ಕಾಮನ್‌ವೆಲ್ತ್ ಕ್ರೀಡಾಕೂಟ

ಶೂಟಿಂಗ್‌ ಮೇಲೆ ತೂಗುಗತ್ತಿ

ಗೋಲ್ಡ್ ಕೋಸ್ಟ್‌ ಕಾಮನ್‌ವೆಲ್ತ್ ಕ್ರೀಡಾಕೂಟದ ಶೂಟಿಂಗ್‌ನಲ್ಲಿ ಭಾರತ ಅಮೋಘ ಸಾಧನೆ ಮಾಡಿದೆ. ಆದರೆ ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಂನಲ್ಲಿ ನಡೆಯಲಿರುವ ಮುಂದಿನ ಕೂಟದಲ್ಲಿ ಶೂಟಿಂಗ್‌ ಕ್ರೀಡೆಯ ಸೇರ್ಪಡೆ ಬಗ್ಗೆ ಈಗ ಚರ್ಚೆ ಆರಂಭಗೊಂಡಿದೆ. ಆತಿಥೇಯರು ಈ ಕ್ರೀಡೆಯನ್ನು ಕೈಬಿಡುವುದಾಗಿ ಹೇಳಿದ್ದು ಭಾರತ ಶೂಟಿಂಗ್ ಸಂಸ್ಥೆ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಶೂಟಿಂಗ್‌ ಕೈಬಿಡಲೇಬಾರದು ಎಂದು ಒತ್ತಾಯಿಸಿದೆ.

ಮೆಹುಲಿ ಘೋಷ್‌

ಗೋಲ್ಡ್ ಕೋಸ್ಟ್‌ನಲ್ಲಿ ನಡೆದ 21ನೇ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಅಮೋಘ ಸಾಧನೆ ಮಾಡಿದ ಭಾರತದ ಶೂಟರ್‌ಗಳು ತಾಯ್ನಾಡಿಗೆ ಮರಳುತ್ತಿದ್ದಂತೆ ಅಭಿನಂದನೆಯ ಮಹಾಪೂರ ಅವರನ್ನು ಕಾದಿತ್ತು. ಸಂಭ್ರಮದಲ್ಲಿದ್ದ ಶೂಟರ್‌ಗಳ ಪೈಕಿ ಅನೇಕರನ್ನು ಚಿಂತೆಯೂ ಕಾಡುತ್ತಿತ್ತು. ಯಾಕೆಂದರೆ, ಮುಂದಿನ ಬಾರಿ ಬರ್ಮಿಂಗ್‌ಹ್ಯಾಂನಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಕೂಟದಿಂದ ಶೂಟಿಂಗ್‌ ಕ್ರೀಡೆಯನ್ನು ಕೈಬಿಡಲಾಗುವುದು ಎಂಬ ಸುದ್ದಿ ಆಗಲೇ ಹರಡಿತ್ತು.

ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಒಟ್ಟು 12 ಕ್ರೀಡೆಗಳನ್ನು ಐಚ್ಛಿಕ ಎಂದು ಘೋಷಿಸಲಾಗಿದೆ. ಅದರಲ್ಲಿ ಶೂಟಿಂಗ್ ಕೂಡ ಒಳಗೊಂಡಿದೆ. ಈ ಕ್ರೀಡೆಗಳನ್ನು ಸೇರ್ಪಡೆ ಮಾಡುವ ಅಥವಾ ಕೈಬಿಡುವ ಹಕ್ಕು ಆತಿಥೇಯ ರಾಷ್ಟ್ರಕ್ಕೆ ಇದೆ. ಸ್ಥಳೀಯ ಪರಿಸ್ಥಿತಿ ಮತ್ತು ಸೌಲಭ್ಯಗಳನ್ನು ನೋಡಿಕೊಂಡು ಆತಿಥೇಯರು ನಿರ್ಧಾರ ಕೈಗೊಳ್ಳುತ್ತಾರೆ.

ಶೂಟಿಂಗ್ ಕೈಬಿಡಲು ಇಂಗ್ಲೆಂಡ್‌ ಮುಂದಾಗಿರುವುದಕ್ಕೆ ಭಾರತದ ರಾಷ್ಟ್ರೀಯ ಶೂಟಿಂಗ್ ಸಂಸ್ಥೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಆತಿಥೇಯರು ಇದೇ ನಿರ್ಧಾರದೊಂದಿಗೆ ಮುಂದಡಿ ಇಟ್ಟರೆ ಬರ್ಮಿಂಗ್‌ಹ್ಯಾಂ ಕೂಟವನ್ನು ಭಾರತ ಬಹಿಷ್ಕರಿಸಲಿದೆ ಎಂದು ಸಂಸ್ಥೆ ಎಚ್ಚರಿಕೆ ನೀಡಿದೆ.

2002ರಿಂದ ಸತತ ಮೂರು ಆವೃತ್ತಿಗಳಲ್ಲಿ ಭಾರತ ಶೂಟಿಂಗ್‌ನಲ್ಲಿ ಪಾರಮ್ಯ ಮೆರೆದಿತ್ತು. ಕಳೆದ ಬಾರಿ ದೇಶದ ಶೂಟರ್‌ಗಳು ಮುಗ್ಗರಿಸಿದ್ದರೂ ಈ ಬಾರಿ ಮತ್ತೆ ಮಿಂಚಿದ್ದಾರೆ. ಗೋಲ್ಡ್‌ಕೋಸ್ಟ್‌ನಲ್ಲಿ ಭಾರತ ಗೆದ್ದ ಒಟ್ಟು 66 ಪದಕಗಳಲ್ಲಿ ಶೂಟರ್‌ಗಳು ಗಳಿಸಿಕೊಟ್ಟ ಪದಕಗಳ ಸಂಖ್ಯೆ 16. ಈ ಪೈಕಿ ಏಳು ಚಿನ್ನ.

ಜಿತು ರಾಯ್‌

ದೇಶಕ್ಕೆ ಪದಕಗಳನ್ನು ಗೆದ್ದುಕೊಡುವ ಕ್ರೀಡೆಯನ್ನು ಕೂಟದಿಂದ ಕೈಬಿಟ್ಟರೆ ಆಗುವ ನಷ್ಟದ ಪರಿಣಾಮ ರೈಫಲ್ ಸಂಸ್ಥೆಯ ಆತಂಕಕ್ಕೆ ಕಾರಣ. ಕಾಮನ್‌ವೆಲ್ತ್‌ ಕೂಟದ ಆಯೋಜಕರಿಗೆ ಈ ವರ್ಷದ ಆರಂಭದಲ್ಲೇ ಆತಿಥೇಯ ದೇಶದವರು ಪತ್ರ ಬರೆದು ‘ನಮ್ಮಲ್ಲಿ ನಡೆಯಲಿರುವ ಕೂಟದಲ್ಲಿ ಶೂಟಿಂಗ್ ಸೇರ್ಪಡೆಗೊಳಿಸಲು ಆಗುವುದಿಲ್ಲ’ ಎಂದು ಹೇಳಿದ್ದರು.

ಇದನ್ನು ಒಪ್ಪಿಕೊಂಡೇ ಕೂಟದ ಆತಿಥ್ಯವನ್ನು ವಹಿಸಿಕೊಡಲಾಗಿತ್ತು. ಆದರೆ ಗೋಲ್ಡ್ ಕೋಸ್ಟ್ ಕೂಟ ಮುಗಿದ ಕೂಡಲೇ ರೈಫಲ್ ಸಂಸ್ಥೆ ಕಣಕ್ಕೆ ಧುಮುಕಿದ್ದು ಶೂಟಿಂಗ್‌ನ ‘ಗೌರವ’ ಉಳಿಸಲು ಪಣತೊಟ್ಟಿದೆ. ಇದಕ್ಕಾಗಿ ಕೇಂದ್ರ ಸರ್ಕಾರದ ಕದವನ್ನೂ ತಟ್ಟಿದೆ.

ಅರಂಭದಲ್ಲೇ ವಿಘ್ನ

ಕಾಮನ್‌ವೆಲ್ತ್‌ ಕೂಟದಲ್ಲಿ ಶೂಟಿಂಗ್ ಕ್ರೀಡೆ ಸ್ಥಾನ ಗಳಿಸಲು 11 ಆವೃತ್ತಿಗಳ ವರೆಗೆ ಕಾಯಬೇಕಾಗಿತ್ತು. 1966ರಲ್ಲಿ ಜಮೈಕಾದ ಕಿಂಗ್ಸ್‌ಟನ್ ನಗರದಲ್ಲಿ ನಡೆದ ಕೂಟದಲ್ಲಿ ಶೂಟಿಂಗ್ ಮೊದಲ ಬಾರಿ ಸೇರ್ಪಡೆಯಾಯಿತು. ಆದರೆ ಮುಂದಿನ ಬಾರಿ ವಿಘ್ನ ಕಾದಿತ್ತು. ಸ್ಕಾಟ್ಲೆಂಡ್‌ನ ಎಡಿನ್‌ಬರ್ಗ್‌ನಲ್ಲಿ ನಡೆದ ಕೂಟದಲ್ಲಿ ಈ ಕ್ರೀಡೆಯನ್ನು ಕೈಬಿಡಲಾಯಿತು. ಆದರೆ ನಂತರದ ಕೂಟದಲ್ಲಿ ಶೂಟಿಂಗ್‌ಗೆ ಸ್ಥಾನ ಲಭಿಸಿತು. ಅಂದಿನಿಂದ ಈ ಬಾರಿಯ ಗೋಲ್ಡ್ ಕೋಸ್ಟ್ ಕೂಟದ ವರೆಗೆ ಶೂಟಿಂಗ್‌ಗೆ ಧಕ್ಕೆ ಇರಲಿಲ್ಲ.

ಶೂಟಿಂಗ್‌ ಮೊದ ಮೊದಲು ಮುಕ್ತ ವಿಭಾಗದಲ್ಲಿ ನಡೆಯುತ್ತಿತ್ತು. 1994ರಲ್ಲಿ ‍ಪಿಸ್ತೂಲ್ ಮತ್ತು ರೈಫಲ್‌ನಲ್ಲಿ ಮಹಿಳೆ ಮತ್ತು ಪುರುಷರ ವಿಭಾಗಕ್ಕೆ ಪ್ರತ್ಯೇಕ ಸ್ಪರ್ಧೆ ನಡೆಸುವ ಪದ್ಧತಿ ಆರಂಭವಾಯಿತು. 2002ರಿಂದ ಟ್ರ್ಯಾಪ್‌ ಮತ್ತು ಸ್ಕೀಟ್ ವಿಭಾಗದಲ್ಲೂ ಮಹಿಳೆ ಮತ್ತು ಪುರುಷರ ಸ್ಪರ್ಧೆಗಳು ಪ್ರತ್ಯೇಕವಾಗಿ ನಡೆಯುತ್ತಿವೆ.

ತೇಜಸ್ವಿನಿ ಸಾವಂತ್‌

**

ಒಲಿಂಪಿಕ್‌ ಕ್ರೀಡೆಯ ಕಡೆಗಣನೆ ಸರಿಯಲ್ಲ ಶೂಟಿಂಗ್ ಈಗ ಒಲಿಂಪಿಕ್‌ ಕ್ರೀಡೆ. ಅದನ್ನು ಕಾಮನ್‌ವೆಲ್ತ್‌ ಕೂಟದಲ್ಲಿ ಸೇರ್ಪಡೆ ಮಾಡದೇ ಇರುವ ನಿರ್ಧಾರ ಸರಿಯಲ್ಲ. ಈ ಕ್ರೀಡೆಯನ್ನು ಕೈಬಿಟ್ಟರೆ ಭಾರತಕ್ಕೆ ಭಾರಿ ನಷ್ಟ. ಇತ್ತೀಚೆಗೆ ಕಾಮನ್‌ವೆಲ್ತ್ ಕೂಟದಲ್ಲಿ ದೇಶಕ್ಕೆ ಹೆಚ್ಚು ಪದಕಗಳನ್ನು ಗಳಿಸಿಕೊಡುವ ಕ್ರೀಡೆಗಳಲ್ಲಿ ಒಂದು ಶೂಟಿಂಗ್‌. ಮುಂದಿನ ಕಾಮನ್‌ವೆಲ್ತ್ ಕೂಟದಲ್ಲಿ ಶೂಟಿಂಗ್ ಇರಲೇಬೇಕು

– ಸುಮಾ ಶಿರೂರು ಒಲಿಂಪಿಯನ್‌ ಶೂಟರ್. 

ಸಮಯಾವಕಾಶ ಸಾಕಷ್ಟಿದೆ

ಭಾರತ ಪಾಲ್ಗೊಳ್ಳುವ ಪ್ರಮುಖ ಕ್ರೀಡೆಗಳಲ್ಲಿ ಒಂದು ಶೂಟಿಂಗ್‌. ಇದನ್ನು ಕೂಟದಿಂದ ಕೈಬಿಡುವ ನಿರ್ಧಾರ ಕೈಗೊಂಡಿದ್ದು ಸರಿಯಲ್ಲ. ಬರ್ಮಿಂಗ್‌ಹ್ಯಾಂನಲ್ಲಿ ಶೂಟಿಂಗ್‌ಗೆ ಬೇಕಾದ ಸೌಲಭ್ಯ ಇಲ್ಲ ಎಂದು ಹೇಳಿ ಈ ಕ್ರೀಡೆಯನ್ನು ಕೈಬಿಡಲು ಆತಿಥೇಯರು ಮುಂದಾಗಿದ್ದಾರೆ. ಆದರೆ ಇನ್ನೂ ನಾಲ್ಕು ವರ್ಷ ಇರುವುದರಿಂದ ಸೌಲಭ್ಯ ಕಲ್ಪಿಸಬಹುದಾಗಿದೆ. ಹೀಗೆ ಮಾಡದಿದ್ದರೆ ಉದ್ದೇಶಪೂರ್ವಕವಾಗಿಯೇ ಕೈಬಿಡಲಾಗಿದೆ ಎಂಬ ಆರೋಪವನ್ನು ಆಯೋಜಕರು ಹೊರಬೇಕಾಗುತ್ತದೆ

 ಅಮನ್‌ಪ್ರೀತ್‌ ಸಿಂಗ್‌, ಖ್ಯಾತ ಶೂಟರ್‌. 

 

Comments
ಈ ವಿಭಾಗದಿಂದ ಇನ್ನಷ್ಟು
ಈ ಬಾರಿ ಕಿರೀಟ ಯಾರ ಮುಡಿಗೆ?

ಟೆನಿಸ್‌ ಚಾಂಪಿಯನ್‌ಷಿಪ್‌
ಈ ಬಾರಿ ಕಿರೀಟ ಯಾರ ಮುಡಿಗೆ?

21 May, 2018
ಕ್ಯಾಚ್ ಇಟ್...

ಐಪಿಎಲ್‌ -2018
ಕ್ಯಾಚ್ ಇಟ್...

21 May, 2018
ಕೊಹ್ಲಿ ಫಿಟ್‌ನೆಸ್‌ ಮಂತ್ರ

ಕ್ರಿಕೆಟ್‌
ಕೊಹ್ಲಿ ಫಿಟ್‌ನೆಸ್‌ ಮಂತ್ರ

21 May, 2018
ಸಫಲವಾಗುವುದೇ ಮಹಿಳಾ ಟ್ವೆಂಟಿ–20 ಲೀಗ್‌?

ಭರವಸೆ
ಸಫಲವಾಗುವುದೇ ಮಹಿಳಾ ಟ್ವೆಂಟಿ–20 ಲೀಗ್‌?

21 May, 2018
ಕ್ರಿಕೆಟ್‌ ಪ್ರತಿಭೆಗಳಿಗೆ ಅಪ್ಪನೇ ‘ದ್ರೋಣ’

ಕ್ರೀಡಾಪ್ರೇಮ
ಕ್ರಿಕೆಟ್‌ ಪ್ರತಿಭೆಗಳಿಗೆ ಅಪ್ಪನೇ ‘ದ್ರೋಣ’

14 May, 2018