಾ ಗೋಪಿಚಂದ್‌ ಮತ್ತು ಡಬಲ್ಸ್‌ ವಿಭಾಗದ ಕೋಚ್‌ ಟ್ಯಾನ್‌ ಕಿಮ್‌ ಅವರು ಹೊಸ ತಂತ್ರಗಳನ್ನು ಹೇಳಿಕೊಟ್ಟಿದ್ದರು. ಅವುಗಳನ್ನು ಕಲಿತು ಮೈಗೂಡಿಸಿಕೊಂಡಿ ದ್ದರಿಂದ ಸಿಂಗಪುರ, ಸ್ಕಾಟ್ಲೆಂಡ್‌ ಮತ್ತು ಮಲೇಷ್ಯಾದಂತಹ ಬಲಿಷ್ಠ ತಂಡಗಳನ್ನು ಮಣಿಸಲು ಸಾಧ್ಯವಾಯಿತು.

ಕೂಟದಲ್ಲಿ ಪದಕ ಗೆದ್ದವರಿಗೆ ಬೇರೆ ರಾಜ್ಯಗಳಲ್ಲಿ ನಗದು ಬಹುಮಾನ ಪ್ರಕಟಿಸಿದ್ದಾರೆ. ಕರ್ನಾಟಕ ಸರ್ಕಾರದಿಂದ ಬಹುಮಾನದ ಭರವಸೆ ಸಿಕ್ಕಿದೆಯಾ?

ಇಲ್ಲ, ಕರ್ನಾಟಕ ಸರ್ಕಾರದಿಂದ ಯಾವ ಭರವಸೆಯೂ ಸಿಕ್ಕಿಲ್ಲ. ಚಿನ್ನ ಗೆದ್ದ ಕ್ರೀಡಾಪಟುಗಳಿಗೆ ಹರಿಯಾಣ ದಲ್ಲಿ ಒಂದೂವರೆ ಕೋಟಿ ನೀಡಲಾಗಿದೆ, ಮಹಾರಾಷ್ಟ್ರ ದಲ್ಲಿ ₹ 50 ಲಕ್ಷ ಕೊಟ್ಟಿದ್ದಾರೆ. ಆದರೆ ನಮ್ಮನ್ನು ಇದುವರೆಗೆ ಯಾರೂ ಮಾತನಾಡಿಸಿಲ್ಲ. ಬ್ಯಾಡ್ಮಿಂಟನ್‌ ದುಬಾರಿ ಕ್ರೀಡೆ. ಷಟಲ್‌, ರ‍್ಯಾಕೆಟ್‌ ಮತ್ತು ಇನ್ನಿತರ ಪರಿಕರಗಳನ್ನು ಕೊಂಡುಕೊಳ್ಳಲು ಸಾಕಷ್ಟು ಹಣ ಬೇಕಾಗುತ್ತದೆ. ಸರ್ಕಾರ ನಮ್ಮ ಸಾಧನೆಯನ್ನು ಗುರುತಿಸಿ ನಗದು ಬಹುಮಾನ ನೀಡಿದರೆ ಇನ್ನಷ್ಟು ಪದಕಗಳನ್ನು ಗೆಲ್ಲಲು ಪ್ರೇರಣೆಯಾಗಲಿದೆ.

ಸಿಂಗಲ್ಸ್‌ನಲ್ಲಿ ಆಡುವವರಿಗೆ ಸಿಗುವಷ್ಟೇ ಮನ್ನಣೆ, ಡಬಲ್ಸ್‌ ವಿಭಾಗದ ಆಟಗಾರರಿಗೂ ಸಿಗುತ್ತಿದೆಯೇ?

ಮೊದಲು ಸಿಂಗಲ್ಸ್‌ಗೆ ಹೆಚ್ಚಿನ ಮನ್ನಣೆ ನೀಡಲಾಗುತ್ತಿತ್ತು. ಆದರೆ ಈಗ ಪರಿಸ್ಥಿತಿ ಸುಧಾರಿಸಿದೆ. ಡಬಲ್ಸ್‌ ವಿಭಾಗದವರಿಗಾಗಿಯೇ ಪ್ರತ್ಯೇಕ ಕೋಚ್‌ ಒಬ್ಬರನ್ನು ನೇಮಿಸಲಾಗಿದೆ. 19 ವರ್ಷದೊಳಗಿನವರ ಹಂತದವರೆಗೂ ನಾನು ಸಿಂಗಲ್ಸ್‌ ಆಡುತ್ತಿದ್ದೆ. ನಂತರ ಡಬಲ್ಸ್‌ನಲ್ಲಿ ಭಾಗವಹಿಸಲು ಶುರು ಮಾಡಿದೆ. ಆದರೆ ಈಗ ಎಳವೆಯಿಂದಲೇ ಮಕ್ಕಳು ಡಬಲ್ಸ್‌ ಮತ್ತು ಮಿಶ್ರ ಡಬಲ್ಸ್‌ ವಿಭಾಗಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆ.

ನೀವು ಆಡಲು ಶುರು ಮಾಡಿದ ದಿನಗಳಿಗೆ ಹೋಲಿಸಿದರೆ ಈಗ ಭಾರತದ ಬ್ಯಾಡ್ಮಿಂಟನ್‌ನಲ್ಲಿ ಏನಾದರೂ ಬದಲಾವಣೆಯಾಗಿದೆಯಾ?

ನಾನು ಪದಾರ್ಪಣೆ ಮಾಡಿದಾಗ ಪ್ರಕಾಶ್‌ ಪಡುಕೋಣೆ, ಗೋಪಿಚಂದ್‌, ಜ್ವಾಲಾ ಗುಟ್ಟಾ, ಅಪರ್ಣಾ ಪೋಪಟ್‌ ಹೀಗೆ ಕೆಲವೇ ಮಂದಿ ಈ ಕ್ರೀಡೆಯಲ್ಲಿ ಹೆಜ್ಜೆ ಗುರುತು ಮೂಡಿಸಿದ್ದರು. ಆದರೆ ಈಗ ತುಂಬಾ ಬದಲಾವಣೆಗಳಾಗಿವೆ. ಪೋಷಕರು ಎಳವೆಯಿಂದಲೇ ಮಕ್ಕಳಿಗೆ ಬ್ಯಾಡ್ಮಿಂಟನ್‌ ಕಲಿಸಲು ಆಸಕ್ತಿ ತೋರಿಸುತ್ತಿದ್ದಾರೆ. ಇದರಿಂದ ಹೊಸ ಪ್ರತಿಭೆಗಳು ಪ್ರವರ್ಧಮಾನಕ್ಕೆ ಬರುತ್ತಿದ್ದಾರೆ. ಹೀಗಾಗಿಯೇ ನಮ್ಮವರು ಚೀನಾ, ಮಲೇಷ್ಯಾ, ಸ್ಪೇನ್‌ ಮತ್ತು ಸಿಂಗಪುರದಂತಹ ಬಲಿಷ್ಠ ದೇಶಗಳ ಆಟಗಾರರನ್ನು ಸುಲಭವಾಗಿ ಸೋಲಿಸಲು ಸಾಧ್ಯವಾಗುತ್ತಿದೆ.

ಕರ್ನಾಟಕದಲ್ಲಿ ಬ್ಯಾಡ್ಮಿಂಟನ್‌ ಕ್ರೀಡೆಯ ಅಭಿವೃದ್ಧಿಗೆ ಪೂರಕ ವಾತಾವರಣ ಇದೆಯೇ?

ತೆಲಂಗಾಣ ಮತ್ತು ಆಂಧ್ರಪ್ರದೇಶಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಅತ್ಯಾಧುನಿಕ ಮೂಲ ಸೌಕರ್ಯಗಳಿಲ್ಲ. ಸಾಕಷ್ಟು ಮಂದಿ ಪ್ರತಿಭಾನ್ವಿತರಿದ್ದಾರೆ. ಮಹಿಮಾ ಮತ್ತು ಪೂರ್ವಿಶಾ ಸೇರಿದಂತೆ ಅನೇಕರು ಜೂನಿಯರ್‌ ವಿಭಾಗದಲ್ಲಿ ಮಿಂಚುತ್ತಿದ್ದಾರೆ. ಅಕಾಡೆಮಿಗಳೂ ತುಂಬಾ ಇವೆ. ಸರ್ಕಾರದಿಂದಲೂ ಪ್ರೋತ್ಸಾಹ ಸಿಕ್ಕರೆ ಇನ್ನಷ್ಟು ಪ್ರತಿಭೆಗಳು ಪ್ರವರ್ಧಮಾನಕ್ಕೆ ಬರಬಹುದು.

ಟಾರ್ಗೆಟ್‌ ಒಲಿಂಪಿಕ್‌ ಪೋಡಿಯಂ (ಟಾಪ್‌) ಯೋಜನೆಯಿಂದ ಏನಾದರೂ ಪ್ರಯೋಜನವಾಗಿದೆಯೇ?

ಸಾಕಷ್ಟು ಅನುಕೂಲವಾಗಿದೆ. ಸರ್ಕಾರದಿಂದ ಆಟಗಾರರಿಗೆ ಹಣಕಾಸಿನ ನೆರವು ಸಿಗುತ್ತಿದೆ. ಹೀಗಾಗಿ ಅನೇಕ ಆಟಗಾರರು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಉತ್ತಮ ಸಾಮರ್ಥ್ಯ ತೋರಿ ಪದಕಗಳನ್ನು ಗೆಲ್ಲುತ್ತಿದ್ದಾರೆ.

ಪುರುಷರಿಗೆ ಸಿಗುವಷ್ಟು ಬಹುಮಾನ ಮೊತ್ತ ಮಹಿಳೆಯರಿಗೆ ಸಿಗುತ್ತಿಲ್ಲವಲ್ಲ. ಈ ತಾರತಮ್ಯದ ಬಗ್ಗೆ ನಿಮ್ಮ ಅಭಿಪ್ರಾಯ?

ನಾವು ಮೊದಲಿನಿಂದಲೂ ಈ ಬಗ್ಗೆ ಹೋರಾಟ ಮಾಡುತ್ತಲೇ ಬಂದಿದ್ದೇವೆ. ಪ್ರಶಸ್ತಿ ಮೊತ್ತದಲ್ಲಿ ತಾರತಮ್ಯ ಮಾಡುವುದನ್ನು ನಿಲ್ಲಿಸುವಂತೆ ಮನವಿಯನ್ನೂ ಮಾಡಿದ್ದೇವೆ. ಈಗ ಪರಿಸ್ಥಿತಿ ಕೊಂಚ ಸುಧಾರಿಸಿದೆ. ಕ್ರಮೇಣ ಈ ಅಸಮಾನತೆ ದೂರವಾಗುವ ಭರವಸೆ ಇದೆ.

ರಾಷ್ಟ್ರೀಯ ಕೋಚ್‌ ಗೋ‍ಪಿಚಂದ್‌ ಅವರು ಕಾಮನ್‌ವೆಲ್ತ್‌ ಕೂಟ ಮುಗಿದ ನಂತರ ನಿಮ್ಮ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಈ ಕುರಿತು ಹೇಳಿ.

ಗೋಪಿ ಸರ್‌, ಅವರಿಂದ ಮೆಚ್ಚುಗೆ ಪಡೆದಿದ್ದು ಖುಷಿಯ ವಿಷಯ. ಅವರು ಶ್ರೇಷ್ಠ ಕೋಚ್‌ಗಳಲ್ಲಿ ಒಬ್ಬರು. ಈ ಬಾರಿಯ ಕಾಮನ್‌ವೆಲ್ತ್‌ನಲ್ಲಿ ಒಂದೇ ದಿನ ನಾಲ್ಕು ಪಂದ್ಯಗಳನ್ನು ಆಡಬೇಕಿತ್ತು. ಪಂದ್ಯದ ವೇಳೆ ಅವರು, ಅಮೂಲ್ಯ ಸಲಹೆಗಳನ್ನು ನೀಡಿದರು. ಸಂದಿಗ್ಧ ಪರಿಸ್ಥಿತಿಯಲ್ಲಿ ಒತ್ತಡವನ್ನು ಹೇಗೆ ಮೀರಿನಿಲ್ಲಬೇಕು ಎಂಬುದನ್ನೂ ಹೇಳಿಕೊಟ್ಟರು. ಹೀಗಾಗಿಯೇ ಪರಿಣಾಮಕಾರಿ ಆಟ ಆಡಿ ಎದುರಾಳಿಗಳನ್ನು ಮಣಿಸಲು ಸಾಧ್ಯವಾಯಿತು.

ಮುಂದಿನ ಗುರಿ?

ವಿಶ್ವ ಚಾಂಪಿಯನ್‌ಷಿಪ್‌, ಊಬರ್‌ ಕಪ್‌ ಮತ್ತು ಏಷ್ಯನ್‌ ಕ್ರೀಡಾಕೂಟಗಳು ನಡೆಯಲಿದ್ದು ಅವುಗಳಲ್ಲಿ ಪದಕ ಗೆಲ್ಲುವ ಗುರಿ ಇಟ್ಟುಕೊಂಡಿದ್ದೇನೆ. ಹೀಗಾಗಿ ಫಿಟ್‌ನೆಸ್‌ ಕಾಪಾಡಿಕೊಳ್ಳಲು ಹೆಚ್ಚು ಒತ್ತು ನೀಡುತ್ತಿದ್ದೇನೆ.

ಪತಿಯ ಬೆಂಬಲದ ಬಗ್ಗೆ ಹೇಳಿ.

ಮದುವೆಗೂ ಮುನ್ನ ಅಪ್ಪ, ಅಮ್ಮ ಮತ್ತು ಸಹೋದರ, ನನ್ನೆಲ್ಲಾ ಸಾಧನೆಗೆ ಬೆನ್ನೆಲುಬಾಗಿದ್ದರು. ಈಗ ಪತಿ, ಕರಣ್‌ ಮೇದಪ್ಪ ಹಾಗೂ ಅವರ ಕುಟುಂಬದವರು ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದಾರೆ.

1 – 2011ರಲ್ಲಿ ಲಂಡನ್‌ನಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಷಿಪ್‌ನ ಡಬಲ್ಸ್‌ನಲ್ಲಿ ಅಶ್ವಿನಿ ಗೆದ್ದ ಕಂಚಿನ ಪದಕ.

2 – ಉಬರ್‌ ಕಪ್‌ ಬ್ಯಾಡ್ಮಿಂಟನ್‌ ಟೂರ್ನಿಯ ತಂಡ ವಿಭಾಗದಲ್ಲಿ ಜಯಿಸಿರುವ ಕಂಚಿನ ಪದಕಗಳು. 2014 ಮತ್ತು 2016ರಲ್ಲಿ ಈ ಸಾಧನೆ ಮೂಡಿಬಂದಿತ್ತು.

1 – 2014ರಲ್ಲಿ ಇಂಚೆನ್‌ನಲ್ಲಿ ಜರುಗಿದ್ದ ಏಷ್ಯಾ ಕ್ರೀಡಾಕೂಟದ ತಂಡ ವಿಭಾಗದಲ್ಲಿ ಗೆದ್ದ ಕಂಚಿನ ಪದಕ.

ಪರಿಚಯ

ಜನನ: 18 ಸೆಪ್ಟೆಂಬರ್‌ 1989 l ಸ್ಥಳ: ಬೆಂಗಳೂರು.

ವೃತ್ತಿ‍ಪರ ಬ್ಯಾಡ್ಮಿಂಟನ್‌ಗೆ ಅಡಿ ಇಟ್ಟಿದ್ದು: 2007

ಕೋಚ್‌: ಟ್ಯಾನ್‌ ಕಿಮ್‌ l ಡಬಲ್ಸ್‌ ರ‍್ಯಾಂಕಿಂಗ್‌: 25

**

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT