ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸಕ್ಕೂ ಆಪ್ತಸಮಾಲೋಚನೆ

Last Updated 22 ಏಪ್ರಿಲ್ 2018, 21:01 IST
ಅಕ್ಷರ ಗಾತ್ರ

ಬೇಸಿಗೆ ರಜೆ ಅವಧಿ ಎಂದರೆ, ಅದು ಪ್ರವಾಸ ಪ್ರಿಯರ ಪರ್ವಕಾಲ. ಎಲ್ಲರ ಮನೆ, ಮನದಲ್ಲೂ ಪ್ರವಾಸ, ಪ್ರಯಾಣ, ಪ್ರಯಾಸದ್ದೇ ಮಾತು. ಅನೇಕರಿಗೆ ವಿವಿಧ ಪ್ರದೇಶಗಳನ್ನು ಸುತ್ತಿ ನೋಡುವ ಅದಮ್ಯ ಬಯಕೆ. ಆದರೆ ಪ್ರವಾಸ ತೆರಳುವಾಗ ಯಾವ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು, ಯಾವ ಸ್ಥಳಗಳಿಗೆ ಯಾವ ಋತುವಿನಲ್ಲಿ ಭೇಟಿ ನೀಡಬೇಕೆಂಬ ಗೊಂದಲಗಳು ಸಾಮಾನ್ಯ.                         

ಇನ್ನೂ ಕೆಲವರಿಗೆ ಹೈಡ್ರೊ ಫೋಬಿಯಾ. ನೀರು ಕಂಡರೆ ಭಯ. ಆದರೂ ನೀರಿನಲ್ಲಿ ಆಡುವ ಬಯಕೆ. ಹೈಟೋ ಫೋಬಿಯಾದವರಿಗೆ ಎತ್ತರದ ಪ್ರದೇಶದಲ್ಲಿ ನಿಂತು ಪ್ರೀತಿಪಾತ್ರರ ಹೆಸರು ಕೂಗುವ ಆಸೆ. ಆದರೆ ಈ ಫೋಬಿಯಾಗಳಿಂದ ಅವರು ಅಂತಹ ಯಾವುದೇ ಸಾಹಸಕ್ಕೆ ಕೈ ಹಾಕಲ್ಲ.

ಅಂತಹವರಿಗೆ ಸಹಕಾರಿ ಎಂಬಂತಿದೆ ‘ಹ್ಯಾಪಿ ವಾಂಡರರ್‌ ಕಂಪೆನಿ’. ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿರುವ ಅನಿಲ್‌ ನಿಚಾನಿ ಅವರು ಮೂಲತಃ ಪ್ರವಾಸಪ್ರಿಯರು. ಸದ್ಯ ಪ್ರವಾಸಿಪ್ರಿಯರಿಗೆ ಆಪ್ತ ಸಮಾಲೋಚಕರಾಗಿ, ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪ್ರವಾಸ ಹೋಗುವ ಬಯಕೆ ಹೊತ್ತು ಬರುವವರ ಆಸಕ್ತಿ ಮತ್ತು ಆದ್ಯತೆಗಳನ್ನು ಆಧರಿಸಿ ಅನಿಲ್ ಆಪ್ತ ಸಮಾಲೋಚನೆ ಮಾಡುವುದು ವಿಶೇಷ. ಮಕ್ಕಳಿಗಾಗಿ ಪ್ರವಾಸ ತೆರಳುವವರ ನಿರೀಕ್ಷೆಗಳೇನು? ಚಿಣ್ಣರಿಗೆ ಅಗತ್ಯವಾದ ಮನೋರಂಜನಾ ಚಟುವಟಿಕೆಗಳು ಸೇರಿದಂತೆ ಯಾವ ವಿದಧ ಪ್ರವಾಸ ಯೋಜನೆಗಳು ಉತ್ತಮ ಎಂಬುದನ್ನು ಆಧರಿಸಿ ಕುಟುಂಬ ಸದಸ್ಯರಿಗೆ ಆಪ್ತಸಮಾಲೋಚನೆ ನೀಡುತ್ತಾರೆ. ಅಗತ್ಯ ಸ್ಥಳಗಳನ್ನು ಸೂಚಿಸುತ್ತಾರೆ.

ಅನಿಲ್‌ ನಿಚಾನಿ ಅವರೇ ಪ್ರವಾಸಗಳನ್ನು ಆಯೋಜಿಸುತ್ತಾರೆ. ಸಮುದ್ರ, ಹಿಮಾಲಯ, ಸಾಹಸಮಯ ಟ್ರಕ್ಕಿಂಗ್, ಅರಣ್ಯ ಪ್ರವಾಸ, ಐತಿಹಾಸಿಕ, ಪಾರಂಪರಿಕ, ಸಾಂಸ್ಕೃತಿಕ, ಮಾನ್ಸೂನ್‌ ಮ್ಯಾಜಿಕ್‌, ಚಳಗಾಲದ ಪ್ರವಾಸ, ರೊಮ್ಯಾಂಟಿಕ್ ಹಾಲಿಡೇಸ್ ಹೀಗೆ ವಿವಿಧ ವಿಷಯಾಧಾರಿತ ಅನೇಕ ಪ್ರವಾಸ ಯೋಜನೆಗಳಿವೆ.

ಫೋಬಿಯಾಗಳಿಂದ ಬಳಲುವವರಿಗೆ ಅವರಿಗೆ ಯಾವುದರ ಕುರಿತು ಭಯವಿದೆಯೋ ಅದನ್ನು ದಿಟ್ಟವಾಗಿ ಎದುರಿಸುವುದೇ ಸೂಕ್ತ ಪರಿಹಾರ ಎನ್ನುತ್ತದೆ ಮನಶಾಸ್ತ್ರ. ಹ್ರೈಡ್ರೊ ಫೋಬಿಯಾ ಇರುವವರನ್ನು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಅಚಾನಕ್ಕಾಗಿ ನೀರಿಗೆ ತಳ್ಳಬೇಕು. ಇದರಿಂದ ಅವರನ್ನು ಆವರಿಸಿರುವ ಸುಪ್ತಚೇತನದಲ್ಲಿನ ಭಯ ಮಾಯವಾಗುತ್ತದೆ. ನೀರಿನಿಂದ ಏನೂ ಆಗುವುದಿಲ್ಲ ಎನ್ನುವುದು ಅರಿವಿಗೆ ಬರುತ್ತದೆ. ನಾವು ಪ್ರವಾಸವನ್ನು ರೂಪಿಸುವಾಗ ಇಂತಹ ಕೆಲ ವಿಧಾನಗಳನ್ನು ಅನುಸರಿಸುತ್ತೇವೆ.

ಈ ವಿಧಾನವನ್ನು ಎಲ್ಲರೂ ಅನುಸರಿಸಲಾಗದು. ಅದಕ್ಕೆ ಆ ಕ್ಷೇತ್ರಗಳಲ್ಲಿ ಅನುಭವವಿರುವವರೇ ಮಾಡಬೇಕು. ಸುಮ್ಮನೆ ಎತ್ತರದಿಂದ ತಳ್ಳಿದರೆ, ಆಘಾತಗಳು ಸಂಭವಿಸುವ ಸಾಧ್ಯತೆಗಳಿರುತ್ತವೆ ಎಂದು ಅವರು ಎಚ್ಚರಿಕೆ ನೀಡುತ್ತಾರೆ.

ಇನ್ನೂ ‘ಕೆಥಾರ್ಸಿಸ್‌’ ಮೂಲಕವೂ ಫೋಬಿಯಾವನ್ನು ದೂರಮಾಡಬಹುದು. ಯಾವಾಗಿನಿಂದ ಈ ಭಯ ಆವರಿಸಿತು. ಅದಕ್ಕೆ ಕಾರಣವಾದ, ಸಾಮಾಜಿಕ ಮತ್ತು ಮಾನಸಿಕ ಅಂಶಗಳನ್ನು ಅವರು ಮತ್ತು ಅವರ ಆಪ್ತರಿಂದ ತಿಳಿದುಕೊಂಡು ಪರಿಹಾರ ಸೂಚಿಸುತ್ತಾರೆ. ಪ್ರವಾಸವನ್ನು ಆನಂದಿಸಲು ಫೋಬಿಯಾ ಅಡ್ಡಿಯಾಗದಂತೆ ಎಚ್ಚರವಹಿಸುತ್ತಾರೆ.

(ಪ್ರವಾಸಿ ತಂಡದೊಂದಿಗೆ ಅನಿಲ್)

ಅನಿಲ್‌ ಅವರಿಗೆ ಪ್ರವಾಸ ಕ್ಷೇತ್ರದಲ್ಲಿ 25 ವರ್ಷಗಳ ಅನುಭವ. ವಿಶ್ವದ ಬಹುತೇಕ ಎಲ್ಲ ಪ್ರವಾಸಿ ತಾಣಗಳಿಗೂ ಭೇಟಿ ನೀಡಿರುವ ಅವರು ಅಲ್ಲಿನ ಸವಾಲುಗಳೇನು ಎನ್ನುವುದನ್ನು ಖುದ್ದು ಬಲ್ಲರು. ಪ್ರೇಕ್ಷಣೀಯ ಸ್ಥಳಗಳಲ್ಲಿನ ಸೇವೆ, ಆಹಾರ, ಪ್ರವಾಸದ ಕುರಿತ ಮಾಹಿತಿ ಅವರಿಗಿದೆ.

‘ವಿಶ್ವದ ವಿವಿಧ ಪ್ರದೇಶಗಳಿಗೆ ಪ್ರವಾಸ ತೆರಳಿದಾಗ ಅಲ್ಲಿನ ಪ್ರವಾಸಿಗರ ಬವಣೆಗಳು, ಮಾಹಿತಿ, ಮಾರ್ಗದರ್ಶನದ ಕೊರತೆ ಇತ್ತು. ಆಗ ನನಗೆ ಈ ಬಗೆಯ ಆಪ್ತಸಮಾಲೋಚನೆಯ ಅಗತ್ಯವಿದೆ ಎನಿಸಿತು.   ಎರಡು ವರ್ಷಗಳ ಹಿಂದೆ ಸಂಸ್ಥೆ ಆರಂಭಿಸಿದೆ. ಅಂತರ್ಜಾಲದಲ್ಲಿ ಇರಲಾರದ, ಗೂಗಲ್ ಮ್ಯಾಪ್‌ನಲ್ಲಿ ಹುಡುಕಲಾಗದ ಅನೇಕ ತಾಣಗಳಿವೆ. ಅವುಗಳ ಪರಿಚಯ ಹಲವರಿಗಿಲ್ಲ.  ರವಾಸ ಮಾರ್ಗದರ್ಶನವನ್ನು ಆರಂಭಿಸಿದೆ’ ಎನ್ನುತ್ತಾರೆ ಅನಿಲ್.

‘ಒತ್ತಡದ ಆಧುನಿಕ ಜೀವನದಲ್ಲಿ ಪ್ರವಾಸದ ಆಯ್ಕೆ ಅತಿ ಸೂಕ್ಷ್ಮವಾಗಿರಬೇಕು. ನಿಸರ್ಗ ಒತ್ತಡಕ್ಕೆ ಮದ್ದು.   ರಿಲ್ಯಾಕ್ಸ್‌ಗಾಗಿ ಪ್ರವಾಸ ಮಾಡಬಯಸುವವರಿಗೆ ನಿಸರ್ಗವೇ ಉತ್ತಮ ಆಯ್ಕೆ. ಪ್ರವಾಸಿಗರಿಗೆ ಸುರಕ್ಷೆಯ ಜೊತೆಗೆ ನಿಸರ್ಗದ ಸೌಂದರ್ಯ ಕಾಪಾಡುವಂತೆ ಆಪ್ತಸಮಾಲೋಚನೆಯಲ್ಲಿ ತಿಳಿಸುತ್ತೇನೆ’ ಎನ್ನುವ ಅನಿಲ್ ಪ್ರವಾಸಿ ತಾಣಗಳಲ್ಲಿ ಹೆಜ್ಜೆಗುರುತುಗಳ ಹೊರತಾಗಿ ಯಾವುದೇ ಕುರುಹುಗಳನ್ನು ಬಿಟ್ಟುಬರಬಾರದು. ಅಲ್ಲಿಂದ ನೆನಪಿನ ಬುತ್ತಿಯನ್ನಲ್ಲದೇ ಬೇರೆ ಏನನ್ನು ತರಬಾರದು ಎಂದು ಸಲಹೆ ನೀಡುತ್ತಾರೆ.

ಕೆಲವರಿಗೆ ಪ್ರವಾಸ ಅಂದ್ರೆ ಜಗತ್ತನ್ನು ತಿಳಿಯುವ ಕೌತುಕದ ದಾರಿ. ಮತ್ತೆ ಕೆಲವರಿಗೆ  ಮನೋರಂಜನೆಯೇ ಪ್ರಮುಖ. ಇನ್ನೂ ಅನೇಕರು ಸ್ಥಳೀಯ ಆಹಾರ, ಸಂಸ್ಕೃತಿಗಳ ವೈವಿಧ್ಯವನ್ನು ತಿಳಿಯಲು ಪ್ರವಾಸದ ಮೊರೆ ಹೋಗುತ್ತಾರೆ. ಅವರ ಆದ್ಯತೆಗಳಿಗೆ ಅಗತ್ಯವಾದ ಸಲಹೆ, ಸೂಚನೆ, ಸುರಕ್ಷತಾ ನಿಯಮಗಳನ್ನು ಅನಿಲ್ ಸೂಚಿಸುತ್ತಾರೆ. ಸಾಹಸಮಯ ಟ್ರಕ್ಕಿಂಗ್‌ಗಳಲ್ಲಿ ಸ್ವತಃ ಅನಿಲ್‌ ಅವರೇ ಟ್ರಕ್ಕಿಂಗ್ ತಂಡದ ಜೊತೆಯಾಗುತ್ತಾರೆ.

‘ಪ್ರೇಕ್ಷಣೀಯ ಸ್ಥಳಗಳಲ್ಲಿ ಪ್ರವಾಸಿಗರ ವರ್ತನೆ ಗಮನಿಸಿಯೇ ಅವರ ಫೋಬಿಯಾಗಳನ್ನು ತಿಳಿದುಕೊಳ್ಳಬಹುದು.  ಅನೇಕ ವರ್ಷಗಳ ಜನರೊಂದಿಗಿನ ಒಡನಾಟ ಪ್ರವಾಸಿ ತಾಣಗಳ ಸ್ವಂತ ಅನುಭವದಿಂದ ಆಪ್ತಸಮಾಲೋಚನೆ ಸಾಧ್ಯವಾಗಿದೆ’ ಎನ್ನುವುದು ಅವರ ಅಂಬೋಣ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT