ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಟನೆಯ ಗೀಳಿನಿಂದ ಕಂಠದಾನಕ್ಕೆ ಬಂದೆ’

Last Updated 22 ಏಪ್ರಿಲ್ 2018, 21:01 IST
ಅಕ್ಷರ ಗಾತ್ರ

ನಟನೆಯ ಗೀಳಿನಿಂದ ಕಿರುತೆರೆಗೆ ಕಾಲಿಟ್ಟ ಕಲಾವಿದೆ ಶಿಲ್ಪಾ ಭಾಗವತರ್‌ಗೆ ಆಕಸ್ಮಿಕವಾಗಿ ಕಂಠದಾನ ಕಲಾವಿದೆಯಾಗುವ ಅವಕಾಶ ದೊರಕಿತು. ನಟನೆ, ಕಂಠದಾನದಲ್ಲಿ ಸಿಕ್ಕಿದ ಮೊದಲ ಅವಕಾಶದಲ್ಲಿಯೇ ಪ್ರತಿಭೆ ಪ್ರದರ್ಶಿಸಿ ಸೈ ಎನಿಸಿಕೊಂಡವರು. ಸಣ್ಣ ಅವಕಾಶಗಳನ್ನೇ ಸಮರ್ಥವಾಗಿ ಬಳಸಿಕೊಂಡಿದ್ದರಿಂದ ಈಗ ಅವರು ಉತ್ತಮ ನಟಿ, ಡಬ್ಬಿಂಗ್‌ ಕಲಾವಿದೆಯಾಗಿ ಗುರುತಿಸಿಕೊಂಡಿದ್ದಾರೆ. 

ಶಿಲ್ಪಾ ಭಾವಗವತರ್‌ ಬೆಂಗಳೂರಿನಲ್ಲೇ ಹುಟ್ಟಿ ಬೆಳೆದವರು. ಮೌಂಟ್‌ ಕಾರ್ಮೆಲ್‌ ಕಾಲೇಜಿನಲ್ಲಿ ಬಿ.ಎ ಸೈಕಾಲಜಿ ಓದುತ್ತಿದ್ದಾಗ ನಾಟಕಗಳಲ್ಲಿ ಅಭಿನಯಿಸುವ ಗೀಳು ಹತ್ತಿಸಿಕೊಂಡಿದ್ದರು. ಅಂತರಕಾಲೇಜು ನಾಟಕ ಸ್ಪರ್ಧೆಗಳಲ್ಲಿ ಶಿಲ್ಪಾ ಅವರ ತಂಡ ಇರಲೇಬೇಕಿತ್ತು. ನಟನೆಯ ಮೇಲಿನ ಇವರ ಆಸಕ್ತಿ ಕಂಡು ಶಿಕ್ಷಕಿ ದಾಕ್ಷಾಯಣಿ ಅವರು ಕಿರುತೆರೆ, ಹಿರಿತೆರೆಯಲ್ಲಿ ನಟಿಸುವಂತೆ ತಿಳಿಸಿದರು. ಅವರ ಪ್ರೋತ್ಸಾಹದಿಂದ ‘ಈ ಟಿವಿ’ ವಾಹಿನಿ ನಡೆಸುತ್ತಿದ್ದ ‘ಕ್ಯಾಂಪಸ್‌ ಚಿಟ್‌ಚಾಟ್‌’ ಎಂಬ ಕಾರ್ಯಕ್ರಮಕ್ಕೆ ನಿರೂಪಕಿಯಾಗಿ ಆಯ್ಕೆಯಾದರು. ಇದರಲ್ಲಿ ರಾಜ್ಯದ ಬೇರೆ ಬೇರೆ ಕಾಲೇಜಿಗೆ ಹೋಗಿ ವಿದ್ಯಾರ್ಥಿಗಳನ್ನು ಮಾತನಾಡಿಸಬೇಕಿತ್ತು. ಎರಡು ವರ್ಷಗಳ ಕಾಲ ವಾರಾಂತ್ಯದಲ್ಲಿ ಪ್ರಸಾರವಾಗುತ್ತಿದ್ದ ಈ ಕಾರ್ಯಕ್ರಮದಿಂದ ರಾಜ್ಯದಾದ್ಯಂತ ಪರಿಚಿತರಾದರು.

ನಿರ್ದೇಶಕ ನಾಗಾಭರಣ ಅವರು ಅತೀಂದ್ರಿಯ ಶಕ್ತಿಗಳ ಬಗ್ಗೆ ಮಾಡುತ್ತಿದ್ದ ‘ಮಹಾಮಾಯಿ’ ಧಾರಾವಾಹಿಗೆ ಹೊಸ ಮುಖವನ್ನು ಹುಡುಕುತ್ತಿದ್ದ ಸಂಗತಿ ಶಿಲ್ಪಾಗೆ ಗೊತ್ತಾಯಿತು. ಅಡಿಶನ್‌ಗೆ ಹೋದರು. ಸಿಕ್ಕಿದ್ದು ದೈವಭಕ್ತೆ ಕಲ್ಯಾಣಿ ಪಾತ್ರ. 15 ದಿನಗಳ ಸಣ್ಣ ಪಾತ್ರ. ಆದರೆ ಶಿಲ್ಪಾ  ಅಭಿನಯವನ್ನು ಮೆಚ್ಚಿದ ನಾಗಾಭರಣ ಅವರು ಆ ಪಾತ್ರ ಮುಗಿದ ಬಳಿಕ ಅದೇ ‍ಪಾತ್ರದ ತದ್ರೂಪು ಭವಾನಿ ಎಂಬ ಪಾತ್ರವನ್ನು ಶಿಲ್ಪಾಗಾಗಿಯೇ ಸೃಷ್ಟಿಸಿದರು.

ಮೊದಲ ಧಾರಾವಾಹಿ ಹಿಟ್‌ ಆಗುತ್ತಿದ್ದಂತೆ ಶಿಲ್ಪಾ ಅವರಿಗೆ ಸಾಲು ಸಾಲು ಅವಕಾಶಗಳು ಬರತೊಡಗಿದವು. ‘ಕುಂಕುಮ ಭಾಗ್ಯ’ದಲ್ಲಿನ ಖಳನಾಯಕಿ ಪಾತ್ರ, ‘ಕುಸುಮಾಂಜಲಿ’, ‘ಕನಕ’ ಸೇರಿದಂತೆ ಸುಮಾರು 70 ಧಾರಾವಾಹಿಗಳಲ್ಲಿ ಮುಖ್ಯಪಾತ್ರ, ಖಳನಾಯಕಿ ಹಾಗೂ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಹಾಸ್ಯಪಾತ್ರಗಳಲ್ಲೂ ನಟಿಸಿ ಸೈ ಅನಿಸಿಕೊಂಡಿದ್ದು ಶಿಲ್ಪಾ ಅವರ ನಟನಾ ಕೌಶಲಕ್ಕೆ ಸಾಕ್ಷಿ. ‘ಸಿಹಿಕಹಿ ಚಂದ್ರು ಅವರ ‘ಯಾಕ್ಹಿಂಗಾಡ್ತಾರೋ’ ಧಾರಾವಾಹಿಯಲ್ಲಿ ಹಾಸ್ಯ ಪಾತ್ರದ ಮೂಲಕ ಹೆಚ್ಚು ಗುರುತಿಸಿಕೊಂಡಿದ್ದೆ’ ಎನ್ನುತ್ತಾರೆ ಶಿಲ್ಪಾ.

ಶಿಲ್ಪಾ ಅವರಿಗೆ ಮತ್ತಷ್ಟು ಹೆಸರು ತಂದುಕೊಟ್ಟಿದ್ದು ವೈಶಾಲಿ ಕಾಸರವಳ್ಳಿ ಅವರ ‘ಮುತ್ತಿನ ತೋರಣ’ ಧಾರಾವಾಹಿ. ಉತ್ತರ ಕರ್ನಾಟಕದ ಕಥಾಹಂದರವಿದ್ದ ಈ ನಾಟಕದಲ್ಲಿ ಶಿಲ್ಪಾ ಡಿ– ಗ್ಲಾಮರ್‌ ಪಾತ್ರದಲ್ಲಿ ಸಾಧಾರಣ ಗೃಹಿಣಿಯಾಗಿ ನಟಿಸಿದ್ದರು. ನಟನಾ ಕ್ಷೇತ್ರದಲ್ಲಿ ಮಿಂಚುತ್ತಿದ್ದಾಗಲೇ ಡಬ್ಬಿಂಗ್‌ ಕಲಾವಿದೆಯಾಗುವ ಅವಕಾಶ ಶಿಲ್ಪಾ ಅವರಿಗೆ ಸಿಕ್ಕಿತು. ‘ಲಕ್ಷ್ಮೀ’ ಧಾರಾವಾಹಿಯಲ್ಲಿ ತಮ್ಮ ಪಾತ್ರಕ್ಕೆ ತಾವೇ ಡಬ್‌ ಮಾಡುತ್ತೇವೆಂದು ಶಿಲ್ಪಾ ಕೇಳಿಕೊಂಡರು. ಡಬ್ಬಿಂಗ್‌ ಮಾಡುವಾಗ ವೇಗ ಮತ್ತು ಚುರುಕುತನ ಮುಖ್ಯ. ದೃಶ್ಯದ ಸಂದರ್ಭ, ನಾಲಿಗೆ ಚಲನೆ ಗ್ರಹಿಸಿಕೊಂಡು ಅದಕ್ಕೆ ಸ್ವರ ನೀಡಬೇಕು. ಶಿಲ್ಪಾ ಅವರ ಚುರುಕುತನ ಹಾಗೂ ಮಾತಿನ ಸ್ಪಷ್ಟತೆಯಿಂದ ಅವರಿಗೆ ಕಂಠದಾನದ ಅವಕಾಶಗಳು ಹೆಚ್ಚು ಸಿಕ್ಕವು. ಈಗ ಕನ್ನಡದ ಡಬ್ಬಿಂಗ್‌ ಕಲಾವಿದೆಯರಲ್ಲಿ ಶಿಲ್ಪಾ ಭಾಗವತರ್‌ ಗುರುತಿಸಿಕೊಳ್ಳುತ್ತಿದ್ದಾರೆ.

ಶಿಲ್ಪಾ ಅವರು ಸಿನಿಮಾಗಳು, ಜಾಹೀರಾತುಗಳು, ಕಾರ್ಟೂನ್‌ಗಳು, ಡಾಕ್ಯುಮೆಂಟರಿಗಳು, ಜಿಂಗಲ್ಸ್‌ಗಳಿಗೆ  ಕಂಠದಾನ ಮಾಡುತ್ತಾರೆ. ಕನ್ನಡದ ಅನೇಕ ಪ್ರಸಿದ್ಧ ನಟಿಯರಿಗೆ ಕಂಠದಾನ ಮಾಡಿದ್ದು,  ಕಿಚ್ಚು, ಶಿವಂ ಚಿತ್ರದಲ್ಲಿ ರಾಗಿಣಿ ದ್ವಿವೇದಿ, ಮಾಣಿಕ್ಯದಲ್ಲಿ ವರಲಕ್ಷ್ಮೀ, ಮಂಗಾರು ಮಳೆ 2ನಲ್ಲಿ ಐಂದ್ರಿತಾ ರೇ, ಕರ್ವದಲ್ಲಿ ಪೂನಂ, ಟೈಗರ್‌ ಗಲ್ಲಿಯಲ್ಲಿ ರೋಶನಿ ಪ್ರಕಾಶ್‌, ಕಾಫಿತೋಟದಲ್ಲಿ ಅಪೇಕ್ಷಾ ಪುರೋಹಿತ್‌ ಸೇರಿದಂತೆ ಪೂಜಾ ಗಾಂಧಿ, ಪಾರೂಲ್‌ ಯಾದವ್‌ ಮೊದಲಾದ ನಟಿಯರಿಗೆ ಕಂಠದಾನ ಮಾಡಿದ್ದಾರೆ. ಇದಲ್ಲದೇ ಕೆಲ ಹಿಂದಿ ಚಿತ್ರಗಳಿಗೂ ಶಿಲ್ಪಾ ಕಂಠದಾನ ಮಾಡಿದ್ದಾರೆ.

ಕಿರುತೆರೆ ಧಾರಾವಾಹಿಗಳ ಕೆಲ ಪಾತ್ರಗಳಿಗೆ ಶಿಲ್ಪಾ ಕಂಠದಾನ ಮಾಡುತ್ತಿದ್ದು, ಸದ್ಯ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ‘ನಂದಿನಿ’ ಧಾರಾವಾಹಿಯಲ್ಲಿ ಮಾಳವಿಕಾ ವೇಲ್ಸ್‌ ಅವರ ಪಾತ್ರಕ್ಕೆ ಇವರದೇ ಕಂಠವಿದೆ.

ಶಿಲ್ಪಾ ಭಾಗವತರ್‌ ಅವರು ಮೃತ್ಯುಂಜಯ, ಮೂಕವಿಸ್ಮಿತ, ಪ್ರೀತಿಯ ರಾಯಭಾರಿ ಮೊದಲಾದ ಸಿನಿಮಾಗಳಲ್ಲೂ ನಟಿಸಿದ್ದಾರೆ. ‘ಸದ್ಯ ನಟನೆಗಿಂತ ನನಗೆ ಕಂಠದಾನವೇ ಆರಾಮವೆನಿಸುತ್ತದೆ. ಆದರೆ ಉತ್ತಮ ಪಾತ್ರಗಳು ಸಿಕ್ಕರೆ ಹಿರಿತೆರೆ, ಕಿರುತೆರೆಯಲ್ಲೀ ನಟಿಸುತ್ತೇನೆ’ ಎನ್ನುತ್ತಾರೆ.

‘ಕಂಠದಾನ ಸುಲಭ ಕಲೆ ಎಂಬ ನಂಬಿಕೆ ಇದೆ. ಆದರೆ ಇದಕ್ಕೂ ಹೆಚ್ಚಿನ ಶ್ರಮ ಬೇಕು ಕಲಾವಿದರ ತುಟಿಯ ಚಲನೆಗೂ ನಮ್ಮ ಧ್ವನಿಗೂ ಸಿಂಕ್ರನೈಸ್‌ ಆಗಬೇಕು. ಜೊತೆಗೆ ಭಾವಾತಿರೇಕಗಳಿಗೂ ಗಮನ ಕೊಡಬೇಕು. ಇದೇ ಸವಾಲು. ಇದಕ್ಕೆ ಏಕಾಗ್ರತೆ, ಸ್ವರದ ಏರಿಳಿತದ ಹಿಡಿತವಿದ್ದರೆ ಸುಲಭವಾಗುತ್ತದೆ. ಇದು ಅಭ್ಯಾಸದಿಂದ ಬರುತ್ತದೆ. ಕಂಠದಾನ ಮಾಡುವಾಗ ಕಿರುಚುವುದು, ಅಳುವುದು ಎಲ್ಲಾ ಇರುತ್ತದೆ. ಆ ಪಾತ್ರಕ್ಕೆ ಸ್ವರದ ಮೂಲಕ ನ್ಯಾಯ ಕೊಡಿಸಬೇಕು. ಆ ಪಾತ್ರದ ನಟನೆಯಷ್ಟೇ ಮಾತೂ ಪರಿಣಾಮಕಾರಿಯಾಗಿರಬೇಕು’ ಎಂಬುದು ಕಂಠದಾನದ ಬಗ್ಗೆ ಶಿಲ್ಪಾ ಭಾಗವತರ್‌ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT