ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕಿನಲ್ಲಿ ಅಣ್ಣಾವ್ರ ಬಣ್ಣ

Last Updated 22 ಏಪ್ರಿಲ್ 2018, 21:01 IST
ಅಕ್ಷರ ಗಾತ್ರ

ನಟನೆಗೆ ಅಣ್ಣಾವ್ರೆ ಮಾದರಿ

ನಟ ಲೋಕೇಶ್ ಅವರ ಸುಬ್ಬಯ್ಯ ನಾಯ್ಡು ತಂಡದ ಜತೆಗೂಡಿ ‘ಭಕ್ತ ಅಂಬರೀಷ’ ನಾಟಕದಲ್ಲಿ ರಾಜ್‌ಕುಮಾರ್ ನಟಿಸಿದ್ದರು. ಆ ನಾಟಕಕ್ಕೆ ನಾನು ರಾಜಣ್ಣ ಅವರಿಗೆ ಸ್ಕ್ರಿಪ್ಟ್ ಫ್ರಾಂಪ್ಟರ್ (ಸಹಾಯಕ) ಆಗಿ ಕೆಲಸ ಮಾಡಿತ್ತಿದ್ದೆ.

ನಾಟಕ ಕೃತಿಯಲ್ಲಿನ ಪದಗಳನ್ನು ಪಠ್ಯವಾಗಿ ಉರು ಹೊಡೆದು ಅಭಿನಯಿಸಬಾರದು. ಕೃತಿಯಲ್ಲಿನ ಸಾಲುಗಳ ನಡುವೆ ಬರೆಯದಿರುವ ಸಾವಿರಾರು ಸಾಲುಗಳು ಅಡಗಿವೆ. ಅವುಗಳನ್ನು ಮನಸ್ಸಿನಲ್ಲಿಯೇ ಗುರುತಿಸಿ ಸಿದ್ಧವಾಗಬೇಕು. ಸ್ಪಷ್ಟ ಉಚ್ಚಾರಣೆ, ಭಾವ, ಅನುಭಾವ, ನವರಸಗಳು, ಪದಗಳ ಒತ್ತು, ವಿರಾಮ, ಅಲ್ಪವಿರಾಮ, ಸಮರ್ಪಣಾಭಾವ, ಶಿಸ್ತುಬದ್ಧತೆಯೊಂದಿಗೆ ಸಹಜವಾಗಿ ಅಭಿನಯಿಸಬೇಕು ಎಂಬುದನ್ನು ರಾಜ್‌ಕುಮಾರ್ ಅವರಿಂದ ಕಲಿತೆ.

ರಾಜಣ್ಣ ಅವರು ‘ಅಮ್ಮ’ ಎಂಬ ಪದ ಉಚ್ಚರಿಸುವಾಗ ಅಮ್ಮನ ಜತೆ ಅವರಿಗಿದ್ದ ಆತ್ಮೀಯ ಒಡನಾಟವನ್ನು ಗ್ರಹಿಸಿ ಆ ಪದಕ್ಕೆ ಜೀವ ತುಂಬುತ್ತಿದ್ದರು. ಆ ಗುಣ ನನ್ನ ಮೇಲೆ ಗಾಢ ಪ್ರಭಾವ ಬೀರಿದೆ. ರಂಗ ಮಂಚಕ್ಕೆ ಪ್ರವೇಶಿಸುವ ಮುನ್ನ ಕಲಾವಿದ ಹೇಗೆ ಪೂರ್ವ ತಯಾರಿ ಮಾಡಬೇಕು ಎಂಬುದನ್ನು ಅವರಿಂದ ಅರಿತೆ. ಆ ಎಲ್ಲವನ್ನೂ ಅಳವಡಿಸಿಕೊಂಡಿದ್ದರಿಂದಲೇ 75 ಧಾರಾವಾಹಿಗಳು, 15 ಸಿನಿಮಾ, 45ಕ್ಕೂ ಅಧಿಕ ನಾಟಕಗಳಲ್ಲಿ ನಟಿಸಲು ಸಾಧ್ಯವಾಯಿತು.

ಬದುಕು, ಉತ್ಸವ, ಮುಕ್ತ ಮುಕ್ತ, ದೇವಿ, ರಾಘವೇಂದ್ರ ಮಹಿಮೆ, ಶಾಂತಮ್ ಪಾಪಂ ಧಾರಾವಾಹಿಗಳ ಅಭಿನಯ ಹಾಗೂ ನಾಟಕಗಳ ಅಭಿನಯಕ್ಕೆ ಜನರಿಂದ ಹೆಚ್ಚು ಮನ್ನಣೆ ಸಿಕ್ಕಿದೆ. ಇದಕ್ಕೆ ನಾನು ರಾಜಣ್ಣ ಅವರಿಗೆ ಚಿರಋಣಿ.

–ಡಾ.ಎ.ಆರ್.ಗೋವಿಂದಸ್ವಾಮಿ, ಕೋಣನಕುಂಟೆ.

ಎಚ್ಚೆಮ್ಮ ನಾಯಕ ಪಾತ್ರ ನೋಡಿ ಅಭಿನಯಾಸಕ್ತಿ

ನನ್ನ ತಂದೆ ರಾಮರಾಜು, ಭಾರತೀಯ ದೂರವಾಣಿ ಕಾರ್ಖಾನೆಯ (ಐಟಿಐ) ಉದ್ಯೋಗಿಯಾಗಿದ್ದರು. ಹೀಗಾಗಿ ಅಲ್ಲಿನ ವಸತಿ ಗೃಹದಲ್ಲಿ ನಾವು ವಾಸವಿದ್ದೆವು. ಅಲ್ಲಿದ್ದವರ ಪೈಕಿ ನಮ್ಮ ಕುಟುಂಬ ಸೇರಿದಂತೆ ಮತ್ತೊಂದು ಕನ್ನಡಿಗರ ಕುಟುಂಬವಿತ್ತು. ನಂಬರ್ ಒನ್ ನಟ ಯಾರು ಎಂಬ ಬಗ್ಗೆ ಆಗಾಗ ಬೇರೆ ಭಾಷಿಕರ ಜತೆಗೆ ಚರ್ಚೆ ನಡೆಯುತ್ತಿತ್ತು. ಆಗೆಲ್ಲ ಕನ್ನಡದ ಮಟ್ಟಿಗೆ ಕೇಳಿಬರುತ್ತಿದ್ದದ್ದು ರಾಜ್‌ಕುಮಾರ್ ಹೆಸರು ಮಾತ್ರ.

ಹಬ್ಬಗಳಂದು ಏಕಪಾತ್ರಾಭಿನಯ ಸ್ಪರ್ಧೆಗಳನ್ನು ಐಟಿಐ ವಸತಿ ಗೃಹದಲ್ಲಿ ಆಯೋಜಿಸಲಾಗುತ್ತಿತ್ತು. ‘ಭಲೇ ಜೋಡಿ’ ಚಿತ್ರದಲ್ಲಿ ರಾಜ್‌ಕುಮಾರ್ ಅಭಿನಯದ ‘ಎಚ್ಚಮ್ಮನಾಯಕ’ ಪಾತ್ರವನ್ನು ನನಗೆ ತೋರಿಸಿ ಅದೇ ರೀತಿ ನೀನು ನಟಿಸಬೇಕು ಎಂದು ಹೇಳಿದ್ದರು. ಅದರನ್ವಯ ಆ ಪಾತ್ರದ ಸಂಭಾಷಣೆಯನ್ನು ನನಗೆ ಹೇಳಿಕೊಟ್ಟರು. ಅದರಿಂದ ಉತ್ತೇಜನಗೊಂಡ ನಾನು ಇತರ ಸ್ಪರ್ಧಾಳುಗಳ ವಿರುದ್ಧವಾಗಿ ಎಚ್ಚೆಮ್ಮನಾಯಕ ಪಾತ್ರಧಾರಿಯಾಗಿ ಏಕಪಾತ್ರಾಭಿನಯದಲ್ಲಿ ಅಭಿನಯಿಸಿದೆ. ಅಲ್ಲಿದ್ದ ಕನ್ನಡದ ಪ್ರೇಕ್ಷಕರರಿಗೆ ನನ್ನ ಅಭಿನಯ ಮನಮುಟ್ಟಿ ಪ್ರಶಂಸೆ ಸಿಕ್ಕಿತು. ಅದಕ್ಕೆ ರಾಜ್‌ಕುಮಾರ್ ಅವರ ಮನೋಜ್ಞ ಅಭಿನಯವು ನನ್ನ ಮೇಲೆ ಪ್ರಭಾವ ಬೀರಿದ್ದೆ ಕಾರಣ.

–ವೆಂಕಟರಾಜು ಪಂಪ

ಪ್ರಜ್ಞೆಯ ಒಂದು ಭಾಗ ರಾಜಣ್ಣ

ರಾಜ್‌ಕುಮಾರ್ ಅವರ ಸಿನಿಮಾಗಳನ್ನು ನೋಡಿ ಬೆಳೆದವನು ನಾನು. ಅವರ ಮಾತು, ನಗು ನಿಲುವು, ನಡಿಗೆ, ಸರಳತೆ, ಅಭಿನಯ ಎಲ್ಲವನ್ನೂ ಆರಾಧಿಸುತ್ತಾ ಬಂದ ನನಗೆ ಅವರನ್ನು ಮಾತನಾಡಿಸಬೇಕೆಂಬ ಹೆಬ್ಬಯಕೆ ನವೆಂಬರ್ 1, 1995 ರಂದು ಈಡೇರಿತು.

ಕನ್ನಡ ಚಲನಚಿತ್ರ ಕಲಾವಿದರ ಸಂಘವು ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ನಗರದ ಎಚ್.ಎನ್.ಕಲಾಕ್ಷೇತ್ರದಲ್ಲಿ ಅಯೋಜಿಸಿತ್ತು. ರಾಜ್‌ಕುಮಾರ್ ಅವರನ್ನು ಭೇಟಿಯಾಗಲೆಂದು ನಾನು, ನನ್ನ ಅತ್ತಿಗೆ ಹಾಗೂ ಅವರ ಮಗಳು ದಾವಣೆಗೆರೆಯಿಂದ ಅಲ್ಲಿಗೆ ಹೋಗಿದ್ದೆವು. ವೇದಿಕೆ ಮೇಲಿದ್ದ ರಾಜಣ್ಣ ಅವರು ವಜ್ರಮುನಿ ಜತೆ ಮಾತನಾಡುತ್ತಿದ್ದರು. ಅಣ್ಣವ್ರ ಹತ್ತಿರ ಹೋಗಿ ನಮಸ್ಕರಿಸಿದೆವು. ಅದಕ್ಕೆ ಪ್ರತಿಯಾಗಿ ನಮಸ್ಕರಿಸಿದ ಅವರು ಅತ್ತಿಗೆಯ ಕೈಯಲ್ಲಿದ್ದ ಮಗು ಧಾರಿಣಿಯ ತಲೆ ಸವರಿದರು. ನಮ್ಮ ಬಗ್ಗೆ ಪರಿಚಯಿಸಿಕೊಂಡೆವು. ಬಳಿಕ ಅವರೊಂದಿಗೆ ಫೋಟೋ ತೆಗೆಸಿಕೊಂಡು, ಹಸ್ತಾಕ್ಷರ ಹಾಕಿಸಿಕೊಂಡೆ. ಫೋಟೋ ಹಾಗೂ ಸಹಿ ಇಂದಿಗೂ ನನ್ನ ಸಂಗ್ರಹದಲ್ಲಿ ಭದ್ರವಾಗಿದೆ. ಆ ದಿನವನ್ನು ಎಂದೂ ಮರೆಯಲಾರೆ. ಅಂದಿನಿಂದ ಅವರ ನನ್ನ ಪ್ರಜ್ಞೆಯ ಒಂದು ಭಾಗವಾಗಿದ್ದಾರೆ.

ಅವರ ನಡೆ–ನುಡಿ, ವಿನಯದ ಪರಿಭಾಷೆಯನ್ನು ನನ್ನ ಜೀವನದಲ್ಲಿ ಅಳವಡಿಸಿಕೊಂಡಿದ್ದೇನೆ. ರಾಜ್‌ಕುಮಾರ್ ಅವರು ಕನ್ನಡದಲ್ಲಿ ಸಹಿ ಹಾಕುವುದನ್ನು ನೋಡಿದ ಬಳಿಕ ಇಂಗ್ಲಿಷ್‌ನಲ್ಲಿ ಸಹಿ ಹಾಕುತ್ತಿದ್ದ ನಾನು ಕನ್ನಡದಲ್ಲಿಯೇ ಸಹಿ ಹಾಕುವುದನ್ನು ರೂಡಿಸಿಕೊಂಡೆ. ಅವರ ಕನ್ನಡ ಅಭಿಮಾನದಿಂದ ಪ್ರಭಾವಿತನಾಗಿ ಪ್ರತಿ ವರ್ಷ ಆಚಾರ್ಯ ಶಿಕ್ಷಣ ಸಂಸ್ಥೆಯಲ್ಲಿ ಕಳೆದ 12 ವರ್ಷಗಳಿಂದ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಿಸುತ್ತಿದ್ದೇನೆ. ಕಾವೇರಿ ಹೋರಾಟ, ಗಡಿ ಸಮಸ್ಯೆ ಹೋರಾಟಗಳಲ್ಲಿ ನೇರವಾಗಿ ಭಾಗಿಯಾಗಿದ್ದೇನೆ.

–ಗುರುರಾಜ್ ದಾವಣಗೆರೆ, ಹೆಸರಘಟ್ಟ ರಸ್ತೆ.

ಅವರಂತೆ ಬದುಕಲು ಯತ್ನ

ವೀರಪ್ಪನ್ ಮೃತ್ಯುಕೂಪದಿಂದ ಬಿಡುಗಡೆಗೊಂಡಿದ್ದ ರಾಜ್‌ಕುಮಾರ್ ಅವರನ್ನು ಭೇಟಿಯಾಗಿ ಅವರ ಆರೋಗ್ಯ ವಿಚಾರಿಸಿದೆ. ಅವರು ಅಭಿನಯದ ವಸಂತ ಗೀತಾ ಸಿನಿಮಾ ನನಗೆ ಹೆಚ್ಚು ಇಷ್ಟವಾದದ್ದು. ಆ ಸಿನಿಮಾವನ್ನು 25 ಬಾರಿ ನೋಡಿದ್ದೇನೆ. ಆ ಸಿನಿಮಾದಲ್ಲಿ ಅವರ ಪಾತ್ರ ಮನೋಜ್ಞವಾಗಿ ನಟಿಸಿದ್ದಾರೆ. ಸ್ನೇಹಿತನಿಗೆ ಪ್ರಾಮಾಣಿಕವಾಗಿ ಸಹಾಯ ಮಾಡುವ ಸನ್ನಿವೇಶವಂತೂ ಪ್ರತಿಯೊಬ್ಬರಿಗೂ ಮಾದರಿ. ನಿಜ ಜೀವನದಲ್ಲಿಯೂ ಅವರು ಅದೇ ರೀತಿ ಇದ್ದರು. ನಾನೂ ಅವರಂತೆಯೇ ಬದುಕಲು ಪ್ರಯತ್ನಿಸುತ್ತಿದ್ದೇನೆ.

–ವಿ.ಕೃಷ್ಣಮೂರ್ತಿ, ಮಲ್ಲೇಶ್ವರ

‘ಕಸ್ತೂರಿ ನಿವಾಸ’ ನೋಡಿ ಪುಸ್ತಕ ದಾನ

ರಾಜ್‌ಕುಮಾರ್ ಕೇವಲ ನಾಯಕ ನಟನಲ್ಲ, ಜನನಾಯಕರೂ ಹೌದು. ಅವರ ಸರಳ ಜೀವನದ ಮೂಲಕ ಜನರಿಗೆ ಆದರ್ಶ ಮೂರ್ತಿಯಂತಿದ್ದರು. ಸುಮಾರು 30 ವರ್ಷಗಳ ಹಿಂದೆ, ಅವರು ನನ್ನ ಅಣ್ಣನ ಮದುವೆಗೆ ಬಂದಿದ್ದರು. ಮದುವೆ ಮಂಟಪದಲ್ಲಿ ಜನಸಾಮಾನ್ಯರಂತೆ ಕುಳಿತು ಎಲ್ಲರೊಡನೆ ಆತ್ಮೀಯವಾಗಿ ಮಾತನಾಡುತ್ತಿದ್ದರು. ಅದನ್ನು ಕಂಡ ನನಗೆ ಆಶ್ಚರ್ಯವಾಯಿತು. ಕಸ್ತೂರಿ ನಿವಾಸ ಸಿನಿಮಾ ನೋಡಿ ಪ್ರಭಾವಿತನಾದ ನಾನು ಸಹಪಾಠಿಗೆ ನೋಟು ಪುಸ್ತಕಗಳನ್ನು ದಾನವಾಗಿ ನೀಡಿದೆ. ಅವಕಾಶ ಸಿಕ್ಕಾಗೆಲ್ಲ ಸಾದ್ಯವಾದ ಮಟ್ಟಿಗೆ ಸಹಾಯ ಮಾಡುತ್ತಾ ಬಂದಿದ್ದೇನೆ. ಅದಕ್ಕೆ ರಾಜ್‌ಕುಮಾರ್ ಅವರೇ ಕಾರಣ.

- ಕಡೂರು ಫಣಿಶಂಕರ, ಬೆಂಗಳೂರು

ನನ್ನ ಮನೆ ‘ಭೂಕೈಲಾಸ’

ಭೂ ಕೈಲಾಸ ಸಿನಿಮಾ ನನ್ನ ಅಚ್ಚುಮೆಚ್ಚು. ಹೀಗಾಗಿ, ಆ ಸಿನಿಮಾದಲ್ಲಿ ರಾಜ್‌ಕುಮಾರ್ ಅವರ ಅಭಿನಯಕ್ಕೆ ಮಾರುಹೋಗಿ ನನ್ನ ಮನೆಗೆ ‘ಭೂಕೈಲಾಸ’ ಎಂದು ಹೆಸರಿಟ್ಟಿದ್ದೇನೆ. ಶಬ್ದವೇದಿ ಸಿನಿಮಾದ ಚಿತ್ರೀಕರಣದ ವೇಳೆ ಅವರ ಜತೆ ತೆಗೆಸಿಕೊಂಡ ಚಿತ್ರವಿದು.

–ಕೆ.ಎಂ.ಸೋಮಣ್ಣ, ಬಸವೇಶ್ವರನಗರ 3ನೇ ಹಂತ. (9448485264)

ಅಹಂಕಾರವಿಲ್ಲದ ಸರಳತೆಯೆ ಬದುಕು

ಅಹಂಕಾರವಿಲ್ಲದ ಸರಳತೆಯೆ ಬದುಕು ರಾಜ್‌ರದ್ದು. ಅವರನ್ನು ಎಂದೂ ಭೇಟಿಯಾಗಿಲ್ಲ. ಅವರ ಸಿನಿಮಾಗಳನ್ನು ಚಿತ್ರಮಂದಿರದಲ್ಲಿ ನೋಡಿಯೇ ಇಲ್ಲ. ಸಹ ಥೀಯೆಟರ್ನಲ್ಲಿ ನೋಡಿದವನು ಅಲ್ಲ. ಅವರ ಬಗ್ಗೆ ಅಲ್ಲಿ ಇಲ್ಲಿ ಕೇಳಿದ್ದೆ ಹೆಚ್ಚು. ಟಿವಿಗಳಿಗೆ ಸಂದರ್ಶನ ಕೊಟ್ಟಿದ್ದು ನೋಡಿದ್ದೇನೆ. ಪುಸ್ತಕ ಹಾಗೂ ಪತ್ರಿಕೆಗಳಲ್ಲಿ ಓದಿ ತಿಳಿದುಕೊಂಡಿದ್ದೇನೆ. ಅಪಹರಣ ಮಾಡಿದ್ದ ವೀರಪ್ಪನ್ ವಿರುದ್ಧ ರಾಜ್ ಒಂದೇ ಒಂದು ಪದ ಕೆಟ್ಟದಾಗಿ ಮಾತನಾಡಿಲ್ಲ. ಅವರ ಆ ಗುಣ ನನ್ನ ಮೇಲೆ ಪ್ರಭಾವ ಬೀರಿದೆ. ನಾನೂ ಸಹ ಅದೇ ರೀತಿ ನಡೆದುಕೊಳ್ಳುತ್ತಿದ್ದೇನೆ.

–ಸಿಂಪಲ್ ರವಿ, ಹಲಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT