ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಫ್ಯಾಂಟಸಿ ಲೀಗ್ ಕಾಲ

Last Updated 22 ಏಪ್ರಿಲ್ 2018, 21:01 IST
ಅಕ್ಷರ ಗಾತ್ರ

ಟೆಸ್ಟ್, ಏಕದಿನ ಮತ್ತು ಟ್ವೆಂಟಿ–20 ಪಂದ್ಯಗಳು, ಐಪಿಎಲ್‌ ಹೀಗೆ  ಹೊಸ ಹೊಸ ರೂಪಗಳಲ್ಲಿ ಕ್ರಿಕೆಟ್ ಬೆಳೆಯುತ್ತಿದೆ. ಅದೇ ರೀತಿ ಕ್ರಿಕೆಟ್‌ ಮೇಲಿನ ಅಭಿಮಾನಿಗಳ ‘ಭಕ್ತಿ’ಯೂ ಹೆಚ್ಚಾಗುತ್ತಲೇ ಇದೆ. ಈಗ ಇದಕ್ಕೆ ಹೊಸದಾಗಿ ಫ್ಯಾಂಟಸಿ ಕ್ರಿಕೆಟ್‌  ಸೇರ್ಪಡೆಯಾಗಿದೆ.

ಕ್ರಿಕೆಟ್ ಅಷ್ಟೇ ಅಲ್ಲ, ಪ್ರತಿ ಆಟದಲ್ಲೂ ಫ್ಯಾಂಟಸಿ (ಕಲ್ಪನಾಲೋಕ) ಲಗ್ಗೆ ಇಡುತ್ತಿದೆ. ಈ ಆಟದಲ್ಲಿ ನೀವೇ ಮ್ಯಾನೇಜರ್ ಮತ್ತು ಕೋಚ್. ನೀವೇ ಒಂದು ತಂಡ ಕಟ್ಟಬಹುದು. ವಿರೋಧಿ ತಂಡವನ್ನು ಎದುರಿಸಲು ಈ ತಂಡದ ಸದಸ್ಯರೊಂದಿಗೆ ಕಣಕ್ಕೆ ಇಳಿಯಬಹುದು.

ಈ ಆಟವನ್ನು ಎರಡು ಮಾದರಿಗಳಲ್ಲಿ ಆಡಲು ಅವಕಾಶವಿದೆ. ಒಂದು ಮನರಂಜನೆಗಾಗಿ, ಇನ್ನೊಂದು ’ನಗದು ಬಹುಮಾನ’ ಗೆಲ್ಲಲು. ಆಟದಲ್ಲಿ ನಿಮ್ಮ ನೆಚ್ಚಿನ ತಂಡ ಗೆದ್ದರೆ ಲಕ್ಷಗಟ್ಟಲೇ ಬಹುಮಾನ ಸಿಗುತ್ತದೆ. ಅಮೆರಿಕ ಮತ್ತು ಯುರೋಪ್‌ಗಳಲ್ಲಿ ಫುಟ್‌ಬಾಲ್ ಫ್ಯಾಂಟಸಿ ಗೇಮ್‌ಗಳು ಜನಪ್ರಿಯವಾಗಿವೆ. ನಮ್ಮ ದೇಶದಲ್ಲಿ ಈಗಷ್ಟೇ ಆರಂಭವಾಗಿದೆ.

ಇಂಡಿಯನ್ ಫೆಡರೇಷನ್ ಆಫ್‌ ಸ್ಪೋರ್ಟ್ಸ್ ಗೇಮಿಂಗ್ ಅಂಕಿ ಅಂಶಗಳ ಪ್ರಕಾರ, ಕಳೆದ 18 ತಿಂಗಳಲ್ಲಿ ಫ್ಯಾಂಟಸಿ ಗೇಮ್ಸ್ ಆಡುವವರ ಸಂಖ್ಯೆ 20ಲಕ್ಷದಿಂದ 2ಕೋಟಿಗೆ ತಲುಪಿದೆ. ಇವರೆಲ್ಲ ದಿನಕ್ಕೆ ಸರಾಸರಿ 42 ನಿಮಿಷ ಫ್ಯಾಂಟಸಿ ಗೇಮ್ಸ್ ಆಡುವುದರಲ್ಲಿ ಕಾಲ ಕಳೆಯುತ್ತಿದ್ದಾರೆ. ತಿಂಗಳಿಗೆ ಶೇ 90ರಷ್ಟು ಮಂದಿ ತಿಂಗಳಲ್ಲಿ ಒಮ್ಮೆಯಾದರೂ ಫ್ಯಾಂಟಸಿಯ ಊಹಾ ಲೋಕದಲ್ಲಿ ಆಟವಾಡುತ್ತಿದ್ದಾರೆ.

ಈಗಾಗಲೇ 60ಕ್ಕೂ ಹೆಚ್ಚು ಕಂಪನಿಗಳು ವರ್ಚುವಲ್ ಅಂಗಳದಲ್ಲಿ ಕಣಕ್ಕಿಳಿದಿವೆ. ಆನ್‌ಲೈನ್ ಆಟಗಳನ್ನು ಆಡುವ ಪ್ರತಿ ಮೂವರಲ್ಲಿ ಇಬ್ಬರಿಗೆ ಈ ಫ್ಯಾಂಟಸಿ ಗೇಮ್‌ಗಳ ಬಗ್ಗೆ ಪರಿಚಯವಿದೆ. ಐಪಿಎಲ್‌ ಸೇರಿದಂತೆ, ನ್ಯಾಷನಲ್ ಬ್ಯಾಸ್ಕೆಟ್ ಬಾಲ್ ಅಸೋಸಿಯೇಷನ್, ಇಂಡಿಯನ್ ಸೂಪರ್‌ಲೀಗ್ ಫುಟ್‌ಬಾಲ್, ಪ್ರೊ ಕಬಡ್ಡಿ ಲೀಗ್ ಕೂಡ ಅಭಿಮಾನಿಗಳನ್ನು ಆಕರ್ಷಿಸಲು ಫ್ಯಾಂಟಸಿಯನ್ನೇ ಅಸ್ತ್ರವಾಗಿ ಬಳಸಿಕೊಳ್ಳುತ್ತಿವೆ. ಕಾರಣ ಈ ಲೀಗ್‌ಗಳಿಗೆ ಪ್ರಚಾರ ಕೊಡಿಸುವುದು.

ಖ್ಯಾತನಾಮರ ಪ್ರಚಾರ

ಅತಿದೊಡ್ಡ ಫ್ಯಾಂಟಸಿ ಗೇಮಿಂಗ್ ಸಂಸ್ಥೆ ಸ್ಟಾರ್‌ಪಿಕ್ ಈಚೆಗಷ್ಟೇ ಭಾರತದ ಅಂಗಳದಲ್ಲಿ ಕಾಲಿಟ್ಟಿದೆ. ಈ ಸಂಸ್ಥೆಯ ಪ್ರಚಾರ ರಾಯಭಾರಿಗಳಾಗಿ ಖ್ಯಾತನಾಮ ಕ್ರಿಕೆಟಿಗರಿದ್ದಾರೆ. ಈ ಫ್ಯಾಂಟಸಿ ಗೇಮ್‌ನಲ್ಲಿ ನಿಮ್ಮ ತಂಡ ಗೆದ್ದರೆ ಖಾತೆಗೆ ಹಣ ಜಮೆಯಾಗುತ್ತದೆ. ಸಂಸ್ಥೆಯ ಡ್ರೀಮ್‌11 ಡಾಟ್ ಕಾಮ್  ಜಾಲತಾಣವು ನಮ್ಮ ದೇಶದಲ್ಲಿ ಫ್ಯಾಂಟಸಿ ಆಟಗಳಿಗೆ ಅತಿ ದೊಡ್ಡ ವೇದಿಕೆ. ಈ ಜಾಲತಾಣದಲ್ಲಿ  ಫ್ಯಾಂಟಸಿ ಕ್ರಿಕೆಟ್, ಫ್ಯಾಂಟಸಿ ಫುಟ್‌ಬಾಲ್‌, ಫ್ಯಾಂಟಸಿ ಕಬಡ್ಡಿ ಹೀಗೆ ಹಲವು ಆಟಗಳನ್ನು ಆಡಬಹುದು. ಫ್ಯಾಂಟಸಿ ಬ್ಯಾಡ್ಮಿಂಟನ್‌ ಕೂಡ ಸದ್ಯದಲ್ಲೇ ಸೇರ್ಪಡೆಯಾಗಲಿದೆ. ಮತ್ತೊಂದು ಫ್ಯಾಂಟಸಿ ಗೇಮಿಂಗ್ ಸಂಸ್ಥೆ ಕ್ರಿಕ್ ಬ್ಯಾಟಲ್‌ ಈ ಐಪಿಎಲ್‌ ಸರಣಿಯಲ್ಲಿ ಸುಮಾರು ₹42 ಲಕ್ಷ ನಗದು ಬಹುಮಾನ ಪ್ರಕಟಿಸಿದೆ.

ಹೇಗಿರುತ್ತದೆ ಆಟ?

ಪ್ರತಿಯೊಬ್ಬ ಕ್ರೀಡಾಭಿಮಾನಿಯೂ ತನ್ನ ನೆಚ್ಚಿನ ತಂಡದಲ್ಲಿ ಇಂತಹ ಆಟಗಾರರು ಇರಬೇಕು ಎಂದು ಆಶಿಸುತ್ತಾನೆ. ಈ ಆಲೋಚನೆಗಳಿಗೆ ಒಂದು ರೂಪ ಕೊಟ್ಟು  ಆಟ ಆಡಬಹುದು. ಅದೃಷ್ಟ ಖುಲಾಯಿಸಿದರೆ ಬಂಪರ್ ಆಫರ್. ಉದಾಹರಣೆಗೆ ನಿರ್ದಿಷ್ಟ ಸರಣಿಯಲ್ಲಿ ಡೆಲ್ಲಿ ಡೇರ್‌ ಡೆವಿಲ್ಸ್ ಮತ್ತು ಕೋಲ್ತತ್ತ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿವೆ ಎಂದಿಟ್ಟುಕೊಳ್ಳಿ. ಆಗ ಡೆಲ್ಲಿ ಸ್ಪೋರ್ಟ್ಸ್ ಫ್ಯಾಂಟಸಿ ಸ್ಪೋರ್ಟ್ಸ್ ಆಡುವವರು ತಮ್ಮ ತಂಡ ರಚಿಸಲು 11 ಮಂದಿ ಆಟಗಾರರು ಪಟ್ಟಿ ಸಿದ್ಧ ಮಾಡಬೇಕು. ಈ ಆಯ್ಕೆಯು ಐಪಿಎಲ್‌ ನಿಯಮಗಳಿಗೆ ಅನುಗುಣವಾಗಿ ಇರಬೇಕು. ತಂಡದಲ್ಲಿ ಗರಿಷ್ಠ ನಾಲ್ವರು ಅಂತರರಾಷ್ಟ್ರೀಯ ಆಟಗಾರರು ಇರಬಹುದು ಎಂಬ ನಿಯಮವನ್ನು ಪಾಲಿಸಬೇಕು.  ಪಂದ್ಯದಲ್ಲಿ ಆಟಗಾರರು ಗಳಿಸುವ ಸ್ಕೋರ್‌ಗೆ ಅನುಗುಣವಾಗಿ ನಿಮ್ಮ ಖಾತೆಗೆ ಪಾಯಿಂಟ್ಸ್‌ ಸೇರ್ಪಡೆಯಾಗುತ್ತವೆ. ಪ್ರತಿ ಎರಡು ನಿಮಿಷಕ್ಕೊಮ್ಮೆ ಸ್ಕೋರ್ ಅಪಡೇಟ್‌ ಆಗುತ್ತಿರುತ್ತದೆ. ನಿಮ್ಮ ಅಂದಾಜು ನಿಜವಾದರೆ ಆ ಸ್ಕೋರ್‌ಗೆ ತಕ್ಕ ಹಣ ಸಂದಾಯವಾಗುತ್ತದೆ. 

ಫ್ಯಾಂಟಸಿ ಗೇಮ್ಸ್

ಫ್ಯಾಂಟಸಿ ಗೇಮ್‌ಗಳ ಪ್ರಮುಖ ವೆಬ್ ವೇದಿಕೆಗಳು: ಡ್ರೀಮ್‌11, ಕ್ರಿಕ್‌ ಬ್ಯಾಟಲ್‌, ಡ್ರಾಫ್ಟ್‌ ಕಿಂಗ್‌,  ಫ್ಯಾಂಟಸಿ ಪ್ರೀಮಿಯರ್ ಲೀಗ್, ಫ್ಯಾಂಟಸಿ ಎನ್‌ಎಫ್‌ಎಲ್‌, ಹ್ಯಾಟ್ರಿಕ್‌, ಸೂಪರ್‌ಬ್ರೂ ಫ್ಯಾಂಟಸಿ ಡ್ರಾಫ್ಟ್‌. 

1990ರ ದಶಕದಲ್ಲಿ ವಿಶ್ವದ ಕೆಲವು ರಾಷ್ಟ್ರಗಳಲ್ಲಿ  ಅಂತರ್ಜಾಲ ಬಳಕೆ ಹೆಚ್ಚಾಯಿತು. ಆಗ ಅಮೆರಿಕದಲ್ಲಿ ಫ್ಯಾಂಟಸಿ ಗೇಮ್‌ಗಳು ಲಗ್ಗೆ ಇಟ್ಟಿದ್ದವು. 1995ರ ಅಕ್ಟೋಬರ್‌ನಲ್ಲಿ ಮೊದಲ ಫ್ಯಾಂಟಸಿ ಗೇಮ್‌ ರೂಪದಲ್ಲಿ ಹಾಕಿ ಕ್ರೀಡೆ ಪ್ರವೇಶಿಸಿತು. ಆನ್‌ಲೈನ್ ಹಾಕಿ ಲೀಗ್‌ನಲ್ಲಿ ಭಾಗವಹಿಸುವಂತೆ ಪ್ರೇಕ್ಷಕರಿಗೆ ಆಹ್ವಾನವನ್ನೂ ಕಳುಹಿಸಲಾಯಿತು. 1997ರಲ್ಲಿ ಫುಟ್‌ಬಾಲ್ ಫ್ಯಾಂಟಸಿ ಗೇಮ್‌ ಅವತರಿಸಿತು.

**

ಭಾರತದಲ್ಲಿ ಕ್ರಿಕೆಟ್‌ ಒಂದು ಆಟವಲ್ಲ. ಅದೊಂದು ಧರ್ಮ. ಈಗ ಅಭಿಮಾನಿಗಳಿಗೆ ಮತ್ತಷ್ಟು ಖುಷಿ ನೀಡಲು ಸ್ಟಾರ್ ಪಿಕ್‌ ಸಂಸ್ಥೆ ವೇದಿಕೆ ಸಿದ್ಧಗೊಳಿಸಿದೆ. ಅಭಿಮಾನಿಗಳು ತಮ್ಮ ನೆಚ್ಚಿನ ತಂಡವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಿರುವುದು ಖುಷಿಯ ವಿಚಾರ

ವಿವಿಎಸ್ ಲಕ್ಷಣ್‌, ಮಾಜಿ ಕ್ರಿಕೆಟಿಗ.

ಫ್ಯಾಂಟಸಿ ಗೇಮ್‌ಗಳು ಅಭಿಮಾನಿಗಳಿಗೆ ಹೊಸತನ ನೀಡುವುದಕ್ಕೆ ಉತ್ತಮ ವೇದಿಕೆ ಆಗಲಿದೆ. ಸ್ಟಾರ್ ಪಿಕ್‌ ರಾಯಭಾರಿಯಾಗಿರುವುದಕ್ಕೆ ಸಂತೋಷವಾಗುತ್ತಿದೆ

– ರೋಹಿತ್ ಶರ್ಮಾ, ಕ್ರಿಕೆಟಿಗ, ಸ್ಟಾರ್ ಪಿಕ್ ಪ್ರಚಾರ ರಾಯಭಾರಿ.
 

ಕ್ರಿಕೆಟ್‌ ಅಭಿಮಾನಿಗಳು ತಮ್ಮದೇ ಆದ ಒಂದು ತಂಡವನ್ನು ರಚಿಸುವುದು ಎಂದರೇನೆ ಖುಷಿಯ ವಿಚಾರ. ಅದರಲ್ಲೂ ತಮ್ಮ ನೆಚ್ಚಿನ ಆಟಗಾರರನ್ನು ಹೊಂದುವುದು ಇನ್ನೂ ಖುಷಿಯ ವಿಚಾರ

– ಗೌತಮ್‌ ಗಂಭೀರ್. ಡೆಲ್ಲಿ ಡೇರ್ ಡೆವಿಲ್ಸ್ ತಂಡದ ನಾಯಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT