ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ: ಹಳೇ ಮಾದರಿಗೆ ಹೊಸ ರೂಪ

Last Updated 22 ಏಪ್ರಿಲ್ 2018, 21:01 IST
ಅಕ್ಷರ ಗಾತ್ರ

84 ವರ್ಷಗಳಿಂದ ನಡೆಯುತ್ತಿರುವ ರಣಜಿ ಕ್ರಿಕೆಟ್‌ ಟೂರ್ನಿಯನ್ನು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ) ತಾಂತ್ರಿಕ ಸಮಿತಿ ಟೂರ್ನಿಯ ಮಾದರಿಯಲ್ಲಿ ಆಗಾಗ ಬದಲಾವಣೆ ಮಾಡುತ್ತಲೇ ಬಂದಿದೆ. ಈ ವರ್ಷ ಪ್ರಿ ಕ್ವಾರ್ಟರ್‌ ಫೈನಲ್‌ ಹಂತವನ್ನು ಜಾರಿಗೆ ತರುವ ಮೂಲಕ ಹಳೇ ಮಾದರಿಗೆ ಹೊಸ ರೂಪ ನೀಡುತ್ತಿದೆ.

1934–35ರಲ್ಲಿ ಚೊಚ್ಚಲ ರಣಜಿ ಟೂರ್ನಿ ನಡೆದಾಗ 15 ತಂಡಗಳು ಭಾಗವಹಿಸಿದ್ದವು. ಆಗ ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣ ಹೀಗೆ ನಾಲ್ಕು ವಲಯಗಳಿಂದ ತಂಡಗಳು ಪಾಲ್ಗೊಳ್ಳುತ್ತಿದ್ದವು. 1952–53ರ ಋತುವಿನಲ್ಲಿ ಕೇಂದ್ರ ವಲಯದಿಂದ ತಂಡಗಳು ಸೇರ್ಪಡೆಯಾದವು. ಈ ವರ್ಷದಿಂದ 29 ತಂಡಗಳು ಪೈಪೋಟಿ ನಡೆಸಲಿವೆ. ಹೋದ ವರ್ಷ ಚತ್ತೀಸಗಡ. ಈ ಬಾರಿ ಬಿಹಾರ ಹೊಸ ತಂಡಗಳಾಗಿವೆ ಸೇರಿಕೊಂಡಿವೆ.

ಬಿಸಿಸಿಐ ಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡುತ್ತಿರುವುದರಿಂದ ಹೊಸ ತಂಡಗಳಿಗೂ ಪ್ರತಿಷ್ಠಿತ ದೇಶಿ ಟೂರ್ನಿಯಲ್ಲಿ ಶ್ರೇಷ್ಠ ಸಾಧನೆ ಮಾಡಲು ಸಾಧ್ಯವಾಗುತ್ತಿದೆ. 2001–02ರ ದೇಶಿ ಋತುವಿನ ತನಕ ವಲಯ ಮಾದರಿಯಲ್ಲಿ ಟೂರ್ನಿ ನಡೆಸಲಾಗುತ್ತಿತ್ತು. ನಂತರದ ವರ್ಷವೇ ರಣಜಿಗೆ ಹೊಸ ಸ್ವರೂಪ ಕೊಡುವ ಪ್ರಯತ್ನಗಳು ನಡೆದವು. ಎಲೀಟ್‌ ಮತ್ತು ಪ್ಲೇಟ್‌ ಎಂದು ಎರಡು ವಿಭಾಗ ಮಾಡಿ ಟೂರ್ನಿಗಳನ್ನು ನಡೆಸಲಾಯಿತು. ಹೀಗೆ ಎರಡು ವಿಭಾಗ ಮಾಡಿದ್ದರಿಂದ ಹಿಮಾಚಲ ಪ್ರದೇಶ, ಅಸ್ಸಾಂ, ಜಾರ್ಖಂಡ್‌, ಕೇರಳ ಹೀಗೆ ಹಲವು ತಂಡಗಳಿಗೆ ರಣಜಿಯಲ್ಲಿ ಗಟ್ಟಿನೆಲೆ ಊರಲು ಸಾಧ್ಯವಾಯಿತು. 

ಹಿಂದಿನ ವರ್ಷದ ವಲಯವಾರು ಟೂರ್ನಿಯಲ್ಲಿ ಆಡಿ ಅರ್ಹತೆ ಪಡೆದ 15 ತಂಡಗಳನ್ನು ಎಲೀಟ್‌ ವಿಭಾಗದಲ್ಲಿ ಎರಡು ಗುಂಪುಗಳನ್ನಾಗಿ ವಿಂಗಡಿಸಲಾಗುತ್ತಿತ್ತು. ಪ್ರತಿ ಗುಂಪಿನಲ್ಲಿ ಮೊದಲ ಎರಡು ಸ್ಥಾನ ಗಳಿಸುದ ತಂಡಗಳು ನೇರವಾಗಿ ಸೆಮಿಫೈನಲ್‌ಗೆ ಅರ್ಹತೆ ಪಡೆದುಕೊಳ್ಳುತ್ತಿದ್ದವು.

ಉಳಿದ 12 ತಂಡಗಳು ಪ್ಲೇಟ್ ವಿಭಾಗದಲ್ಲಿ ಆಡಬೇಕಾಗುತ್ತಿತ್ತು. ತಲಾ ಆರು ತಂಡಗಳನ್ನು ಎರಡು ಗುಂಪುಗಳನ್ನಾಗಿ ವಿಂಗಡಿಸಿ ಗುಂಪಿನಲ್ಲಿ ಮೊದಲ ಎರಡು ಸ್ಥಾನ ಪಡೆದ ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಗಿಟ್ಟಿಸುತ್ತಿದ್ದವು. ಪ್ಲೇಟ್‌ ವಿಭಾಗದಲ್ಲಿ ಅಂತಿಮವಾಗಿ ಮೊದಲ ಎರಡು ಸ್ಥಾನಗಳನ್ನು ಗಳಿಸಿದ ತಂಡಗಳು ಎಲೀಟ್‌ ವಿಭಾಗಕ್ಕೆ  ಅರ್ಹತೆ ಪಡೆದರೆ, ಎಲೀಟ್‌ನಲ್ಲಿ ಕೊನೆಯ ಎರಡು ಸ್ಥಾನ ಗಳಿಸುವ ತಂಡಗಳು ಪ್ಲೇಟ್ ವಿಭಾಗಕ್ಕೆ ಹಿಂಬಡ್ತಿ ಪಡೆಯುತ್ತಿದ್ದವು.

ಹೊಸ ಮಾದರಿ ಪರಿಚಯಿಸಿದ ವರ್ಷವೇ ಕರ್ನಾಟಕ ತಂಡ ಪ್ಲೇಟ್‌ ವಿಭಾಗದ ಪ್ರಶಸ್ತಿ ಜಯಿಸಿ ಎಲೀಟ್‌ನಲ್ಲಿ ಸ್ಥಾನ ಗಳಿಸಿತು. ಇದೇ ವೇಳೆ ಪ್ರೀ ಕ್ವಾರ್ಟರ್‌ ಫೈನಲ್‌ ಮಾದರಿ ಕೂಡ ಪರಿಚಯಿಸಲಾಯಿತು.

2008–09ರ ದೇಶಿ ಋತುವಿನ ತನಕ ಇದೇ ಮಾದರಿ ಮುಂದುವರಿಯಿತು. ಆ ವರ್ಷ ಪ್ಲೇ ಆಫ್‌ ಹಂತ ಪರಿಚಯಿಸಲಾಯಿತು. ನಂತರದ ವರ್ಷವೇ ಸೂಪರ್ ಲೀಗ್ ಮಾದರಿ ಆರಂಭಿಸಲಾಯಿತು. 2010–11ರಲ್ಲಿ ಸೂಪರ್‌ ಲೀಗ್ ಮಾದರಿಯಲ್ಲಿ ಎರಡು ಗುಂಪುಗಳನ್ನು ಮಾಡಿ ತಂಡಗಳನ್ನು ವಿಂಗಡಿಸಲಾಯಿತು. ತವರಿನಲ್ಲಿ ನಾಲ್ಕು ಮತ್ತು ಹೊರಗಡೆ ನಾಲ್ಕು ಪಂದ್ಯಗಳನ್ನು ಆಡಲು ಅವಕಾಶ ಲಭಿಸಿತು. ಪ್ಲೇಟ್ ಡಿವಿಷನ್‌ ವಿಭಾಗದ ‘ಎ’ ಗುಂಪಿನಲ್ಲಿ ಆರು ಮತ್ತು ‘ಬಿ’ ಗುಂಪಿನಲ್ಲಿ ಐದು ತಂಡಗಳು ಇರುತ್ತಿದ್ದವು.

ಈ ನಿಯಮದ ಪ್ರಕಾರ ಪ್ಲೇಟ್‌ ವಿಭಾಗದ ಲೀಗ್‌ ಹಂತದಲ್ಲಿ ಪ್ರತಿ ಗುಂಪಿನಲ್ಲಿ ಮೊದಲ ಎರಡು ಸ್ಥಾನಗಳನ್ನು ಪಡೆದ ತಂಡಗಳು ನಾಲ್ಕರ ಘಟ್ಟ ಪ್ರವೇಶಿಸುತ್ತಿದ್ದವು. ಅಲ್ಲಿ ಗೆಲುವು ಪಡೆಯುವ ಎರಡು ತಂಡಗಳು ಸೂಪರ್‌ ಲೀಗ್‌ ತಂಡಗಳ ಜೊತೆ ಕ್ವಾರ್ಟರ್ ಫೈನಲ್‌ನಲ್ಲಿ ಆಡಬೇಕಿತ್ತು. ಸೂಪರ್‌ ಲೀಗ್‌ನಲ್ಲಿ ಉತ್ತಮವಾಗಿ ಆಡಿದ ಆರು ತಂಡಗಳು ಕೂಡ ನೌಕೌಟ್‌ ಹಂತಕ್ಕೆ ಅರ್ಹತೆ ಪಡೆದುಕೊಳ್ಳುತ್ತಿದ್ದವು.

ಒಂಬತ್ತು ವರ್ಷ ಎಲೀಟ್‌ ಮತ್ತು ಪ್ಲೇಟ್ ವಿಭಾಗಗಳಲ್ಲಿ ಟೂರ್ನಿ ನಡೆದಿದ್ದರಿಂದ ತಂಡಗಳ ನಡುವೆ ಪೈಪೋಟಿ ಹೆಚ್ಚಾಯಿತು. ಹೊಸ ತಂಡಗಳು ಕೂಡ ಬರತೊಡಗಿದವು. ಕಳೆದ ಆರು ವರ್ಷಗಳ ಹಿಂದೆ (2012–13) ಮತ್ತೊಂದು ಮಾದರಿ ಪರಿಚಯಿಸಲಾಯಿತು.

ಆ ವರ್ಷ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಒಟ್ಟು 27 ತಂಡಗಳನ್ನು ಮೂರು ಗುಂಪುಗಳನ್ನಾಗಿ ವಿಂಗಡಿಸಲಾಗಿತ್ತು. ‘ಎ’, ‘ಬಿ’ ಮತ್ತು ‘ಸಿ’ ಗುಂಪಿನಲ್ಲಿ ತಲಾ ಒಂಬತ್ತು ತಂಡಗಳಿದ್ದವು. ಮೊದಲ ಎರಡು ಗುಂಪಿನಿಂದ ತಲಾ ಮೂರು ಮತ್ತು ಕೊನೆಯ ಗುಂಪಿನಿಂದ ಎರಡು ತಂಡಗಳು ಕ್ವಾರ್ಟರ್‌ ಫೈನಲ್‌ ಪ್ರವೇಶಿಸುತ್ತಿದ್ದವು.  ಪ್ರತಿ ತಂಡಗಳು ಲೀಗ್‌ ಹಂತದಲ್ಲಿ ತಲಾ ಎಂಟು ಪಂದ್ಯಗಳನ್ನಾಡುತ್ತಿದ್ದವು.

ಕಳೆದ ವರ್ಷ ಮೂರರ ಬದಲು ನಾಲ್ಕು ಗುಂಪುಗಳನ್ನಾಗಿ ಮಾಡಲಾಯಿತು. ಇದರಿಂದ ಪ್ರತಿ ತಂಡಕ್ಕೆ ಲೀಗ್‌ ಹಂತದಲ್ಲಿ ತಲಾ ಆರು ಪಂದ್ಯಗಳನ್ನಷ್ಟೇ ಆಡಲು ಅವಕಾಶ ಸಿಗುತ್ತಿತ್ತು. ಈ ವರ್ಷದಿಂದ ಪ್ರಿ ಕ್ವಾರ್ಟರ್‌ ಫೈನಲ್‌ ಹಂತ ಮತ್ತೆ ಜಾರಿಗೆ ತರಲಾಗುತ್ತಿದೆ.

ಹೊಸ ನಿಯಮದ ಪ್ರಕಾರ ಒಟ್ಟು ತಂಡಗಳನ್ನು ನಾಲ್ಕು ಗುಂಪುಗಳನ್ನಾಗಿ ವಿಂಗಡಿಸಲಾಗುತ್ತದೆ. ಗುಂಪಿನಲ್ಲಿ ಮೊದಲ ನಾಲ್ಕು ಸ್ಥಾನಗಳನ್ನು ಪಡೆಯುವ ತಂಡಗಳು ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸುತ್ತಿವೆ. ಅಲ್ಲಿ ಉತ್ತಮ ಪ್ರದರ್ಶನ ನೀಡಿದ ತಂಡಗಳು ಕ್ವಾರ್ಟರ್‌ ಫೈನಲ್‌ ಆಡುತ್ತವೆ.  ಹೀಗೆ ಆಗಾಗ ಮಾದರಿಗಳನ್ನು ಬದಲಾವಣೆ ಮಾಡುತ್ತಿರುವುದರಿಂದ ಆಟಗಾರರಿಗೆ ಅನುಕೂಲವಾಗುತ್ತಿದೆ. ಆಟಗಾರರ ಮತ್ತು ಕ್ರಿಕೆಟ್‌ನ ಗುಣಮಟ್ಟ ಹೆಚ್ಚಿಸಲು ಹೊಸ ಪ್ರಯೋಗಗಳು ನೆರವಾಗುತ್ತಿವೆ.  

‘ವಿದೇಶಿ ಟೂರ್ನಿಗಳು ಮಾದರಿಯಾಗಲಿ’

ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನ ದೇಶಿ ಟೂರ್ನಿಗಳಲ್ಲಿ ಲೀಗ್‌ ಹಂತದಲ್ಲಿಯೇ ಕನಿಷ್ಠ ಹತ್ತು ಪಂದ್ಯಗಳನ್ನು ಆಡಿಸುತ್ತಾರೆ. ನಮ್ಮಲ್ಲಿ ಮೊದಲು ರಣಜಿಯ ಲೀಗ್‌ ಹಂತದಲ್ಲಿ ಎಂಟು ಪಂದ್ಯಗಳು ಇರುತ್ತಿದ್ದವು. ಆದರೆ ಈಗ ಆರು ಪಂದ್ಯಗಳಷ್ಟೇ ಇವೆ. ಆದ್ದರಿಂದ ಲೀಗ್‌ ಹಂತದ ಪಂದ್ಯಗಳ ಸಂಖ್ಯೆ ಹೆಚ್ಚಿಸಬೇಕು ಎಂಬುದು ರಣಜಿ ತಂಡಗಳ ನಾಯಕರ ಮತ್ತು ಕೋಚ್‌ಗಳ ಒತ್ತಾಯವಾಗಿತ್ತು. ಇತ್ತೀಚಿಗೆ ನಡೆದ ಬಿಸಿಸಿಐ ಅಧಿಕಾರಿಗಳ ಜೊತೆಗಿನ ಸಭೆಯಲ್ಲಿಯೂ ಈ ವಿಷಯ ಪ್ರಸ್ತಾಪವಾಗಿತ್ತು. ಮೊದಲಾದರೆ ಲೀಗ್‌ ಹಂತದಿಂದ ನೇರವಾಗಿ ಕ್ವಾರ್ಟರ್‌ ಫೈನಲ್‌ ಆಡಬೇಕಾಗುತ್ತಿತ್ತು. ಈಗ ಪ್ರತಿ ಗುಂಪಿನ ಎರಡು ತಂಡಗಳಿಗೆ ತಲಾ ಒಂದು ಪಂದ್ಯ ಹೆಚ್ಚು ಆಡಲು ಅವಕಾಶ ಸಿಗುತ್ತದೆ. ಹೆಚ್ಚು ಪಂದ್ಯಗಳು ಇದ್ದಷ್ಟೂ ಆಟಗಾರರನಿಗೆ ಅನುಕೂಲವಾಗುತ್ತದೆ. ಪ್ರಿ ಕ್ವಾರ್ಟರ್‌ ಫೈನಲ್‌ ಮತ್ತೆ ಆರಂಭಿಸುತ್ತಿರುವುದು ಸ್ವಾಗತಾರ್ಹ

ಸನತ್‌ ಕುಮಾರ್‌, ಕರ್ನಾಟಕ ತಂಡದ ಮಾಜಿ ಕೋಚ್‌

* ಹೆಚ್ಚು ಪಂದ್ಯಗಳು ಇದ್ದಷ್ಟೂ ಆಟಗಾರರಿಗೆ ಅನುಕೂಲವಾಗುತ್ತದೆ. ಅನುಭವ ಹೆಚ್ಚುತ್ತದೆ. ಪ್ರತಿ ಪಂದ್ಯದಿಂದಲೂ ಕಲಿಯುವುದು ಇದ್ದೇ ಇರುತ್ತದೆ. ಆದ್ದರಿಂದ ಪ್ರಿ ಕ್ವಾರ್ಟರ್‌ ಫೈನಲ್‌ ನಿಯಮ ಅಗತ್ಯವಾಗಿತ್ತು

– ಮನ್ಸೂರ್‌ ಅಲಿಖಾನ್‌, ಕರ್ನಾಟಕ ತಂಡದ ಮಾಜಿ ಕೋಚ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT