ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಿಐಡಿ–ಸಿಬಿಐ ವಿಭಾ‌ಗಗಳಲ್ಲಿ ಕೆಲಸ ಮಾಡಲು ನನಗಿಷ್ಟ’

Last Updated 22 ಏಪ್ರಿಲ್ 2018, 21:01 IST
ಅಕ್ಷರ ಗಾತ್ರ

1. ನಾನು ದ್ವಿತೀಯ ಪಿಯುಸಿ (ಪಿಸಿಎಂಬಿ) 2017-18 ಬ್ಯಾಚ್‌ನ ವಿದ್ಯಾರ್ಥಿನಿ. ಸಿಇಟಿಗಾಗಿ ತಯಾರಿ ನಡೆಸುತ್ತಿದ್ದೇನೆ. ಟಿ.ವಿ.ಯಲ್ಲಿ ಬರುವ ಪತ್ತೇದಾರಿ ಧಾರಾವಾಹಿಗಳನ್ನು ನೋಡಲು ಬಲು ಆಸಕ್ತಿ. ಹಾಗೆ ನನಗೆ ಸಿಐಡಿ, ಸಿಬಿಐನಂತಹ ವಿಭಾಗಗಳ ಬಗ್ಗೆ ತಿಳಿಯಲು ಕುತೂಹಲ. ಈ ವಿಭಾಗದಲ್ಲಿ ಕೆಲಸ ಗಳಿಸಲು ಯಾವ ಡಿಗ್ರಿ ಅಗತ್ಯ ಹಾಗೂ ಅದಕ್ಕೆ ಇನ್ನೇನಾದರೂ ಕೌಶಲ್ಯ ಇರಬೇಕೇ? ಎಂಜಿನಿಯರಿಂಗ್‌ ಪದವಿಗೆ ಯಾವ ವಿಭಾಗ ಹೆಚ್ಚು ಬೇಡಿಕೆಯಲ್ಲಿದೆ? ನನಗೆ ಚಿತ್ರಕಲೆಯ ಹವ್ಯಾಸವೂ ಇದೆ. ಯಾವ ಕ್ಷೇತ್ರ ಆಯ್ಕೆ ಮಾಡಿಕೊಳ್ಳುವುದು ಉತ್ತಮ. ದಯವಿಟ್ಟು ತಿಳಿಸಿ ಸಿ. ಚಿನ್ಮಯಿ ಪ್ರಸಾದ್‌, ಊರು ಬೇಡ

ನಿಮಗಿರುವ ಶಂಕೆ ಎಂಜಿನಿಯರಿಂಗ್, ಪೋರೆನ್ಸಿಕ್‌ ಅಥವಾ ಚಿತ್ರಕಲೆ ಇವುಗಳಲ್ಲಿ ಯಾವುದನ್ನು ಆರಿಸಲಿ ಎಂಬುದು. ನಿಮ್ಮ ಅಪ್ಟಿಟ್ಯೂಡ್ ಪರೀಕ್ಷೆ ಮಾಡದೆ, ನಿಮಗೆ ಯಾವ ಕೋರ್ಸ್‌ ಉತ್ತಮ ಎಂದು ಹೇಳುವುದು ಕಷ್ಟ. ಎಂಜಿನಿಯರಿಂಗ್ ಮತ್ತು ಫೋರೆನ್ಸಿಕ್‌ ಸೈನ್ಸ್(Forensic Science)ಗೆ ನೀವು ತೆಗೆದುಕೊಂಡಿರುವ ಪಿಸಿಎಂಬಿ ಕಾಂಬಿನೇಷನ್ ಸರಿಯಾಗಿದೆ. ಚಿತ್ರಕಲೆಯನ್ನು ಆ‌ರ್ಟ್ಸ್, ಸೈನ್ಸ್, ಕಾಮರ್ಸ್ – ಯಾವ ವಿಭಾಗದವರು ಬೇಕಾದರೂ ತೆಗೆದುಕೊಳ್ಳಬಹುದು. ನಿಮಗೆ ಯಾವುದರ ಮೇಲೆ ಹೆಚ್ಚು ಆಸಕ್ತಿ ಇದೆ ಎಂಬುದನ್ನು ನೋಡಿಕೊಳ್ಳಿ. ಎಂಜಿನಿಯರಿಂಗ್‌ನಲ್ಲಿ ಯಾವುದೇ ವಿಷಯ ತೆಗೆದುಕೊಂಡರೂ ಅದಕ್ಕೆ ಸ್ಕೋಪ್  ಇದೆ. ಸ್ನಾತಕೋತ್ತರ ಪದವಿಯನ್ನು ಟೆಕ್ನಿಕಲ್ ಅಥವಾ ಮ್ಯಾನೇಜ್‌ಮೆಂಟ್ ಯಾವುದರಲ್ಲಿ ಮಾಡುತ್ತಾರೋ ಅದರ ಮೇಲೆ ನಿಮ್ಮ ವೃತ್ತಿ ಹಾಗೂ ಸಂಬಳ ನಿರ್ಧಾರವಾಗುತ್ತದೆ. ಪದವೀಧರರು ಸಿವಿಲ್ ಸರ್ವಿಸ್‌ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು. ಐಎಎಸ್‌, ಐಪಿಎಸ್‌, ಐಎಫ್‌ಎಸ್‌ – ಈ ರೀತಿ ಯಾವುದನ್ನು ಬೇಕಾದರೂ ಆರಿಸಬಹುದು.

ಪ್ರತಿಯೊಂದು ವೃತ್ತಿಗೂ ನಿಮ್ಮ ಸ್ವಭಾವ ಮತ್ತು ವ್ಯಕ್ತಿತ್ವ ಬಹಳ ಮುಖ್ಯ. ಚಿತ್ರಕಲೆಯನ್ನು ತೆಗೆದುಕೊಳ್ಳಬೇಕಾದರೆ ಕ್ರಿಯೇಟಿವಿಟಿ ಇರಲೇಬೇಕು. ಡ್ರಾಯಿಂಗ್, ಪೇಂಟಿಂಗ್, ಶಿಲ್ಪಕಲೆ – ಇದನ್ನು ಮಾಡಲು ನಿಮಗೆ ಸಾಧ್ಯವೇ ಯೋಚಿಸಿ. ನೀವು ಈಗ ಕೊನೆಯಲ್ಲಿ ಪ್ರಶ್ನೆ ಕೇಳಿರುವುದರಿಂದ ಎನ್‌ಐಡಿಯಂತಹ ಇನ್ಸ್‌ಸ್ಟಿಟ್ಯೂಟ್‌ಗಳಲ್ಲಿ ಕಾಲಾವಕಾಶ ಮುಗಿದು ಹೋಗಿದೆ. ಕರ್ನಾಟಕ ಚಿತ್ರಕಲಾ ಪರಿಷತ್‌ನ ಜಾಹೀರಾತುಗಳನ್ನು ಗಮನಿಸಿ.

ಇನ್ನು ಫೋರೆನ್ಸಿಕ್‌ ಸೈನ್ಸ್ ಕೋರ್ಸ್‌ಗಳನ್ನು ಪಿಸಿಎಂಬಿ ಕಾಂಬಿನೇಷನ್‌ನವರು ತೆಗೆದುಕೊಳ್ಳಬಹುದು. ಫೋರೆನ್ಸಿಕ್‌ ಸೈನ್ಸ್, ಕ್ರಿಮಿನಾಲಜಿ ಇವುಗಳಲ್ಲಿ ಆಸಕ್ತಿ ಇದ್ದಲ್ಲಿ ಪದವಿ ಪೂರ್ವ ಶಿಕ್ಷಣಕ್ಕೆ ಅರ್ಜಿ ಹಾಕಬಹುದು. ಇದರಲ್ಲಿ ಸ್ನಾತಕೋತ್ತರ ಡಿಗ್ರಿಯನ್ನು ಸೈನ್ಸ್ ಪದವೀಧರರು ಮಾಡಬಹುದು. ಒಂದು ಕ್ರೈಂ ನಡೆದಿರುವ ಸ್ಥಳದಲ್ಲಿ ಸೂಕ್ಷ್ಮವಾಗಿ ಪ್ರತಿಯೊಂದು ದಾಖಲೆ(Evidence)ಗಳನ್ನು ಗಮನಿಸಬೇಕು. ನಿಮ್ಮಲ್ಲಿ ಈ ವಿವರಗಳನ್ನು ಗಮನಿಸಿ, ಜ್ಞಾಪಕ ಇಟ್ಟುಕೊಳ್ಳುವ ಶಕ್ತಿ, ಕುತೂಹಲ, ಬುದ್ಧಿವಂತಿಕೆಯಿಂದ ಗಮನಿಸಬೇಕಾದ ಹಲವಾರು ವಿಷಯಗಳನ್ನು ಗ್ರಹಿಸುವ ಶಕ್ತಿ ಇದೆಯೇ ಎಂದು ನೋಡಿಕೊಳ್ಳಿ. ಡಿಗ್ರಿ, ಸ್ನಾತಕೋತ್ತರ ಮತ್ತು ಪಿಎಚ್‌ಡಿ ಕೂಡ ಮಾಡುವ ಅವಕಾಶವಿದೆ.

ಫೋರೆನ್ಸಿಕ್‌ ಸೈನ್ಸ್ ಡಿಗ್ರಿಯನ್ನು ಹಲವಾರು ವಿಭಾಗದಲ್ಲಿ ವ್ಯಾಸಂಗ ಮಾಡಬಹುದು. ಫೋರೆನ್ಸಿಕ್‌ ಔಷಧಗಳು, ಫೋರೆನ್ಸಿಕ್‌ ಒಡೊನಾಟಾಲಜಿ (Odontology) ಪೋರೆನ್ಸಿಕ್‌ ನರ್ಸಿಂಗ್, ಫೋರೆನ್ಸಿಕ್‌ ಫಿಂಗರ್ ಪ್ರಿಂಟ್ ಎಕ್ಸ್‌ಪರ್ಟ್, ಫೋರೆನ್ಸಿಕ್‌ ಅಕೌಂಟಿಂಗ್, ಫೋರೆನ್ಸಿಕ್‌ ಸ್ವಾಟಿಸ್ಟೀಷಿಯನ್, ಮ್ಯಾತ್‌ಮ್ಯಾಟಿಷಿಯನ್, ಫೋರೆನ್ಸಿಕ್‌ ಫೋಟೊಗ್ರಫಿ, ಫೋರೆನ್ಸಿಕ್‌ ಆರ್ಕಿಟೆಕ್, ಫೋರೆನ್ಸಿಕ್‌ ಸೈಕಾಲಜಿ, ಸೈಕ್ರಿಯಾಟಿ, ಫೋರೆನ್ಸಿಕ್‌ ಎಂಜಿನಿಯರಿಂಗ್ - ಹೀಗೆ ಅನೇಕ ವಿಭಾಗಗಳಿವೆ.‌ ಯಾವ ಕೋರ್ಸ್ ಎಂಬುದನ್ನು ಯೋಚಿಸಿ, ನಿರ್ಧರಿಸಿ.

2. ನಾನು ನ್ಯಾಯಾಂಗ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಒಂದು ವರ್ಷ ಅವಧಿಯ  ‘ಲೈಬ್ರರಿ ಸೈನ್ಸ್’ ಪದವಿಯನ್ನು ಕುವೆಂಪು ವಿಶ್ವವಿದ್ಯಾನಿಲಯದ ದೂರಶಿಕ್ಷಣ ಕೇಂದ್ರದ ಮುಖಾಂತರ ಮಾಡಲು ಇಚ್ಛಿಸಿದ್ದೇನೆ. ಈ ಕೋರ್ಸ್ ಮಾಡಿದರೆ ಮುಂದೆ ಉದ್ಯೋಗ ಅವಕಾಶಗಳು ಇವೆಯೇ? ಯಾವ್ಯಾವ ಇಲಾಖೆಗಳಲ್ಲಿ ಅವಕಾಶ ಸಿಗುತ್ತವೆ. ದಯವಿಟ್ಟು ಮಾಹಿತಿ ತಿಳಿಸಿ – ಶಿವಕುಮಾರ್ ಸಿ ಯಾದವ, ಊರು ಬೇಡ

ಸಾಮಾನ್ಯವಾಗಿ ಹೆಚ್ಚು ಬೇಡಿಕೆ ಇರುವ ಅಥವಾ ಸ್ನೇಹಿತರು ಸೇರುವ ಕೋರ್ಸ್‌ಗಳಿಗೆ ತಾವು ಹೋಗುವ ಇಚ್ಛೆ ವಿದ್ಯಾರ್ಥಿಗಳಲ್ಲಿ ಇರುತ್ತದೆ. ಈ ಸಂದರ್ಭದಲ್ಲಿ ನೀವು ಲೈಬ್ರರಿ ಕೋರ್ಸ್ ಬಗ್ಗೆ ಆಸಕ್ತಿ ತೋರುತ್ತಿರುವುದು ಸಂತೋಷದ ವಿಷಯ. ನಮಗೆ ಎಲ್ಲ ಕ್ಷೇತ್ರಗಳಲ್ಲೂ ಪದವೀಧರರು ಬೇಕು.

ಲೈಬ್ರರಿ ಮತ್ತು ಇನ್ಫಾರ್‌ಮೇಶನ್‌ ಸೈನ್ಸ್ ಒಂದು ಇಂಟರ್ ಡಿಸಿಪ್ಲನರಿ ವಿಜ್ಞಾನ. ಇದರಲ್ಲಿ ಇನ್ಫಾರ್‌ಮೇಶನ್‌ ಟೆಕ್ನಾಲಜಿ, ಶಿಕ್ಷಣ ಮತ್ತು ಮ್ಯಾನೇಜ್‌ಮಂಟ್ ಎಲ್ಲಾ ಸೇರಿದೆ. ವಿಷಯ ಸಂಗ್ರಹಣೆ, ವಿಷಯವನ್ನು ಸರಿಯಾಗಿ ಜೋಡಿಸುವುದು, ವಿಷಯವನ್ನು ರಕ್ಷಿಸುವುದು (Preservation) - ಇಂಥವನ್ನು ಮಾಡುವ ಚತುರತೆಯನ್ನು ಈ ಕೋರ್ಸ್ ಹೇಳಿಕೊಡುತ್ತದೆ. ಮಾಹಿತಿ (Information) ಯಾವುದೇ ಕ್ಷೇತ್ರದಲ್ಲಾದರೂ ಅತಿ ಮುಖ್ಯ. ಜನರಿಗೆ ಬೇಕಾಗುವ ವಿಷಯವನ್ನು ವ್ಯವಸ್ಥಿತವಾಗಿ ಜೋಡಿಸಿ, ಅವರಿಗೆ ಬೇಕಾದ್ದನ್ನು ಗುರುತಿಸಿ ಅವರಿಗೆ ನೀಡುವ ಕೆಲಸ ಲೈಬ್ರರಿ ಸೈನ್ಸ್ ಓದಿದ ಪದವೀಧರರಿಗೆ.

ಮೆಲ್‌ವಿಲ್ ದುವೇ (Melvil Dewey) 1887ರಲ್ಲಿ ಕೊಲಂಬಿಯಾ ವಿಶ್ವವಿದ್ಯಾಲಯ (Univercity)ದಲ್ಲಿ ಲೈಬ್ರರಿ ಸೈನ್ಸ್ ಕೋರ್ಸ್‌ನ್ನು ಪ್ರಾರಂಭಿಸಿದರು. ಲೈಬ್ರರಿ ಸೈನ್ಸ್‌ ಕೋರ್ಸ್‌ನಲ್ಲಿ ಡಿಗ್ರಿ, ಸ್ನಾತಕೋತ್ತರ, ಎಂಫಿಲ್, ಪಿಎಚ್‌ಡಿ ಕೂಡ ಮಾಡಬಹುದು. ಕರೆಸ್ಪಾಂಡೆನ್ಸ್ ಕೋರ್ಸ್‌ಗಿಂತ ರೆಗ್ಯುಲರ್ ಕೋರ್ಸ್ ಮಾಡಿದರೆ ಉತ್ತಮ.

ಕೆಲವು ವಿಶ್ವವಿದ್ಯಾಲಯಗಳು:

1. Jamia Millia Islamia, New Delhi

2. Banaras Hindu University, Varanasi

3. University of Delhi, New Delhi

4. Birla Institute of Technology, Ranchi (Jarkand)

5. Bangalore University, Bangalore

6. Madurai Kamraj University, Madurai (Tamilnadu) ಇನ್ನೂ ಅನೇಕ...

ದೂರಶಿಕ್ಷಣದ ಮೂಲಕ:

1. Indira Gandhi Open University (IGNOU)

2. Dr. Ambedkar Open University, Hyderabad

3. Kota Open University, Rajasthan

4. Nalanda Open University, Patna

5. Netaji Subhas Open University, kolkata 

6. Madhya Pradesh Bhoj (open) University, Bhopal

ಇನ್ನೂ ಅನೇಕ...

ಉದ್ಯೋಗ ಅವಕಾಶಗಳು:

1. ಲೈಬ್ರರಿಗಳಲ್ಲಿ

2. ಕನ್ಸಲ್‌ಟೆಂಟ್ ಲೈಬ್ರರಿಯನ್‌

3. ರೆಕಾರ್ಡ್ ಮ್ಯಾನೇಜರ್

4. ಲಾ ಲೈಬ್ರರಿಯನ್‌

5. ಇನ್ಫಾರ್‌ಮೇಶನ್‌ ಆರ್ಕಿಟೆಕ್

6. ಹೆಡ್ ಆಫ್ ಇನ್ಫಾರ್‌ಮೇಶನ್‌ ಸೆಂಟರ್

7. ಪ್ರೈವೇಟ್ ಪಬ್ಲಿಷಿಂಗ್ ಕಂಪನಿಗಳು

8. ಮೀಡಿಯಾ ಹೌಸಸ್

9. ಫೋಟೊ ಮತ್ತು ಫಿಲಂ ಲೈಬ್ರರಿಗಳಲ್ಲಿ

10. ಯೂನಿವರ್ಸಿಟಿಗಳಲ್ಲಿ

11. ಫಾರಿನ್ ಎಂಬೆಸಿಗಳಲ್ಲಿ

12. ಮ್ಯೂಸಿಯಂ ಮತ್ತು ಗ್ಯಾಲರಿಗಳಲ್ಲಿ

13. ನ್ಯೂಸ್ ಏಜೆನ್ಸಿಸ್, ನ್ಯೂಸ್ ಗ್ರೂಪ್‌ಗಳಲ್ಲಿ

14. ಡಾಕ್ಯುಮೆಂಟೇಷನ್ ಸೆಂಟರ್‌ಗಳಲ್ಲಿ‌

ಇನ್ನೂ ಅನೇಕ ಕಡೆ...

ಅನ್ನಪೂರ್ಣ ಮೂರ್ತಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT