ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಚನ ಇರುವವರೆಗೂ ಕ್ರಾಂತಿ ಜೀವಂತ’

Last Updated 22 ಏಪ್ರಿಲ್ 2018, 18:47 IST
ಅಕ್ಷರ ಗಾತ್ರ

ಬೆಂಗಳೂರು: ಜಾತಿ, ಸ್ತ್ರೀ, ಸ್ಥಾವರವನ್ನು ಪೂಜಿಸುವ ಭಾವನೆ ಯಾವತ್ತೂ ಪ್ರಶ್ನಾರ್ಹವಾದ ಸಂಗತಿಗಳು. ಇವು ಕ್ರಾಂತಿಗೆ ಮೂಲವಾಗುವಂತಹವುಗಳು ಎಂದು ಚಿಂತಕ ಲಕ್ಷ್ಮೀಶ ತೋಳ್ಪಾಡಿ ತಿಳಿಸಿದರು.

ಸಿರಿವರ ಪ್ರಕಾಶನ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಚಿಂತಕ ಜಿ.ಕೆ.ಗೋವಿಂದರಾವ್‌ ಅವರ ‘ಆಲಯ– ಬಯಲು’ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಚನ್ನಯ್ಯನ ಮನೆಯ ದಾಸಿಯ ಮಗನು,
ಕಕ್ಕಯ್ಯನ ಮನೆಯ ದಾಸಿಯ ಮಗಳು,
ಇವರಿಬ್ಬರೂ ಹೊಲದಲ್ಲಿ ಬೆರಣಿಗೆ ಹೋಗಿ ಸಂಗವ ಮಾಡಿದರು.
ಇವರಿಬ್ಬರಿಗೆ ಹುಟ್ಟಿದ ಮಗು ನಾನು
ಕೂಡಲಸಂಗಮ ಸಾಕ್ಷಿಯಾಗಿ!

ಮಡದಿ ಎನ್ನುವ ಶಬ್ದ ನಿಶ್ಯಬ್ದವಾ
ದೊಡೆ, ಆನು ನಿಜ ಸುಖಿ ಬಸವ!

‘ಪೃಥ್ವಿಗೆ ಹುಟ್ಟಿ ಶಿಲೆಯಾದ,
ಅಕ್ಕಸಾಲಿಗನ ಕೈಯಲ್ಲಿ ಮೂರ್ತಿಯಾದ
ಆಚಾರ್ಯನ ಕೈಯಲ್ಲಿ ಲಿಂಗವಾದ
ಈ ಮೂವರಿಗೆ ಹುಟ್ಟಿದ ಸೂಳೆಯ ಮಗನ
ನಾ ಹೇಗೆ ಪೂಜಿಸಲಯ್ಯ ಗುಹೇಶ್ವರ!

ಬಸವಣ್ಣ, ನೀಲಾಂಬಿಕೆ ಹಾಗೂ ಅಲ್ಲಮಪ್ರಭುವಿನ ಈ ವಚನಗಳು ಎಲ್ಲಿಯವರೆಗೆ ಕನ್ನಡದಲ್ಲಿ ಇರುತ್ತವೆಯೊ ಅಲ್ಲಿಯವರೆಗೆ ಕ್ರಾಂತಿ ಜೀವಂತ. ಯಾರೂ ಏನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

‘ಬಲಪಂಥವೇ ತಪ್ಪು ಎನ್ನುವ ಭಾವನೆ ಸಾರ್ವಜನಿಕವಾಗಿ ಪ್ರಚಲಿತವಾಗುತ್ತಿದೆ. ಇದು ಎಷ್ಟರ ಮಟ್ಟಿಗೆ ಸರಿ’ ಎಂದು ಅಡಿಗರು ಒಮ್ಮೆ ಲೋಹಿಯಾ ಅವರನ್ನು ಕೇಳಿದ್ದರು. ಅದಕ್ಕೆ ಲೋಹಿಯಾ ಅವರು ‘ನಿಮ್ಮ ಹೃದಯ ಸರಿಯಾದ ಜಾಗದಲ್ಲಿದ್ದರೆ ಆಯ್ತು’ ಎಂದು ಕವಿಯ ರೀತಿಯಲ್ಲಿ ಉತ್ತರಿಸಿದ್ದರು. ಇದರ ಗುಟ್ಟು ಏನೆಂದರೆ, ನಮ್ಮ ಹೃದಯ ಸ್ವಲ್ಪ ಎಡಕ್ಕೆ ವಾಲಿದೆ.
ಅದು ಹಾಗಿದ್ದರೇನೆ ಸರಿ ಎಂದು ತಿಳಿಸಿದರು.

ವಿಮರ್ಶಕ ಓ.ಎಲ್‌.ನಾಗಭೂಷಣ ಸ್ವಾಮಿ, ‘ನಮ್ಮ ದೇಶದಲ್ಲಿ ಎಷ್ಟು ಧರ್ಮಗಳಿದ್ದಾವೊ ಅಷ್ಟು ಧರ್ಮಗ್ರಂಥಗಳಿವೆ. ಭಗವದ್ಗೀತೆಯೊಂದೇ ಧರ್ಮಗ್ರಂಥ ಎನ್ನುವುದು ತಪ್ಪು. ಗೋವಿಂದರಾವ್‌ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಧರ್ಮ ಗ್ರಂಥವನ್ನು ಬರೆದುಕೊಳ್ಳಬೇಕು. ಇದನ್ನು ಭಗವದ್ಗೀತೆ ಕುರಿತ ಲೇಖನದಲ್ಲಿ ಅವರು ಪ್ರತಿಪಾದಿಸಿದ್ದಾರೆ’ ಎಂದರು.

ಗೋವಿಂದರಾವ್‌ ಅವರ ಆಲಯ–ಬಯಲು ಪುಸ್ತಕದಲ್ಲಿ ಒಟ್ಟು 38 ಲೇಖನಗಳಿವೆ. ಅವುಗಳಲ್ಲಿ ಸುಮಾರು 15 ಲೇಖನಗಳು ನಿರ್ದಿಷ್ಟ ವ್ಯಕ್ತಿಗಳ ಕುರಿತಾಗಿದೆ. ಯಡಿಯೂರಪ್ಪ, ಈಶ್ವರಪ್ಪ, ಸಿದ್ದರಾಮಯ್ಯ, ಚಿಂತಾಮಣಿ ಕೂಡ್ಲುಕೆರೆ... ಹೀಗೆ ಅವರೆಲ್ಲರ ಮಾತನ್ನು ವಿಶ್ಲೇಷಿಸಿದ ಲೇಖನ ಅವುಗಳಾಗಿವೆ ಎಂದು ವಿವರಿಸಿದರು.
ಈ ಪುಸ್ತಕದ ಬೆಲೆ ₹270.

**
ಪೇಜಾವರರು ನೆನಪಿಸಿಕೊಳ್ಳುವ ಗೋವಿಂದರಾವ್‌ 
ವಾಚಕರವಾಣಿಗೆ ಪತ್ರ ಬರೆಯುವುದು ತಮ್ಮ ಘನತೆಗೆ ಕುಂದು ಎಂದು ಅನೇಕರು ತಿಳಿದಿದ್ದಾರೆ. ಅದೆಲ್ಲವನ್ನು ಬಿಟ್ಟು ಬಹಳ ಸಹಜವಾಗಿ ಗಂಭೀರ ಲೇಖನ ಬರೆಯುವ ಜಿ.ಕೆ.ಗೋವಿಂದರಾವ್‌ ಆಗಿಂದಾಗ್ಗೆ ಪ್ರತಿಕ್ರಿಯಿಸುತ್ತಿರುತ್ತಾರೆ ಎಂದು ಲಕ್ಷ್ಮೀಶ ತೋಳ್ಪಾಡಿ ಅವರು ಹೇಳಿದರು.

‘ಪೇಜಾವರ ಸ್ವಾಮೀಜಿ ನೆನಪಾದಾಗಲೆಲ್ಲ ನನಗೆ ಗೋವಿಂದರಾವ್‌ ಅವರೂ ನೆನಪಾಗುತ್ತಾರೆ. ನನಗಷ್ಟೇ ಅಲ್ಲ ಸ್ವತಃ ಪೇಜಾವರ ಅವರಿಗೂ ಹೀಗಾಗುತ್ತದೆ. ಏಕೆಂದರೆ, ಸ್ವಾಮೀಜಿ ಏನಾದರೂ ಹೇಳಿಕೆ ನೀಡಿದರೆ, ಒಂದೆರಡು ದಿನಗಳಲ್ಲಿಯೇ ಗೋವಿಂದರಾವ್‌ ಅವರ ಪತ್ರಿಕ್ರಿಯೆಯೂ ಪತ್ರಿಕೆಗಳಲ್ಲಿ ಬರುತ್ತದೆ. ಇದು ಹೀಗೆಯೇ ಇರಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT